ಭಾನುವಾರ ಶಿವರಾಂ ಅಂತ್ಯಕ್ರಿಯೆ; ಹಿರಿಯ ನಟನ ಹೆಸರನ್ನು ಚಿರಸ್ಥಾಯಿಯಾಗಿಸುವ ಭರವಸೆ ನೀಡಿದ ಸಚಿವ ಆರ್​.ಅಶೋಕ್ | Karnataka Minister R Ashok gives details about Shivaram final rites full details here


ಭಾನುವಾರ ಶಿವರಾಂ ಅಂತ್ಯಕ್ರಿಯೆ; ಹಿರಿಯ ನಟನ ಹೆಸರನ್ನು ಚಿರಸ್ಥಾಯಿಯಾಗಿಸುವ ಭರವಸೆ ನೀಡಿದ ಸಚಿವ ಆರ್​.ಅಶೋಕ್

ನಟ ಶಿವರಾಂ (ಸಂಗ್ರಹ ಚಿತ್ರ)

ಬೆಂಗಳೂರು: ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ (S Shivaram) ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೆಲಸವನ್ನು ಮಾಡುತ್ತೇವೆ ಎಂದು ಸಚಿವ ಆರ್.ಅಶೋಕ್ (R Ashok) ನುಡಿದಿದ್ದಾರೆ. ಶಿವರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು. ಶಿವರಾಂ ಅವರ ನಿಧನ ಕರ್ನಾಟಕಕ್ಕೆ ಶೋಕ ತಂದೊಡ್ಡಿದ್ದು, ನಮ್ಮವರನ್ನು ಕಳೆದುಕೊಂಡಿದ್ದರಿಂದ ನಮಗೆ ನೋವಾಗಿದೆ. ಅವರ ಹೆಸರು ಚಿರಸ್ಥಾಯಿಯಾಗಿರುವಂತೆ ಕೆಲಸ ಮಾಡುತ್ತೇವೆ. ನನ್ನ ಕ್ಷೇತ್ರದಲ್ಲಿ ಅವರ ನೆನಪು ಉಳಿಸುವ ಕೆಲಸ ಮಾಡುತ್ತೇವೆ. ಯಾವುದಾದರೂ ಕಟ್ಟಡ, ರಸ್ತೆಗೆ ಶಿವರಾಂ ಹೆಸರಿಡುತ್ತೇವೆ’’ ಎಂದು ಸಚಿವರು ಹೇಳಿದ್ದಾರೆ. ಶಿವರಾಂ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡ ಅಶೋಕ್, ತಿಂಗಳಿಗೆ ಒಮ್ಮೆಯಾದರೂ ಬಂದು ನನ್ನ ಜತೆ ಮಾತನಾಡುತ್ತಿದ್ದರು. ತುಂಬಾ ಸಂಭಾವಿತ ಕಲಾವಿದರು, ಹಿರಿಯ ಕಲಾವಿದರು. ಪುನೀತ್​ (Puneeth Rajkumar) ನಿಧನದ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಆಘಾತವಾಗಿದೆ’’ ಎಂದು ಕಂಬನಿ ಮಿಡಿದಿದ್ದಾರೆ. ನಾಳೆ (ಡಿಸೆಂಬರ್ 05) ರವೀಂದ್ರ ಕಲಾಕ್ಷೇತ್ರದಲ್ಲಿ (Raveendra Kalakshethra) 2 ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಂತರ ಬೆಳಗ್ಗೆ 11 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಶಿವರಾಂ ಅವರ ಕಾರ್ಯಗಳನ್ನು ಸ್ಮರಿಸಿದ ಸಚಿವ ಅಶೋಕ್, ‘‘ಚಿತ್ರರಂಗದ ಬಹಳ ಹಿರಿಯ ನಟರು ಶಿವರಾಂ. ನಾಗರಹಾವು ಸಿನಿಮಾದಿಂದ ಹಿಡಿದು ಇದುವರೆಗೂ ನೂರಾರು ಚಿತ್ರದಲ್ಲಿ ನಟಿಸಿದ್ದಾರೆ. ಸಾಂಸಾರಿಕ ಚಿತ್ರಗಳಲ್ಲಿ ಹೆಚ್ಚು ನಟನೆ ಮಾಡಿದ್ದರು. ಡಾ. ರಾಜ್​ ಕುಮಾರ್ ಜೊತೆ ಮಾಲೆ ಹಾಕಿ ಅಯ್ಯಪ್ಪ ದರ್ಶನ ಮಾಡಿದವರು. ನಮ್ಮ ಆಫೀಸ್ ಗೆ ಬರುತ್ತಿದ್ದರು. ಸ್ವಂತ ಲೈಬ್ರರಿ ಸ್ಥಾಪನೆ ಮಾಡಿದ್ದರು. ತುಂಬಾ ಸಂಭಾವಿತ ಕಲಾವಿದರು ಶಿವರಾಮ್’’ ಎಂದು ಹೇಳಿದ್ದಾರೆ.

‘‘ಮೊನ್ನೆ ಪುನೀತ್ ಅವರನ್ನು ಕಳೆದುಕೊಂಡೆವು. ಅವರ ಫ್ಯಾಮಿಲಿ ಕೂಡ ಇಲ್ಲಿಗೆ ಬಂದಿದ್ದರು. ಮೈಸೂರು ಆಶ್ರಮದಲ್ಲಿ ಅನಾಥ ಮಕ್ಕಳಿದ್ದಾರೆ. ಅಲ್ಲಿ ಸಾವಿರ ಮಕ್ಕಳಿಗೆ ಅವಕಾಶ ಕಲ್ಪಿಸಬೇಕು. ಪುನೀತ್ ಅವರು ನಮ್ಮೊಂದಿಗಿಲ್ಲ. ಇವಾಗ ಇನ್ನೊಂದು ನೋವು. ನನ್ನನ್ನು ಶಿವರಾಂ ಅವರು ಕುಟುಂಬದ ವ್ಯಕ್ತಿ ಅಂಥ ಪರಿಚಯ ಮಾಡ್ಕೊಂಡ್ತಿದ್ದರು. ನಿನ್ನೆ ಆಸ್ಪತ್ರೆಗೆ ಹೋಗಿದ್ದೆ. ಅವರನ್ನು ನೋಡಿ ದುಖಃ ಆಯ್ತು’’ ಎಂದು ಅಶೋಕ್ ಹೇಳಿದ್ದಾರೆ.

‘‘ಕರ್ನಾಟಕದ ಜನತೆ ಅವರ ಸಿನಿಮಾಗಳನ್ನ ನೋಡಿದ್ದಾರೆ. ಅವರ ಕುಟುಂಬಕ್ಕೆ ದುಖಃ ಭರಿಸೋ ಶಕ್ತಿ ನೀಡಲಿ. ನಮ್ಮ ಕ್ಷೇತ್ರದಲ್ಲಿ ಅವರ ಹೆಸರು ಯಾವಾಗಲೂ ಇರುತ್ತದೆ. ಅವರ ನೆನಪು ಉಳಿಸೋ ಕೆಲಸವನ್ನು ಮಾಡುತ್ತೇವೆ. ಯಾವುದಾದರೂ ಕಟ್ಟಡಕ್ಕೆ ಅಥವಾ ರಸ್ತೆಗೆ ಅವರ ಹೆಸರು ಇಡುತ್ತೇವೆ. ನಾಳೆ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ಘಂಟೆ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಮಾಡಲಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಅಶೋಕ್ ನುಡಿದಿದ್ದಾರೆ.

ನಾಳೆ 11ಕ್ಕೆ ಅಂತ್ಯಕ್ರಿಯೆ: ಶಿವರಾಂ ಪುತ್ರ ಲಕ್ಷ್ಮೀಶ್ ಮಾಹಿತಿ
ಶಿವರಾಮ್ ಪುತ್ರ ಲಕ್ಷ್ಮೀಶ್ ಅಂತ್ಯಕ್ರಿಯೆಯ ಕುರಿತು ಮಾಹಿತಿ ನೀಡಿದ್ದಾರೆ. ‘‘ಬೆಳ್ಳಗ್ಗೆ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು. 7.30- 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ನಂತರ 11 ಗಂಟೆಗೆ ಬನಶಂಕರಿಯ ಚಿತಗಾರದಲ್ಲಿ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *