ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಮಾರಕವಾಗ್ತಾ ಹೋಗ್ತಿದೆ. ಎರಡನೇ ಅಲೆಯಲ್ಲಿ ಹಿಂದೆಂದೂ ಕಾಣದ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗಿ ಮಾರಣಾಂತಿಕವಾಗ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಅನೇಕರಿಗೆ ಮೃತ್ಯುವಿನ ಬಾಗಿಲು ತೆಗೆಯುತ್ತಿದ್ದರೆ, ಇದರ ಬೆನ್ನಲ್ಲೇ ವೈಟ್ ಫಂಗಸ್ ಕೂಡ ಪ್ರತ್ಯಕ್ಷವಾಗಿದೆ. ಇದು ಮತ್ತಷ್ಟು ಆತಂಕವನ್ನು ತರ್ತಾ ಇದೆ.

ಕೊರೊನಾ ದಿನ ಕಳೆದಂತೆ ಮತ್ತಷ್ಟು ಅಪಾಯಕಾರಿಯಾಗ್ತಾ ಇದೆ. ಈಗಾಗಲೇ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಜಗತ್ತಿನಾದ್ಯಂತ ಈ ಕೊರೊನಾ ಸೃಷ್ಟಿಸುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಕೊರೊನಾ ಮೊದಲನೇ ಅಲೆಯಲ್ಲಿ ಕಾಣಿಸದ ಸಮಸ್ಯೆಗಳು ಎರಡನೇ ಅಲೆಯಲ್ಲಿ ಕಾಣಿಸ್ತಾ ಇದೆ. ಅಷ್ಟೇ ಅಲ್ಲ, ಇದು ಮಾರಣಾಂತಿಕವಾಗ್ತಾ ಇದೆ. ಕೊರೊನಾ ಬಂದು ಕಡಿಮೆ ಆಗಿದ್ರೂ ಬಳಿಕವೂ ಇದು ಕಾಡತೊಡಗಿದೆ. ಎರಡನೇ ಅಲೆ ಬಂದಾಗ ಎಲ್ಲಾ ಕಡೆ ಜನರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿತ್ತು. ಇದರಿಂದ ಆಕ್ಸಿಜನ್ ಕೊರತೆ ಆಗಿ ಸೋಂಕಿತರು ಪರದಾಡ್ತಾ ಇದ್ರು.

ರಸ್ತೆ ಬದಿಯಲ್ಲೇ ಆಕ್ಸಿಜನ್ ಪಡೆದುಕೊಳ್ಳುವ ಪರಿಸ್ಥಿತಿ ತಂದಿಟ್ಟು ಬಿಟ್ಟಿತ್ತು ಕೊರೊನಾ. ಈ ಆಕ್ಸಿಜನ್ ಕೊರತೆಯಿಂದಲೇ ದುರಂತಗಳೂ ಸಂಭವಿಸಿ ಹೋದವು. ಚಾಮರಾಜನಗರದಲ್ಲಾದ ದುರಂತ ಕಣ್ಮುಂದೆಯೇ ಇದೆ. ಶ್ವಾಸಕೋಶಕ್ಕೆ ಕೊರೊನಾ ಡ್ಯಾಮೇಜ್ ಮಾಡುತ್ತೆ ಅಂತ ಗೊತ್ತಾದಾಗ ಆ ಬಗ್ಗೆ ಹೆಚ್ಚು ಗಮನ ಕೊಡಲಾಯಿತು. ಇದಕ್ಕಾಗಿ ರೆಮ್ಡಿಸಿವಿರ್ಗೆ ಬೇಡಿಕೆ ಹೆಚ್ಚಿತ್ತು. ಸ್ಟಿರಾಯ್ಡ್ ಬಳಕೆಯೂ ಹೆಚ್ಚಾಗಿತ್ತು. ಇದಾದ ಬಳಿಕ ಬ್ಲ್ಯಾಕ್ ಫಂಗಸ್ ದಾಳಿ ಮಾಡ್ತಿದೆ. ಹಲವು ರಾಜ್ಯಗಳಲ್ಲಿ ಈ ಬ್ಲ್ಯಾಕ್ ಫಂಗಸ್ ನಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಈ ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ವೈಟ್ ಫಂಗಸ್ ಪ್ರತ್ಯಕ್ಷವಾಗಿದೆ.

ಬ್ಲ್ಕಾಕ್ ಫಂಗಸ್ ಗಿಂತಲೂ ಇನ್ನಷ್ಟು ಅಪಾಯಕಾರಿಯಾ?
ವೈಟ್ ಫಂಗಸ್ ಮೊದಲು ಪತ್ತೆಯಾಗಿದ್ದಾದರೂ ಎಲ್ಲಿ,ಹೇಗೆ?

ಬ್ಲ್ಯಾಕ್ ಫಂಗಸ್ ನಿಂದ ಏನೇನಾಗುತ್ತೆ ಎಂಬುದು ಈಗಾಗಲೇ ಗೊತ್ತಾಗಿದೆ. ಕೊರೊನಾ ಸೋಂಕಿತರಿಗೆ ಅದರಲ್ಲೂ ಮಧುಮೇಹದಿಂದ ಬಳಲ್ತಾ ಇದ್ರೆ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಹೆಚ್ಚಾಗಿತ್ತು ಅಂತ ತಜ್ಞರು ವರದಿ ಕೊಟ್ಟಿದ್ದರು. ಕೊರೊನಾ ಸೋಂಕಿತರು ಗುಣಮುಖರಾದ ಬಳಿಕ ಈ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ತಾ ಇತ್ತು. ಇದಕ್ಕೆ ಪ್ರತ್ಯೇಕವಾದ ಚಿಕಿತ್ಸೆ ಕೊಡ್ತಾ ಇದ್ರೂ ಅನೇಕರು ಸಾವನ್ನಪ್ಪಿದ್ದಾರೆ. ಬ್ಲಾಕ್ ಫಂಗಸ್ ಬಂದಾಗ ಕಿವಿ, ಮೂಗು ಹಾಗು ಗಂಟಲಿನಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ. ಕಿವಿಯ ಒಳಗೆ ತುರಿಕೆ, ಕಿವಿನೋವು, ಕಿವಿ ಕಟ್ಟಿದಂತಾಗುತ್ತೆ.

ಇನ್ನು ಮೂಗಿನ ವಿಚಾರಕ್ಕೆ ಬಂದ್ರೆ, ಉಸಿರಾಡಿದಾಗ ಕೆಟ್ಟ ವಾಸನೆ ಬಂದಂತಾಗುವುದು, ಮೂಗಿನಿಂದ ಕಪ್ಪು ದ್ರವ ಸೋರುತ್ತೆ. ಹಾಗೆ ಕಣ್ಣು ನೋವು, ಕಣ್ಣು ಉರಿ, ಹುಬ್ಬು ನೋವು, ಸೈನಸ್ ಪ್ರದೇಶದಲ್ಲಿ ನೋವು ಬಂದ್ರೂ ಸಹ ಅಂತಹ ವ್ಯಕ್ತಿ ಕೂಡಲೇ ಎಚ್ಚರಿಕೆ ವಹಿಸಬೇಕು. ಇವಿಷ್ಟೇ ಅಲ್ಲದೇ ಕಣ್ಣುಗಳು ಮಂಜಾಗುವುದು, ಒಂದೇ ವಸ್ತು ನೋಡಿದ್ರೆ 2ರಂತೆ ಕಾಣುವುದು ಬ್ಲಾಕ್ ಫಂಗಸ್ ಅತಿರೇಖಕ್ಕೆ ಹೋಗ್ತಿರೋ ಮುನ್ಸೂಚನೆ ಆಗಿದೆ.

ಆದ್ರೆ ಈ ಬ್ಲ್ಯಾಕ್ ಫಂಗಸ್ ಬಂದಿದೆ ಅಂತ ಗೊತ್ತಾಗೋದೇ ತಡವಾಗಿ ಹೋಗ್ತಾ ಇತ್ತು. ಕೊರೊನಾದಿಂದ ಗುಣಮುಖರಾದ್ವಿ ಅಂತ ನೆಮ್ಮದಿಯಾಗಿದ್ದವರಿಗೆ ಅರವಿಗೆ ಬಾರದೇ ಎಂಟ್ರಿ ಕೊಡ್ತಾ ಇತ್ತು ಈ ಮೋಸಗಾರ ಫಂಗಸ್. ಕಣ್ಣು ಮಂಜಾಗುವವರೆಗೂ ಇದು ಅರಿವಿಗೆ ಬರ್ತಾ ಇರಲಿಲ್ಲ. ಆಮೇಲೆ ಕಣ್ಣು ಊದಿಕೊಂಡು ಉಲ್ಭಣಗೊಂಡಂತೆ ಇದು ಮಾರಕವಾಗಿ ಬಿಡುತ್ತೆ. ಕೊರೊನಾ ಸೋಂಕಿತರಿಗೆ ರೋಗನಿರೋಧಕ ಶಕ್ತಿ ಕಡಿಮೆಯಾಗೋದ್ರಿಂದ ಆವರಿಸಿಕೊಳ್ತಾ ಇದೆ ಈ ಬ್ಲ್ಯಾಕ್ ಫಂಗಸ್.

ಇಂತಹ ಬ್ಲ್ಯಾಕ್ ಫಂಗಸ್ ಬಳಿಕ ಈಗ ವೈಟ್ ಫಂಗಸ್ ಪತ್ತೆಯಾಗಿದೆ. ಇದು ಬ್ಲ್ಯಾಕ್ ಫಂಗಸ್ ಗಿಂದ ಅಪಾಯಕಾರಿಯಾಗಿದೆ ಅಂತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕಪ್ಪು ಶಿಲೀಂಧ್ರಕ್ಕಿಂತ ಮಾರಣಾಂತಿಕವಾಗ್ತಿದೆ ಈ ಬಿಳಿ ಶಿಲೀಂಧ್ರ. ಮಹಾರಾಷ್ಟ್ರ, ಗುಜರಾತ್ ಮತ್ತು ಬಿಹಾರದಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ನಾಲ್ಕು ಮಂದಿಯಲ್ಲಿ ಮೊದಲು ಈ ವೈಟ್ ಫಂಗಸ್ ಪತ್ತೆಯಾಗಿದ್ದು ಇವರೆಲ್ಲ ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಎಂಥಾ ವಿಚಿತ್ರ ನೋಡಿ. ಇವರಿಗೆ ಕೊರೊನಾ ಲಕ್ಷಣ ಇದ್ರೂ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಇಷ್ಟಾದರೂ ಇವರಲ್ಲಿ ರೋಗಲಕ್ಷಣ ಕಡಿಮೆ ಆಗ್ತಾನೇ ಇರಲಿಲ್ಲ. ಕೊನೆಗೆ ಸೂಕ್ಷ್ಮವಾಗಿ ಇನ್ನಷ್ಟು ಪರೀಕ್ಷೆ ನಡೆಸಿದಾಗ ಈ ವೈಟ್ ಫಂಗಸ್ ಪತ್ತೆಯಾಗಿದೆ.

ಮೊದಲು ವೈಟ್ ಫಂಗಸ್ ಪತ್ತೆಯಾಗಿದ್ದು ವೈದ್ಯರಲ್ಲಿ!
ನಾಲ್ಕು ಮಂದಿಯಲ್ಲಿ ಒಬ್ಬ ವೈದ್ಯರಲ್ಲೂ ಬಿಲಿ ಶಿಲೀಂಧ್ರ
ಪಟ್ನಾ ವೈದ್ಯಕೀಯ ಕಾಲೇಜು ತಜ್ಞರಿಂದ ಬಹಿರಂಗ

ಈ ವೈಟ್ ಫಂಗಸ್ ಮೊದಲು ಪತ್ತೆಯಾಗಿರೋದು ಬಿಹಾರದ ಪಾಟ್ನಾದಲ್ಲಿ. ನಾಲ್ಕು ಮಂದಿಯಲ್ಲಿ ಈ ವೈಟ್ ಫಂಗಸ್ ಕಾಣಿಸಿಕೊಂಡಿದ್ದು ಅವರಲ್ಲಿ ಒಬ್ಬರು ವೈದ್ಯರೂ ಸೇರಿದ್ದಾರೆ. ಇದನ್ನು ಪಾಟ್ನಾ ವೈದ್ಯಕೀಯ ಕಾಲೇಜಿನ ಮೈಕ್ರೊಬಯಾಲಜಿ ವಿಭಾಗದ ಮುಖ್ಯಸ್ಥ ಡಾಕ್ಟರ್ ಎಸ್.ಎನ್.ಸಿಂಗ್ ದೃಢಪಡಿಸಿದ್ದಾರೆ. ಅನುಮಾನಗೊಂಡು ಪರೀಕ್ಷೆ ನಡೆಸಿದಾಗ ಈ ಬಿಳಿ ಶಿಲೀಂಧ್ರ ಪತ್ತೆಯಾಗಿದೆ ಅಂತ ಅವರು ಮಾಹಿತಿ ನೀಡಿದ್ದಾರೆ. ಇದು ಬ್ಲ್ಯಾಕ್ ಫಂಗಸ್ ಗಿಂತಲೂ ತೀವ್ರವಾಗಿದೆ ಅಂತ ಎಚ್ಚರಿಕೆ ನೀಡಿದ್ದಾರೆ. ಇದು ಸುಲಭವಾಗಿ ಪತ್ತೆ ಹಚ್ಚೋದು ಕೂಡ ಕಷ್ಟ. ಪತ್ತೆ ಹಚ್ಚಿದ ಮೇಲೂ ಇದನ್ನು ಕಂಟ್ರೋಲ್ ಮಾಡೋದು ದೊಡ್ಡ ಸವಾಲು ಅಂತಿದಾರೆ ತಜ್ಞರು. ರೋಗನಿರೋಧಕ ಶಕ್ತಿ ಕಡಿಮೆ ಆಗಿದ್ದವರಲ್ಲಿ ಇದು ಕಂಡು ಬಂದಿದೆ ಅಂತಾ ವಿವರ ನೀಡಿದ್ದಾರೆ.

ಏನಿದು ವೈಟ್ ಫಂಗಸ್? ಲಕ್ಷಣ ಗೊತ್ತಾಗೋದು ಹೇಗೆ?
ವೈಟ್ ಫಂಗಸ್ ನಿಂದ ಯಾರಿಗೆ ಹೆಚ್ಚಿನ ಆತಂಕ, ಭೀತಿ?

ಬ್ಲ್ಯಾಕ್ ಫಂಗಸ್ ಗೆ ಹೋಲಿಸಿದ್ರೆ ಇದು ಅತ್ಯಂತ ಅಪಾಯಕಾರಿ, ಹರಡುವ ವೇಗವೂ ಹೆಚ್ಚು. ಹಾಗೆ ಕಡಿಮೆ ಅವಧಿಯಲ್ಲೇ ಆವರಿಸಿಕೊಂಡು ಬಿಡುತ್ತೆ ಈ ವೈಟ್ ಫಂಗಸ್. ವಿಚಿತ್ರ ಅಂದರೆ ಇದು ಹೆಚ್ಚು ಲಕ್ಷಣಗಳನ್ನು ತೋರ್ಪಡಿಸೋದಿಲ್ಲ. ಹೆಚ್ಚು ಕಡಿಮೆ ಕೊರೊನಾ ಲಕ್ಷಣಗಳನ್ನೇ ತೋರ್ಪಡಿಸುತ್ತೆ. ಆದ್ರೆ ಕೊರೊನಾ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ತೋರಿಸುತ್ತೆ. ಹಾಗಾದ್ರೆ ಇದನ್ನು ಪತ್ತೆ ಹಚ್ಚೋದು ಹೇಗೆ ಅಂತ ಕೇಳಿದ್ರೆ ಇದಕ್ಕೆ ಸ್ಕ್ಯಾನ್ ಮಾಡಿಸೋದೇ ದಾರಿ. ಸಿ.ಟಿ ಸ್ಕ್ಯಾನ್ ಮಾಡಿಸಿದರೆ ವೈಟ್ ಫಂಗಸ್ ಎಂಟ್ರಿ ಕೊಟ್ಟಿರೋದು ದೃಢಪಡುತ್ತೆ. ಯಾರಿಗೆ ಇದು ಹೆಚ್ಚು ಆತಂಕ ಮತ್ತು ಅಪಾಯ ತರುತ್ತೆ ಅಂತ ನೋಡೋದಾದ್ರೆ..

ಯಾರಿಗೆ ಹೆಚ್ಚು ಆತಂಕ?

 1. ರೋಗ ನಿರೋಧಕ ಶಕ್ತಿ ಕಡಿಮೆ ಇರೋರಲ್ಲಿ ಇದ್ರಿಂದ ಹೆಚ್ಚು ಆತಂಕ
 2. ಮಧುಮೇಹದಿಂದ ಮೊದಲೇ ಬಳಲ್ತಾ ಇದ್ರೂ ಹೆಚ್ಚಿನ ಡ್ಯಾಮೇಜ್
 3. ಈಗಾಗಲೇ ಬೇರೆ ಬೇರೆ ರೀತಿ ಅನಾರೋಗ್ಯದಿಂದ ಬಳಲ್ತಾ ಇದ್ರೆ ಕಷ್ಟ
 4. ಸ್ಡಿರಾಯ್ಡ್ ತೆಗೆದುಕೊಳ್ಳುವವರಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು
 5. ಕೊರೊನಾ ಸೋಂಕಿತರಲ್ಲಿ ರೋಗ ಉಲ್ಭಣಿಸಿದರೂ ಹೆಚ್ಚಿನ ಆತಂಕ
 6. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೀತಾ ಇದ್ದವರಿಗೂ ಭೀತಿ

ಹೀಗೆ ಕೊರೊನಾ ಸೋಂಕಿತರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲದೆ, ಕೊರೊನಾ ಲಕ್ಷಣ ಇದ್ದವರೂ ಕೂಡ ಎಚ್ಚರಿಕೆಯಿಂದ ಇರಬೇಕು. ಆದ್ರೆ ಇದು ಅಷ್ಟು ಸುಲಭವಾಗಿ ಪತ್ತೆಯಾಗದ ಕಾರಣ ಸರಿಯಾದ ಟೈಮ್ಗೆ ಎಲ್ಲರಿಗೂ ಚಿಕಿತ್ಸೆ ಕೊಡೋದು ಕೂಡ ಕಷ್ಟ. ಇದರಿಂದಾಗಿಯೇ ವೈಟ್ ಫಂಗಸ್ ಮಾರಣಾಂತಿಕವಾಗಿ ಬಿಡುತ್ತೆ. ಇನ್ನು ವೈಟ್ ಫಂಗಸ್ನ ಸಾಮಾನ್ಯ ಲಕ್ಷಣಗಳನ್ನು ನೋಡೋದಾದ್ರೆ..

ವೈಟ್ ಫಂಗಸ್ ಸಾಮಾನ್ಯ ಲಕ್ಷಣಗಳೇನು?

 1. ಕೊರೊನಾ ಸೋಂಕಿತರಲ್ಲಿರುವ ಲಕ್ಷಣಗಳು ಇಲ್ಲೂ ಕಾಣಿಸಬಹುದು
 2. ಚರ್ಮದ ಮೇಲೆ ಸಣ್ಣ ಗುಳ್ಳೆಗಳು ದಿಢೀರ್ ಅಂತ ಕಾಣಿಸಬಹುದು
 3. ವೈಟ್ ಫಂಗಸ್ ಬಂದ ಒಂದೆರಡು ವಾರದ ಬಳಿಕ ಇದು ಪತ್ತೆಯಾಗುತ್ತೆ
 4. ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ರೆ ಎದೆನೋವು, ಉಸಿರಾಟದ ಸಮಸ್ಯೆ
 5. ಕೀಲುಗಳಲ್ಲಿ ನೋವು ಕಾಣಿಸಿಕೊಂಡ್ರು ಫಂಗಸ್ ಅಟ್ಯಾಕ್ ಆಗಿರಬಹುದು

ಇವಿಷ್ಟು ವೈಟ್ ಫಂಗಸ್ನ ಸಾಮಾನ್ಯ ಲಕ್ಷಣಗಳು. ಆದ್ರೆ ಹೀಗೆ ಆದವರಿಗೆಲ್ಲ ವೈಟ್ ಫಂಗಸ್ ಬಂದು ಬಿಟ್ಟಿದೆ ಅಂತ ಆತಂಕಗೊಳ್ಳಬೇಕಾಗಿಲ್ಲ. ವಿಚಿತ್ರ ಅಂದ್ರೆ ಇದು ಎಂಟ್ರಿ ಕೊಟ್ಟ ತಕ್ಷಣ ಗೊತ್ತಾಗೋದೇ ಇಲ್ಲ. ಒಂದೆರಡು ವಾರಗಳ ನಂತರ ಗೊತ್ತಾಗುವಷ್ಟರಲ್ಲಿ ಉಲ್ಭಣಗೊಂಡು ಬಿಟ್ಟಿರುತ್ತೆ. ಹೀಗಾಗಿಯೇ ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡುವುದು ಕಷ್ಟವಾಗ್ತಾ ಇದೆ.

ವೈಟ್ ಫಂಗಸ್ ನಿಂದ ಬಹು ಅಂಗಾಂಗ ಡ್ಯಾಮೇಜ್ ಆಗುತ್ತಾ?
ಒಂದೊಂದೇ ಅಂಗಾಂಗಳನ್ನು ಡ್ಯಾಮೇಜ್ ಮಾಡ್ತಾ ಹೋಗುತ್ತಾ?
ವೈಟ್ ಫಂಗಸ್ ಗೆ ನಿಖರವಾದ ಚಿಕಿತ್ಸೆ ಕೊಡೋದಕ್ಕೆ ಸಾಧ್ಯವಿದ್ಯಾ?

ವೈಟ್ ಫಂಗಸ್ ಶ್ವಾಸಕೋಶಕ್ಕೆ ಎಂಟ್ರಿ ಕೊಟ್ಟಿರೋದು ಸಿಟಿ ಸ್ಕ್ಯಾನ್ ಮೂಲಕ ಗೊತ್ತಾಗುತ್ತೆ. ಆದರೆ ಇದು ಶ್ವಾಸಕೋಶಕ್ಕಷ್ಟೇ ಸೀಮಿತವಾಗಲ್ಲ. ದೇಹದ ಮೂಲೆ ಮೂಲೆಗೂ ನಿಧಾನವಾಗಿ ಆವರಿಸತೊಡಗುತ್ತೆ. ಶ್ವಾಸಕೋಶ, ಮೆದುಳು, ಮೂತ್ರಪಿಂಡ, ಚರ್ಮ, ಬಾಯಿ, ಉಗುರು ಹೀಗೆ ಅನೇಕ ಕಡೆ ತನ್ನ ಪ್ರತಾಪ ತೋರಿಸತೊಡಗುತ್ತೆ. ಇದು ಉಲ್ಭಣವಾದ್ರೆ ಒಂದೊಂದೇ ಅಂಗಾಂಗಳನ್ನು ಡ್ಯಾಮೇಜ್ ಮಾಡ್ತಾ ಹೋಗುವ ಸಾಧ್ಯತೆಯೇ ಹೆಚ್ಚು. ಹೀಗಾದಾಗ ನಿಖರವಾಗಿ ಚಿಕಿತ್ಸೆ ಕೊಡೋದು ಕೂಡ ಕಷ್ಟವಾಗಿ ಬಿಡುತ್ತೆ. ಬಹಳ ಸಂಕೀರ್ಣವಾದ ಅನಾರೋಗ್ಯ ಸಮಸ್ಯೆಯನ್ನು ಸೃಷ್ಟಿಸಿ ಬಿಡುತ್ತೆ ಈ ವೈಟ್ ಫಂಗಸ್. ಹೀಗಾಗಿ ಇದು ಎಂಟ್ರಿ ಕೊಡದಂತೆ ಎಚ್ಚರಿಕೆ ವಹಿಸೋದೇ ಮೊದಲ ಆದ್ಯತೆಯಾಗಬೇಕಾಗಿದೆ. ಬಂದ ಮೇಲೆ ಇದನ್ನು ಕಂಟ್ರೋಲ್ ಮಾಡೋದು ಕಷ್ಟ ಅಂತಿದ್ದಾರೆ ತಜ್ಞರು.

 

ವೈಟ್ ಫಂಗಸ್ ಹೇಗೆಗೆಲ್ಲಾ ತಗಲುತ್ತೆ, ಹರಡಲು ಶುರುವಾಗುತ್ತೆ?
ವೈಟ್ ಫಂಗಸ್ ಬರದಂತೆ ನೋಡಿಕೊಳ್ಳೋದು ಹೇಗೆ?

ಬ್ಲ್ಯಾಕ್ ಫಂಗಸ್ಗಿಂತ ಮಾರಕವಾಗಿರುವ ಈ ವೈಟ್ ಫಂಗಸ್ ಬೇರೆ ಸೋಂಕಿತರಿಂದಲೂ ಹರಡಬಹುದು. ಈ ಫಂಗಸ್ ತಗುಲಿದವರು ಹತ್ತಿರದಲ್ಲೇ ಇದ್ದರೆ ಅಂಥವರಿಂದ ಬರಬಹುದು. ಫಂಗಸ್​ ಗಾಳಿಯ ಮೂಲಕ ಬಂದು, ಮೂಗಿನ ಮೂಲಕ ಎಂಟ್ರಿ ಕೊಡುತ್ತದೆ ಅಂತ ಹೇಳಲಾಗ್ತಿದೆ. ಇನ್ನು ಆಘಾತಕಾರಿ ವಿಚಾರ ಅಂದರೆ ನಾವು ಸೇವಿಸುವ ಆಹಾರದ ಮೂಲಕವೂ ಈ ಫಂಗಸ್ ಎಂಟ್ರಿ ಕೊಡಬಹುದು. ಹೀಗಾಗಿ ಯಾವುದೇ ಸಂದರ್ಭದಲ್ಲೂ ಬಿಸಿ ಬಿಸಿಯಾದ ಆಹಾರ ಸೇವನೆ ಮಾಡೋದೇ ಉತ್ತಮ. ತ್ಯಾಜ್ಯಗಳನ್ನು ಮುಟ್ಟುವದರಿಂದ, ಎಂಜಲಿನ ಮೂಲಕವೂ ಕೂಡ ಇದು ನಮ್ಮೊಳಗೆ ಪ್ರವೇಶ ಮಾಡಬಹುದು. ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಇದನ್ನು ಬಾರದಂತೆ ತಡೆಯಬಹುದು. ಇನ್ನು ಸೋಂಕಿತರಿಂದ ಹೆಚ್ಚು ಅಂತರ ಕಾಪಾಡಿಕೊಳ್ಳೋದ್ರಿಂದ ಈ ಫಂಗಸ್ ಅಟ್ಯಾಕ್ ಆಗದಂತೆ ನೋಡಿಕೊಳ್ಳಬಹುದು.

ಕೊರೊನಾ ಸೋಂಕಿತರು ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು
ಕೊರೊನಾದಿಂದ ಗುಣಮುಖವಾದ ಮೇಲೂ ಎಚ್ಚರಿಕೆ ಅಗತ್ಯ
ಬೇರೆ ಕಾಯಿಲೆಗಳಿಂದ ಬಳಲ್ತಿರೋರಿಗೂ ಮುಂಜಾಗ್ರತೆ ಬೇಕು

ಈ ಬ್ಲ್ಯಾಕ್ ಫಂಗಸ್ ಮತ್ತು ವೈಟ್ ಫಂಗಸ್ ಅಟ್ಯಾಕ್ ಮಾಡದಂತೆ ನೋಡಿಕೊಳ್ಳೋದೇ ಬೆಸ್ಟ್. ಒಮ್ಮೆ ಎಂಟ್ರಿ ಕೊಟ್ಟರೆ ಇದನ್ನು ನಿಯಂತ್ರಿಸೋದು ಕಷ್ಟ. ಕೊರೊನಾ ಸೋಂಕಿತರಂತೂ ಈ ಫಂಗಸ್ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಕೊರೊನಾದಿಂದ ಗುಣಮುಖರಾದ ಬಳಿಕವೂ ಒಂದೆರಡು ವಾರಗಳ ಕಾಲ ತೀವ್ರ ಮುಂಜಾಗ್ರತೆ ವಹಿಸಲೇಬೇಕು. ಸ್ವಚ್ಛತೆ ಕಾಪಾಡಿಕೊಂಡು ಬೇರೆಯವರ ಜೊತೆ ಬೆರೆಯದಂತೆ ಪ್ರತ್ಯೇಕವಾಗಿದ್ದು ರಕ್ಷಣೆ ಮಾಡಿಕೊಳ್ಳಬೇಕು. ಇನ್ನು ಬೇರೆ ಬೇರೆ ಕಾಯಿಲೆಗಳಿಂದ ಬಳಲ್ತಾ ಇರೋರಿಗೂ ಈ ವೈಟ್ ಫಂಗಸ್ ಮಾರಣಾಂತಿಕವಾಗಿ ಬಿಡುತ್ತೆ. ಮಧು ಮೇಹ, ಸಂದು ನೋವು, ಶ್ವಾಸಕೋಶದ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಇರೋರು ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳಬೇಕು.

ಕೊರೊನಾ ದಿನ ಕಳೆದಂತೆ ಒಂದೊಂದೆ ಹೊಸ ಹೊಸ ಸಮಸ್ಯೆಗಳನ್ನ, ಆಘಾತವನ್ನು ತಂದಿಡ್ತಾ ಇದೆ. ಕೊರೊನಾ ಯಾವಾಗ ಹೋಗುತ್ತೋ ಅಂತ ಕಾಯ್ತಾ ಇದ್ರೆ ಇದು ಇನ್ನಷ್ಟು ಅಪಾಯಕಾರಿಯಾಗಿ ಕಾಡತೊಡಗಿದೆ. ಕೊರೊನಾದಿಂದ ಸೃಷ್ಟಿಯಾಗುವ ಬೇರೆ ಬೇರೆ ಅನಾರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಕೊಡುವುದು ವೈದ್ಯರಿಗೆ ನಿಜಕ್ಕೂ ಸವಾಲಾಗಿದೆ.

The post ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಬಂತು ವೈಟ್ ಫಂಗಸ್.. ಇದು ಎಷ್ಟು ಡೇಂಜರ್..? appeared first on News First Kannada.

Source: newsfirstlive.com

Source link