ನವದೆಹಲಿ: 2019ರಲ್ಲಿ ಜಗತ್ತಿಗೆ ಅಂಟಿದ್ದ ಮಹಾಮಾರಿ ಕೊರೊನಾ ಇಡೀ ವಿಶ್ವವನ್ನೇ ನಡುಗಿಸಿಬಿಟ್ಟಿತ್ತು. ವೈದ್ಯರ, ಆರೋಗ್ಯ ಕಾರ್ಯಕರ್ತರ, ವಿಜ್ಞಾನಿಗಳ, ಸಂಘ ಸಂಸ್ಥೆಗಳ, ಸರ್ಕಾರಗಳ ಪರಿಶ್ರಮದಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಇದೀಗ ದಕ್ಷಿಣ ಆಫ್ರಿಕಾ, ಹಾಂಕಾಂಗ್, ಇಸ್ರೇಲ್ ಮತ್ತು ಬೋಟ್ಸ್ವಾನಾದಿಂದ ಭಯಾನಕ ಎಚ್ಚರಿಕೆಯೊಂದು ಹೊರಬಿದ್ದಿದೆ.
ಕೋವಿಡ್ 19 ಸೋಂಕಿನ 8.1.1529 ಹೊಸ ತಳಿಯ ಹಲವು ಪ್ರಕರಣಗಳು ಪತ್ತೆ ಆಗಿರೋದಾಗಿ ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರ ಎಚ್ಚರಿಕೆಯನ್ನ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೂಡ ರೂಪಾಂತರಿ ಕೊರೊನಾ ವೈರಸ್ ಬಗ್ಗೆ ಜಾಗೃತರಾಗಿರುವಂತೆ ಸೂಚಿಸಿದೆ. ಜೊತೆಗೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಕರೆ ಗಂಟೆಯನ್ನ ನೀಡಿದೆ.
ತೀವ್ರ ಕಟ್ಟೆಚ್ಚರ..!
ಮೇಲ್ಕಂಡ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ರೂಪಾಂತರಿ ಕೊರೊನಾ ಆತಂಕದಲ್ಲಿರುವ ದೇಶಗಳನ್ನು ಸೇರಿದಂತೆ ನವೆಂಬರ್ 11ರಂದು ಕೇಂದ್ರ ಸರ್ಕಾರ ಹೊರಡಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಪರಿಷ್ಕೃತ ಮಾರ್ಗಸೂಚಿಗಳಂತೆ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಕಠಿಣ ತಪಾಸಣೆ, ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ.
ರೋಗ ಹರಡುವಿಕೆಯಲ್ಲಿ ಮತ್ತಷ್ಟು ತೀವ್ರ ವೇಗವನ್ನ ಪಡೆದುಕೊಂಡಿರುವ ಈ ರೂಪಾಂತರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತ ಮತ್ತೆ ಜಾಗೃತರಾಗಬೇಕಿದೆ. ಹೀಗಿದ್ದೂ ಭಾರತ ಸರ್ಕಾರ ಈಗಾಗಲೇ ಒಂದಿಷ್ಟು ಮುಂಜಾಗೃತ ಕ್ರಮಗಳನ್ನ ತೆಗೆದುಕೊಂಡಾಗಿದೆ.
ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿರುವ ಮಾಹಿತಿ ಪ್ರಕಾರ, ದಿನಕ್ಕೆ 4.5 ರಿಂದ 5 ಪ್ರಕರಣಗಳು ದಾಖಲಾಗಿದ್ದರೂ, ಅದನ್ನ ನಿಭಾಯಿಸುವ ತಯಾರಿಯನ್ನ ಮಾಡಿಕೊಳ್ಳಲಾಗಿದೆ. ಅಂದರೆ ದೇಶದಲ್ಲಿ ಶೇಕಡಾ 71 ರಷ್ಟು ಮೊದಲ ಡೋಸ್ ವ್ಯಾಕ್ಸಿನೇಷನ್ ಪ್ರಕ್ರಿಯೆ ಪೂರ್ಣಗೊಂಡ ವೇಳೆಯಲ್ಲಿ ಈ ಸಿದ್ಧತೆ ಪೂರ್ಣಗೊಂಡಿತ್ತು. ಆದರೆ ಇದೀಗ 100 ಕೋಟಿ ಮೀರಿ ವ್ಯಾಕ್ಸಿನೇಷನ್ ಪ್ರಕ್ರಿಯೆ ದೇಶದಲ್ಲಿ ಪ್ರಗತಿಯಲ್ಲಿದೆ. ವ್ಯಾಕ್ಸಿನೇಷನ್ ಹೆಚ್ಚಾಗಿರೋದ್ರಿಂದ ಕೊರೊನಾ ಸೋಂಕಿನ ಹಾನಿಯ ತೀವ್ರತೆ ತುಂಬಾ ಕಮ್ಮಿ ಇರಲಿದೆ ಎಂದು ಅಂದಾಜಿಸಲಾಗಿದೆ.
ಆಕ್ಸಿಜನ್ ಸಪೋರ್ಟೆಡ್ ಬೆಡ್ನಲ್ಲಿ ಏಪ್ರಿಲ್ 2021ರ ವೇಳೆಗೆ ದೇಶದಲ್ಲಿ 8 ಪಟ್ಟು ಹೆಚ್ಚಳವಾಗಿದೆ. ಐಸೋಲೇಷನ್ ಬೆಡ್ಗಳನ್ನೂ ಕೂಡ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಐಸಿಯು ಬಡ್ಗಳ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.