‘ಬೆಳ್ಳನೆ ಬೆಳಗಾಯಿತು.. ಏಳನ್ನ ಚೇತನ ಚೆಲುವಾ’ ಅಂತಾ ಕನ್ನಡಿಗರ ಹೃದಯ ಗೆದ್ದ ಕಂಠಸಿರಿ ಅಮರ


ಹಾಡೆಂದಾಗ ಎದೆ ತುಂಬಿ ಹಾಡಿದೆ
ಹಾಡು ಹಕ್ಕಿಗೆ ಸಂಗೀತವೆ ಬದುಕು
ಜಗದ ಉಸಿರಿಗೆ ಧ್ವನಿಯಾದೆ ನೀನು
ಕರೆವ ಕೆರೆಗೆ ಜಾರಿತು ಸಂಗೀತ ಬೆಳಕು
ಸಾಗಿದೆ ನೀನು ದೂರ ಬಲೂ ದೂರ

ಹೌದು.. ಹಾಡು ಹಕ್ಕಿಯೊಂದು ತನ್ನ ಹಾಡು ನಿಲ್ಲಿಸಿದೆ. ದೇಶ ಕಂಬನಿ ಮಿಡಿದಿದೆ. ಅಂತರಾಳದ ನೋವಿಗೆ, ಹೋರಾಟಕ್ಕೆ, ಪ್ರೇಮ ನಿವೇದನೆಗೆ, ಮನೋಲ್ಲಾಸಕ್ಕೆ ಧ್ವನಿಯಾಗುತ್ತಿದ್ದ ಗಾನ ಕೋಗಿಲೆ, ಕಂಠಸಿರಿ ಲತಾ ಮಂಗೇಶ್ಕರ್ ನಮ್ಮನ್ನ ಬಿಟ್ಟ ದೂರ ಹೋಗಿದ್ದಾರೆ.

ದೇಶದ ಮಹಾ ಸಂಗೀತ ಶಕ್ತಿಯ ಕೊಂಡಿಯೊಂದು ಚಿರ ನಿದ್ರೆಗೆ ಜಾರಿದೆ. ಸುಮಾರು 22 ಕ್ಕೂ ಹೆಚ್ಚು ಭಾಷೆಗಳ ಹಾಡುಗಳಿಗೆ ಧ್ವನಿಯಾಗಿದ್ದ ಲತಾ ಮಂಗೇಶ್ಕರ್, ಕನ್ನಡಿಗರ ಹೃದಯವನ್ನೂ ಕದ್ದಿದ್ದರು! ಅದು.. 1967ರ ಸಮಯ.. ”ಬೆಳ್ಳನೆ ಬೆಳಗಾಯಿತು.. ಏಳನ್ನ ಚೇತನ ಚೆಲುವಾ..” ಎಂದು ಭಾವ ತುಂಬಿದ ರಾಗದ ಮೂಲಕ ಕನ್ನಡಿಗರ ಹೃದಯ ಗೆದ್ದವರು.

ಅನಂತ್ ಹಿರೇಗೌಡ ನಿರ್ದೇಶನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಮೆರಗು ನೀಡಿದ ಹಾಡೆಂದರೆ ಮಂಗೇಶ್ಕರ್ ಕಂಠಸಿರಿಯಲಿ ಮೂಡಿಬಂದ ಹಾಡು ‘ಬೆಳ್ಳನೆ ಬೆಳಗಾಯಿತು..’ ಹಳ್ಳಿ ಸೊಗಡಿನ ಮುಂಜಾನೆಯನ್ನ ವರ್ಣಿಸುವ ಹಾಡಿನಲ್ಲಿರುವ ಧ್ವನಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ. ಹಾಡಿಗೆ ಅಷ್ಟೇ ಅದ್ಭುತವಾಗಿ ಚಿತ್ರಕಥೆ ಕೂಡ ಸೃಷ್ಟಿಮಾಡಲಾಗಿದೆ. ಬೆಳ್ಳಿ ಮೂಡಿ ಬೆಳಗಾಗುವ ನಸುಕಿನಲ್ಲಿ ಹೆಣ್ಣುಮಗಳೊಬ್ಬಳು ಬಿಂದಿಗೆಯನ್ಬ ಸೊಂಟದ ಮೇಲೆ ಇಟ್ಟುಕೊಂಡು ನೀರನ್ನ ಚಿಮ್ಮಿಸುತ್ತ ತನ್ನ ಪತಿಯನ್ನ ಎಬ್ಬಿಸುತ್ತ ಬೆಳ್ಳನೆ ಬೆಳಗಾಯಿತು.. ಏಳನ್ನ ಚೇತನ ಚೆಲುವಾ.. ಎಂದಾಗ ಖುಷಿಯಿಂದ ಹಾಸಿಗೆಯಿಂದ ಎದ್ದು ಕೂತ ಪತಿದೇವ ಆಕಳಿಸುತ್ತಾನೆ.. ಆಗ ಮತ್ತೆ ತನ್ನ ಗಂಡನನ್ನ ಬಡಿದೆಬ್ಬಿಸಲು “ಆಕಳಿಸುವದುಂಟೆ? ಆಕಳ ಕರು ಬಿಟ್ಟೆ
ಓ ಕಳೆ ಕಂಡೇವಾ ಆಕಳ ಹಿಂಡುವಾ” ಅಂತಾ ಮತ್ತೊಂದು ಸೊಲ್ಲು ಹೇಳುತ್ತಾಳೆ..

ಕಿತ್ತೂರ ಹೊಸ ಬಾಳೆ.. ಸಕ್ಕರೆ ರಸ ಬಾಳೆ.. ಹಿಂಡಿದ ನೊರೆ ಹಾಲು ದಂಡಿನ ದೊರೆ.. ಎಂದು ಬೆಳಗ್ಗಿನ ಸಂಭ್ರಮವನ್ನ ಆಸ್ವಾದಿಸಿ ಯುವಕರನ್ನ ಬಡಿದೆಬ್ಬಿಸುವಂತೆ ಲತಾ ಮಂಗೇಶ್ಕರ್ ಈ ಹಾಡಿನ ಮೂಲಕ ಮಾಡಿದ್ದರು ಅಂದರೆ ಅತಿಶಯೋಕ್ತಿ ಆಗಲಾರದು! ಪ್ರೀತಿ, ಪ್ರೇಮದ ಸಂಬಂಧಕ್ಕೂ ಹೊಸ ಹುರುಪು ಬೆಸೆಯುವ ಈ ಹಾಡಿಗೆ ಕಚಗುಳಿ ಕೂಟ್ಟಿದ್ದೇ ಮಂಗೇಶ್ಕರ್.

ಏಳನ್ನ ಚೇತನ ಚೆಲುವಾ.. ಅನ್ನೋ ಹಾಡಿನ ಸಾಲು ಮತ್ತೆ ಮತ್ತೆ ಅವರನ್ನೇ ನೆನಪಿಸುತ್ತೆ.. ಬೆಂಗಳೂರಿನಂಥ ಮಹಾನಗರದಲ್ಲಿದ್ದು ಮುಂಜಾನೆ ಎದ್ದು ಲಾಲ್ ಬಾಗ್ ಕಬ್ಬನ್ ಪಾರ್ಕ್ ಒಂದರಲ್ಲಿ ಜಾಗ್ ಮಾಡಿ ಮನೆಗೆ ಹೋಗುವ ಸಂದರ್ಭಗಳಲ್ಲಿ ಅದೆಷ್ಟೋ ಮಂದಿ ಫೇಸ್ ಬುಕ್ ನಲ್ಲಿ ಸೂರ್ಯೋದಯದ ಫೋಟೋ ಅಪ್ ಲೋಡ್ ಮಾಡಿ ಲತಾ ಜೀ ಹಾಡಿರುವ ಬೆಳ್ಳನೆ ಬೆಳಗಾಯಿತು. ಏಳೆನ್ನ ಚೇತನ ಚೆಲುವಾ ಅಂತಾ ಕ್ಯಾಪ್ಷನ್ ಕೊಟ್ಟಿರೋದನ್ನ ಕಾಣಬಹುದಾಗಿದೆ ಮತ್ತು ಕೊಡುತ್ತಿರೋದನ್ನ ನೋಡುತ್ತಿದ್ದೇವೆ. ಅಷ್ಟರಮಟ್ಟಿಗೆ ಮಂಗೇಶ್ಕರ್ ಅವರ ಧ್ವನಿ ಹಾಗೂ ಲಕ್ಷ್ಮಣ್ ಬರ್ಲೇಕರದ ಅವರ ಸಂಗೀತ ಅಚ್ಚಳಿಯಾಗಿ ಜನಜನಿತವಾಗಿದೆ.

ಸಾಧನೆ, ಹೊಸ ದಾಖಲೆ, ಇತಿಹಾಸ ಸೃಷ್ಟಿಗಾಗಿ, ತೊಳ್ಬಲ ಹೆಚ್ಚಿಸಿಕೊಳ್ಳೊದಕ್ಕಾಗಿ ಕಣ್ಣೆದುರಿಗೆ ಕಂಡಿದ್ದೆಲ್ಲವನ್ನೂ ಬಾಜಿಕೊಳ್ತೇವೆ. ಕ್ವಾಲಿಟಿಗಿಂತ ಕ್ವಾಂಟಿಟಿಯೇ ಮಾನದಂಡವಾಗಿರುವ ಇವತ್ತಿನ ಕಾಲದಲ್ಲಿ 1967 ರ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಹಾಡಿರುವ ಒಂದೇ ಒಂದು ಇವತ್ತಿಗೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.

ಇದು ಅವರ ಚಾಕಚಕ್ಯತೆ.. ಕನ್ನಡದಲ್ಲೇ ಒಂದೇ ಒಂದು ಹಾಡಿದ್ದರೂ, ಯಾರಾದರೂ ಬಂದು ದೇಶದ ಜನಪ್ರಿಯ ಹಿನ್ನಲೆ ಗಾಯಕರ ಹೆಸರನ್ನ ಪಟ್ಟಿಮಾಡಿ ಅಂದಾಗ ಎಲ್ಲೋ ಮನಸಿನ ಮೂಲೆಯಲ್ಲಡಗಿದ್ದ ಲತಾ ದೀದಿ ಹೆಸರು ನಿಧಾನಕ್ಕೆ ನೆನಪಾಗಿಯೇ ಆಗುತ್ತೆ. ಇದೇ ಅಲ್ವಾ ಬದುಕಿನ ಸಾರ್ಥಕತೆಯ ಸಾಧನೆ ಅಂದ್ರೆ?

ಹಾಡು ನಿಲ್ಲಿಸಿದ ಸಾಧಕಿಯ ಗುನುಗು ಪ್ರತಿ ಸಂಗೀತಗಾರನನ್ನ ಬಡಿದೆಬ್ಬಿಸುತ್ತಿರಲಿ, ಅವರ ಮಧುರ ಧ್ವನಿಯು ನಮ್ಮೊಳಗೆ ಸುಡುವ ಬಿಸಿಯನ್ನ ತಣಿಸಲಿ..ಬಾರದ ಊರಿಗೆ ಪ್ರಯಾಣ ಬೆಳೆಸಿರೋ ಹಿರಿಯ ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ.

ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು
ಏಳೆನ್ನ ಚೇತನ ಚೆಲುವಾ
ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು

ಆಕಳಿಸುವದುಂಟೆ? ಆಕಳ ಕರು ಬಿಟ್ಟೆ
ಓ ಕಳೆ ಕಂಡೇವಾ ಆಕಳ ಹಿಂಡುವಾ
ಬೆಳ್ಳನ ಬೆಳಗಾಯಿತು…
ಬೆಳ್ಳನ ಬೆಳಗಾಯಿತು…

ಎದ್ದಾವ ಎಳೆದುಂಬ ಸೀ ಮುತ್ತೆ ತಾ ತುಂಬ
ಗೆಲವಿನ ಧ್ವಜ ಕಂಬ ತುತ್ತುರಿಸಿ ಹಿಡಿ ಕೊಂಬ
ಬೆಳ್ಳನ ಬೆಳಗಾಯಿತು…
ಬೆಳ್ಳನ ಬೆಳಗಾಯಿತು…

ಕಿತ್ತೂರ ಹೊಸ ಬಾಳೆ ಸಕ್ಕರೆ ರಸ ಬಾಳೆ
ಹಿಂಡಿದ ನೊರೆ ಹಾಲು ದಂಡಿನ ದೊರೆ ಪಾಲು
ಬೆಳ್ಳನ ಬೆಳಗಾಯಿತು…
ಬೆಳ್ಳನ ಬೆಳಗಾಯಿತು…

ಚಿತ್ರ : ಸಂಗೊಳ್ಳಿ ರಾಯಣ್ಣ
ಗೀತ ರಚನೆ : ಭುಜೇಂದ್ರ ಮಹೀಶವಾಡಿ
ಸಂಗೀತ : ಲಕ್ಷ್ಮಣ ಬರ್ಲೇಕರ್
ಗಾಯಕಿ : ಲತಾ ಮಂಗೇಶ್ಕರ್
ವರ್ಷ : 1967

ವಿಶೇಷ ಬರಹ: ಗಣೇಶ್​​ ಕೆರೆಕುಳಿ, ಡಿಜಿಟಲ್​ ಡೆಸ್ಕ್​, ನ್ಯೂಸ್​ಫಸ್ಟ್​​..

News First Live Kannada


Leave a Reply

Your email address will not be published.