ಬೆಳೆ ನಾಶ.. ಆಹಾರ ಪದಾರ್ಥ ನೀರು ಪಾಲು.. ತಮಿಳುನಾಡಿನ ಪರಿಸ್ಥಿತಿ ಘನಘೋರ..!


ತಮಿಳುನಾಡಿನಲ್ಲಿ ರಣಭೀಕರ ಮಳೆಯಾಗ್ತಿದೆ. ನೆರೆಯ ರಾಜ್ಯದಲ್ಲಿ ಈಗ ಎಲ್ಲಿ ನೋಡಿದ್ರೂ ನೀರೋ ನೀರು. ಕಳೆದ ಕೆಲ ದಿನಗಳ ಹಿಂದಷ್ಟೇ ವರುಣ ಸೃಷ್ಟಿಸಿದ್ದ ಅವಾಂತರದಿಂದಲೇ ಜನರಿನ್ನೂ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಮತ್ತೆ ಸುರಿಯುತ್ತಿರುವ ಭಾರೀ ವರ್ಷಧಾರೆಯಿಂದ ತಮಿಳಿಗರು ಕಂಗಾಲಾಗಿ ಹೋಗಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿಯುತ್ತೆ, ಸೈಕ್ಲೋನ್‌ ಉಂಟಾಗುತ್ತೆ, ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತೆ, ಉಳಿದಂತೆ ಕರ್ನಾಟಕ, ಆಂಧ್ರದಲ್ಲಿಯೂ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುಂಚಿತವಾಗಿ ಎಚ್ಚರಿಕೆ ನೀಡಿತ್ತು. ಇದೀಗ ನಿರೀಕ್ಷೆಯಂತೆ ತಮಿಳುನಾಡಿನಲ್ಲಿ ಅಬ್ಬರದ ಮಳೆ ಬೀಳ್ತಿದೆ. ಹೊಲ, ಗದ್ದೆ, ರಸ್ತೆ, ಮೈದಾನ.. ಹೀಗೆ ಯಾವ ಸ್ಥಳ ನೋಡಿದ್ರೂ ನೀರೋ ನೀರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿಬಿಟ್ಟಿದೆ. ಮಳೆಯ ಜೊತೆಗೆ ಬೀಸುತ್ತಿರುವ ಭಯಂಕರ ಬಿರುಗಾಳಿಗಾಳಿಗೆ ನೋಡ ನೋಡ್ತಿದ್ದಂತೆ ಮರಗಲು ಉರುಳಿ ಬಿದ್ದಿವೆ. ಸಂಪರ್ಕಗಳು ಕಡಿತವಾಗಿವೆ, ಕರೆಂಟ್ ಕಟ್ ಆಗಿದೆ

ಗುರುವಾರ ರಾತ್ರಿಯಿಂದಲೇ ತಮಿಳುನಾಡಿನಲ್ಲಿ ರಣಭೀಕರ ಮಳೆ ಸುರೀತಿದೆ. ಬೆಳಗಾಗೊದ್ರೊಳಗೆ ಎಷ್ಟೋ ಜನವಸತಿ ಪ್ರದೇಶದಲ್ಲಿ ಪ್ರವಾಹದ ನೀರು ನುಗ್ಗಿದೆ. ಜನ ಭಯಭೀತರಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗ್ತಿದ್ದಾರೆ. ಮನೆಯಲ್ಲಿರೋ ವಸ್ತುಗಳೆಲ್ಲ ನೀರು ಪಾಲಾಗಿವೆ. ತಮ್ಮ ಕಣ್ಣ ಮುಂದೆಯೇ ಮನೆಯ ಪೀಠೋಪಕರಣಗಳು ನೀರು ಪಾಲಾಗಿರೋದನ್ನು ನೋಡಿ ಜನ ಕಣ್ಣೀರು ಹಾಕಿದ್ದಾರೆ. ಅದೆಷ್ಟೋ ಗುಡಿಸಲುಗಳು ಉರುಳಿ ಬಿದ್ದಿವೆ. ಕೆಲವು ಕಡೆ ಮೂರ್ನಾಲ್ಕು ಅಡಿಗಳವರೆಗೂ ನೀರು ನಿಂತಿರೋದ್ರಿಂದ ಮನೆಗಳು ಬಿರುಕು ಬಿಟ್ಟಿವೆ. ಇಷ್ಟೆಲ್ಲಾ ಅವಾಂತರಗಳ ಮಧ್ಯೆ ಜನರು ಜೀವನ ಮಾಡೋದೇಗೆ ಅಂತಾ ಚಿಂತೆಗೀಡಾಗಿದ್ದಾರೆ.

ಮಳೆ ನೀರಿನಲ್ಲಿಯೇ ವಾಹನ ಸವಾರರ ಪರದಾಟ
ಅಬ್ಬಾ! ಇದನ್ನು ನೋಡಿದ್ರೆ ಯಾವ ಪ್ರಮಾಣದಲ್ಲಿ ಮಳೆಯಾಗುತ್ತಿದೆ? ಮಳೆಯಿಂದಾಗಿ ಏನಾಗುತ್ತಿದೆ? ಜನರ ಸಂಕಷ್ಟ ಹೇಗಿರಬಹುದು? ಇಂತಹ ಪ್ರಶ್ನೆಗಳು ಉದ್ಭವವಾಗೋದು ಸಾಮಾನ್ಯ.. ಚರಂಡಿಯಾವುದು, ರಸ್ತೆಯಾವುದು ಒಂದೂ ಗೊತ್ತಾಗದ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ. ವಾಹನ ಸಂಚಾರ ಮಾಡೋದಿರಲಿ, ಅದೆಷ್ಟೋ ರಸ್ತೆಗಳಲ್ಲಿ ನಡೆದುಕೊಂಡು ಹೋಗಲಾಗದ ಪರಿಸ್ಥಿತಿ ಇದೆ. ಒಮ್ಮೆ ವಾಹನ ಸಂಚಾರಕ್ಕೆ ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆ ಅಕ್ಕ ಪಕ್ಕ ಇರೋ ಅಂಗಡಿ ಮುಂಗಟ್ಟುಗಳ ಸ್ಥಿತಿ ಅಂತೂ ಹೇಳೋದೆ ಬೇಡ.

ತುಂಬಿ ಹರಿಯುತ್ತಿವೆ ಹಳ್ಳ ಕೊಳ್ಳಗಳು!
ಏನೋ ಮಳೆ ಕಡಿಮೆ ಆಯ್ತು ಅಂತ ಜನರು ನಿಟ್ಟುಸಿರು ಬಿಡುವ ಸಮಯದಲ್ಲಿಯೇ ಮತ್ತೆ ಇಷ್ಟೆಲ್ಲಾ ಅವಾಂತರವಾಗ್ತಿದೆ. ಎಷ್ಟೋ ಕಡೆ ತಿಂಗಳುಗಟ್ಟಲೆಯಿಂದ ನಿಂತ ನೀರು ಹರಿದು ಹೋಗಿಲ್ಲ. ಇದೀಗ ಮತ್ತೆ ಮಳೆ ಜೋರಾಗಿ ಆರಂಭಿಸಿದ ಪರಿಣಾಮ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಡ್ಯಾಮ್‌ಗಳಿಂದ ನೀರು ಬಿಡಲಾಗಿದ್ದು, ಮಳೆ ನೀರು, ಜೊತೆಗೆ ಡ್ಯಾಮ್‌ ನೀರು ಸೇರಿ ನದಿಗಳೆಲ್ಲಾ ಉಕ್ಕಿ ಹರಿಯುತ್ತಿವೆ. ನದಿ ಅಕ್ಕ ಪಕ್ಕದ ಹಳ್ಳಿಗಳು ಮುಳುಗಡೆಯಾಗಿವೆ. ಪ್ರವಾಹಕ್ಕೆ ಸಿಲುಕಿ ಸಾಕು ಪ್ರಾಣಿಗಳು ಕೊಚ್ಚಿಕೊಂಡು ಹೋಗಿವೆ.

ಮನೆ, ಅಂಗಡಿ, ಹೋಟೆಲ್‌ಗೆ ನುಗ್ಗಿದ ನೀರು
ತಮಿಳುನಾಡಿನಲ್ಲಿ ನೀರನ್ನು ಬಿಟ್ಟು ಬೇರೆ ಏನೂ ಕಾಣ್ತಿಲ್ಲ. ರಸ್ತೆ ಪಕ್ಕ ಇರೋ ಅಂಗಡಿಗಳಿಗೂ ಮಳೆ ನೀರು ನುಗ್ಗುತ್ತಿದೆ. ಹೋಟೆಲ್‌ಗಳಿಗೂ ನೀರು ನುಗ್ಗಿ ಅಲ್ಲಿರೋ ವಸ್ತುಗಳು ನೀರು ಪಾಲಾಗಿವೆ. ಇನ್ನು ವಾರಗಟ್ಟಲೇ ಮಳೆ ಕಡಿಮೆಯಾದ್ರೂ ಅಲ್ಲಿ ನಿಂತಿರೋ ನೀರನ್ನು ಹೊರಹಾಕಲಾಗದಷ್ಟು ನೀರು ಬಂದು ನುಗ್ಗಿದೆ. ವ್ಯಾಪಾರಿಗಳು ಚಿಂತಾಜನಕರಾಗಿದ್ದಾರೆ.

ರೈತರ ಹೊಲ ಗದ್ದೆಗಳಿಗೆ ನುಗ್ಗಿದ ನೀರು!
ಮಳೆಯ ಭೀಕರತೆಯ ಪರಿಣಾಮ ಒಂದೆರಡಲ್ಲಾ, ನಗರ ಪ್ರದೇಶದಲ್ಲಿ ನೀರು ಅಂಗಡಿ, ಮನೆ, ಹೋಟೆಲ್‌ಗಳಿಗೆ ನುಗ್ಗಿದ್ರೆ, ನದಿ ಅಕ್ಕ ಪಕ್ಕದ ಹಳ್ಳಿಗಳಲ್ಲಿಯೂ ಪ್ರವಾಹ ಉಂಟಾಗಿದೆ. ಹೊಲಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ತಮಿಳುನಾಡಿನ ರೈತ ತಾನು ಬೆಳೆದ ಬೆಳೆ ಕಳೆದುಕೊಂಡು ಆತಂಕ ಪಡುತ್ತಿದ್ದಾನೆ. ಇನ್ನು ಹಿಂಗಾರು ಮಳೆಯನ್ನು ನಂಬಿ ಬೇಸಾಯ ಮಾಡುತ್ತಿದ್ದ ರೈತರು ಸಾಕಪ್ಪ ಸಾಕು ಮಳೆ ಅನ್ನೋ ಹಾಗಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಮಳೆ ಬಿದ್ದಿರೋ ಪರಣಾಮ ಬೆಳೆ ಬೆಳೆಯಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ.

ತಮಿಳುನಾಡಿದ 22 ಜಿಲ್ಲೆಗಳಲ್ಲಿ ಭಾರೀ ಮಳೆ
ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುತ್ತೆ, ಸೈಕ್ಲೋನ್‌ ಉಂಟಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಇದೇ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ತಮಿಳುನಾಡು ಸರ್ಕಾರ 22 ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಿಸಿತ್ತು. ಹೀಗಾಗಿ ವಿದ್ಯಾರ್ಥಿಗಳು ಮನೆ ಬಿಟ್ಟು ಹೊರಟಿಲ್ಲ. ಯಾವುದೇ ಅಪಾಯವಾಗದಂತೆ ಸರ್ಕಾರ ಮುನ್ನೆಚ್ಚರಿಕೆಯನ್ನು ಕೈಗೊಂಡಿದೆ. ನಾಳೆ ನಾಡಿದ್ದು ಕೂಡ ಮಳೆ ಮುಂದುವರಿದರೆ ರಜೆ ಮುಂದುವರಿಯಲ್ಲಿದೆ ಅಂತ ಸರ್ಕಾರ ತಿಳಿಸಿದೆ.

ಮಳೆಯಿಂದಾಗಿ ಕಂಗೆಟ್ಟ ತಮಿಳುನಾಡು
ತಿಂಗಳಲ್ಲಿಯೇ ಎರಡ್ಮೂರು ಬಾರಿ ಪ್ರವಾಹ

ಭಾರೀ ಮಳೆಯಿಂದ ಒಮ್ಮೆ ಪ್ರವಾಹ ಉಂಟಾದ್ರೆ ಸುಧಾರಿಸಿಕೊಳ್ಳಲು ವರ್ಷಗಟ್ಟಲೇ ಬೇಕಾಗುತ್ತೆ. ಅಂತಹದ್ರದಲ್ಲಿ ವರ್ಷದಲ್ಲಿ ಅದರಲ್ಲಿಯೂ ಒಂದೇ ತಿಂಗಳಲ್ಲಿ ಎರಡ್ಮೂರು ಬಾರಿ ಪ್ರವಾಹ ಉಂಟಾದ್ರೆ ಏನಾಗಬೇಡ? ಚಮಿಳುನಾಡಿನಲ್ಲಿ ಆಗಿರೋದೇ ಇದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ಪ್ರವಾಹ ಉಂಟಾಗುತ್ತಿದೆ. ಚೇತರಿಸಿಕೊಳ್ಳಲಾಗದ ಮಟ್ಟಿಗೆ ಏಟು ಬೀದ್ದಿದೆ. ಇದೀಗ ಮತ್ತೆ ಪ್ರವಾಹ ಉಂಟಾಗಿರೋದು ಅಲ್ಲಿಯ ಜನರನ್ನು ಸಂಕಷ್ಟಕ್ಕೆ ದೂಡಿದೆ.

ರಾಜ್ಯದ ಮೇಲೂ ಪರಿಣಾಮ ಬೀರುತ್ತಾ ಸೈಕ್ಲೋನ್‌
ರಾಜ್ಯದಲ್ಲಿಯೂ ಇನ್ನು ಮೂರ್ನಾಲ್ಕು ದಿನ ಮಳೆ

ಸೈಕ್ಲೋನ್‌ ಎದ್ದಿರೋ ಪರಿಣಾಮ ತಮಿಳುನಾಡು ಮಳೆಯಲ್ಲಿಯೇ ತೋಯುತ್ತಿದೆ. ಕಣ್ಣು ಬಿಟ್ಟು ಎಲ್ಲಿ ನೋಡಿದ್ರೂ ನೀರೇ ಕಾಣಿಸುತ್ತೆ. ಹವಾಮಾನ ಇಲಾಖೆ ಪ್ರಕಾರ ಈ ಸೈಕ್ಲೋನ್‌ ರಾಜ್ಯದ ಮೇಲೂ ಪರಿಣಾಮ ಬೀಳುತ್ತಿದೆ. ರಾಜ್ಯಾದ್ಯಂತ ನವೆಂಬರ್‌ 30 ರವೆರಗೂ ಮಳೆ ಕಾಣಿಸಿಕೊಳ್ಳಲಿದೆ. ಅದೇ ರೀತಿ ಆಂಧ್ರ ಪ್ರದೇಶ, ತೆಲಂಗಾಣದಲ್ಲಿಯೂ ಮಳೆ ಅಬ್ಬರಿಸುತ್ತಿದೆ. ಆದ್ರೆ, ತಮಿಳುನಾಡಿನಲ್ಲಿ ಕಾಣಿಸಿಕೊಂಡಷ್ಟು ಮಳೆ ಬೇರೆ ರಾಜ್ಯದಲ್ಲಿ ಕಾಣಿಸುತ್ತಿಲ್ಲ. ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗುವ ಸೂಚನೆ ಇರೋ ಹಿನ್ನೆಲೆಯಲ್ಲಿ ಅಲ್ಲಿಯ ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಳ್ಳಲಿ. ಹಾಗೇ ರಾಜ್ಯದಲ್ಲಿಯೂ ಮಳೆಯಾಗುವ ಸೂಚನೆ ಇದೆ. ಹೀಗಾಗಿ ನಮ್ಮ ಸರ್ಕಾರ ಕೂಡ ಎಚ್ಚರಿಕೆಯ ಕ್ರಮಕೈಗೊಳ್ಳಬೇಕು.

News First Live Kannada


Leave a Reply

Your email address will not be published. Required fields are marked *