ಅಂತಿಮ ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಆ ಮೂಲಕ ದಕ್ಷಿಣ ಆಫ್ರಿಕಾ 1-2 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿದೆ. ಭಾರತ ನೀಡಿದ್ದ 212 ರನ್ಗಳ ಸಾಧಾರಣ ಗುರಿಯನ್ನು ನಿರಾಂತಕವಾಗಿ ಚೇಸ್ ಮಾಡಿದ ದಕ್ಷಿಣ ಆಫ್ರಿಕಾ, 4ನೇ ದಿನದಾಟದ 2ನೇ ಸೆಷನ್ನಲ್ಲಿ ಗೆದ್ದು ಬೀಗಿತು.
ಸೌತ್ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲೋ ಭಾರತದ ಕನಸು ಮತ್ತೆ ಭಗ್ನಗೊಂಡಿದೆ. ಸೆಂಚೂರಿಯನ್ ಟೆಸ್ಟ್ ಗೆದ್ದ ಭಾರತ, ಜೋಹಾನ್ಸ್ಬರ್ಗ್ನಲ್ಲಿ ಹೀನಾಯ ಸೋಲು ಕಂಡಿತ್ತು. ಇದರಿಂದ ಸರಣಿ ನಿರ್ಣಾಯಕ ರೂಪ ಪಡೆದುಕೊಂಡಿದ್ದ 3ನೇ ಟೆಸ್ಟ್ನಲ್ಲಿ ಭಾರತ ಮುಗ್ಗರಿಸಿತು. ಪರಿಣಾಮ 2-1ರ ಅಂತರದಲ್ಲಿ ಸೌತ್ ಆಫ್ರಿಕಾ ಸರಣಿ ಗೆದ್ದು ಬೀಗಿದೆ.
ಟೀಮ್ ಇಂಡಿಯಾಗೆ ವಿಲನ್ ಆದ ಪೀಟರ್ಸನ್
2 ವಿಕೆಟ್ ನಷ್ಟಕ್ಕೆ 101 ರನ್ಗಳೊಂದಿಗೆ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದುಕೊಂಡಿತು. 3ನೇ ದಿನದಾಟದಲ್ಲೇ ಕಾಡಿದ್ದ ಪೀಟರ್ಸನ್, ಭಾರತಕ್ಕೆ 4ನೇ ದಿನ ಕೂಡ ಅಕ್ಷರಶಃ ಕಂಟಕವಾಗಿ ಪರಿಣಮಿಸಿದ್ರು. 48 ರನ್ ಗಳೊಂದಿಗೆ ದಿನದಾಟ ಆರಂಭಿಸಿದ ಪಿಟರ್ಸನ್ ಆರಂಭಿಕ 2 ರನ್ ಗಳಿಸಿ 2ನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿದ್ರು.
ಪಿಟರ್ಸನ್-ಡುಸೆನ್ ಅರ್ಧಶತಕದ ಜೊತೆಯಾಟ, ಕ್ಯಾಚ್ ಬಿಟ್ಟ ಪೂಜಾರ..!
4ನೇ ದಿನದಾಟದಲ್ಲಿ ಕಣಕ್ಕಿಳಿದ ವಾನ್ ಡರ್ ಡುಸೇನ್ ಕೂಡ ಉತ್ತಮ ಆರಂಭ ಪಡೆದುಕೊಂಡ್ರು. ಕ್ರೀಸ್ ಕಚ್ಚಿ ನಿಂತು ದಕ್ಷಿಣ ಆಫ್ರಿಕಾವನ್ನ ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಪೀಟರ್ಸನ್ಗೆ ಡುಸೆನ್ ಅದ್ಭುತವಾಗಿ ಸಾತ್ ನೀಡಿದ್ರು. ಈ ಜೋಡಿ ಅರ್ಧಶತಕದ ಕಾಣಿಕೆ ನೀಡಿತು. ಪೀಟರ್ಸನ್ 59 ರನ್ ಗಳಿಸಿದ್ದಾಗ ಸ್ಲಿಪ್ನಲ್ಲಿದ್ದ ಪೂಜಾರ, ಕೈಗೆ ಬಂದ ಕ್ಯಾಚ್ ಕೈ ಚೆಲ್ಲಿದ್ರು. ಇದು ಭಾರತಕ್ಕೆ ಮತ್ತಷ್ಟು ದುಬಾರಿಯಾಯ್ತು.
ಗೆಲುವಿನ ದಡ ಸೇರಿಸಿದ ಟೆಂಬಾ ಬವುಮಾ-ಡುಸೆನ್
ಜೀವದಾನ ಪಡೆದು ಮತ್ತಷ್ಟು ಕಂಟಕವಾಗಿದ್ದ ಪೀಟರ್ಸನ್, ಕೊನೆಗೂ ಶಾರ್ದೂಲ್ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಗೆಲುವೆಂಬ ಕನಸು ಭಾರತದ ಕೈಜಾರಿ ಹೋಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 73 ರನ್ ಗಳಿಸಿದ್ದ ಈ ಆಪತ್ಬಾಂಧವ, 2ನೇ ಇನ್ನಿಂಗ್ಸ್ನಲ್ಲೂ 82 ರನ್ಗಳಿಸಿ ಜಯದ ರೂವಾರಿಯಾದ್ರು. ಆ ಬಳಿಕ ಒಂದಾದ ಟೆಂಬಾ ಬವುಮಾ ಮತ್ತು ಡುಸೆನ್, ಭಾರತದ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಿದ್ರು.
ಅಂತಿಮವಾಗಿ 63.3 ಓವರ್ಗಳಲ್ಲಿ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಗೆಲುವಿನ ಕೇಕೆ ಹಾಕಿತು. 7 ವಿಕೆಟ್ಗಳ ಗೆಲುವು ದಾಖಲಿಸಿದ ಸೌತ್ ಆಫ್ರಿಕಾ 2-1 ಅಂತರದಲ್ಲಿ ಸರಣಿಯನ್ನೋ ಜಯಿಸಿತು. ಭಾರತದ ಐತಿಹಾಸಿಕ ಸರಣಿ ಗೆಲುವು ಮತ್ತೆ ಕನಸಾಗೇ ಉಳಿದುಕೊಳ್ತು.