ಬೈಕ್ ಸವಾರನೊಬ್ಬ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದು ರೋಚಕ ಅದರೆ ಬೈಕ್  ತೆಗೆದುಕೊಳ್ಳಲು ಹೋಗಿದ್ದು ಮಾತ್ರ ಮೂರ್ಖತನ! | Biker should be grateful to his stars as successfully escapes from a chasing wild elephant


ಆನೆಗಳು ಸಸ್ಯಾಹಾರಿಗಳು ಮತ್ತು ಸಾಧುಪ್ರಾಣಿಗಳು ಅಂತ ಅವುಗಳ ಹತ್ತಿರ ಹೋಗುವ ಪ್ರಯತ್ನ ಮಾಡೀರಾ ಜೋಕೆ! ಅವು ಸುಖಾಸುಮ್ಮನೆ, ವಿನಾಕಾರಣ ನಮ್ಮ ಮೇಲೆ ದಾಳಿ ಮಾಡುವುದಿಲ್ಲ ಅನ್ನೋದು ನಿಜವಾದರೂ ಕೆಲವೊಮ್ಮೆ ತಮ್ಮ ಸ್ವಭಾವಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತವೆ. ಕಾಡಾನೆಗಳು ಊರೊಳಗೆ ನುಗ್ಗಿ ಜನರನ್ನು ತುಳಿದು ಕೊಂದಿರುವ ಉದಾಹರಣೆಗಳು ಸಾಕಷ್ಟಿವೆ. ಸಾಕಿದ ಆನೆಗಳನ್ನು ಪಳಗಿಸಿರುತ್ತರಾದ್ದರಿಂದ ಅವು ಮಾವುತ ಹೇಳಿದಂತೆ ಕೇಳುತ್ತವೆ. ಕಾಡಾನೆಗಳು ಹಾಗಲ್ಲ ಮಾರಾಯ್ರೇ. ಈ ವಿಡಿಯೋ ನೋಡಿದರೆ ನಿಮಗೆ ವಿಷಯ ವೇದ್ಯವಾಗುತ್ತದೆ. ಇದು ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ಚಾಮರಾಜನಗರದ ಮೂಲೆಹೊಳೆ ಚೆಕ್ ಪೋಸ್ಟ್ ದಾಟಿಕೊಂಡು ಮುಂದೆ ಸಾಗಿದ ಬೈಕ್ ಸವಾರನೊಬ್ಬನಿಗೆ ಅರಣ್ಯ ಪ್ರದೇಶದ ಮಧ್ಯೆದಿಂದ ಹಾದುಹೋಗುವ ರಸ್ತೆಯಲ್ಲಿ ಆನೆಹಿಂಡು ಕಾಣಿಸಿದೆ. ಭಯ ಮತ್ತು ಅತಂಕದಲ್ಲಿ ಯು-ಟರ್ನ್ ತೆಗೆದುಕೊಂಡು ವಾಪಸ್ಸು ಹೋಗುವ ಭರದಲ್ಲಿ ಅವನು ಕೆಳಗೆ ಬಿದ್ದಿದ್ದಾನೆ. ಆಗ ಆನೆಗಳು ಅವನನ್ನು ನೋಡಿದ್ದವೋ ಇಲ್ಲವೋ ಅಂತ ನಮಗೆ ಗೊತ್ತಿಲ್ಲ. ನಂತರ ಅವನು ಬೈಕನ್ನು ಅಲ್ಲಿಯೇ ಬಿಟ್ಟು ಓಡಿದ್ದಾನೆ. ಇಲ್ಲಿಯವರೆಗೆ ಕತೆ ಓಕೆ.

ಈ ಮಹಾಶಯ ಕೊಚ ದೂರದವರೆಗೆ ಓಡಿ ಹಿಂತಿರುಗಿ ನೋಡಿದಾಗ ಆನೆಗಳು ವಾಪಸ್ಸು ಹೋಗುತ್ತಿರುವುದು ಕಂಡಿದೆ. ಈ ಬುದ್ಧಿವಂತ ಮನುಷ್ಯ ಆನೆಗಳು ಸಂಪೂರ್ಣವಾಗಿ ಮರೆಯಾಗುವವರೆಗೆ ಕಾಯಬೇಕು ತಾನೆ?

ಆನೆಗಳು ಬೆನ್ನು ಹಾಕಿರುವುದು ಕಂಡ ಕೂಡಲೇ ತನ್ನ ಬೈಕ್ ತೆಗೆದುಕೊಳ್ಳಲು ಹೋಗಿದ್ದಾನೆ. ತನ್ನ ಹಿಂದೆ ಶಬ್ದವಾಗುತ್ತಿರೋದು ಆನೆಯೊಂದರ ಮೊರದಂತೆ ಅಗಲವಾದ ಕಿವಿಗಳಿಗೆ ಬೀಳುವುದು ಕಷ್ಟವಾಗಿಲ್ಲ. ಅದು ತಿರುಗಿ ನೋಡಿದಾಗ ಬೈಕರ್ ವಾಹನವನನ್ನು ಎತ್ತಿ ನಿಲ್ಲಿಸುತ್ತಿರುವುದು ಕಂಡಿದೆ.

ಕೂಡಲೇ ಅನೆ ಅವನನ್ನು ಅಟ್ಟಿಸಿಕೊಂಡು ಬಂದಿದೆ! ಅದು ಓಡಿಬರುತ್ತಿರುವುದು ನೋಡಿದ ಅವನು ಬೈಕನ್ನು ಬಿಟ್ಟು ಸತ್ನೆಪ್ಪೋ ಅಂತ ಓಟಕಿತ್ತಿದ್ದಾನೆ. ಅವನ ಅದೃಷ್ಟ ಚೆನ್ನಾಗಿತ್ತು. ಅವನು ವಾಪಸ್ಸು ಓಡುವುದನ್ನು ಕಂಡು ಆನೆಯೂ ಬೆನ್ನಟ್ಟುವುದನ್ನು ನಿಲ್ಲಿಸಿದೆ!

ಇಷ್ಟಕ್ಕೂ ಈ ಇದೆಲ್ಲವನ್ನು ಕೆಮೆರಾನಲ್ಲಿ ಸೆರೆ ಹಿಡಿದವರು ಯಾರು ಅನ್ನೋದು ಗೊತ್ತಾಗಿಲ್ಲ ಮಾರಾಯ್ರೇ!

TV9 Kannada


Leave a Reply

Your email address will not be published. Required fields are marked *