ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ನಮ್ಮ ಉಡುಗೆ ತೊಡುಗೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ. ತೆಳುವಾದ ಹಾಗೂ ಹತ್ತಿಯಿಂದ ತಯಾರಾದ ಬಟ್ಟೆಗಳ ಮೊರೆ ಹೋಗುತ್ತವೆ. ಕೇವಲ ಬಟ್ಟೆ ಶೈಲಿ ಬದಲಾಯಿಸಿದರೆ ಮುಗಿತೇ ? ಖಂಡಿತವಾಗಿಯೂ ಇಲ್ಲ. ಬೇಸಿಗೆಯಲ್ಲಿ ನಮ್ಮ ಆಹಾರ ಪದ್ಧತಿಯೂ ಕೂಡ ಬದಲಾಗುವುದು ಅಗತ್ಯ.

ಹೌದು, ಸೂರ್ಯನಿಂದ ಹೊರಹೊಮ್ಮುವ ಶಾಖದ ಕಿರಣಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಬೇಸಿಗೆಯಲ್ಲಿ ಹೆಚ್ಚಾಗಿ ನಿರ್ಜಲೀಕರಣ( ಡಿಹೈಡ್ರೆಷನ್), ಚರ್ಮದ ರೋಗಗಳು ಹಾಗೂ ವಿಟಮಿನ್ ಮತ್ತು ಖನಿಜ ಕೊರತೆಯಿಂದ ನಾನಾ ಬಗೆಯ ಸಮಸ್ಯೆಗಳು ವಕ್ಕರಿಸುತ್ತವೆ. ಇವುಗಳಿಂದ ಪಾರಾಗಬೇಕಾದರೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯ.

ಹಾಗಾದರೆ ಬೇಸಿಗೆಯಲ್ಲಿ ಸೇವಿಸಬಹುದಾದ ಆಹಾರಗಳು ಯಾವವು ?

ಟೊಮೆಟೊ : ವಿಟಮಿನ್ ಸಿ ಹಾಗೂ ರೋಗನಿರೋಧಕ ಶಕ್ತಿ ತುಂಬಿಕೊಂಡಿರುವ ಟೊಮೆಟೊ ಬೇಸಿಗೆಯಲ್ಲಿ ಹೆಚ್ಚು ಸೇವಿಸುವುದು ಉತ್ತಮ. ಲೈಕೋಪೀನ್ ನಂತಹ ಫೈಟೊಕೆಮಿಕಲ್ಸ್ ಟೊಮೆಟೊದಲ್ಲಿರುತ್ತೆ. ಇವು ನಮ್ಮಲ್ಲಿರುವ ದೀರ್ಘಕಾಲಿಕ ಕಾಯಿಲೆಗಳ ನಿರ್ಮೂಲನೆಗೆ ಸಹಾಯಕವಾಗುತ್ತೆ.

ಜುಚಿನಿ : ಇದು ಕುಂಬಳಕಾಯಿ ಹೋಲುವಂತಹ ಆದರೆ, ಅದಕ್ಕಿಂತ ಕಡಿಮೆ ಗಾತ್ರ ಹೊಂದಿರುತ್ತದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದಕ್ಕೆ ಕಾರಣ ಈ ಕಾಯಿಯಲ್ಲಿರುವ ಪೆಕ್ಟಿನ್ ಎನ್ನುವ ನಾರು ಪದಾರ್ಥ.

ಕಲ್ಲಂಗಡಿ : ಇದು ಬೇಸಿಗೆ ಕಾಲದಲ್ಲಿ ಬಹುಬೇಡಿಕೆಯ ಹಣ್ಣು. ಅತೀ ಹೆಚ್ಚು ನೀರಿನ ಅಂಶ ತುಂಬಿಕೊಂಡಿರುವುದರಿಂದ ನಿರ್ಜಲೀಕರಣಕ್ಕೆ ( ಡಿಹೈಡ್ರೆಷನ್) ರಾಮಬಾಣ. ಜತೆಗೆ ಸೂರ್ಯನ ಕಿರಣಗಳಿಂದ ಉಂಟಾಗುವ ಚರ್ಮ ಸಂಬಂಧಿ ರೋಗಗಳನ್ನೂ ಕಡಿಮೆ ಮಾಡುತ್ತೆ. ಕಲ್ಲಂಗಡಿ ಸೇವನೆ ಲವಲವಿಕೆಯಿಂದ ಇರುಸುತ್ತೆ.

ಕಿತ್ತಳೆ ( ಆರೆಂಜ್ ) : ಬೇಸಿಗೆಯಲ್ಲಿ ನಮ್ಮ ದೇಹದಿಂದ ಹೊರಹೊಮ್ಮುವ ಬೆವರಿನ ಜತೆಗೆ ಪೊಟ್ಯಾಶಿಯಮ್ ಕೂಡ ನಾವು ಕಳೆದುಕೊಳ್ಳುತ್ತೇವೆ. ಇದಕ್ಕೆ ಪರಿಹಾರ ಕಿತ್ತಳೆ ಸೇವನೆ. ಈ ಹಣ್ಣಿನಲ್ಲಿ ಸಿಹಿ ಸಿಟ್ರಸ್ ಪೊಟ್ಯಾಸಿಯಮ್ ಸಮೃದ್ಧವಾಗಿರುತ್ತದೆ. ಶೇಕಡಾ 80 ರಷ್ಟು ನೀರಿನ ಪ್ರಮಾಣ ಹೊಂದಿರುವ ಕಿತ್ತಳೆ ನಿರ್ಜಲೀಕರಣ ನಿವಾರಣೆಗೂ ಸಹಕಾರಿಯಾಗಲಿದೆ.

ಮೊಸರು : ಮೊಸರು ಹಾಗೂ ಇದರಿಂದ ತಯಾರಾಗುವ ಮಜ್ಜಿಗೆ ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಸೇವನೆ ಉತ್ತಮ. ಇದರಿಂದ ದೇಹದ ಉಷ್ಟಾಂಶ ಸಮತೋಲನದಲ್ಲಿರುತ್ತೆ.

ಸೇಬು : ಬೇಸಿಗೆ ಕಾಲದಲ್ಲಿ ಸೇಬು ಸೇವನೆ ಉಪಯೋಗಕಾರಿ. ಇದು ಚರ್ಮ ರೋಗ ಹಾಗೂ ಆರೋಗ್ಯಕ್ಕೂ ಉತ್ತಮವಾಗಿದೆ.

ತರಕಾರಿ ಸಲಾಡ್ : ಮೂಲಂಗಿ, ಮೆಂತೆ ಸೊಪ್ಪು, ಗಜ್ಜರಿ ( ಕ್ಯಾರೆಟ್ ) ಮುಂತಾದವುಗಳನ್ನು ಸೇರಿಸಿ ಸಲಾಡ್ ತಯಾರಿಸಿ ಸೇವಿಸಬೇಕು. ಇವುಗಳಿಂದ ನಿರ್ಜಲೀಕರಣ ನಿವಾರಣೆಗೆಯಾಗುತ್ತೆ.

ಒಣ ಹಣ್ಣು ( ಟ್ರೈಪ್ರೂಟ್ಸ್ ) : ಬೇಸಿಗೆಯಲ್ಲಿ ಗೋಡಂಬಿ, ಬದಾಮ್, ಒಣ ದ್ರಾಕ್ಷಿ, ಪಿಸ್ತಾ ಸೇವನೆ ಮರಿಯಬೇಡಿ.

ಹಸಿರು ತರಕಾರಿ : ಬೇಸಿಗೆಯಲ್ಲಿ ಮಾರುಕಟ್ಟೆಗೆ ಹಸಿರು ತರಕಾರಿ ಆವಕ ಕಡಿಮೆ ಇರುತ್ತದೆ. ಆದರೆ, ಇವುಗಳನ್ನು ಸೇವಸದೆ ಇರಬೇಡಿ. ಕಾರಣ ಹಸಿರು ತರಕಾರಿ ನಮ್ಮ ದೇಹಕ್ಕೆ ಉತ್ತಮ.

ಎಳ ನೀರು : ಬಿಸಿಲಿನ ಝಳ ತಾಳಲಾರದೆ ತಂಪು ಪಾನೀಯ ಮೊರೆ ಹೋಗುತ್ತೇವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಪಾನೀಯಗಳಿಗಿಂತ ಎಳನೀರು ಸೇವನೆಗೆ ಮೊದಲ ಅದ್ಯತೆ ನೀಡಿ.

ಆರೋಗ್ಯ – Udayavani – ಉದಯವಾಣಿ
Read More