ಬ್ರಹ್ಮಕಲಶೋತ್ಸವಕ್ಕೆ ಖಾದರ್​ಗೆ ಆಹ್ವಾನ: ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ | RSS Leader Kalladka Prabhakar Bhat Opposes Invitation to Congress MLA UT Khadar to Subrahmanya Swami Brahma Kalashotsava


ಬ್ರಹ್ಮಕಲಶೋತ್ಸವಕ್ಕೆ ಖಾದರ್​ಗೆ ಆಹ್ವಾನ: ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ

ಶಾಸಕ ಯು.ಟಿ.ಖಾದರ್ ಮತ್ತುಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಸಜಿಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಶಾಸಕ ಯು.ಟಿ.ಖಾದರ್‌ ಅವರನ್ನು ಆಹ್ವಾನಿಸಿರುವುದನ್ನು ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರೋಧಿಸಿದ್ದಾರೆ. ಅವರನ್ನು ಇಲ್ಲಿಗೆ ಕರೆದರೆ ಇದು ಧರ್ಮಸಭೆ ಆಗುತ್ತಾ ಎಂದು ಪ್ರಶ್ನಿಸಿರುವ ಅವರು, ಅವರು ಕಾರ್ಯಕ್ರಮಕ್ಕೆ ಬಂದರೆ ಇದು ಅಧರ್ಮ ಸಭೆ ಆಗುತ್ತೆ. ವೇದಿಕೆಯು ಅಪವಿತ್ರವಾಗುತ್ತೆ ಎಂದಿದ್ದಾರೆ. ರಾತ್ರಿ ಕದ್ದ ದನದ ಮಾಂಸ ತಿನ್ನೋರನ್ನು ಕಾರ್ಯಕ್ರಮಕ್ಕೆ ಕರೆಸಿದ್ದೀರಿ. ಇದು ಎಂಥ ವ್ಯವಸ್ಥೆ ಎಂದು ಪ್ರಶ್ನಿಸಿದರು. ಗೋಹತ್ಯೆ ಮಾಡಿ ಅದನ್ನ ತಿಂದವರು ಇಲ್ಲಿ ಬಂದ್ರೆ ಅಪವಿತ್ರ ಆಗುವುದಿಲ್ಲವೇ? ರಾಜಕೀಯಕ್ಕಾಗಿ ಯು.ಟಿ.ಖಾದರ್‌ ಅವರನ್ನು ಇಲ್ಲಿಗೆ ಕರೀಬೇಡಿ, ಇಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ದೇವಸ್ಥಾನದ ಧರ್ಮಸಭೆಗೆ ಬ್ಯಾರಿಯನ್ನ ಕರೆಸ್ತಾ ಇದ್ದೀರಲ್ಲ ಮಾರಾಯ್ರೆ. ಇದೊಂದು ಎಂಥ ನಾಚಿಕೆಯ ವಿಷ್ಯ, ನಮಗೆ ಹಿಂದೂಗಳಿಗೆ ಇದು ನಾಚಿಕೆ ಆಗಬೇಕು. ಅವನು ಬಂದು ಎಂಥ ನಮಗೆ ಇಲ್ಲಿ ಬೋಧನೆ ಮಾಡೋದು? ಇಲ್ಲಿ ಬ್ಯಾರಿ ಅಥವಾ ಕ್ರಿಶ್ಚಿಯನ್ ಬಂದು ನಮಗೆ ಬೋಧನೆ ಮಾಡೋಕೆ ಆಗುತ್ತಾ? ಇದು ಧರ್ಮಸಭೆ ಆಗುತ್ತಾ? ಅಧರ್ಮ ಸಭೆ ಆಗ್ತದೆ, ವೇದಿಕೆ ಅಪವಿತ್ರ ಆಗ್ತದೆ ಎಂದರು.

ರಾಜಕೀಯಕ್ಕಾಗಿ ಖಾದರ್ ಅವರಂಥವರನ್ನು ಇಲ್ಲಿಗೆ ಕರೀಬೇಡಿ. ಇದು ರಾಜಕೀಯ ವೇದಿಕೆ ಅಲ್ಲ. ಇದು ಧರ್ಮ ಸಭೆ. ಇಲ್ಲಿ ನಡೆಯುತ್ತಿರುವ ಹಿಂದೂಗಳ ಧಾರ್ಮಿಕ ಕಾರ್ಯಕ್ರಮ. ಆತ ಶಾಸಕನೇ ಇರಬಹುದು. ಆದರೆ ಅವರನ್ನು ಇಲ್ಲಿಗೆ ಕರೆಯುವ ಅಗತ್ಯ ಇರಲಿಲ್ಲ. ಬೇಕಿದ್ದರೆ ರಮಾನಾಥ್ ರೈ ಅವರನ್ನು ಕರೀರಿ. ಅವರು ಹಿಂದು. ಖಾಜಿಗಳ ಅಭಿಪ್ರಾಯ ಪಡೆದೇ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಮೊನ್ನೆ ಖಾದರ್ ಹೇಳಿದ್ದರು. ನಮ್ಮ ದೇವಸ್ಥಾನಕ್ಕೆ ಬರಲು ಅವರಿಗೆ ಖಾಜಿಗಳ ಸಲಹೆ ಬೇಕಿದೆಯೇ ಎಂದು ಪ್ರಭಾಕರ್ ಭಟ್ ಪ್ರಶ್ನಿಸಿದರು.

ಅವರದು ಒಡೆದು ಆಳುವ ಬುದ್ಧಿ. ವೋಟಿಗಾಗಿ, ಸೀಟಿಗಾಗಿ ಬರುವ ಅವರಿಗೆ ಹಿಂದೂ ಸಮಾಜದ ಮೇಲೆ ಸವಾರಿ ಮಾಡುವ ಉದ್ದೇಶವಿದೆ. ಆ ವ್ಯಕ್ತಿ ಸೀದಾ ಧರ್ಮಸಭೆಯ ಒಳಗೆ ಬಂದ. ಆತನಿಗೆ ನಾಚಿಕೆ ಇಲ್ವಾ ಮಾರಾಯ್ರೆ. ನಿನ್ನನ್ನು ಕಾರ್ಯಕ್ರಮಕ್ಕೆ ಕರೆದವರು ಯಾರು ಎಂದು ಪ್ರಶ್ನಿಸಿದರೆ ಎಂಥ ಅವಸ್ಥೆ ಆಗಬಹುದು. ಅವರು ನಮ್ಮನ್ನ ಒಡೆದು ಆಳೋಕೆ ಬರುವವರು. ಹಿಂದೂಗಳು ಒಂದಾಗಬೇಕೆಂದು ದೇವಸ್ಥಾನ ಕಟ್ಟುತ್ತೇವೆ. ಈ ಪುಣ್ಯ ಕಾರ್ಯದಲ್ಲಿ ವಿಷ ತುಂಬಬೇಡಿ ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ

ಹಿಜಾಬ್ ವಿಚಾರದಲ್ಲಿ ಕರ್ನಾಟಕ ಸರ್ಕಾರ ತಳೆದ ನಿಲುವನ್ನು ಕಲ್ಲಡ್ಕ ಪ್ರಭಾಕರ್ ಭಟ್ ಈಚೆಗೆ ಪ್ರಶ್ನಿಸಿದ್ದರು. ಕೇವಲ ಆರು ಮಕ್ಕಳ ಹೋರಾಟಕ್ಕೆ ನಮ್ಮ ಸರ್ಕಾರ ಹೆದರಿತು. ರಜೆ ಘೋಷಿಸುವ ಅಗತ್ಯ ಇರಲಿಲ್ಲ. ಕೇವಲ 6 ಮಕ್ಕಳ ಪ್ರತಿಭಟನೆಗೆ ನೂರಾರು ಮಕ್ಕಳ ಕಲಿಕೆಗೆ ಯಾಕೆ ಅಡ್ಡಿ ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ಶಾಸಕ ರಘಪತಿ ಭಟ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಯಶ್​ಪಾಲ್ ಸುವರ್ಣ, ಸುನೀಲ್ ಕುಮಾರ್ ಅವರು ಈ ವಿಚಾರದಲ್ಲಿ ಚೆನ್ನಾಗಿ ಪ್ರತಿಕ್ರಿಯಿಸಿದರು ಎಂದು ಹೇಳಿದರು.

TV9 Kannada


Leave a Reply

Your email address will not be published. Required fields are marked *