ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮತ್ತು ಅದಕ್ಕೆ ಬೇಕಾದ Liposomal Amphotericin B ಔಷಧದ ಕೊರತೆ ಎದುರಾಗಿರುವ ಕುರಿತು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್​ಗಳು..
ಕಪ್ಪು ಶಿಲಿಂಧ್ರದ ಸಮಸ್ಯೆಯು ಪಿಡುಗಾಗಿ, ಮಹಾಮಾರಿಯಾಗಿ ಕಾಡುವ ಆತಂಕವನ್ನು ಜನರ ಮುಂದೊಡ್ಡಿದೆ. ಅದರ ಚಿಕಿತ್ಸೆಗೆ ಅಗತ್ಯವಿರುವ Liposomal Amphotericin B ಔಷಧ ಕೊರತೆಯನ್ನು ಕರ್ನಾಟಕ ಎದುರಿಸುತ್ತಿರುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ಔಷಧದ 1,050 ವಾಯ್ಲ್‌ಗಳು (ಶೀಶೆ) ಮಾತ್ರ ಇವೆ ಎಂಬ ಆಘಾತಕಾರಿ ಅಂಶವು ಭಯ ಸೃಷ್ಟಿಸಿದೆ.

ಔಷಧ ಕೊರತೆ ದುರಂತದ ಮುನ್ಸೂಚನೆ
ಕಪ್ಪು ಶಿಲೀಂಧ್ರ ಸಮಸ್ಯೆ ರಾಜ್ಯದಲ್ಲಿ ಈಗಾಗಲೇ ಗಂಭೀರ ಸ್ವರೂಪದಲ್ಲೇ ಕಾಣಿಸಿಕೊಂಡಿದೆ. ಹಲವರು ಬಲಿಯಾಗಿದ್ದಾರೆ. ಕೋವಿಡ್‌ನಿಂದ ಗುಣವಾಗುವ 400 ಮಂದಿ ಪ್ರತಿ ವಾರ ಈ ಸಮಸ್ಯೆಗೆ ಸಿಲುಕುವ ಸಾಧ್ಯತೆಯನ್ನು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ತಿಳಿಸಿದೆ. ಹೀಗಿರುವಾಗ ಎದುರಾಗಿರುವ ಔಷಧ ಕೊರತೆ ದುರಂತದ ಮುನ್ಸೂಚನೆ ನೀಡುತ್ತಿದೆ.

ಮತ್ತೊಂದು ಭೀಕರತೆಗೆ ಜನ ಸಿಲುಕುವ ಅಪಾಯವಿದೆ
Liposomal Amphotericin B ಔಷಧಿಯ 20,000 ವಯಲ್‌ಗಳನ್ನು ಶೀಘ್ರವೇ ಪೂರೈಕೆ ಮಾಡುವಂತೆ ರಾಜ್ಯ ಔಷಧ ಉಗ್ರಾಣ ಕೇಂದ್ರವು ಕೇಂದ್ರ ಸರ್ಕಾರವನ್ನು ಕೋರಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಪ್ರಮಾಣದ ಔಷಧಗಳನ್ನು ತರಿಸಿಕೊಳ್ಳುವುದರತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಮತ್ತೊಂದು ಭೀಕರತೆಗೆ ಜನ ಸಿಲುಕುವ ಅಪಾಯವಿದೆ.

ಔಷಧದ ವ್ಯವಸ್ಥೆ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಕಪ್ಪು ಶಿಲೀಂಧ್ರ ಸಮಸ್ಯೆ ಮಹಾರಾಷ್ಟ್ರದಲ್ಲಿ ಹಲವು ತಿಂಗಳಿಗೆ ಮೊದಲೇ ಕಾಣಿಸಿಕೊಂಡಿತ್ತು. ಸಮಸ್ಯೆ ಇಲ್ಲಿಯೂ ಕಾಣಿಸಿಕೊಳ್ಳುವ ಅಪಾಯದ ಬಗ್ಗೆ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಈ ಸಮಸ್ಯೆ ದೊಡ್ಡದಾಗುವ ಎಚ್ಚರಿಕೆಗಳಿದ್ದರೂ ಔಷಧದ ವ್ಯವಸ್ಥೆ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಔಷಧ ಸಂಗ್ರಹ ಈ ಹೊತ್ತಿನ ಅಗತ್ಯ.

ಸರ್ಕಾರಕ್ಕೆ ನಾನು ನೀಡಿದ ಸಲಹೆಗಳನ್ನು ಕೆಲ ಕಿಡಿಗೇಡಿಗಳು ‘ರಾಜಕೀಯ’ವೆಂದು ಭಾವಿಸಿದ್ದಾರೆ
ಇದು ಸಂದಿಗ್ಧ ಕಾಲದ ಸೂಕ್ತ ಸಲಹೆ ಎಂದು ಎಲ್ಲರೂ ಭಾವಿಸಿಕೊಳ್ಳಬೇಕು. ಹಲವು ದಿನಗಳಿಂದ ಸರ್ಕಾರಕ್ಕೆ ನಾನು ನೀಡಿದ ಸಲಹೆಗಳನ್ನು ಕೆಲ ಕಿಡಿಗೇಡಿಗಳು ‘ರಾಜಕೀಯ’ವೆಂದು ಭಾವಿಸಿದ್ದಾರೆ. ಪಿಡುಗೊಂದು ಕಾಡುವಾಗ ‘ಹಿಂದೆಂದೂ ನೋಡಿರದಷ್ಟು ಜನಸ್ತೋಮ’ ಸೇರಿಸಿ ರ‍್ಯಾಲಿ ಮಾಡಿದ್ದು, ಜನರನ್ನು ಕಂಡು ಉದ್ಘಾರಿಸಿದ್ದು ನಾವಲ್ಲ ಎಂಬುದು ಅರಿವಲ್ಲಿರಲಿ ಎಂದು ಕಿಡಿಕಾರಿದ್ದಾರೆ.

The post ಬ್ಲಾಕ್ ಫಂಗಸ್ ಔಷಧ ಕೊರತೆ ದುರಂತದ ಮುನ್ಸೂಚನೆ -ಸರ್ಕಾರಕ್ಕೆ HDK ಎಚ್ಚರಿಕೆ appeared first on News First Kannada.

Source: newsfirstlive.com

Source link