ಬಾಲಿವುಡ್ನ ಸಲ್ಮಾನ್ ಖಾನ್ ಸಿನಿ ಜೀವನದಲ್ಲಿ ವಿಶೇಷ ಸಿನಿಮಾ ಅಂದ್ರೆ ಅದು ‘ಭಜರಂಗಿ ಭಾಯ್ ಜಾನ್’ ಸಿನಿಮಾ. ಈ ಸಿನಿಮಾ ಸಲ್ಲು ಸಿನಿ ಕರಿಯರ್ನ ಹಿಟ್ ಸಿನಿಮಾಗಳ ಪೈಕಿ ಪ್ರಮುಖ ಸಾಲಿನಲ್ಲಿ ನಿಲ್ಲುತ್ತದೆ.
‘ಭಜರಂಗಿ ಭಾಯ್ ಜಾನ್’ ಸಿನಿಮಾ 2015ರಲ್ಲಿ ರಿಲೀಸ್ ಆಗಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇಂಡಿಯಾ-ಪಾಕಿಸ್ತಾನ ನಡುವಿನ ಕಥಾ ಹಂದರ ಹೊಂದಿದ್ದ ‘ಭಜರಂಗಿ ಭಾಯ್ ಜಾನ್’ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿತ್ತು. ಈ ವಿಚಾರವಾಗಿ ಇತ್ತೀಚೆಗೆ ಸಲ್ಮಾನ್ ಖಾನ್ ಅವರು, ತಮ್ಮ 2015 ರ ಬ್ಲಾಕ್ಬಸ್ಟರ್ ಚಿತ್ರ ಭಜರಂಗಿ ಭಾಯ್ಜಾನ್ನ ಸೀಕ್ವೆಲ್ಗಾಗಿ ಶೀಘ್ರದಲ್ಲೇ ಕೆಲಸ ಮಾಡುವುದಾಗಿ ಘೋಷಿಸಿದ್ದರು.
ಈ ಚಿತ್ರದ ಮತ್ತೊಂದು ವಿಶೇಷ ಏನಂದ್ರೆ, ‘ಭಜರಂಗಿ ಭಾಯ್ ಜಾನ್’ ಕಥೆ ಬರೆದಿದ್ದು, ರಾಜ ಮೌಳಿ ತಂದೆ ವಿಜಯೇಂದ್ರ ಪ್ರಸಾದ್ . ಈಗ ‘ಭಜರಂಗಿ ಭಾಯ್ ಜಾನ್’ -2 ಗೂ ವಿಜಯೇಂದ್ರ ಪ್ರಸಾದ್ ಅವರೇ ಕಥೆ ಬರೆದಿದ್ದಾರೆ. ಮೊದಲ ಭಾಗಕ್ಕೆ ಖ್ಯಾತ ನಿರ್ದೇಶಕ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿದ್ದರು. ಆದರೆ ಭಾಗ-2 ಗೆ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳುತ್ತಾರಾ ಅನ್ನೋದೇ ಡೌಟ್ ಎನ್ನುತ್ತಿದೆ ಭಜರಂಗಿ ಟೀಂ. ನಿರ್ದೇಶನದ ಬಗ್ಗೆ ಮಾತನಾಡಿರುವ ವಿಜಯೇಂದ್ರ ಪ್ರಸಾದ್ , ಕಬೀರ್ ಖಾನ್ ‘ಭಜರಂಗಿ ಭಾಯ್ ಜಾನ್’ ಭಾಗ-2 ಅನ್ನು ನಿರ್ದೇಶನ ಮಾಡುವುದು ಬಿಡುವುದು ಸಲ್ಮಾನ್ ಖಾನ್ ಗೆ ಬಿಟ್ಟ ವಿಚಾರ ಅಂತ ಹೇಳಿದ್ದಾರೆ.
‘ಭಜರಂಗಿ ಭಾಯ್ ಜಾನ್’-1ರಲ್ಲಿ ಅದ್ಭುತವಾದ ಕೆಲಸ ಮಾಡಿದ್ದರಿಂದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಭಾಗ -2 ನಲ್ಲೂ ಕಬೀರ್ ಖಾನ್ ಚಿತ್ರವನ್ನು ನಿರ್ದೆಶನ ಮಾಡಲಿ ಎಂದು ನಾನು ಬಯಸುತ್ತೇನೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಆದರೆ ‘ಭಜರಂಗಿ ಭಾಯ್ ಜಾನ್’ ಸೀಕ್ವೆಲ್ ಅನ್ನು ನಿರ್ದೇಶಿಸುವ ವದಂತಿಗಳ ಬಗ್ಗೆ ಸ್ವತಃ ಕಬೀರ್ ಖಾನ್ ಮಾಹಿತಿ ನೀಡಬೇಕಷ್ಟೆ. ಎಲ್ಲವೂ ಅಂದುಕೊಂಡಂತೆ ಆದರೆ 2022 ರಲ್ಲಿ ಸಿನಿಮಾ ತೆರೆಗೆ ಬರಲಿದೆ.