ಬೆಳ್ಳಂಬೆಳಿಗ್ಗೆ ಹಣ ವಸೂಲಿಗಿಳಿದು ರೆಡ್​ಹ್ಯಾಂಡ್​ ಆಗಿ ಸಿಕ್ಕಿಹಾಕಿಕೊಂಡ ಹೊಯ್ಸಳ ಸಿಬ್ಬಂದಿ


ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳಿಗ್ಗೆ ಹೊಯ್ಸಳ ಗಸ್ತು ಸಿಬ್ಬಂದಿ ಮಹಿಳೆಯೊಬ್ಬರಿಂದ ಹಣ ವಸೂಲಿ ಮಾಡುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಹಾಕಿಕೊಂಡ ಘಟನೆ ನಗರದ ಮಾರತ್​ ಹಳ್ಳಿ ಫ್ಲೈಓವರ್​ ಬಳಿ ನಡೆದಿದೆ.

ಪಾನ್​ ಶಾಪ್​ ಅಂಗಡಿಯ ಬಳಿ ಹೊಯ್ಸಳ ಕಾರು ಬಂದು ನಿಲ್ಲುತ್ತಿದ್ದಂತೆ ಅಂಗಡಿಯ ಮಹಿಳೆ ಬಂದು ಜೀಪ್​​ ನಲ್ಲಿ ಕುಳಿತಿದ್ದ ಹೆಡ್ ಕಾನ್ಸ್​ಟೇಬಲ್ ಗುರುಮೂರ್ತಿಗೆ ಹಣ ನೀಡಿದ್ದಾರೆ. ಯಾವ ಅಂಜಿಕೆಯೂ ಇಲ್ಲದೆ ಹಣ ಪಡೆದ ಪೇದೆ ಸೀದಾ ಹಣವನ್ನ ಜೇಬಿಗಿಳಿಸಿದ್ದಾರೆ. ಇನ್ನು ಅಂಗಡಿಗೆ ಬಂದಿದ್ದ ಯುವಕ ಇದನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿಕೊಂಡಿದ್ದಾರೆ.

ಹಣ ಪಡೆದು ಹೊಯ್ಸಳ ಸಿಬ್ಬಂದಿ ಹೊರಡುತ್ತಿದ್ದಂತೆ ಪೊಲೀಸ್​ ಜೀಪ್ ನಿಲ್ಲಿಸಿದ ಯುವಕ ಮಹಿಳೆಯಿಂದ ನೀವು ಹಣ ಏಕೆ ಪಡೆದೀರಿ ಎಂದು ಪ್ರಶ್ನೆ ಹಾಕಿದ್ದಾರೆ. ಯುವಕನ ಪ್ರಶ್ನೆಗೆ ಅಂಜಿದ ಕಾನ್ಸ್​ಟೇಬಲ್​ ಸೈಲೆಂಟ್ ಆಗಿದ್ದಾರೆ. ಬಳಿಕ ಮಹಿಳೆಯನ್ನ ವಾಪಸ್​ ಕರೆಯಿಸಿ ಹಣವನ್ನು ಮರಳಿಸುವಂತೆ ಕೇಳಿದಾಗ ಸುಮ್ಮನೆ ಹಣ ನೀಡಿದ ಪೇದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಸದ್ಯ ಹೊಯ್ಸಳ ಸಿಬ್ಬಂದಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಇನ್ನು ವಿಷಯ ತಿಳಿದ ಮಾರತ್​ಹಳ್ಳಿ ಇನ್ಸ್​ಪೆಕ್ಟರ್​ ವೈಟ್​ಫೀಲ್ಡ್​ ಡಿಸಿಪಿಗೆ ಹೆಡ್​ಕಾನ್ಸ್​ಟೇಬಲ್​ ಗುರುಮೂರ್ತಿ ಮತ್ತು ಚಾಲಕ ಸುರೇಂದ್ರ ವಿರುದ್ಧ ಕರ್ತವ್ಯ ಲೋಪದಡಿಯಲ್ಲಿ ರಿಪೋರ್ಟ್​ ಸಲ್ಲಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *