‘ಬೆಳೆ ಹಾನಿ ಪ್ರದೇಶದಲ್ಲಿ ಭೂಕಂದಾಯ ಪಡೆಯಬಾರದು, ವಿಮೆ ನೀಡದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ | KPCC President DK Shivakumar on Crop Loss Karnataka Rains Farmers slams BJP Govt

‘ಬೆಳೆ ಹಾನಿ ಪ್ರದೇಶದಲ್ಲಿ ಭೂಕಂದಾಯ ಪಡೆಯಬಾರದು, ವಿಮೆ ನೀಡದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು’

ಡಿಕೆ ಶಿವಕುಮಾರ್

ಬೆಂಗಳೂರು: ಸರ್ಕಾರ ಇನ್ಶುರೆನ್ಸ್ ಕಂಪನಿಗಳ ಜೊತೆ ಶಾಮೀಲಾಗಿದೆ. ರೈತರಿಂದ ಕೋಟ್ಯಂತರ ರೂ. ಇನ್ಶುರೆನ್ಸ್ ಕಟ್ಟಿಸಿಕೊಂಡಿದ್ದಾರೆ. ಆದರೆ ಇನ್ಶುರೆನ್ಸ್ ಕಂಪನಿಗಳ ಜತೆ ಸರ್ಕಾರ ಮಾತನಾಡಿಲ್ಲ. ರಾಜ್ಯ ಸರ್ಕಾರವೇ ಕಂಪನಿಗಳಿಂದ ಹಣ ಕೊಡಿಸಬೇಕಾಗಿದೆ. ರೈತರಿಂದ ಹಣ ಕಟ್ಟಿಸಿಕೊಂಡಿದ್ದಾರೆ, ಈಗ ಹಣ ಕೊಡಿಸಬೇಕು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದ್ದಾರೆ. ಇನ್ಶುರೆನ್ಸ್ ಕಂಪನಿಗಳ ಜತೆ ಏಕೆ ಸಭೆ ನಡೆಸುತ್ತಿಲ್ಲವೆಂದು ಪ್ರಶ್ನೆ ಮಾಡಿದ್ದಾರೆ. ಮೊದಲು ಇನ್ಶುರೆನ್ಸ್ ಕಂಪನಿಗಳ ಜತೆ ಸಭೆ ಕರೆಯಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಮನೆ ಹಾನಿಗೆ ತಕ್ಷಣಕ್ಕೆ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಬಹಳ ಸ್ಪೀಡಾಗಿ ಇದ್ದಾರೆ. ಇದೇ ಸ್ಪೀಡ್ ರೈತರ ವಿಚಾರದಲ್ಲಿಯೂ ಇರಬೇಕು. ಫಸಲ್ ಭಿಮಾ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆರಸಗೊಬ್ಬರ, ಕ್ರಿಮಿನಾಶಕ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ ಸುಲಭವಾಗಿ ಸಿಗುತ್ತಿಲ್ಲ. ಬೆಳೆ ಹಾನಿ ಪ್ರದೇಶದಲ್ಲಿ ಭೂಕಂದಾಯ ಪಡೆಯಬಾರದು. ವಿಮೆ ನೀಡದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ರೈತರನ್ನು ರಕ್ಷಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಘೋಷಣೆ ಮಾಡಿದ ಪರಿಹಾರ ಇನ್ನೂ ಸಿಕ್ಕಿಲ್ಲ. ಫಸಲ್ ಭಿಮಾ ಯೋಜನೆ ಇದ್ದರೂ ರೈತರಿಗೆ ಉಪಯೋಗವಾಗಿಲ್ಲ. ಪರಿಹಾರ ಹಣ 30 ದಿನದೊಳಗೆ ನೀಡಲು ಶಿವಕುಮಾರ್ ಒತ್ತಾಯ ಮಾಡಿದ್ದಾರೆ. ನೆಪ ಹೇಳಿ ಪರಿಹಾರ ಹಣ ನೀಡುವುದು ವಿಳಂಬ ಮಾಡಬಾರದು. ರೈತರು ಯಾರೂ ಸುಳ್ಳು ಅರ್ಜಿಗಳನ್ನು ಹಾಕಲು ಹೋಗಲ್ಲ. ಬೆಳೆ ಹಾನಿ ಫೋಟೋ, ಅರ್ಜಿ ಹಾಕಿದರೆ ಪರಿಹಾರ ನೀಡಿ ಎಂದು ಶಿವಕುಮಾರ್ ಹೇಳಿದ್ದಾರೆ.

3 ವರ್ಷದಿಂದ ನಿರಂತರವಾಗಿ ರೈತರಿಗೆ ಸಂಕಷ್ಟ
3 ವರ್ಷದಿಂದ ನಿರಂತರವಾಗಿ ನೆರೆ ಬಂದು ರೈತರಿಗೆ ಸಂಕಷ್ಟ ಉಂಟಾಗಿದೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಈ ವರ್ಷ ದಾಖಲೆ ಪ್ರಮಾಣದಲ್ಲಿ ಮಳೆ ಹಿನ್ನೆಲೆ ಅಪಾರ ನಷ್ಟ ಉಂಟಾಗಿದೆ. ರೈತರು ಬೆಳೆದ ಹಲವು ಬೆಳೆಗಳು ಕೊಳೆಯುತ್ತಿದೆ. ಕೊವಿಡ್‌ನಿಂದ 2 ವರ್ಷ ಬೆಳೆ ಸಿಗದೆ ರೈತ ಸಂಕಷ್ಟಕ್ಕೆ ಸಿಲುಕಿದ. ಈಗ ಮಳೆಯಿಂದಾಗಿ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ. ಪ್ರಕೃತಿ ವಿಕೋಪದಿಂದ ರೈತ ತಮ್ಮ ಬೆಳೆ ಕಳೆದುಕೊಂಡಿದ್ದಾನೆ. ರಾಜ್ಯ ಸರ್ಕಾರ ಈಗ ಯಾರ ಪರ ಇದೆ ಎಂದು ಉತ್ತರಿಸಲಿ. ಒಂದು ಎಕರೆ ಬೆಳೆ ಹಾನಿಗೆ 10 ಸಾವಿರ ರೂ. ಘೋಷಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಒತ್ತಾಯ ಮಾಡಿದ್ದಾರೆ.

ರೈತರಿಗೆ ಸಹಾಯ ಮಾಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ
ರೈತರ ಬಳಿ ಯಾವ ಅಧಿಕಾರಿಗಳೂ ಹೋಗುವುದಿಲ್ಲ. ಅಧಿಕಾರಿಗಳು, ಮಂತ್ರಿಗಳಿಗೆ ಯಾವ ಕಾಳಜಿಯೂ ಇಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ರೈತರ ನೆರವಿಗೆ ಹೋಗಿ. ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ರೈತರಿಂದ ಅರ್ಜಿ ಹಾಕಿಸಬೇಕು. ನೀವು ಏಜೆಂಟ್ ಆಗಬೇಡಿ, ರೈತರಿಗೆ ಸಹಾಯ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಬಿಜೆಪಿಯವರು ರೈತರನ್ನು ನಡುಬೀದಿಯಲ್ಲೇ ಬಿಟ್ಟರು
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಧರಣಿ ವೇಳೆ ಮೃತಪಟ್ಟ ರೈತರಿಗೆ ಪರಿಹಾರ ನೀಡಬೇಕು. 5 ಎಕರೆ ಜಮೀನು ಮೃತ ರೈತರ ಕುಟುಂಬಕ್ಕೆ ನೀಡಬೇಕು. ಈ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಒತ್ತಾಯ ಮಾಡುತ್ತಿದ್ದೇನೆ. ಧರಣಿ ವೇಳೆ ಮೃತಪಟ್ಟ ರೈತರಿಗೆ ಹುತಾತ್ಮರೆಂದು ಕರೆಯಬೇಕು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಕೊವಿಡ್ ವೇಳೆ ಯಾರಿಗೂ ಪರಿಹಾರವೇ ಸಿಕ್ಕಿಲ್ಲ. ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಅಪ್‌ಡೇಟ್ ಮಾಡಲು ಹೇಳಿದ್ದರು. ಆದರೆ ಸ್ವಾಭಿಮಾನ ರೈತರು ಅಪ್‌ಡೇಟ್ ಮಾಡಲಿಲ್ಲ. ಇವರು ಎಂಎಸ್‌ಪಿ ಸಹ ಘೋಷಣೆ ಮಾಡಿಲ್ಲ. ಬಿಜೆಪಿಯವರು ರೈತರನ್ನು ನಡುಬೀದಿಯಲ್ಲೇ ಬಿಟ್ಟರು. ಇವರು ಕೇವಲ ಬಾಯಿಮಾತಿಗೆ ಪರಿಹಾರ ಘೋಷಿಸಿದ್ರು. ಆದರೆ ಯಾರಿಗೂ ಪರಿಹಾರ ಹಣವೇ ಸಿಕ್ಕಿಲ್ಲ. ಇವರು ಪರಿಹಾರ ನೀಡಿರುವ ಬಗ್ಗೆ ಜಾಹೀರಾತು ನೀಡುತ್ತಾರೆ. ಆದರೆ, ಯಾರಿಗೆ ಎಷ್ಟು ಕೊಟ್ಟಿದ್ದೀರಿ ಎಂದು ಬಹಿರಂಗ ಮಾಡಿ ಎಂದು ಅಧ್ಯಕ್ಷ ಶಿವಕುಮಾರ್ ಆಗ್ರಹಿಸಿದ್ದಾರೆ.

ಕೇರಳ, ತಮಿಳುನಾಡಿಗೆ ಹೋದ ಮೋದಿ, ಕರ್ನಾಟಕಕ್ಕೆ ಬಂದೇ ಇಲ್ಲ
ಪ್ರಧಾನ ಮೋದಿ ಕೇರಳ, ತಮಿಳುನಾಡಿಗೆ ಹೋಗಿದ್ದರು. ಪ್ರವಾಹ ಪರಿಶೀಲನೆಗೆ ಪ್ರಧಾನಿ ಮೋದಿ ಹೋಗಿದ್ದರು. ಆದರೆ ರಾಜ್ಯಕ್ಕೆ ಮಾತ್ರ ಪ್ರಧಾನಿ ಮೋದಿ ಬಂದೇ ಇಲ್ಲ. ರೈತರ ಹೋರಾಟ ಹಿಂದೆ ಖಲಿಸ್ತಾನಿಗಳಿದ್ದರೆಂಬ ಆರೋಪ ಮಾಡುತ್ತಿದ್ದಾರೆ. ಸಿ.ಟಿ.ರವಿ ದೇಶದ ಘನತೆಗೆ ಧಕ್ಕೆ ತರುತ್ತಿದ್ದಾರೆ. ರೈತರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದಾರೆ. ರವಿ ಅಂತಹವರು ಬಿಜೆಪಿ ಪಕ್ಷ ಮುಳುಗಿಸಲು ಇರುವುದು. ಸಿ.ಟಿ.ರವಿ ಬಿಜೆಪಿಯಲ್ಲೇ ಇರಲಿ ಎಂದದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರಾಜಕೀಯಕ್ಕಾಗಿ ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಆರೋಪ

ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ನಮಗೆ 2 ಕಣ್ಣುಗಳಿದ್ದಂತೆ: ಜಿ ಪರಮೇಶ್ವರ್ ಹೇಳಿಕೆ

TV9 Kannada

Leave a comment

Your email address will not be published. Required fields are marked *