ಬೇರೆ ಪಕ್ಷಗಳ ದೊಂಬರಾಟಕ್ಕೆ ಬೆಲೆ ಕೊಡಲ್ಲ, ಮುಂದಿನ ಚುನಾವಣೆಯಲ್ಲಿ 150 ಸೀಟು ಗೆದ್ದೇ ಗೆಲ್ತೀವಿ! ಬಿಎಸ್ ಯಡಿಯೂರಪ್ಪ | Least bothered about circus of opposition parties, will certainly bag 150 seats in next election: BSY


ಚಿಕ್ಕಮಗಳೂರು:  ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಎದುರಾಗಲೆಲ್ಲ ಅದರಿಂದ ಪಾರು ಮಾಡಿದ ಕೀರ್ತಿ ನಿಸ್ಸಂದೇಹವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ (BS Yediyurappa) ಸಲ್ಲುತ್ತದೆ. ಬಸವರಾಜ ಬೊಮ್ಮಾಯಿ (Basavaraj Bommai) ಅವರ ನೇತೃತ್ವದ ಕರ್ನಾಟಕ ಸರ್ಕಾರ ಕಳೆದ ಒಂದೆರಡು ತಿಂಗಳಿಂದ ತೇಜೋವಧೆಗೊಳಗಾಗಿದೆ. ಗುತ್ತಿಗೆದಾರ ಸಂತೋಷ ಪಾಟೀಲ (Santosh Patil) ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪನವರು ಕಾಮಗಾರಿಯ ಬಿಲ್ ಗಳನ್ನು ಕ್ಲೀಯರ್ ಮಾಡಲು 40 ಪರ್ಸೆಂಟ್ ಲಂಚ ಕೇಳಿದ್ದಾರೆಂದು ಆರೋಪಿಸಿ, ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿದ್ದು, ಅಮೇಲೆ ಕಾಂಗ್ರೆಸ್ ಈಶ್ವರಪ್ಪನವರ ರಾಜೀನಾಮೆ ಮತ್ತು ಬಂಧನ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು, ಅವರು ರಾಜೀನಾಮೆ ನೀಡಿದ್ದು, ಅದಾದ ಮೇಲೆ ದಿಂಗಾಲೇಶ್ವರ ಸ್ವಾಮೀಜಿ ಅವರು ಮಠಮಾನ್ಯಗಳಿಗೆ ಬಿಡುಗಡೆಯಾಗುವ ಅನುದಾನಗಳಿಗೂ ಕಮೀಶನ್ ನೀಡಬೇಕೆಂದು ಹೇಳಿದ್ದು, ರಾಜ್ಯ ಗುತ್ತಿಗೆದಾರ ಸಂಘ ಮುಖ್ಯಮಂತ್ರಿಗಳ ಕಚೇರಿಯೂ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಅಂತ ಆರೋಪಿಸಿದ್ದು, ಕೋಮು ಗಲಭೆಯಂಥ ಸ್ಥಿತಿಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದ್ದು-ಇವೆಲ್ಲ ಸರ್ಕಾರವನ್ನು ಇನ್ನಿಲ್ಲದ ಇಕ್ಕಟ್ಟಿಗೆ ಸಿಲುಕಿಸಿವೆ.

ಇಂಥ ಸ್ಥಿತಿಯಲ್ಲಿ ಹಳಿ ತಪ್ಪಿರುವ ಬಿಜೆಪಿಯನ್ನು ಹಳಿಗೆ ತರುವುದು ಕೇವಲ ಯಡಿಯೂರಪ್ಪನವರಿಂದ ಮಾತ್ರ ಸಾಧ್ಯ ಅಂತ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಶುಕ್ರವಾರದಂದು ಅವರು ಚಿಕ್ಕಮಗಳೂರಿನ ಹರಿಹರಪುರನಲ್ಲಿ ನಡೆಯುತ್ತಿರುವ ಮಹಾಕುಂಬಾಭಿಷೇಕದಲ್ಲಿ ಪಾಲ್ಗೊಂಡಿದ್ದರು.

ಪೂಜೆ ಸಲ್ಲಿಸಿದ ಬಳಿಕ ಯಡಿಯೂರಪ್ಪನವರನ್ನು ಸುತ್ತುವರಿದ ಮಾಧ್ಯಮದವರು ಸರ್ಕಾರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಳಿದರು.

ಬಿ ಎಸ್ ವೈ ಶಾಂತರಾಗೇ, ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದೇನೆ. ಬೇರೆ ಪಕ್ಷಗಳು ನಡೆಸುತ್ತಿರುವ ದೊಂಬರಾಟಗಳಿಗೆ ಬೆಲೆ ನೀಡುವುದಿಲ್ಲ. ಜನ ಬಿಜೆಪಿಯನ್ನು ಮತ್ತು ಮೋದಿಯವರನ್ನು ಇಷ್ಟಪಡುತ್ತಾರೆ. ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ತಾಯಿ ಶಾರದಾಂಬೆಯ ಕೃಪೆಯಿಂದ ನಮ್ಮ ಗುರಿ ತಲುಪುವಲ್ಲಿ ಸಫಲರಾಗುತ್ತೇವೆ ಎಂಬ ವಿಶ್ವಾಸ ನಮಗಿದೆ, ಎಂದರು.

TV9 Kannada


Leave a Reply

Your email address will not be published.