ಭೋಪಾಲ್: ಭಾರತದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು, ಆರೋಗ್ಯ ಮೂಲಸೌಕರ್ಯಗಳಾದ ಬೆಡ್, ಔಷಧಿ ಮತ್ತು ಆಕ್ಸಿಜನ್ ಸಿಲಿಂಡರ್ ಇಲ್ಲದೇ ಜನರು ಪರದಾಡುತ್ತಿದ್ದಾರೆ. ಅನೇಕ ಮಂದಿ ಅಂಬುಲೆನ್ಸ್ ಮತ್ತು ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆ ತಲುಪುವಷ್ಟರಲ್ಲಿ ತಡವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ದಿನ ಇಂತಹ ದುಃಖಕರವಾದ ವಿಷಯಗಳನ್ನು ಕಂಡು ಬೇಸರಗೊಂಡ ಮಧ್ಯಪ್ರದೇಶದ ಇಂಜಿನಿಯರ್ ಒಬ್ಬರು ಜನರ ಜೀವ ಉಳಿಸಲು ಬೈಕ್‍ನಲ್ಲಿಯೇ ತಾತ್ಕಾಲಿಕ ಅಂಬುಲೆನ್ಸ್ ನಿರ್ಮಿಸಿದ್ದಾರೆ. ಅಲ್ಲದೆ ಈ ಮಿನಿ ಅಂಬುಲೆನ್ಸ್ ತಯಾರಿಸಲು ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿದ್ದಾರೆ.

ಈ ವ್ಯಕ್ತಿಯು ತಮ್ಮ ಬೈಕ್‍ಗೆ ಅಂಬುಲೆನ್ಸ್‌ನನ್ನು ಜೋಡಿಸಿ, ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯುತ್ತಿದ್ದಾರೆ. ಈ ಅಂಬುಲೆನ್ಸ್ ಸಿದ್ಧಪಡಿಸಲು 20-25,000ರೂ ಖರ್ಚಾಗಿದ್ದು, ಅಂಬುಲೆನ್ಸ್ ಒಳಗಡೆ ಆಕ್ಸಿಜನ್ ಸಿಲಿಂಡರ್ ಮತ್ತು ಸೋಕಿಂತರಿಗೆ ಅಗತ್ಯವಾದ ಮೆಡಿಸನ್ ಅಳವಡಿಸಲಾಗಿದೆ. ಅಲ್ಲದೇ ರೋಗಿಯನ್ನು ಹೊರತುಪಡಿಸಿ ಮತ್ತಿಬ್ಬರು ಅಂಬುಲೆನ್ಸ್ ಒಳಗೆ ಆರಾಮವಾಗಿ ಕುಳಿತುಕೊಳ್ಳಬಹುದು ಎಂದು ಇಂಜಿನಿಯರ್ ತಿಳಿಸಿದ್ದಾರೆ. ವಿಶೇಷವೆಂದರೆ ರೋಗಿಯ ಪ್ರೀತಿ ಪಾತ್ರರೇ ಈ ಗಾಡಿಯನ್ನು ಓಡಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು ಎಂದಿದ್ದಾರೆ.

ಇತ್ತೀಚೆಗೆ ಕೇವಲ 3 ಕಿ.ಮೀವರೆಗೂ ರೋಗಿಯನ್ನು ಕರೆದುಕೊಂಡು ಹೋಗಲು ಅಂಬುಲೆನ್ಸ್ ಡ್ರೈವರ್ 10,000ರೂ ಡಿಮ್ಯಾಂಡ್ ಮಾಡಿದ್ದನ್ನು ಕೇಳಿದ್ದರು. ಹಾಗಾಗಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕೆಂದು ಆಲೋಚಿಸಿ ಅಂಬುಲೆನ್ಸ್ ತಯಾರಿಸಿರುವುದಾಗಿ ಹೇಳಿದ್ದಾರೆ. ಲಾಕ್‍ಡೌನ್ ಇರುವುದರಿಂದ ಅಂಬುಲೆನ್ಸ್ ಸಿದ್ಧಪಡಿಸಲು ಅಗತ್ಯ ವಸ್ತುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಬಡ ಜನರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಈ ಅಂಬುಲೆನ್ಸ್ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.

ಅಂಬುಲೆನ್ಸ್ ಸಿದ್ಧಪಡಿಸಲು ಲಕ್ಷಾಂತರ ರೂ. ವೆಚ್ಚವಾಗುತ್ತದೆ. ಅಲ್ಲದೇ ಕೆಲವೊಮ್ಮೆ ಅಂಬುಲೆನ್ಸ್ ಕೂಡ ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗುವುದಿಲ್ಲ. ಅಂಬುಲೆನ್ಸ್‌ಗಾಗಿ ಜನ ಹೆಚ್ಚಿನ ಹಣವನ್ನು ಖರ್ಚು ಮಾಡಲು ತಯಾರಾಗಿದ್ದರೂ, ಅಂಬುಲೆನ್ಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ತಾನು ನಿರ್ಮಿಸಿರುವ ಮಿನಿ ಅಂಬುಲೆನ್ಸ್ ಮೂಲಕ ಅಗತ್ಯವಿರುವ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬಹುದೆಂದು ಆಶಿಸುತ್ತೇನೆ ಎಂದಿದ್ದಾರೆ.

The post ಬೈಕ್‍ನಲ್ಲಿಯೇ ಮಿನಿ ಅಂಬುಲೆನ್ಸ್ – ಬಡವರಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ ಯುವ ಇಂಜಿನಿಯರ್ appeared first on Public TV.

Source: publictv.in

Source link