ಭತ್ತ, ರಾಗಿ, ಜೋಳದ ಬೆಂಬಲ ಬೆಲೆಯ ಬಾಕಿ ಮೊತ್ತ ಬಿಡುಗಡೆಗೆ ಕೇಂದ್ರಕ್ಕೆ ಮನವಿ | Food Minister Umesh Katti Requests Minimum Support Price Money from Union Govt


ಭತ್ತ, ರಾಗಿ, ಜೋಳದ ಬೆಂಬಲ ಬೆಲೆಯ ಬಾಕಿ ಮೊತ್ತ ಬಿಡುಗಡೆಗೆ ಕೇಂದ್ರಕ್ಕೆ ಮನವಿ

ಉಮೇಶ್ ಕತ್ತಿ

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿರುವ ಭತ್ತ, ರಾಗಿ, ಜೋಳದ ಬಾಕಿ ಮೊತ್ತ ಬಿಡುಗಡೆ ಮಾಡಲು ಕೇಂದ್ರದ ಆಹಾರ ಸಚಿವರನ್ನು ವಿನಂತಿಸಲಾಗಿದೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ದೆಹಲಿಗೆ ಹೋಗಿದ್ದ ಅವರು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದರು. ದೆಹಲಿಯಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಅವರನ್ನು ಭೇಟಿಯಾಗಿದ್ದೆ. ಧಾನ್ಯ ಖರೀದಿ, ಬಾಕಿ ಮೊತ್ತ ಬಿಡುಗಡೆ ಕುರಿತಂತೆ ಚರ್ಚೆ ಮಾಡಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ರಾಜ್ಯದಲ್ಲಿ ಖರೀದಿಸಿರುವ ಧಾನ್ಯಕ್ಕೆ ಬಾಕಿ ಉಳಿದಿರುವ ಮೊತ್ತ ಬಿಡುಗಡೆಗೆ ಮನವಿ ಮಾಡಿದೆ. ಶೀಘ್ರ ಹಣ ಬಿಡುಗಡೆ ಮಾಡಲು ಅವರೂ ಒಪ್ಪಿಕೊಂಡರು ಎಂದು ಹೇಳಿದರು.

ಕೇಂದ್ರ ಸರ್ಕಾರವು ಕಳೆದ ವರ್ಷ ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ನಿಯಮದಡಿ ಧಾನ್ಯವನ್ನು ಖರೀದಿ ಮಾಡಿದ್ದು, ಅದರ ಮೊತ್ತವನ್ನು ಇನ್ನೂ ಪಾವತಿಸಿಲ್ಲ. ಈ ಹಣವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಕತ್ತಿ ಹೇಳಿದರು.

ಈಗಾಗಲೇ ವ್ಯಾಪಾರಸ್ಥರು ರೈತರಿಂದ ನೇರವಾಗಿ ಆಹಾರ ಧಾನ್ಯಗಳನ್ನು ಖರೀದಿ ಮಾಡುತ್ತಿದ್ದಾರೆ. 2021-22 ನೇ ಮುಂಗಾರು ಹಂಗಾಮಿನಲ್ಲಿ ಭತ್ತ, ರಾಗಿ, ಜೋಳ ಸೇರಿದಂತೆ ರಾಜ್ಯದಲ್ಲಿ ಬೆಳೆಯುವ ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ನಿಗದಿ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ಶೀಘ್ರವಾಗಿ ಆಹಾರ ಧಾನ್ಯಗಳ ಖರೀದಿ ಆರಂಭಿಸುವಂತೆ ಕೋರಿಕೆ ಸಲ್ಲಿಸಿದ್ದೇನೆ ಎಂದು ವಿವರಿಸಿದರು.

ಕೇಂದ್ರ ಆಹಾರ ಇಲಾಖೆಯ ನಿಯಮದಂತೆ ನಿಗದಿ ಮಾಡಿರುವ ಬೆಂಬಲ ಬೆಲೆಯಲ್ಲಿ, ಕೇಂದ್ರ ಸರ್ಕಾರ ನೇರವಾಗಿ ಹೆಚ್ಚಿನ ಆಹಾರ ಧಾನ್ಯ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರೈತರಿಂದ ಖರೀದಿ ಮಾಡಬೇಕು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಸಚಿವ ಉಮೇಶ್ ಕತ್ತಿ ಕೇಂದ್ರ ಆಹಾರ ಇಲಾಖೆ ಸಚಿವರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾಗಿ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಈ ವಿಚಾರ ಪ್ರಸ್ತಾಪಿಸಿದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ನಮಗೆ ₹ 2,100 ಕೋಟಿ ಕೊಡಬೇಕೆಂಬ ಬೇಡಿಕೆ ಇತ್ತು. ಈ ಹಣ ಕೊಡಲು ಕೇಂದ್ರ ಆಹಾರ ಸಚಿವ ಪೀಯೋಷ್ ಗೋಯೆಲ್ ಒಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಓರ್ವ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು: ಈ ಹೇಳಿಕೆಗೆ ನಾನು ಬದ್ಧ: ಆಹಾರ ಸಚಿವ ಉಮೇಶ್ ಕತ್ತಿ
ಇದನ್ನೂ ಓದಿ: ಓರ್ವ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಕು, 10 ಕೆಜಿ ಕೊಟ್ಟರೆ ಬೊಕ್ಕಸಕ್ಕೆ ಹೊರೆ: ಆಹಾರ ಸಚಿವ ಉಮೇಶ್ ಕತ್ತಿ

 

TV9 Kannada


Leave a Reply

Your email address will not be published. Required fields are marked *