ಪಂಜಾಬ್​ ರಾಷ್ಟ್ರೀಯ ಬ್ಯಾಂಕ್​ಗೆ ಸುಮಾರು 14 ಸಾವಿರ ಕೋಟಿ ರೂಪಾಯಿ ಹಣ ವಂಚಿಸಿರುವ ವಜ್ರ ವ್ಯಾಪಾರಿ ಮೆಹುಲ್​ ಚೋಕ್ಸಿ ಬಂಧನ ಪ್ರಕರಣದ ಕುರಿತಾಗಿ ಡೊಮಿನಿಕಾ ಕೋರ್ಟ್ ವಿಚಾರಣೆ​ ನಡೆಸಿದೆ. ಸದ್ಯ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂತ ಡೊಮಿನಿಕಾ ಸರ್ಕಾರ ಕೋರ್ಟ್​ಗೆ ತಿಳಿಸಿದೆ.

ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂದು ಡೊಮಿನಿಕನ್ ಸರ್ಕಾರ ನಿನ್ನೆ ನ್ಯಾಯಾಲಯದಲ್ಲಿ ವಾದಿಸಿತು. 62 ವರ್ಷದ ಚೋಕ್ಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಬಾರದು ಎಂದು ಡೊಮಿನಿಕನ್ ಪಬ್ಲಿಕ್ ಪ್ರಾಸಿಕ್ಯೂಷನ್ ಸರ್ವಿಸ್​ ಹೈಕೋರ್ಟ್‌ಗೆ ತಿಳಿಸಿದೆ.

ನಿನ್ನೆ ಸಂಜೆ ಡೊಮಿನಿಕಾ ಪೊಲೀಸರು ಚೋಕ್ಸಿಯನ್ನು ಕೋರ್ಟ್​ ಮುಂದೆ ಹಾಜರುಪಡಿಸಿದ್ದರು. ಆದ್ರೆ ಚೋಕ್ಸಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಕಾರಣ, ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಇಂದು ಈ ಬಗ್ಗೆ ತೀರ್ಪು ಹೊರಬೀಳಲಿದೆ.

ಚೋಕ್ಸಿ ಡೊಮಿನಿಕಾಗೆ ಅಕ್ರಮವಾಗಿ ಪ್ರವೇಶ ಮಾಡಿಲ್ಲ. ಅವರನ್ನ ಆಂಟಿಗುವಾದಿಂದ ಕಿಡ್ನ್ಯಾಪ್​​ ಮಾಡಲಾಗಿದೆ. ಈ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ಚೋಕ್ಸಿ ಪರ ವಕೀಲರು ವಾದಿಸಿದ್ದಾರೆ. ನ್ಯಾಯಾಲಯ ಈ ವಾದವನ್ನು ಒಪ್ಪಿಕೊಂಡರೆ, ಚೋಕ್ಸಿಯನ್ನ ಆಂಟಿಗುವಾಕ್ಕೆ ವಾಪಸ್​ ಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತದಿಂದ ಪರಾರಿಯಾದ ಬಳಿಕ ಚೋಕ್ಸಿ ಆಂಟಿಗುವಾದ ಪೌರತ್ವ ಪಡೆದಿದ್ದ. ಆದ್ರೆ ಆತ ಡೊಮಿನಿಕಾದಲ್ಲಿ ಸಿಕ್ಕಿಬಿದ್ದ ನಂತರ, ಆಂಟಿಗುವಾ ಚೋಕ್ಸಿಯನ್ನ ನೇರವಾಗಿ ಭಾರತಕ್ಕೆ ಗಡೀಪಾರು ಮಾಡಬೇಕೆಂದು ಹೇಳಿತ್ತು. ಆಂಟಿಗುವಾ ಮತ್ತು ಡೊಮಿನಿಕಾ ಎರಡೂ ರಾಷ್ಟ್ರಗಳಲ್ಲಿ ಆಡಳಿತ ಪಕ್ಷ ಮೆಹುಲ್ ಚೋಕ್ಸಿಗೆ ಸಹಕರಿಸುತ್ತಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಡೊಮಿನಿಕಾಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಮೆಹುಲ್ ಚೋಕ್ಸಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಈ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡುವ ಆದೇಶವನ್ನು ಆಧರಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನ ಇಂದು ಮತ್ತೆ ವಿಚಾರಣೆಗೆ ಒಳಪಡಿಸಲಾಗುತ್ತದೆ.

ಸಿಬಿಐ ಮತ್ತು ಇ.ಡಿ(ಜಾರಿ ನಿರ್ದೇಶನಾಲಯ) ಸೇರಿದಂತೆ ಎಂಟು ಸದಸ್ಯರ ಬಹು-ಏಜೆನ್ಸಿ ತಂಡವು ಭಾರತಕ್ಕೆ ಚೋಕ್ಸಿಯ ಹಸ್ತಾಂತರ ಪ್ರಕ್ರಿಯೆಗಾಗಿ ಡೊಮಿನಿಕಾಗೆ ತೆರಳಿದೆ. ಹಾಗೇ ಅಲ್ಲಿನ ಅಧಿಕಾರಿಗಳಿಗೆ ಸಹಾಯ ಮಾಡಲು ಸರ್ಕಾರ ಟ್ರಿನಿಡಾಡ್ ಮತ್ತು ಟೊಬಾಗೊದಿಂದ ತನ್ನ ಹೈಕಮಿಷನರ್​ಗಳನ್ನ ಡೊಮಿನಿಕಾಗೆ ಕಳುಹಿಸಿದೆ.

 

 

The post ಭಾರತಕ್ಕೆ ಚೋಕ್ಸಿ ಹಸ್ತಾಂತರ ಸಂಬಂಧ ಇಂದು ಡೊಮಿನಿಕಾ ಕೋರ್ಟ್​ನಿಂದ ಮಹತ್ವದ ತೀರ್ಪು appeared first on News First Kannada.

Source: newsfirstlive.com

Source link