ದೈವ ಅನ್ನೋ ನಂಬಿಕೆಯ ಭಕ್ತಿಯ ಲೋಕಕ್ಕೆ ಹೊಸ ದೇವರ ಎಂಟ್ರಿಯಾಗಿದೆ. ಮುಕ್ಕೋಟಿ ದೇವಾನು ದೇವತೆಗಳನ್ನ ಪೂಜಿಸೋ ದೇಶ ನಮ್ಮದು. ಈಗ 2020-21ರಲ್ಲಿ ಈ ಸಾಲಿಗೆ ಹೊಸ ದೇವತೆಯ ಸೇರ್ಪಡೆಯಾಗಿದೆ. ಎಲ್ಲಾ ದೇವರಿಗಿಂತ ಈ ಅಮ್ಮನವರ ಮೇಲೆ ಭಕ್ತರಿಗೆ ತುಸು ಹೆಚ್ಚು ಭಯ. ಈ ಅಮ್ಮನವರನ್ನ ಪೂಜೆ ಮಾಡಿದ್ರೆ ಸಿಗುತ್ತಂತೆ ಅಭಯ. ಆ ದೇವತೆಯ ಹೆಸರು ಕೊರೊನಾ ಮಾತಾ!

ಉತ್ತರ ಪ್ರದೇಶದಲ್ಲಿ ಉದ್ಭವವಾದಳು ಕೊರೊನಾ ಮಾತಾ
ಕೊರೊನಾ ಅಮ್ಮನನ್ನ ಭಕ್ತಿಯಿಂದ ಪೂಜಿಸುತ್ತಿರೋ ಜನ

ಈ ಜಗಮಗ ಜಗತ್ತಿನಾದ್ಯಂತ ಕಾಣದ ಕೊರೊನಾ​ ತಲ್ಲಣವನ್ನೇ ಸೃಷ್ಟಿಸಿದೆ. ಕಳೆದ ತಿಂಗಳು ಭಾರತದಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಈ ತಿಂಗಳು ತುಸು ತಂಡ ತಂಡ ಕೂಲ್ ಆಗುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಕೇಸ್ ಕಡಿಮೆಯಾಗುತ್ತಿರೋದು ಕೊಂಚ ಸಮಧಾನದ ಸಂಗತಿ. ಆದ್ರೆ ಜನತೆ ವ್ಯಾಕ್ಸಿನ್ ಪಡೆಯಲು ಸಾಲುಗಟ್ಟಿ ಆಸ್ಪತ್ರೆಗಳ ಮುಂದೆ ನಿಲ್ಲುವ ಸಂದರ್ಭದ ಈ ಪರಿಸ್ಥಿತಿಯಲ್ಲಿ ಉತ್ತರಪ್ರದೇಶ ರಾಜ್ಯದ ಪ್ರತಾಪ್ಗಢ ಜಿಲ್ಲೆಯ ಜುಹಿ ಶುಕ್ಲಾಪುರ ಗ್ರಾಮದಲ್ಲಿ ಕೊರೊನಾ ಮಾತ ಎಂಬುವ ದೇವಸ್ಥಾನವನ್ನ ನಿರ್ಮಿಸಿದ್ದಾರೆ.

ಕೊರೊನಾ ಮಾತೆಯ ವಿಶೇಷ ವೇನು ಗೊತ್ತಾ? ಮಾಸ್ಕ್ ಧರಿಸಿರುವ ಮಾತೆ ಈ ದೇವರು. ಕೊರೊನಾ ಮಾತೆ ವಿಗ್ರಹಕ್ಕೆ ಗ್ರಾಮಸ್ಥರು, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಅಧರ್ಮ ಹೆಚ್ಚಾದಾಗ ದೇವರು ಅವತಾರ ತಾಳಿ ಬಂದೇ ಬರ್ತಾನೆ ಅನ್ನೊ ಮಾತಿನಂತೆ.. ನಮ್ಮ ದೇಶದಲ್ಲಿ ಈ ರೀತಿಯ ಸಾಂಕ್ರಾಮಿಕ ರೋಗಗಳು ಬಂದಾಗ ಜನ ತಮ್ಮ ತಮ್ಮ ನಂಬಿಕೆಯ ಅನುಸಾರ ಮನಸ್ಸಿಗೆ ಶಾಂತಿ ಸಿಗೋ ಆಚಾರಣೆಯನ್ನ ಮಾಡುತ್ತಲೇ ಬಂದಿದ್ದಾರೆ. ಈಗ ಕೊರೊನಾ ಅಮ್ಮನ ಸರದಿ.

ಕರ್ನಾಟಕದಲ್ಲೂ ಕೊರೊನಾ ಅಮ್ಮನ ಪೂಜೆ
ಹರಕೆ ಹೊತ್ತು ನೈವೇದ್ಯ ಇಟ್ಟ ಹಳ್ಳಿ ಜನ

ಕೆಲ ದಿನಗಳ ಹಿಂದೆ ದಾವಣಗೆರೆಯಲ್ಲಿ ಕೊರೊನಾವನ್ನ ಓಡಿಸಲು ಕೊರೊನಾ ಅಮ್ಮನ ಹಬ್ಬವನ್ನ ಮಾಡಲಾಗಿತ್ತು. ದಾವಣಗೆರೆಯ ಬೇತೂರು ಗ್ರಾಮದಲ್ಲಿ ಜನ ಕೊರೊನಾ ಅಮ್ಮನ ಹಬ್ಬ ಮಾಡುವ ಸಲುವಾಗಿ ಗ್ರಾಮದ ಗಡಿಯಲ್ಲಿ ಮೂರ್ತಿಯನ್ನ ಸೃಷ್ಟಿಸಿ ಮೊಸರನ್ನ , ಹೋಳಿಗೆ ನೈವೇದ್ಯ ಮಾಡಿ ಪೂಜೆ ಮಾಡಿದ್ರು.

ನೂತನ ಜಿಲ್ಲೆ ವಿಜಯನಗರದಲ್ಲೂ ಇದೇ ರೀತಿಯ ಆಚಾರಣೆ ಮಾಡಲಾಗಿತ್ತು. ವಿಜಯನಗರದ ಕೊಟ್ಟೂರು ತಾಲೂಕಿನ ಗಂಗಮ್ಮನ ಹಳ್ಳಿಯಲ್ಲಿ ಕೊರೊನಾ ಗ್ರಾಮಕ್ಕೆ ಬರಬಾರದು ಅಂತಾ ಊರಾಚೆ ಎಡೆ ಇಟ್ಟು ವಿಶೇಷ ಪೂಜೆ ಮಾಡಲಾಗಿತ್ತು.

ಒಂದೇ ಆಸ್ಪತ್ರೆಯಲ್ಲಿ ಒಂದೇ ದಿನ 24 ಜನ ಆಕ್ಸಿಜನ್ ಇಲ್ಲದೇ ಮರಣ ಹೊಂದಿದ್ದ ಕಾರಣ ಇಡೀ ದೇಶದಲ್ಲೇ ಚಾಮರಾಜನಗರ ಸುದ್ದಿಯಾಗಿತ್ತು. ಜಾನಪದ ಕಲೆಯ ಬೀಡು ಹಳ್ಳಿ ಆಚರಣೆಯ ನಾಡು ಚಾಮರಾಜನಗರದಲ್ಲಿಯೂ ಕೂಡ ಕೊರೊನಾ ಮಾರಮ್ಮನ ಆಚರಣೆ ಇತ್ತೀಚೆಗೆ ನಡೆದಿತ್ತು. ಚಾಮರಾಜನಗರದ ಗಂಗಮತಸ್ಥರ ಬೀದಿಯಲ್ಲಿ ಕೋಳಿ ಬಲಿ ಕೊಟ್ಟು 12 ದಿನಗಳ ಕಾಲ ಕೊರೊನಾ ಮಾರಮ್ಮನನ್ನ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ರು ಜನ.

ಕುರಿ , ಕೋಳಿ ಬಲಿ!
ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮದಲ್ಲಿ ಮತ್ತೊಂದು ರೀತಿಯ ಆಚರಣೆ ನಡೆದಿತ್ತು. ಕೊರೊನಾಕ್ಕೆ ಹೆದರಿ ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನ ಕಾಯಿ ಕಟ್ಟಿ ಪೂಜೆ ಮಾಡಿದ್ರು. ಇನ್ನು ಇದೇ ಚಳ್ಳಿಕೆರೆಯ ದುಗ್ಗಾವರ ಗ್ರಾಮದಲ್ಲಿ ಕೊರೊನಮ್ಮ ಅನ್ನೋ ಮಣ್ಣಿನ ದೇವಿ ಮೂರ್ತಿಯನ್ನ ಮಾಡಿ ವಿಶೇಷ ಪೂಜೆ ಮಾಡಿದ್ರು ಜನ. ಕುರಿ , ಕೋಳಿ, ಮೊಸರನ್ನವನ್ನ ಅರ್ಪಣೆ ಮಾಡಿದ್ರು.

ಇನ್ನು ಪಕ್ಕದ ಕೇರಳದಲ್ಲೂ ಇದೇ ರೀತಿಯ ಘಟನೆಗಳು, ಅಮ್ಮನವರ ಪೂಜೆಗಳು ನಡೆದಿವೆ ಮತ್ತು ನಡೆಯುತ್ತಿವೆ. ನೆರೆಯ ತಮಿಳುನಾಡಿನ ಕೊಯಮತ್ತೂರಿನ ಕಾಮಾಚಿಪುರಂ ಹಳ್ಳಿಯಲ್ಲಿ ಕೊರೊನಾ ದೇವಿಯ ಪೂಜೆ ಮಾಡಲಾಗುತ್ತಿದೆ.  ‘ಕೊರೊನಾ ದೇವಿ’ ದೇವಾಲಯ ನಿರ್ಮಾಣ ಮಾಡಲಾಗಿದೆ. ಕಾಮಾಚಿಪುರಿ ಅಧೀನಂ ಪೀಠ ಈ ದೇವಾಲಯ ನಿರ್ಮಿಸಿದೆ. ಪ್ರತಿದಿನವೂ ಈ ದೇವಾಲಯದಲ್ಲಿ ಅರ್ಚಕರು ದೇವಿಗೆ ಪೂಜೆ ಮಾಡುತ್ತಿದ್ದಾರೆ. ಇಡೀ ತಮಿಳುನಾಡಿನಲ್ಲೇ ಈ ದೇವಾಲಯ ಫೇಮಸ್ ಆಗುತ್ತಿದೆ.

ತಮಿಳುನಾಡು ಕರ್ನಾಟಕ , ಕೇರಳ ರಾಜ್ಯಗಳಂತೆ ಉತ್ತರಪ್ರದೇಶದಲ್ಲೂ ಕೊರೊನಾ ಅಮ್ಮನ ಆರಾಧನೆ ನಡೆಸುತ್ತಿದ್ದಾರೆ ಮುಗ್ಧ ಜನ. ಉತ್ತರಪ್ರದೇಶದ ಪ್ರತಾಪಗಢದ ಜುಹಿ ಶುಕುಲ್ಪುರ ಗ್ರಾಮದಲ್ಲಿ ಕಳೆದ ಏಳನೇ ತಾರೀಖು ಕೊರೊನಾ ಮಾತ ದೇವಾಲಯವನ್ನ ಸ್ಥಾಪಿಸಲಾಗಿದೆ. ಗ್ರಾಮದಲ್ಲಿ ಇಲ್ಲಿಯವರಗೆ ಮೂವರು ಮೃತಪಟ್ಟಿದ್ದಾರೆ. ಇದರಿಂದಾಗಿ ಭೀತಿಗೊಂಡ ಗ್ರಾಮಸ್ಥರು, ದೇಣಿಗೆ ಸಂಗ್ರಹಿಸಿ ಜೂನ್ 7 ರಂದು ಕೊರೊನಾ ಮಾತೆ ದೇಗುಲ ನಿರ್ಮಿಸಿದ್ದಾರೆ. ಬೇವಿನ ಮರದ ಪಕ್ಕ ಕೊರೊನಾ ಮಾತೆಯನ್ನು ಪ್ರತಿಷ್ಠಾಪಿಸಿರುವ ಜನ, ನಿತ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ. ಕೋವಿಡ್​ನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಅಕ್ಕಪಕ್ಕದ ಗ್ರಾಮಸ್ಥರು ಸಹ ಕೊರೊನಾ ಮಾತೆಯ ಮೊರೆ ಹೋಗಿದ್ದಾರೆ. ವಿವಿಧ ಖಾದ್ಯಗಳನ್ನು ತಯಾರಿಸಿ ಪ್ರಸಾದ ಅರ್ಪಿಸುವ ಮೂಲಕ ಭಕ್ತಿ ಪರಾಕಾಷ್ಠೆ ತೋರಿಸುತ್ತಿದ್ದಾರೆ. ಮಾಸ್ಕ್ ಧರಿಸಿ ಕೈ ತೊಳೆಯುತ್ತಿರುವ ಮೂರ್ತಿಯನ್ನ ಜನ ಪ್ರತಿಷ್ಠಾಪಿಸಿದ್ದು ಇದರಿಂದ ಜಾಗೃತಿಯ ಜೊತೆಗೆ ಭಕ್ತಿಯನ್ನ ಸಾರಿದಂತೆ ಆಗುತ್ತದೆ ಅನ್ನೊದು ಈ ದೇವಾಲಯ ನಿರ್ಮಾಣ ಮಾಡಿದವರ ನಂಬಿಕೆ.

ಇಷ್ಟೆಲ್ಲ ಫೇಮಸ್ ಆಗುತ್ತಿರೋ ಈ ಕೊರೊನಾ ಮಾತಾ ದೇವಾಲಯವನ್ನ ಪೊಲೀಸರು ಕೆಡವಿದ್ದಾರೆ ಅನ್ನೋ ಸುದ್ದಿ ಇಡೀ ಉತ್ತರ ಪ್ರದೇಶದ ತುಂಬ ಹರಡಿದೆ.

ಕೊರೊನಾ ಮಾತಾ ದೇವಾಲಯ ರಾತ್ರೋ ರಾತ್ರಿ ತೆರವು!
ಕೊರೊನಾ ಮಾತಾರನ್ನೂ ಬಿಡಲಿಲ್ಲ ಭೂ ವಿವಾದದ ಸುಳಿ

ಕೊರೊನಾ ಮಾತಾ ದೇವಾಲಯವನ್ನ ಅಧಿಕಾರಿಗಳು ಕೆಡವಿದ್ದಾರಂತೆ. ಕಾರಣ ಭೂ ವಿವಾದ. ಹೌದು ಇಂಥದೊಂದು ಸುದ್ದಿ ದೇವಸ್ಥಾನ ನಿರ್ಮಾಣವಾಗಿ ಕೆಲವೇ ದಿನಗಳಲ್ಲಿ ಹರಡಿದೆ. ಈ ದೇವಾಲಯವನ್ನು ಪೊಲೀಸರು ನೆಲಸಮ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪ್ರತಾಪಗಢದ ಪೊಲೀಸರು ದೇವಾಲಯವನ್ನು ವಿವಾದಿತ ಸ್ಥಳದಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಭೂಮಿಯ ವಿಚಾರವಾಗಿ ಯಾರೋ ಅದನ್ನು ಧ್ವಂಸಗೊಳಿಸಿದ್ದಾರೆ ಎಂದು ಹೇಳ್ತಿದಾರೆ. ಸ್ಥಳೀಯ ನಿವಾಸಿಗಳ ದೇಣಿಗೆಯನ್ನು ಪಡೆದು ಲೋಕೇಶ್ ಕುಮಾರ್ ಶ್ರೀವಾಸ್ತವ ಎಂಬವವರು ಕೆಲ ದಿನಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಲೋಕೇಶ್ ಈ ದೇವಾಲಯದಲ್ಲಿ “ಕೊರೊನಾ ಮಾತಾ” ವಿಗ್ರಹವನ್ನು ಸ್ಥಾಪಿಸಿದ್ದು, ಗ್ರಾಮದ ರಾಧೆ ಶ್ಯಾಮ್ ವರ್ಮಾರನ್ನ ಈ ವಿಗ್ರಹಕ್ಕೆ ಪೂಜೆ ಮಾಡುವ ಅರ್ಚಕರಾಗಿ ನೇಮಿಸಲಾಗಿತ್ತು.

ಪೊಲೀಸರಿಗೆ ಕಂಪ್ಲೇಂಟ್
ಗ್ರಾಮದ ಜನರು ಕೂಡಾ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ನೋಯ್ಡಾದಲ್ಲಿ ವಾಸವಾಗಿರುವ ಲೋಕೇಶ್ ಎಂಬವರು ನಾಗೇಶ್ ಕುಮಾರ್, ಶ್ರೀವಾಸ್ತವ ಮತ್ತು ಜೈಪ್ರಕಾಶ್ ಶ್ರೀವಾಸ್ತವ ಜೊತೆಗೆ ಜಂಟಿಯಾಗಿ ಈ ದೇವಾಲಯ ನಿರ್ಮಿಸಿರುವ ಭೂಮಿಯ ಪಾಲುದಾರಿಕೆ ಹೊಂದಿದ್ದಾರೆ ಅನ್ನೋ ಮಾತಿದೆ. ದೇವಾಯಲವನ್ನು ನಿರ್ಮಾಣ ಮಾಡಿದ ಬಳಿಕ ಲೋಕೇಶ್ ತನ್ನ ಹಳ್ಳಿಯಿಂದ ನೋಯ್ಡಾಕ್ಕೆ ತೆರಳಿದ್ದಾರೆ. ಆದರೆ ಈ ಭೂಮಿಯಲ್ಲಿ ದೇವಾಲಯ ನಿರ್ಮಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭೂಮಿಯ ಇನ್ನೊಬ್ಬ ಪಾರ್ಟನರ್ ನಾಗೇಶ್, ಭೂಮಿಯನ್ನು ಕಸಿದುಕೊಳ್ಳುವ ದುರಾಲೋಚನೆಯಿಂದ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದಾರೆ.

ಒಟ್ಟಿನಲ್ಲಿ ಉತ್ತರ ಪ್ರದೇಶದ ಕೊರೊನಾ ಮಾತಾ ಪ್ರತಿಷ್ಠಾಪನೆಯಾದ ದಿನದಿಂದ ಇಡೀ ದೇಶಾದ್ಯಂತ ಸುದ್ದಿ ಆಗ್ತಿರೋದಂತು ನಿಜ. ಆದ್ರೆ ನಾವಿಲ್ಲಿ ಒಂದು ಗಮನದಲ್ಲಿ ಇಟ್ಟಿಕೊಳ್ಳಬೇಕಿರೋ ವಿಚಾರ. ಭಕ್ತಿ, ನಂಬಿಕೆಗಿಂತ ವಾಸ್ತವ ಸ್ಥಿತಿಗತಿಯನ್ನ ಅರಿತು, ಜನ ಆದಷ್ಟು ಎಚ್ಚರದಿಂದ ಇರೋ ಸಂರ್ಭವಿದು. ಸಾಮಾಜಿಕ ಅಂತರ ಪಾಲಿಸಿ, ಶುಚಿಯಾಗಿ, ಆರೋಗ್ಯವಾಗಿ ಇದ್ರೆ ಖಂಡಿತ ಕೊರೊನಾವನ್ನ ಗೆಲ್ಲಬಹದು.

The post ಭಕ್ತಿಯ ಲೋಕಕ್ಕೆ ಹೊಸ ದೇವರ ಎಂಟ್ರಿ, ಇಲ್ಲೂ ಬಂತು ಭೂವಿವಾದ appeared first on News First Kannada.

Source: newsfirstlive.com

Source link