ಬೆಂಗಳೂರು: ರಾಜ್ಯದ ಹಲವೆಡೆ, ಕೊರೊನಾದಿಂದ ಗುಣಮುಖರಾದವ್ರಲ್ಲಿ ಕಪ್ಪು ಫಂಗಸ್​ ಇನ್​ಫೆಕ್ಷನ್/ಮ್ಯೂಕೋರ್​ಮೈಕೋಸಿಸ್​ ಕಾಣಿಸಿಕೊಳ್ಳುತ್ತಿದೆ. ಬ್ಲಾಕ್ ಫಂಗಸ್​ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬಳಿ ಚರ್ಚೆ ಮಾಡುವುದಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಸುಧಾಕರ್, ಇವತ್ತು ಮೇ. 16 ವಿಶ್ವ ಡೆಂಘೀ ದಿನಾಚರಣೆ. ವರ್ಷದಲ್ಲಿ 15 ರಿಂದ 20 ಸಾವಿರ ಮಂದಿಗೆ ಡೆಂಘೀ ಬರುತ್ತದೆ. ಮುಂಗಾರು ಪ್ರಾರಂಭವಾಗಿರುವುದರಿಂದ ನಮ್ಮ ಮನೆಗಳಲ್ಲಿ ನೀರು ಶೇಖರಣೆ ಆಗದಂತೆ ನೋಡಿಕೊಳ್ಳುವುದು ಮುಖ್ಯ ಎಂದರು. 3-4 ದಿನಕ್ಕೊಮ್ಮೆ ಶೇಖರಣೆ ಆದ ನೀರು ಬದಲಾಯಿಸಬೇಕು. ಇಲ್ಲದಿದ್ದರೆ ಸೊಳ್ಳೆಗಳು ಮಲ್ಟಿಪ್ಲೈ ಆಗುತ್ತವೆ. ಹಗಲು ಹೊತ್ತಿನಲ್ಲಿ ಇದು ಹೆಚ್ಚು ಕಚ್ಚುವಂಥದ್ದು. ಮಹಿಳೆಯರು ಮಕ್ಕಳಿಗೆ ವಿಶೇಷ ಕಾಳಜಿ‌ ವಹಿಸಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.

ಇನ್ನು ರಾಜ್ಯದಲ್ಲಿ ಕೆಲವರಿಗೆ ಬ್ಲಾಕ್ ಫಂಗಸ್​ ಇನ್​ಫೆಕ್ಷನ್ ಕಾಣಿಸಿಕೊಂಡಿರೋ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ರೋಗ ನಿರೋಧಕ ಶಕ್ತಿ ಕಡಿಮೆ ಇರೋರಿಗೆ, ಅಧಿಕ ಸ್ಟಿರಾಯ್ಡ್ ತಗೊಂಡವರಿಗೆ ಬ್ಲಾಕ್ ಫಂಗಸ್ ಇನ್​​ಫೆಕ್ಷನ್ ಕಾಣಿಸಿಕೊಳ್ಳುತ್ತದೆ. ಮೂಗಿನ ಮೂಲಕ ಫಂಗಸ್​ ಇನ್​ಫೆಕ್ಷನ್ ಆರಂಭ ಆಗಿ, ಕಣ್ಣಿಗೆ ತಗುಲಿ, ದೃಷ್ಟಿ ಕೂಡ ಕಳೆದುಕೊಳ್ಳುವ ಅಪಾಯ ಇದೆ. ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೇ ಹೋದರೆ ಜೀವಕ್ಕೂ ಅಪಾಯ ಇದೆ ಎಂದರು.

ನಾಳೆಯಿಂದ ಬೌರಿಂಗ್​ ಆಸ್ಪತ್ರೆಯಲ್ಲಿ ಈ ಇನ್​ಫೆಕ್ಷನ್​​ಗೆ ಚಿಕಿತ್ಸೆ ಆರಂಭವಾಗಲಿದೆ. ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡ್ತೇವೆ. ಇದರ ಚಿಕಿತ್ಸೆಗೆ ಪ್ರತಿ ರೋಗಿಗೆ ಎರಡರಿಂದ ಮೂರು ಲಕ್ಷ ವೆಚ್ಚ ಆಗಲಿದೆ. ಉಚಿತ ಚಿಕಿತ್ಸೆ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ. 20 ಸಾವಿರ ವಯಲ್ಸ್ ಔಷಧಿಗಾಗಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮಧುಮೇಹ, ಮೂತ್ರಪಿಂಡ ಅಂಗಾಂಗ ಕಸಿ ಮಾಡಿಕೊಂಡವರು ಸ್ವಲ್ಪ ಜಾಗ್ರತೆಯಿಂದ ಇರಿ. ಸ್ಟಿರಾಯ್ಡ್ ನೀವೇ ತಗೊಬೇಡಿ, ವೈದ್ಯರನ್ನ ಕೇಳಿ ಔಷಧಿ ಪಡೆಯಿರಿ ಎಂದು ಹೇಳಿದ್ರು.

ವೈದ್ಯರು ಕೂಡ ಉತ್ತಮ ಚಿಕಿತ್ಸೆ ನೀಡಬೇಕು. ಅಧಿಕ ಸ್ಟಿರಾಯ್ಡ್ ನೀಡಬೇಡಿ ಎಂದು ಸುಧಾಕರ್ ವೈದ್ಯರಿಗೆ ಮನವಿ ಮಾಡಿದರು. ರಾಜ್ಯದಲ್ಲಿ ಬ್ಲಾಕ್ ಫಂಗಸ್​ನಿಂದ ಮೃತಪಟ್ಟ ಅಧಿಕೃತ ಮಾಹಿತಿ ಇಲ್ಲ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಫಂಗಸ್​ ಆತಂಕವಿದೆ. ಹೀಗಾಗಿ ನಾಳೆ ನೇತ್ರ ತಜ್ಞರು ಹಾಗೂ ಮಧುಮೇಹ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪ್ರತ್ಯೇಕ ವಿಭಾಗ ಸ್ಥಾಪನೆ ಮಾಡಲಾಗುತ್ತದೆ ಎಂದು ಹೇಳಿದ್ರು.

ಇನ್ನು ಬೆಂಗಳೂರಲ್ಲಿ ಕೊರೊನಾ ಪಾಸಿಟಿವಿಟಿ ಕಡಿಮೆ ಆಗ್ತಿದೆ. ಹೀಗಾಗಿ ನಂಬರ್ ಕಡಿಮೆ ಬರ್ತಿದೆ. ಹೊರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗ್ತಿದೆ. ಎರಡೂ ಅಂಶಗಳನ್ನು ಕೂಡ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಗಮನಕ್ಕೆ ತರ್ತೇನೆ ಎಂದು ತಿಳಿಸಿದ್ರು.

The post ಬ್ಲಾಕ್​ ಫಂಗಸ್​​ಗೆ ಉಚಿತ ಚಿಕಿತ್ಸೆ ನೀಡೋ ಬಗ್ಗೆ ಸಿಎಂ ಜೊತೆ ಚರ್ಚೆ -ಸುಧಾಕರ್ appeared first on News First Kannada.

Source: newsfirstlive.com

Source link