ಚಾಮರಾಜನಗರ:  ಪಲ್ಸರ್ ಬೈಕ್‌ನಲ್ಲಿ ನಾಲ್ವರು ಪ್ರಯಾಣ ಮಾಡಿ ಆಪತ್ತು ತಂದುಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ನಾಲ್ಕು ಮಂದಿ ಪ್ರಯಾಣಿಸುತ್ತಿದ್ದ ಬೈಕ್​​ಗೆ ಜೀಪ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಬ್ಬರಿಗೆ ಗಂಭೀರ ಗಾಯವಾಗಿದ್ದು, ರಸ್ತೆಯಲ್ಲೇ ಕೆಲ ಕಾಲ ನರಳಾಡಿದರು. ಬೈಕ್​​ನಲ್ಲಿದ್ದ ಇನ್ನೋರ್ವ ಅಪಘಾತವಾದ ಬೆನ್ನಲ್ಲೇ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆಯ ಗರಗನಹಳ್ಳಿ ಗೇಟ್ ಬಳಿ ನಿನ್ನೆ ಸಂಜೆ ಈ ಅಪಘಾತ ನಡೆದಿದೆ. ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಜೀಪ್, ರಸ್ತೆ ತಿರುವಿನಲ್ಲಿ‌ ವೇಗವಾಗಿ ಬಂದ ಪಲ್ಸರ್ ಬೈಕ್​ಗೆ ಡಿಕ್ಕಿಯಾಗಿದೆ. ಇದರಿಂದ ಬೈಕ್​ನಲ್ಲಿ ಹೋಗುತ್ತಿದ್ದ ನಾಲ್ವರ ಪೈಕಿ ಮಧು ಎಂಬಾತ ಸಾವನ್ನಪ್ಪಿದ್ದಾನೆ.

ಆಲತ್ತೂರು ಗ್ರಾಮದ ಮಣಿ ಹಾಗೂ ವೆಂಕಟೇಶ್ ಗಾಯಗೊಂಡಿದ್ದಾರೆ. ಇವರಿಬ್ಬರಿಗೂ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೀಪ್​ನಲ್ಲಿದ್ದ ಇಬ್ಬರಿಗೆ ಕೂಡ ಗಾಯವಾಗಿದ್ದು, ಅವರು ಕೇರಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

The post ಬೈಕ್‌ನಲ್ಲಿ ನಾಲ್ವರ ಪ್ರಯಾಣ: ಜೀಪ್​ ಡಿಕ್ಕಿಯಾಗಿ ಓರ್ವ ಸಾವು appeared first on News First Kannada.

Source: News First Kannada
Read More