ಬೇಸರವಾಗದ ಪುನೀತ್ ಮೂವೀಸ್.. ಸಮಾಜಕ್ಕೆ ‘ಪುನೀತ’ ಸಂದೇಶ ನೀಡುತ್ತಿದ್ದ ಅಪ್ಪು


ಒಬ್ಬ ನಟನಿಗೆ ಸಮಾಜ ಬದಲಿಸುವ ತಾಕತ್ತು ಇದ್ದೇ ಇರುತ್ತೆ. ನಟನ ಸಿನಿಮಾಗಳಲ್ಲಿ ಸಂದೇಶ ಒಂದಿದ್ದರೆ, ಅದು ಬಹುಬೇಗನೇ ಮನಸಿಗೆ ನಾಟಿ ಬಿಡುತ್ತೆ. ಅದಕ್ಕಾಗಿ ಸಿನಿಮಾ ನಿರ್ಮಾಣ ಮಾಡುವವರು, ಅಭಿನಯಿಸುವವರು ತುಂಬ ಜವಾಬ್ದಾರಿ ವಹಿಸಿ ಸಿನಿಮಾ ಕಟ್ಟಬೇಕು. ಆ ವಿಷಯದಲ್ಲಿ ನಮ್ಮ ಅಪ್ಪು ಮಿಸ್ಟರ್​ ಪರ್ಫೆಕ್ಟ್​. ಮಾಡಿರುವ ಒಂದೊಂದು ಸಿನಿಮಾದಲ್ಲೂ ಹೈ ಕ್ಲಾಸ್​ ಮನರಂಜನೆ ಜೊತೆಗೆ ಮನಸಿಗೆ ಮುಟ್ಟುವ ಸಂದೇಶವೂ ಫಿಕ್ಸ್.

ಸಿನಿಮಾ ತೆರೆ ಮೇಲೆ ಬಂದ ತಕ್ಷಣ ಒಬ್ಬ ಹೀರೋ ಆಗಲೂ ಸಾಧ್ಯವೇ ಇಲ್ಲ. ಆತನ ಪಾತ್ರದಲ್ಲಿ ಪ್ರೇಕ್ಷಕ ತನ್ನನ್ನು ತಾನು ಕಾಣಬೇಕು. ಅವನ ಮಾತಿನಲ್ಲಿ ಸ್ಫೂರ್ತಿ ತುಂಬಿರಬೇಕು, ಸಿನಿಮಾ ಕೊನೆಯಲ್ಲಿ ಪ್ರೇಕ್ಷಕ ಕಣ್ಣುಗಳನ್ನೋ ಅಥವಾ ಮನಸನ್ನೋ ತುಂಬಿ ತೃಪ್ತನಾಗಿ ಹೋಗಬೇಕು. ಈ ವಿಷಯದಲ್ಲಿ ಅಪ್ಪು ಫ್ಯಾನ್​ ಫೇವರೇಟ್​. ಅಪ್ಪುವನ್ನು ನಂಬಿ ಸಿನಿಮಾಗೆ ಬಂದರೆ, ಬೇಸರದಿಂದ ಹಿಂದಿರುಗಿದ್ದು ತುಂಬ ಕಡಿಮೆ. ಸಿನಿಮಾದಲ್ಲಿ ಕಥೆ ಮೆಚ್ಚುಗೆ ಇಲ್ಲದಿದ್ದರೆ ಅಪ್ಪು ಫೈಟ್ಸ್​ ಅಥವಾ ಡ್ಯಾನ್ಸ್​ ಆದ್ರೂ ಇಷ್ಟ ಆಗಿ ಬಿಡ್ತಾ ಇತ್ತು. ಅದು ಬಿಟ್ಟರೇ ಅಪ್ಪು ಕೊಟ್ಟ ಹಲವು ಮೂವಿ ಮಾತ್ರ ಕಂಪ್ಲೀಟ್​ ಎಂಟರ್ಟೈನ್​ಮೆಂಟ್​ ಪ್ಯಾಕೇಜ್. ಹಾಗಾದ್ರೆ ಅಪ್ಪು ಸಿನಿಮಾಗಳಲ್ಲಿ ಏನೆಲ್ಲಾ ಸಂದೇಶಗಳಿತ್ತು..?

ಅಂತರ್​ ಧರ್ಮದ ವಿವಾಹದ ಬಗ್ಗೆ ಅಭಿ ಕೊಟ್ಟ ಮೆಸೇಜ್​
ಧರ್ಮವನ್ನ ಮೀರಿ ಪ್ರೀತಿ ಅಪ್ಪಿಕೊಂಡ ‘ಅಭಿ’ಮಾನಿಗಳು

ಪುನೀತ್​ ಅಭಿನಯದ 2ನೇ ಚಿತ್ರ ಅಭಿ, ಈ ಸಿನಿಮಾದಲ್ಲಿ ಅಭಿ ಹಿಂದೂ ಮುಸ್ಲಿಂ ವಿವಾಹದ ಬಗ್ಗೆ ಅಧ್ಭುತವಾದ ಸಂದೇಶವನ್ನು ನೀಡಿದ್ದರು. ಅಭಿಮಾನಿಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಅಪ್ಪು ರಮ್ಯಾ ಕಾಂಬಿನೇಷನ್​ನಲ್ಲಿ ಡ್ಯಾನ್ಸ್​ ರೋಮ್ಯಾನ್ಸ್​ ಜೊತೆ, ಪವರ್​ಫುಲ್​ ಫೈಟ್ಸ್​ ಎಲ್ಲರ ಮನಸ್ಸನ್ನು ಗೆದ್ದಿತ್ತು, ಇದರ ಜೊತೆಗೆ ಅಂತರ್​ ಧರ್ಮದ ವಿವಾಹದ ಸಂದೇಶವನ್ನು ಎತ್ತಿ ಹಿಡಿದಿತ್ತು ಅಭಿ ಸಿನಿಮಾ. ಸಿನಿಮಾ ಕೊನೆಯಲ್ಲಿ, ಅಭಿಮಾನಿಗಳು ಪ್ರೀತಿ ಮುಂದೆ ಯಾವುದೇ ಧರ್ಮ ಜಾತಿ ಇಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದ್ದರು.

ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿದ ವೀರ ಕನ್ನಡಿಗ
ಸ್ಲಂ ಜನರನ್ನ ಕಾಪಾಡಲು ಹೋರಾಟಕ್ಕಿಳಿದ ಮುನ್ನ

ಅಪ್ಪು ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡುತ್ತಿದ್ದಾಗ, ತೆಲಗು ನಿರ್ದೇಶಕ ಅಪ್ಪುವಿಗಾಗಿ ಸಿದ್ಧ ಪಡಿಸಿದ್ದ ಮೂವಿ ವೀರ ಕನ್ನಡಿಗ. ಎಂದಿನಂತೆ ಫೈಟ್ಸ್​ ಡ್ಯಾನ್ಸ್​ ಪ್ಯಾಕೇಜ್​ ಇರುವ ಈ ಸಿನಿಮಾದಲ್ಲಿ, ಅಪ್ಪು ಕನ್ನಡದ ಪರ ಹಾಗೂ ಕನ್ನಡಿಗರ ಪರ ಧ್ವನಿ ಎತ್ತಿದ್ದರು. ಸ್ಲಂ ಜನಗಳಿಗೆ ನೆಲೆ ಕಾಣಿಸಲು ಮುನ್ನನಾಗಿ ಅಪ್ಪು ವೀರ ಕನ್ನಡಿಗದಲ್ಲಿ ಹೋರಾಟಕ್ಕೆ ಇಳಿದಿದ್ದರು ಸಿನಿಮಾದಲ್ಲಿ ಅಪ್ಪು ನಟನೆಯಿಂದ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ರು.

ಅಮ್ಮನ ಪ್ರೀತಿ ಜೊತೆ ಬಾಕ್ಸಿಂಗ್​ ಪ್ರದರ್ಶಿಸಿದ ಮೌರ್ಯ
ಕಿಕ್​ ಬಾಕ್ಸರ್​ ಅಪ್ಪು ಸಾರಿ ಹೇಳಿದ್ದ ತಾಯಿಯ ಪ್ರೀತಿ

ಅಪ್ಪು ಹಾಗೂ ರೋಜಾರವರ ಅಭಿನಯದ ಮೌರ್ಯ ಸಿನಿಮಾ, ಅಮ್ಮನ ಮುದ್ದಿನ ಮಕ್ಕಳಿಗೆ ಬಲು ಇಷ್ಟದ ಸಿನಿಮಾ. ಆ ಸಿನಿಮಾದಲ್ಲಿ ಅಮ್ಮಾ ಅಮ್ಮಾ ಹಾಡು, ನೂರು ಸಾರಿ ಕೇಳಿದರು ಬೇಸರವೇ ಅಗಲ್ಲ. ಅಮ್ಮ ಹಾಗೂ ಮಗನ ಬಾಂಧವ್ಯವನ್ನು ಅಚ್ಚು ಕಟ್ಟಾಗಿ ಪೋಣಿಸಿದ್ದರು ನಿರ್ದೇಶಕ ಎಸ್​ ನಾರಾಯಣ್. ಕಿಕ್​ ಬಾಕ್ಸರ್​ ಆಗಿದ್ದ ಮೌರ್ಯ ಸಿನಿಮಾದ ಮನು, ಅಮ್ಮನನ್ನು ಕಳೆದುಕೊಂಡ ಮೇಲೆ, ತಂಗಿಗಾಗಿ ಮಾಡುವ ತ್ಯಾಗವನ್ನು ತೋರಿಸಲಾಗಿದೆ. ಈ ಸಿನಿಮಾದಲ್ಲಿ ಬಾಕ್ಸಿಂಗ್​ ರಿಂಗ್ ಒಳಗೆ ಅಪ್ಪು ಸ್ಟಂಟ್ಸ್​ಗಳ ಜೊತೆ ಅಮ್ಮನ ಎಮೋಷನಲ್ ಸೀನ್ಸ್​ ಕಟ್ಟಿ ಕೂರಿಸುತ್ತೆ.

ಶ್ರೀಮಂತನಾಗಿದ್ರೂ ಬಡತನದ ಹಸಿವಿನ ಮೆಸೇಜ್​ ತಂದಿದ್ದ ಅರಸು
ಅರಸು, ಮನೆ ಮಂದಿ ಎಲ್ಲರೂ ಕೂತು ನೋಡಬಹುದಾದ ಸಿನಿಮಾ

ಅರಸು ಸಿನಿಮಾದಿಂದ ಅಪ್ಪು ಕರುನಾಡಿನ ಅರಸನಾಗಿದ್ದರು. ಅರಸು ಸಿನಿಮಾದಲ್ಲಿ ಬಹುದೊಡ್ಡ ಸಂದೇಶವಿತ್ತು. ಅಪ್ಪನ ಆಸ್ತಿಯಲ್ಲಿ ದಿನವಿಡಿ ಮಜಾ ಮಾಡುತ್ತಿದ್ದ ಶಿವರಾಜ್​ ಅರಸು, ಪ್ರೀತಿಯನ್ನು ಪಡೆಯಲು ಶ್ರಮ ಜೀವನದ ದಾರಿ ಹಿಡಿಯುತ್ತಾನೆ. ಶ್ರೀಮಂತನಾಗಿದ್ದವನು ಏಕಾಏಕಿ ಬಡವನ ಜೀವನ ನಡೆಸಲು ಶುರು ಮಾಡ್ತಾನೆ. ಬಡವನ ಹಸಿವಿನ ಸಮಯದಲ್ಲಿ ನಿಂತ ಅರಸು, ತನ್ನ ಜೀವನ ಸಾರ್ಥಕವಾದ ದಿನವೇ ಎಲ್ಲರಿಗೂ ಋಣಿಯಾಗ್ತಾನೆ. ಈ ಸಿನಿಮಾ ಪುಟ್ಟ ಮಕ್ಕಳಿನಿಂದ ಹಿಡಿದು, ವಯಸ್ಸಾದ ಹಿರಿಯರ ಮನಸೂ ತುಂಬಿ ಬಿಟ್ಟಿತ್ತು.

ದಾಂಪತ್ಯ ಜೀವನದ ರುಚಿ ತೊರಿಸಿದ ಅಪ್ಪುವಿನ ಮಿಲನ
ಗಂಡ ಹೆಂಡತಿ ಬಾಂಧವ್ಯದ ಬಗ್ಗೆ ಆಕಾಶದಷ್ಟು ಸಂದೇಶ

ಈಗಲೂ ಟಿವಿಯಲ್ಲಿ ಮಿಲನ ಸಿನಿಮಾ ಬರ್ತಾಇದ್ರೆ ಕಣ್ಣ್ ಅರಳಿಸಿಕೊಂಡು ನೋಡ್ತೀವಿ. ಕಾರಣ ಸಿನಿಮಾ ಕಥೆ ಅಷ್ಟು ಮನಮುಟ್ಟುವಂತಿದೆ. ಒಬ್ಬ ರೇಡಿಯೋ ನಿರೂಪಕನಾಗಿ ಅಪ್ಪು ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಹೆಂಡತಿ ಕಳೆದುಕೊಂಡಿದ್ದ ಪ್ರೀತಿಯನ್ನು ಹುಡುಕಿಕೊಡಲು ಶ್ರಮ ವಹಿಸುತ್ತಾನೆ. ಕೊನೆಗೂ ಪತಿ ಧರ್ಮವನ್ನು ಬಿಡದೆ, ಅವಳಿಗೆ ತೊಂದರೆ ಆಗದಂತೆ ಕಾವಲಾಗಿ ನಿಲ್ಲುತ್ತಾನೆ ಮಿಲನ ಸಿನಿಮಾದ ಆಕಾಶ್​. ಇದರ ನಡುವೆ ಹೊಟ್ಟೆ ಹುಣ್ಣಾಗಿಸುವ ನಗು, ಕಿವಿಗೆ ಇಂಪು ನೀಡುವ ಹಾಡುಗಳು, ಪ್ರೇಕ್ಷಕನನ್ನು ಹಿಡಿದು ಕೂರಿಸುತ್ತೆ.

ಎಲ್ಲ ವಯಸ್ಸಿನವರಿಗೂ ಅಪ್ಪು ಸಿನಿಮಾಗಳೂ ಅಚ್ಚು ಮೆಚ್ಚು.. ಇದಿಷ್ಟೆ ಅಲ್ಲ.., ಸಮಾಜಮುಖಿ ಸಿನಿಮಾಗಳನ್ನು ಅಪ್ಪು ಕೊಡುಗೆ ಆಗಿ ಕೊಟ್ಟಿದ್ದಾರೆ. ಅಪ್ಪು ನಟಿಸಿದ ಒಂದೊಂದು ಸಿನಿಮಾಗಳು ಗೋಲ್ಡನ್​ ಮೂವಿಸ್​. ಅಷ್ಟು ಸಿನಿಮಾಗಳಲ್ಲಿ ಎಲ್ಲೂ ಎಡವಲಿಲ್ಲ ಪುನೀತ್​ ರಾಜ್​ಕುಮಾರ್​. ಒಂದೊಂದು ಪಾತ್ರವೂ ಅದ್ಭುತವಾಗಿದ್ದವು.

ವಂಶಿ.., ಇದು ಕೇವಲ ಸಿನಿಮಾವಲ್ಲ.. ದೊಡ್ಡ ಜವಾಬ್ದಾರಿ. ವಂಶಿ ಎನ್ನುವ ಪಾತ್ರವೇ ಇಲ್ಲಿ ತುಂಬ ಡಿಫೆರೆಂಟ್​, ಕೋಪಿಷ್ಟ, ಛಲವಾದಿ.. ಹಠ ಎಲ್ಲವೂ ತುಂಬಿರುವ ಪಾತ್ರಕ್ಕೆ ಪೋಲೀಸ್​ ಆಗೋ ಆಸೆ. ಆದರೆ ಫ್ಯಾಮಿಲಿ ಬ್ಯಾಗ್ರೌಂಡ್​ನಿಂದಾಗಿ ಎಲ್ಲವೂ ನಿರಾಸೆ ಆಗಿಬಿಡುತ್ತೆ. ವಂಶಿ ಒಬ್ಬ ಲಾಂಗ್​ ಹಿಡಿದ ರೌಡಿ ಆಗಿ ಬಿಡ್ತಾನೆ. ಇದರ ಜೊತೆ ಅಮ್ಮನ ಸೆಂಟಿಮೆಂಟ್ಸ್​ ಪ್ರೇಕ್ಷಕನನ್ನು ಕಾಡದೆ ಬಿಡೋದಿಲ್ಲ. ಸಿನಿಮಾ ನೋಡುತ್ತಿದ್ದರೆ, ವಂಶಿ ರೌಡಿಸಂ ಬಿಟ್ಟು ಅಮ್ಮನೊಂದಿಗೆ ಇರಬಾರದೆ ಎನ್ನುವ ಭಾವನೆ ಮೂಡಿಸಿದ್ದಾರೆ ಅಪ್ಪು. ಕೊನೆಗೆ ಎಲ್ಲವನ್ನು ಮರೆತು ಸಾಮಾನ್ಯ ಶಿಕ್ಷಕನಾಗಿ ಜೀವನ ಸಾಗಿಸಿ ಬಿಡ್ತಾನೆ ವಂಶಿ..

ದಕ್ಷ ಅಧಿಕಾರಿಯಾಗಿ ತೆರೆ ಮೇಲೆ ‘ಪೃಥ್ವಿ’ ಆರ್ಭಟ
ಪೃಥ್ವಿ ನೋಡಿ IAS ಮಾಡಲು ಮುಂದಾದ ಫ್ಯಾನ್ಸ್​

ಅಪ್ಪು ಸಿನಿಮಾಗಳಲ್ಲೇ ನೋಟೆಬಲ್​ ಸಿನಿಮಾ ಅಂದ್ರೆ ಅದು ಪೃಥ್ವಿ. ಒಬ್ಬ ದಕ್ಷ ಅಧಿಕಾರಿಯಾಗಿ ಪುನೀತ್​ ರಾಜ್​ಕುಮಾರ್ ತೆರೆ ಮೇಲೆ ಮಿಂಚಿದ್ರು. ಚೂರು ವಂಚನೆ ಇಲ್ಲದೆ, ಲಂಚ ಅನ್ನೋದನ್ನು ಎಡಗೈಯಲ್ಲೂ ಮುಟ್ಟದ ಪೃಥ್ವಿ ಹಲವರಿಗೆ ಮಾರ್ಗದರ್ಶನ ನೀಡಿತ್ತು. ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ ನೋಡಿ ಅದೆಷ್ಟೋ ಜನ ರೈತರಾಗಿದ್ರಂತೆ, ಅದೇ ರೀತಿ ಪೃಥ್ವಿಯಲ್ಲಿ ಅಪ್ಪು ಅಭಿನಯವನ್ನು ನೋಡಿ​ ಅಭಿಮಾನಿಗಳು ಅಧಿಕಾರಿಯಾಗಲೂ ತಯಾರಿ ನಡೆಸಿದ ಮಾಹಿತಿ ಇದೆ..

ಸ್ನೇಹ ಅಂದ್ರೆ ಏನು ಅನ್ನೋದನ್ನು ಹೇಳಲು ಬಂದಿದ್ದ ಹುಡುಗರು
ಸ್ನೇಹ, ಪ್ರೀತಿ, ತ್ಯಾಗ ಮೂರು ವಿಷಯದ ಹೈ ವೋಲ್ಟೇಜ್​ ಸಿನಿಮಾ

ಹುಡುಗರು ಸಿನಿಮಾದಲ್ಲಿ ಅಪ್ಪು ಜೊತೆ ಲೂಸ್​ ಮಾದ ಯೊಗೀಶ್​ ಹಾಗೂ ಶ್ರೀನಗರ ಕಿಟ್ಟಿ ಕಾಸ ದೋಸ್ತಗಳು. ಈ ಸಿನಿಮಾದಲ್ಲಿ ಪ್ರಭು ಪಾತ್ರವನ್ನು ಅಪ್ಪು ಬಿಟ್ಟರೇ ಬೇರೆ ಯಾರು ಅಷ್ಟು ಶ್ರದ್ಧೆಯಿಂದ ಮಾಡಲು ಸಾಧ್ಯವೇ ಇಲ್ಲ. ಫ್ರೆಂಡ್ಸ್​ ಕಷ್ಟದಲ್ಲಿದ್ದಾಗ ಜೊತೆಗಾರರು, ಯಾವ ರಿಸ್ಕ್​ ತೆಗೆದುಕೊಳ್ಳಲು ಸಿದ್ದವಾಗಿರ್ತಾರೆ ಅನ್ನೋದನ್ನು ತೋರಿಸಿತ್ತು ಅಪ್ಪು ಅಭಿನಯ. ಯಾರೋ ಒಬ್ಬನ ಪ್ರೀತಿ ಉಳಿಸಿಕೊಳ್ಳಲು ಒಬ್ಬ ಕಿವಿ ಒಬ್ಬ ಕಾಲು ಕಳೆದುಕೊಂಡರೆ, ಅಪ್ಪು ತನ್ನ ಪ್ರೀತಿಯನ್ನೆ ಕಳೆದಿಕೊಳ್ತಾನೆ. ತ್ಯಾಗದ ಜೊತೆ ಇರುವ ಸ್ನೇಹಿತರ ರೋಚಕ ಸಿನಿಮಾನೇ ಹುಡುಗರು..

ಯಾರೇ ಕೂಗಾಡಲಿ, ಹೋಗಬೇಕು ಸರಿದಾರಿಲಿ ಎಂದ ಅಪ್ಪು
ಕೆಟ್ಟೋರಿಗೂ ಒಳ್ಳೆದನ್ನ ಬಯಸೋಣ ಅನ್ನೋ ಸಂದೇಶ

ಅಪ್ಪು ಸಿನಿಮಾಗಳಲ್ಲೆ ಇದು ತುಂಬ ಡಿಫರೆಂಟ್​ ಸಿನಿಮಾ. ಮನೆಯಲ್ಲಿ ಮಾನಸಿಕವಾಗಿ ಚಿತ್ರ ಹಿಂಸೆ ಅನುಭವಿಸಿದ ಕುಮಾರ, ಹಣ ಸಂಪತ್ತು ಆಸ್ತಿ ಎಲ್ಲವನ್ನು ಬಿಟ್ಟು ಬೆಂಗಳೂರಿಗೆ ಖಾಲಿ ಕೈಯಲ್ಲಿ ಬಂದು, ತನ್ನ ವಿಶಾಲವಾದ ಹೃದಯದಿಂದ ಎಲ್ಲರಿಗೂ ಸಹಾಯ ಮಾಡುತ್ತಾನೆ. ಸರಿ ದಾರಿಯಲ್ಲಿ ಇರುವಾಗ, ನಾವು ಹೆದರಬಾರದು ಎನ್ನುವ ಸಂದೇಶ ಈ ಸಿನಿಮಾದಲ್ಲಿ ಇತ್ತು. ಛಲದಿಂದ ಹೇಗೆ ಬದುಕಬೇಕು ಎನ್ನುವ ಸೀನ್ಸ್​ಗಳ ಜೊತೆಗೆ ಅಪ್ಪು ಬಾಯಿಂದ ಕೆಟ್ಟೋರಿಗೂ ಒಳ್ಳೆದನ್ನ ಬಯಸೋಣ ಅನ್ನೋ ಮಾತುಗಳು ಪ್ರೇಕ್ಷಕನನ್ನು ಹತ್ತಿರ ಸೆಳೆದು ಬಿಡುತ್ತೆ.

ರಾಜಕುಮಾರನನ್ನು ನೋಡಿ ಕಣ್ಣೀರಿಲ್ಲದೆ ಹೊರ ಬಂದವರಿಲ್ಲ
ಆಡಿಸಿ, ಬೀಳಿಸಿದರೂ ಎಂದೂ ಸೋಲದ ರಾಜಕುಮಾರ

ಪುನೀತ್​ ನಟನೆಯ ಇತ್ತೀಚಿನ ಸೂಪರ್​ ಹಿಟ್​ ಸಿನಿಮಾ ಅಂದ್ರೆ ಅದು ರಾಜಕುಮಾರ. ಅಪ್ಪ ಅಮ್ಮನ ಮಹತ್ವವವನ್ನು ಸಾರುವ ಸಿನಿಮಾನೇ ಇದು. ಈ ಸಿನಿಮಾ ನೋಡಿ ಚಿತ್ರಮಂದಿರದಿಂದ ಕಣ್ಣೀರು ಹಾಕದೆ ಹೊರ ಬರದೆ ಇರುವವರಿಲ್ಲ. ಮಕ್ಕಳು ಅನಾಥಾಶ್ರಮದಲ್ಲಿ ವೃದ್ಧರಾದ ಪೋಷಕರನ್ನು ಬಿಟ್ಟು ಪ್ರತ್ಯೇಕ ಜೀವನ ನಡೆಸಲು ಮುಂದಾಗಿರುವವರಿಗೆ ಈ ಸಿನಿಮಾ ಬಹುದೊಡ್ಡ ಸಂದೇಶ. ಸಿನಿಮಾದಲ್ಲಿ ಅಪ್ಪುವಿನ ನಡವಳಿಕೆಗೆ ಗೊಂಬೆ ಹೇಳಿದ ಹಾಡು ಇಂದಿಗೂ ಎಂದೆಂದಿಗೂ ಎಲ್ಲರ ಅಚ್ಚುಮೆಚ್ಚಿನ ಗೀತೆ ಆಗಿಯೇ ಉಳಿದಿದೆ.

ಅಪ್ಪು ಸಿನಿಮಾ ಅಂದ್ರೆನೇ ಹೀಗೆ, ಎಲ್ಲ ಸಿನಿಮಾಗಳಲ್ಲೂ ಜನರಿಗಾಗಿ ಒಂದು ಸಂದೇಶ ಮಾತ್ರ ಫಿಕ್ಸ್​ ಇದ್ದೇ ಇರುತ್ತಿತ್ತು. ಅದು ಅಪ್ಪುವಿನಿಂದ ಹಿಡಿದು ಯುವರತ್ನದ ತನಕ ಎಲ್ಲವೂ ಜನರ ಮನಸ್ಸು ಬದಲಿಸುವ ವಿಷಯಗಳು ಹೊಂದಿತ್ತು. ಒಮ್ಮೆ ಅಪ್ಪು ಸಿನಿಮಾ ಅಂತ ಚಿತ್ರಮಂದಿರಕ್ಕೆ ಕಾಲಿಟ್ರೆ, ನೋ ಡೌಟ್ ಫೈಟ್​ ಡ್ಯಾನ್ಸ್​, ಕ್ಯಾಚಿ ಡೈಲಾಗ್ಸ್​ಗಳ ಮನರಂಜನೆ ಜೊತೆ ಸಮಾಜಕ್ಕೆ ಒಳಿತಾಗುವ ಮೇಸೇಜ್​ ಇದ್ದೇ ಇರ್ತಾ ಇತ್ತು. ಬಾಲ ನಟನಾಗಿಯೂ ಪುಟ್ಟ ಪುಟ್ಟ ಸಂದೇಶ ಕೊಡುತ್ತಿದ್ದ ಅಪ್ಪು, ನಾಯಕ ನಟನಾಗಿ ಸಾರ್ಥಕವಾದ ಸಿನಿಮಾಗಳನ್ನು ಮಾಡಿದ್ದಾರೆ. ಅಪ್ಪುಗಾಗೆ ಇಂತಹ ಸಿನಿಮಾಗಳು ಬರ್ತಾ ಇತ್ತಾ ? ಅಥವಾ ಅಪ್ಪು ಹುಡುಕುತ್ತಿದ್ದ ಕಥೆಗಳೇ ಇಂತದ್ದ ಗೊತ್ತಿಲ್ಲಾ.. ಆದ್ರೆ ಪಡ್ಡೆ ಹುಡುಗರಿಗೆ ಮಾಸ್​ ಆಗಿ ಫ್ಯಾಮಿಲಿಗೆ ಕ್ಲಾಸ್​ ಆಗಿ, ಮಕ್ಕಳಿಂದ ಹಿರಿಯರವರೆಗೂ ಮನರಂಜಿಸಿದ ಏಕೈಕ ನಟ ನಮ್ಮ ಪುನೀತ್​ ರಾಜ್​ ಕುಮಾರ್​.

ಕನ್ನಡ ಫಿಲಂ ಇಂಡೆಸ್ಟ್ರಿಗೆ ಅಪ್ಪುವಿನಂತಹ ಸ್ಟಂಟ್ಸ್​ ಮಾಡೋ ಸ್ಟಾರ್​ ಬರಬಹುದು, ಅಪ್ಪುವಿನಂತೆ ಡ್ಯಾನ್ಸ್​ ಮಾಡಬಹುದಾದ ಮತ್ತೊಬ್ಬ ಸ್ಟಾರ್​ ಡ್ಯಾನ್ಸರ್​ ಬರಬಹುದು, ಇನ್ನೊಬ್ಬ ಒಳ್ಳೆ ನಟ, ಜೊತೆಗೆ ಅಪ್ಪುವಿನ ಮನಸ್ಸಿನ ಸ-ಹೃದಯಿ ಬರಬಹುದು.. ಆದ್ರೆ ಅಪ್ಪು ರೀತಿ ಕಂಪ್ಲೀಟ್​ ಪ್ಯಾಕೇಜ್​ ಮತ್ತೊಬ್ಬರು ಬರಲು ಸಾಧ್ಯವೇ ಇಲ್ಲ. ಅಪ್ಪುವಿನ ಎಲ್ಲಾ ಸಿನಿಮಾಗಳು ಎಂದೆಂದಿಗೂ ಸ್ಫೂರ್ತಿ ತುಂಬುತ್ತಲೇ ಇರುತ್ತೆ.

News First Live Kannada


Leave a Reply

Your email address will not be published. Required fields are marked *