ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಕೊರೊನಾ ರೂಪಾಂತರದಿಂದ ಸೋಂಕು ಪ್ರಮಾಣ ಹೆಚ್ಚಾಗಿದೆ.
ದೆಹಲಿ: ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಭಾರತದ ನಾಲ್ವರಲ್ಲಿ ಈವರೆಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಇಬ್ಬರು ಬೆಂಗಳೂರಿನವರಾದರೆ, ಒಬ್ಬರು ಗುಜರಾತ್ನ ಜುನಾಗಡಕ್ಕೆ ಮತ್ತೊಬ್ಬರು ಮುಂಬೈಗೆ ಸೇರಿದವರಾಗಿದ್ದಾರೆ. ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲು ಸರ್ಕಾರಗಳು ಆದೇಶ ಹೊರಡಿಸಿವೆ. ಕರ್ನಾಟಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ಸೂಚಿಸಲಾಗಿದೆ. ವಿಶ್ವದ ಹಲವು ದೇಶಗಳು ಸಹ ಒಮಿಕ್ರಾನ್ ಸೋಂಕು ಹರಡುವುದನ್ನು ನಿಯಂತ್ರಿಸಲು ನಿಯಮಗಳನ್ನು ಜಾರಿಗೊಳಿಸಿವೆ. ಈ ನಡುವೆಯೂ ವಿವಿಧ ದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಲೇ ಇದೆ.
ದಕ್ಷಿಣ ಆಫ್ರಿಕಾ 227, ಬೋಟ್ಸ್ವಾನ್ 21, ಬೆಲ್ಜಿಯಂ 6, ಇಂಗ್ಲೆಂಡ್ 74, ಜರ್ಮನ್ 51, ಆಸ್ಟ್ರೇಲಿಯಾ 11, ಇಟಲಿ 4, ಜೆಕ್ ಗಣರಾಜ್ಯ 1, ಡೆನ್ಮಾರ್ಕ್ 2, ಆಸ್ಟ್ರಿಯಾ 11, ಕೆನಡಾ 10, ಸ್ವೀಡನ್ 1, ಸ್ವಿಟ್ಜರ್ಲೆಂಡ್ 6, ಸ್ಪೇನ್ 7, ಪೋರ್ಚುಗಲ್ 13, ಜಪಾನ್ 2, ಫ್ರಾನ್ಸ್ 4, ಘಾನಾ 33, ದಕ್ಷಿಣ ಕೊರಿಯಾ 3, ನೈಜೀರಿಯಾ 3, ಬ್ರೆಜಿಲ್ 2, ಅಮೆರಿಕದ 16 ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ಆಫ್ರಿಕಾದಲ್ಲಿ ಏರುತ್ತಿರುವ ಕೊರೊನಾ ಕೇಸ್
ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ರೂಪಾಂತರಿ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಕೇಸ್ಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲೇ ಕೊರೊನಾ ಪ್ರಕರಣಗಳ ಸಂಖ್ಯೆ ಆರುಪಟ್ಟು ಹೆಚ್ಚಾಗಿದೆ. ನವೆಂಬರ್ 29ರಂದು 2,273 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಡಿಸೆಂಬರ್ 3ರ ಹೊತ್ತಿಗೆ ಈ ಸಂಖ್ಯೆ 16,055ಕ್ಕೆ ಏರಿಕೆಯಾಗಿದೆ.
ನವೆಂಬರ್ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಿತ್ಯ ನೂರು ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗುತ್ತಿದ್ದವು. ಆದರೆ ನ.20ರ ಬಳಿಕ ಪ್ರಕರಣಗಳ ಸಂಖ್ಯೆ ಏರತೊಡಗಿತ್ತು. ನ.26ರಂದು ಅಧಿಕೃತವಾಗಿ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಆಫ್ರಿಕಾದಲ್ಲಿ ಪತ್ತೆಯಾಗಿರುವುದನ್ನು ಘೋಷಿಸಲಾಯಿತು. ಇದಾದ ಬಳಿಕ 29ರಂದು ದಕ್ಷಿಣ ಆಫ್ರಿಕಾದಲ್ಲಿ 2,273 ಕೊರೊನಾ ಕೇಸ್ ಪತ್ತೆಯಾಗಿದ್ದವು. ನಾಲ್ಕು ದಿನದ ಬಳಿಕ ಅಂದರೆ, ಡಿ.3ರಂದು ಬರೋಬ್ಬರಿ 16,055 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಂದರೆ, ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಬೆಳವಣಿಗೆ ದರ ಶೇ 606ರಷ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 24.3ರಷ್ಟಿದೆ. ಅಂದರೆ, ಕೊರೊನಾ ಸ್ಯಾಂಪಲ್ ಟೆಸ್ಟಿಂಗ್ಗೆ ಒಳಗಾಗುವ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಹೆಚ್ಚಾಗಿ ಕೊರೊನಾ ಸೋಂಕು ತಗುಲುತ್ತಿದೆ ಎಂದು ಆಫ್ರಿಕಾದ ವೈದ್ಯರು ಹೇಳಿದ್ದಾರೆ.
ಈ ಅಂಕಿಅಂಶಗಳೇ ಈಗ ವಿಶ್ವಕ್ಕೆ ಎಚ್ಚರಿಕೆಯ ಗಂಟೆಯಾಗಿವೆ. ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಹೇಗೆ, ಎಷ್ಟು ವೇಗವಾಗಿ ಹರಡುತ್ತೆ ಎನ್ನುವುದಕ್ಕೆ ದಕ್ಷಿಣ ಆಫ್ರಿಕಾವೇ ಈಗ ಜಗತ್ತಿಗೆ ಉದಾಹರಣೆಯಾಗಿದೆ. ಒಮಿಕ್ರಾನ್ ಪ್ರಭೇದದ ವೈರಸ್ ಎಂಟ್ರಿಯಾಗಿರುವ ದೇಶಗಳಲ್ಲಿ ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾದಂತೆ ವೇಗವಾಗಿ ಕೊರೊನಾ ವೈರಸ್ ಹರಡಿ, ಕೊರೊನಾ ಕೇಸ್ ಬಾರಿ ಸಂಖ್ಯೆಯಲ್ಲಿ ಏರಿಕೆಯಾಗುವ ಭೀತಿ ವ್ಯಕ್ತವಾಗಿದೆ. ಭಾರತದಲ್ಲೂ ಒಮಿಕ್ರಾನ್ ಪ್ರಭೇದದ ವೈರಸ್ನಿಂದ 3ನೇ ಕೊರೊನಾ ಅಲೆ ಬರಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೇ, ಒಮಿಕ್ರಾನ್ ಪ್ರಭೇದದ ವೈರಸ್ ಅಪಾಯಕಾರಿ ವೈರಸ್ ಅಲ್ಲ, ಸ್ವಲ್ಪ ನೆಗಡಿ, ಜ್ವರ, ಮೈಕೈ ನೋವು, ಸುಸ್ತು ನಂಥ ಲಕ್ಷಣಗಳು ಜನರಲ್ಲಿ ಕಾಣಿಸಿಕೊಳ್ಳುತ್ತಾವೆ ಎಂದು ವೈದ್ಯರು, ತಜ್ಞರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಪ್ರಭೇದದ ವೈರಸ್ನಿಂದಾಗಿ ನಾಲ್ಕನೇ ಕೊರೊನಾ ಅಲೆ ಶುರುವಾಗಿದೆ.