ಬೆಳಗಾವಿ: ಇಂದು ಕನ್ನಡ ಹೋರಾಟಗಾರರು ಮಹಾನಗರ ಪಾಲಿಕೆ ಮುಂಭಾಗದ ಕನ್ನಡ ಧ್ವಜ ಬದಲಾವಣೆಗೆ ಯತ್ನಿಸಿದ್ದು, ಈ ವೇಳೆ ಪೊಲೀಸರೊಂದಿಗೆ ಜಟಾಪಟಿ ನಡೆದಿದೆ.

ಹಳೆ ಧ್ವಜ ಬದಲಾಯಿಸಿ ಹೊಸ ಧ್ವಜ ಹಾಕಲು ಕನ್ನಡ ಸಂಘಟನೆಗಳ ಮುಖಂಡರು ಮುಂದಾಗಿದ್ದರು. ಆದ್ರೆ ಧ್ವಜ ಹಾಕಲು ಪೋಲಿಸರು ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪೋಲಿಸ್ ವರ್ತನೆ ವಿರುದ್ಧ ಮಹಾನಗರ ಪಾಲಿಕೆ ಮುಂದೆ ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಿದ್ರು. ಧ್ವಜ ಬದಲಾವಣೆ ಮಾಡದ ಹೊರತು ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.

ಇದರಿಂದ ಕೆಲ ಕಾಲ ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸ್ ಅಧಿಕಾರಿಗಳು ಹಾಗೂ ಕನ್ನಡ ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು. ಬಳಿಕ ಮಾರ್ಕೆಟ್ ವಿಭಾಗದ ಎಸಿಪಿ ಎಸ್.ಆರ್ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿದಾಗ..ಕನ್ನಡ ಧ್ವಜ ಬದಲಾವಣೆ ಮಾಡಲು ಅವಕಾಶ ನೀಡಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆಗ ಎಸಿಪಿ ಕಟ್ಟಿಮನಿ, ನಾವೇ ಬದಲಾವಣೆ ಮಾಡ್ತೀವಿ. ಪ್ರತಿಭಟನೆ ನಿಲ್ಲಿಸಿ ಎಂದು ಮನವಿ ಮಾಡಿದ್ರು. ಆದ್ರೆ ಮುಖಂಡರು ಈಗಲೇ ಧ್ವಜ ಬದಲಾವಣೆ ಮಾಡಿ ನಾವು ಹೋಗ್ತೀವಿ ಅಂತಾ ಒತ್ತಾಯಿಸಿದರು. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕೊನೆಗೆ ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರನ್ನ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕೂಡ ಪೋಲಿಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ ನೂಕಾಟ- ತಳ್ಳಾಟ ನಡೆಯಿತು. ಒತ್ತಾಯ ಪೂರ್ವಕವಾಗಿ ವಶಕ್ಕೆ ಪಡೆದ ಪೊಲೀಸರ ವಿರುದ್ಧ  ಹೋರಾಟಗಾರರು ಘೋಷಣೆಗಳನ್ನ  ಕೂಗಿದರು.

The post ಬೆಳಗಾವಿ ಪಾಲಿಕೆ ಬಳಿ ಹೊಸ ಕನ್ನಡ ಧ್ವಜ ಹಾಕಲು ಯತ್ನ; ಹೈಡ್ರಾಮಾ ಸೃಷ್ಟಿ appeared first on News First Kannada.

Source: newsfirstlive.com

Source link