ಕೊರೊನಾ ಸಂಕಷ್ಟದ ವೇಳೆ ದೇಶದಲ್ಲಿ ಚರ್ಚೆಯಾಗ್ತಾ ಇರುವ ಮತ್ತೊಂದು ವಿಚಾರ ಅಂದ್ರೆ ಅದು ಪೆಟ್ರೋಲ್-ಡಿಸೇಲ್ ರೇಟ್ ಹೆಚ್ಚಳದ ಬಗ್ಗೆ.

ಪೆಟ್ರೋಲ್, ಡೀಸಲ್ ಬೆಲೆ ಸಿಕ್ಕಾಪಟ್ಟೆ ಏರಿಕೆ ಆಗಿರೋದು ದೇಶವಾಸಿಗಳ ಸಂಕಷ್ಟಕ್ಕೆ ಕಾರಣವಾಗ್ತಿದೆ. ಇಂಧನ ದರ ಏರಿಕೆಯಿಂದ ಜನ ಸಾಮಾನ್ಯರಿಗೆ ಹೊರೆಯಾಗ್ತಿದೆ. ಪೆಟ್ರೋಲ್ ಡೀಸಲ್ ದರ ಹೆಚ್ಚಳಕ್ಕೆ ಎಲ್ಲಾ ಕಡೆ ಆಕ್ರೋಶ ಹೆಚ್ಚಾಗ್ತಾ ಇದೆ. ಇವತ್ತು ನಾವು ಹೇಳೋಕೆ ಹೊರಟಿರೋದು ಪೆಟ್ರೋಲ್, ಡೀಸೆಲ್​​ಗೆ ಸಂಬಂಧಿಸಿದ ಇನ್ನೊಂದು ಇಂಟರೆಸ್ಟಿಂಗ್ ಸ್ಟೋರಿ. ನಮ್ಮ ನೆರೆಯ ರಾಷ್ಟ್ರಗಳಲ್ಲಿ ಪೆಟ್ರೋಲ್ ರೇಟ್ ಇಲ್ಲಿಗಿಂತ ತೀರ ಕಡಿಮೆ ಇದೆ. ಸೋಷಿಯಲ್ ಮೀಡಿಯಾಗಳಲ್ಲಿ ಇದರದ್ದೇ ಚರ್ಚೆ. ಪಾಕಿಸ್ತಾನದಲ್ಲಿ 50 ರೂಪಾಯಿಗೆ ಲೀಟರ್ ಪೆಟ್ರೋಲ್ ಸಿಗ್ತಾ ಇರಬೇಕಾದರೆ ಭಾರತದಲ್ಲೇಕೆ ಡಬಲ್ ರೇಟ್ ಅಂತ ಪ್ರಶ್ನಿಸ್ತಿದಾರೆ. ಹಾಗಾದ್ರೆ ಎಲ್ಲೆಲ್ಲಿ ಎಷ್ಟೆಷ್ಟು ರೇಟ್ ಇದೆ? ಭಾರತದಲ್ಲೇಕೆ ರೇಟ್ ಜಾಸ್ತಿ ಇದೆ?

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ದರ ಬರೋಬ್ಬರಿ 100 ರೂಪಾಯಿ ಗಡಿ ದಾಟಿ ಹೊಸ ದಾಖಲೆ ನಿರ್ಮಿಸಿದೆ. ಇನ್ನು ದೇಶದ ಬಹುತೇಕ ಕಡೆ ಪೆಟ್ರೋಲ್ ದರ 90 ರೂಪಾಯಿಗಿಂತ ಹೆಚ್ಚಿದೆ. ಡೀಸೆಲ್ ದರ ಕೂಡ 90 ರೂಪಾಯಿ ಗಡಿ ದಾಟಿದ್ದು 100 ರೂಪಾಯಿ ಆಸುಪಾಸಿನಲ್ಲಿದೆ. ಇದು ದೇಶವಾಸಿಗಳಿಗೆ ದೊಡ್ಡ ಹೊರೆಯಾಗಿದೆ. ಇಂಡಿಯಾದಲ್ಲೇ ಇಷ್ಟೊಂದು ಬೆಲೆ ಏರಿಕೆ ಆಗಿರಬೇಕಾದರೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಇಂಧನ ದರ ಸಿಕ್ಕಾಪಟ್ಟೆ ಏರಿಕೆ ಆಗಿರಬೇಕು ಅಂತ ಅಂದುಕೊಂಡ್ರೆ ಅದು ತಪ್ಪು. ವಿಶ್ವದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಿರುವ ರಾಷ್ಟ್ರಗಳಲ್ಲಿ ಭಾರತವೂ ಮೊದಲ ಸಾಲಿನಲ್ಲಿ ನಿಂತಿದೆ.

ಭಾರತದ ನೆರೆಯ ರಾಷ್ಟ್ರಗಳಲ್ಲಿ ಪೆಟ್ರೋಲ್ ರೇಟ್ ತೀರಾ ಕಡಿಮೆ
ನೆರೆ ರಾಷ್ಟ್ರದಲ್ಲಿ ಹೆಚ್ಚಾಗದಿರುವ ದರ ಇಲ್ಲಿ ಮಾತ್ರವೇ ಯಾಕೆ?
ಪಾಕಿಸ್ತಾನ, ಬಾಂಗ್ಲಾ, ಬರ್ಮಾದಲ್ಲಿ ಪೆಟ್ರೋಲ್ ರೇಟ್ ಎಷ್ಟಿದೆ?

ವಿಚಿತ್ರ ಅನಿಸಿದರೂ ಇದು ಸತ್ಯ. ಇಂಡಿಯಾಗಿಂತ ಹಿಂದುಳಿದ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅರ್ಧಕರ್ಧ ಕಡಿಮೆ ಇದೆ. ನೆರೆಯ ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ಭೂತಾನ್, ಅಫ್ಘಾನಿಸ್ತಾನ ಹಾಗೂ ನೇಪಾಳಗಲ್ಲಿ ಭಾರತಕ್ಕಿಂತ ಅರ್ಧಕರ್ಧ ರೇಟಿಗೆ ಪೆಟ್ರೋಲ್ ಮಾರಾಟ ಆಗ್ತಾ ಇದೆ.  ಇಂಡೋನೇಷ್ಯಾ, ವಿಯಟ್ನಾಂ, ಕಾಂಬೋಡಿಯಾದಲ್ಲಿ ಕಡಿಮೆ ದರದಲ್ಲಿ ಪೆಟ್ರೋಲ್ ಸಿಗ್ತಾ ಇದೆ. ಯಾವ್ಯಾವ ದೇಶದಲ್ಲಿ ಎಷ್ಟೆಷ್ಟು ರೇಟ್ ಇದೆ ಅನ್ನೋದನ್ನು ನೋಡೋದಾದ್ರೆ;

ಎಲ್ಲೆಲ್ಲಿ ಎಷ್ಟೆಷ್ಟು ರೇಟ್?

 • ಪಾಕಿಸ್ತಾನ -51 ರೂಪಾಯಿ
 • ಅಫ್ಘಾನಿಸ್ತಾನ -44 ರೂಪಾಯಿ
 • ಬರ್ಮಾ -50 ರೂಪಾಯಿ
 • ಶ್ರೀಲಂಕಾ -59 ರೂಪಾಯಿ
 • ಬಾಂಗ್ಲಾದೇಶ -76 ರೂಪಾಯಿ
 • ನೇಪಾಳ -78 ರೂಪಾಯಿ
 • ಇಂಡೋನೇಷ್ಯಾ -54 ರೂಪಾಯಿ
 • ವಿಯಟ್ನಾಂ -62 ರೂಪಾಯಿ
 • ಕಾಂಬೋಡಿಯಾ -75 ರೂಪಾಯಿ

ಪಾಕಿಸ್ತಾನದಲ್ಲಿ ಭಾರತದ ರೂಪಾಯಿ ಮೌಲ್ಯದ ಪ್ರಕಾರ 51 ರೂಪಾಯಿಗಳಿಗೆ ಪೆಟ್ರೋಲ್ ಸಿಗ್ತಾ ಇದೆ. ಇನ್ನು ಆಪ್ಘಾನಿಸ್ತಾನದಲ್ಲಿ 44 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಾಟ ಆಗ್ತಾ ಇದೆ. ಬರ್ಮಾದಲ್ಲಿ 50 ರೂಪಾಯಿಗೆ ಪೆಟ್ರೋಲ್ ಸಿಗ್ತಾ ಇದೆ. ಶ್ರೀಲಂಕಾದಲ್ಲಿ 59 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ದೊರೆಯುತ್ತಿದೆ. ಬಾಂಗ್ಲಾದೇಶದಲ್ಲಿ 76 ರೂಪಾಯಿಗಳಿಗೆ, ನೇಪಾಳದಲ್ಲಿ 78 ರೂಪಾಯಿ, ಇಂಡೋನೇಷ್ಯಾದಲ್ಲಿ ಭಾರತದ ರೂಪಾಯಿ ಮೌಲ್ಯದಂತೆ 54 ರೂಪಾಯಿ ಮತ್ತು ವಿಯಟ್ನಾಂ ನಲ್ಲಿ 62 ರೂಪಾಯಿ ಮತ್ತು ಕಾಂಬೋಡಿಯಾದಲ್ಲಿ 75 ರೂಪಾಯಿಗೆ ಪೆಟ್ರೋಲ್ ಸಿಗ್ತಾ ಇದೆ.

ಇದೇನಪ್ಪಾ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ, ಶ್ರೀಲಂಕಾ, ನೇಪಾಳಕ್ಕಿಂತ ಭಾರತದಲ್ಲಿ ಪೆಟ್ರೋಲ್ ರೇಟ್ ಹೆಚ್ಚಿದೆ ಅಂತ ನಿಮಗೆ ಅಚ್ಚರಿ ಆಗಬಹುದು. ಆದರೆ ಇದು ಸತ್ಯ ಇದಕ್ಕೆ ನಾನಾ ಕಾರಣಗಳಿವೆ.

ಭಾರತದಲ್ಲಿ ಮಾತ್ರ ಪೆಟ್ರೋಲ್ ದರ ಏರಿಕೆ ಯಾಕೆ ಗೊತ್ತಾ?
ವಿಶ್ವದ ಎಲ್ಲಾ ರಾಷ್ಟ್ರಗಳ ಪೆಟ್ರೋಲಿಯಂ ಮೂಲವೂ ಹೆಚ್ಚು ಕಡಿಮೆ ಒಂದೇ ಕಡೆ ಇದೆ. ಕೊಲ್ಲಿ ರಾಷ್ಟ್ರಗಳಿಂದಲೇ ಎಲ್ಲಾ ಕಡೆ ತೈಲ ಪೂರೈಕೆ ಆಗುತ್ತೆ. ಆಯಾ ರಾಷ್ಟ್ರಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಅಲ್ಲಿನ ಬೇಡಿಕೆಗೆ ತಕ್ಕಷ್ಟು ಇಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳ ಕಥೆ ಇದೇ ಆಗಿದೆ. ಇದರಿಂದ ಹೆಚ್ಚು ಕಡಿಮೆ ಎಲ್ಲಾ ದೇಶಗಳು ಅಂತಾರಾಷ್ಟ್ರೀಯ ತೈಲ ಒಕ್ಕೂಟ ನಿರ್ಧರಿಸುವ ಬೆಲೆಯನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಹೀಗಿದ್ದಾಗ ಈ ಪೆಟ್ರೋಲ್, ಡೀಸೆಲ್ ಬೇಲೆ ಇಷ್ಟೊಂದು ವ್ಯತ್ಯಾಸ ಆಗುತ್ತಾ ಅಂತ ಕೇಳಿದ್ರೆ.. ಹೌದು. ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಆಯಾ ರಾಷ್ಟ್ರಗಳ ಬೇಡಿಕೆ ಮತ್ತು ಬಳಕೆಯನ್ನು ಆಧರಿಸಿದೆ. ಭಾರತ ಪ್ರಗತಿಶೀಲ ರಾಷ್ಟ್ರ. ಇಲ್ಲಿರುವ ಜನಸಂಖ್ಯೆ ಮತ್ತು ಇಲ್ಲಿನ ಆರ್ಥಿಕತೆಯ ಬೆಳವಣಿಗೆಗೆ ಹೆಚ್ಚಿನ ತೈಲ ಅನಿವಾರ್ಯ. ಹೀಗಾಗಿ ವಿಶ್ವದಲ್ಲಿ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ದೇಶದಲ್ಲಿ ಭಾರತ ಮುಂಚೂಣಿಯಲ್ಲಿದೆ. ಇದೆಲ್ಲ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸಲ್ ರೇಟ್ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲೇಕೆ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗಿದೆ ಅನ್ನೋದಕ್ಕೆ ನಿಖರವಾದ ಕಾರಣಗಳು ಇವು;

 • ಜನಸಂಖ್ಯೆಗೆ ಸರಾಸರಿ ಕೊಳ್ಳುವ ಸಾಮರ್ಥ್ಯದ ಲೆಕ್ಕಾಚಾರ
 • ಕೇಂದ್ರ, ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯೂ ಕಾರಣ
 • ಪೂರೈಕೆ ಮತ್ತು ಬೇಡಿಕೆಗಳ ನಡುವಿನ ವ್ಯತ್ಯಾಸವೂ ಕಾರಣ
 • ತೈಲ ಉತ್ಪಾದಕ ರಾಷ್ಟ್ರಗಳಲ್ಲಿನ ಉತ್ಪಾದಕತೆ ಕಡಿಮೆಯಾಗಿದ್ದು
 • ಹೆಚ್ಚು ತೈಲ ಖರೀದಿಸುವ ರಾಷ್ಟ್ರಗಳಲ್ಲಿ ಇಂಡಿಯಾಕ್ಕೆ 3ನೇ ಸ್ಥಾನ
 • 2014ರಿಂದ ತೈಲ ಬಳಕೆಯ ಪ್ರಮಾಣದಲ್ಲಿ ಶೇ.29ರಷ್ಟು ಹೆಚ್ಚಳ

ಜನಸಂಖ್ಯೆಗೆ ಸರಾಸರಿ ಕೊಳ್ಳುವ ಸಾಮರ್ಥ್ಯದ ಲೆಕ್ಕಾಚಾರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಮತ್ತೊಂದು ಪ್ರಮುಖ ಮತ್ತು ಹೆಚ್ಚು ಚರ್ಚೆಯಾಗುತ್ತಿರುವ ವಿಚಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಹೆಚ್ಚಿನ ತೆರಿಗೆ. ಪೂರೈಕೆ ಮತ್ತು ಬೇಡಿಕೆಗಳ ನಡುವಿನ ವ್ಯತ್ಯಾಸವೂ ಭಾರತದಂತಹ ದೊಡ್ಡ ದೇಶದಲ್ಲಿ ದರ ಏರುಪೇರಿಗೆ ಕಾರಣವಾಗುತ್ತದೆ. ತೈಲ ಉತ್ಪಾದಕ ರಾಷ್ಟ್ರಗಳಲ್ಲಿನ ಉತ್ಪಾದಕತೆ ಶೇಕಡಾ 20ರಷ್ಟು ಕಡಿಮೆಯಾಗಿದ್ದು ದರದ ಮೇಲೆ ಪರಿಣಾಮ ಬೀರಿದೆ. ಇನ್ನು ಹೆಚ್ಚು ತೈಲ ಖರೀದಿಸುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಅಂದರೆ ಉತ್ಪಾದಕತೆ ಕಡಿತಗೊಳಿಸಿದ್ದು ಇಂಡಿಯಾದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇನ್ನು 2014ರಿಂದ ಭಾರತದಲ್ಲಿ ತೈಲ ಬಳಕೆಯ ಪ್ರಮಾಣದ ಶೇಕಡಾ 29ರಷ್ಟು ಹೆಚ್ಚಳವಾಗಿದೆ. ಇವೆಲ್ಲವೂ ಪೆಟ್ರೋಲ್, ಡೀಸಲ್ ಗಗನಮುಖಿಯಾಗಲು ಕಾರಣವಾಗಿದೆ.

ಇನ್ನು ಭಾರತಕ್ಕಿಂತ ಹೆಚ್ಚು ದರಕ್ಕೆ ಪೆಟ್ರೋಲ್, ಡಿಸೇಲ್ ಇನ್ಯಾವ ದೇಶದಲ್ಲೂ ಮಾರಾಟ ಆಗ್ತಾ ಇಲ್ವಾ ಅಂತ ಕೇಳಿದ್ರೆ ಖಂಡಿತ ಇದೆ. ಭಾರತಕ್ಕಿಂತ ಹೆಚ್ಚಿನ ದರಕ್ಕೆ ಪೆಟ್ರೋಲ್ ಮಾರಾಟವಾಗ್ತಾ ಇರುವ ಹಲವು ದೇಶಗಳು ವಿಶ್ವದಲ್ಲಿವೆ. ಆದರೆ, ಅವೆಲ್ಲ ಮುಂದುವರೆದ ದೇಶಗಳು. ಅಮೆರಿಕಾದಂತಹ ದೇಶ ತಮ್ಮದೇ ಆದ ಪೆಟ್ರೋಲಿಯಂ ಮೂಲಗಳನ್ನು ಸೃಷ್ಟಿಸಿಕೊಂಡು ಬಿಟ್ಟಿವೆ. ಕೊಲ್ಲಿ ರಾಷ್ಟ್ರಗಳಲ್ಲಿ ಕಡಿಮೆ ದರಕ್ಕೆ ಪೆಟ್ರೋಲ್ ಸಿಗುವಂತೆ ಅಮೆರಿಕಾ ವ್ಯವಸ್ಥೆ ಮಾಡಿಕೊಂಡಿದೆ. ಭದ್ರತೆಯ ಕಾರಣಕ್ಕೋ, ನೆರೆಯ ರಾಷ್ಟ್ರಗಳಿಂದ ರಕ್ಷಣೆ ಮಾಡಿಕೊಳ್ಳುವ ಕಾರಣಕ್ಕೋ ಕೆಲವು ಪೆಟ್ರೋಲಿಯಂ ಮೂಲ ಹೊಂದಿರುವ ದೇಶಗಳು ಅಮೆರಿಕದ ಮರ್ಜಿಯಲ್ಲಿವೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಅಮೆರಿಕಾ ಕಡಿಮೆ ದರದಲ್ಲಿ ತೈಲ ತರಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸ್ವಾವಲಂಬಿಯಾಗುವತ್ತ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದು ಕೂಡ ಇಲ್ಲಿ ದರ ಸ್ಥಿರವಾಗಿರಲು ಕಾರಣವಾಗಿದೆ.

ಯಾವ್ಯಾವ ದೇಶದಲ್ಲಿ ದರ ಹೆಚ್ಚಿದೆ?

 • ಸ್ಪೇನ್ -110 ರೂಪಾಯಿ
 • ಸಿಂಗಪೂರ್ -120 ರೂಪಾಯಿ
 • ಬ್ರಿಟನ್ -125 ರೂಪಾಯಿ
 • ಇಟಲಿ -130 ರೂಪಾಯಿ
 • ಇಸ್ರೇಲ್ -125 ರೂಪಾಯಿ
 • ನೆದರ್ ಲ್ಯಾಂಡ್ -150 ರೂಪಾಯಿ
 • ಹಾಂಕಾಂಗ್ -175 ರೂಪಾಯಿ

ಭಾರತೀಯ ರೂಪಾಯಿ ಮೌಲ್ಯದಲ್ಲಿ ನಾವು ನಿಮ್ಮ ಮುಂದೆ ಯಾವ್ಯಾವ ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚಿನ ದರದಲ್ಲಿ ಪೆಟ್ರೋಲ್ ಮಾರಾಟ ಆಗ್ತಾ ಇದೆ ಅನ್ನೋದನ್ನು ಹೇಳ್ತೀವಿ. ಸ್ಪೇನ್ ನಲ್ಲಿ 110 ರೂಪಾಯಿ ತಲುಪಿದೆ ಪೆಟ್ರೋಲ್ ದರ. ಸಿಂಗಪೂರ್ ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 120 ಕೂಪಾಯಿ. ಬ್ರಿಟನ್ ನಲ್ಲಿ 125 ರೂಪಾಯಿಗೆ ಪೆಟ್ರೋಲ್ ಸಿಗ್ತಾ ಇದೆ. ಇಟಲಿಯಲ್ಲಿ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ ಲೀಟರ್ ಪೆಟ್ರೋಲ್ ರೇಟ್ 130 ರೂಪಾಯಿಗಳಷ್ಟಾಗುತ್ತದೆ. ಇನ್ನು ಇಸ್ರೇಲ್ ನಲ್ಲಿ 125 ರೂಪಾಯಿಗೆ ಪೆಟ್ರೋಲ್ ಮಾರಾಟ ಆಗ್ತಾ ಇದೆ. ನೆದರ್ ಲ್ಯಾಂಡ್ ನಲ್ಲಿ 150 ಮತ್ತು ಹಾಂಕಾಂಗ್ ನಲ್ಲಿ ಅತಿ ಹೆಚ್ಚು ಅಂದ್ರೆ 175 ರೂಪಾಯಿಗಳಿಗೆ ಲೀಟರ್ ಪೆಟ್ರೋಲ್ ಮಾರಾಟ ಆಗ್ತಾ ಇದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ದೇಶದಲ್ಲಿ ಚರ್ಚೆಯಾಗುತ್ತಿರುವ ವಿಚಾರ ಅಂದ್ರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆ ವಿಚಾರ. ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹೆಚ್ಚಿನ ತೆರಿಗೆಯಿಂದಾಗಿ ಮೂಲ ದರಕ್ಕಿಂತ ಎರಡು ಪಟ್ಟು ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ, ಸರ್ಕಾರದ ಬೊಕ್ಕಸಕ್ಕೆ ಪ್ರಮುಖ ಆದಾಯದ ಮೂಲವಾಗಿರುವ ಈ ತೆರಿಗೆ ಹಣ ದೇಶದ ಅಭಿವೃದ್ಧಿ ಮತ್ತು ನಿರ್ವಹಣೆ ವಿಚಾರದಲ್ಲಿ ಬಹಳ ಮುಖ್ಯವಾಗುತ್ತದೆ.

ಪೆಟ್ರೋಲ್ ಶತಕದ ಬೆನ್ನಲ್ಲೇ ಶತಕ ಬಾರಿಸಿದ ಡಿಸೇಲ್ ದರ
ಪೆಟ್ರೋಲ್ ಬೆಲೆ ಮೊದಲು ದಾಖಲೆ ಮಟ್ಟ ತಲುಪಿದಲ್ಲೇ ಹೆಚ್ಚಳ
ರಾಜಸ್ಥಾನದ ಶ್ರೀಗಂಗಾನಗರದಲ್ಲಿ 100 ರೂ.ಗಡಿ ದಾಟಿದ ಡಿಸೇಲ್

ಮತ್ತೊಂದು ಶಾಕಿಂಗ್ ನ್ಯೂಸ್ ಅಂದ್ರೆ ದೇಶದಲ್ಲಿ ಇದೀಗ ಡಿಸೇಲ್ ರೇಟ್ ಕೂಡ ನೂರರ ಗಡಿ ದಾಟಿ ಬಿಟ್ಟಿದೆ. ಎಲ್ಲಿ ಮೊದಲು ಪೆಟ್ರೋಲ್ ಬೆಲೆ ಶತಕ ಬಾರಿಸಿತ್ತೋ ಅದೇ ನಗರದಲ್ಲಿ ಈಗ ಡಿಸೇಲ್ ದರ ಕೂಡ ಶತಕ ಬಾರಿಸಿದೆ. ರಾಜಸ್ಥಾನದ ಗಂಗಾನಗರದಲ್ಲಿ ಡಿಸೇಲ್ ದರ 100.05 ರೂಪಾಯಿಗೆ ತಲುಪಿದೆ. ಇಲ್ಲಿ ಪೆಟ್ರೋಲ್ ಬೆಲೆ 107 ರೂಪಾಯಿ ತಲುಪಿದೆ. ದೇಶದ ವಿವಿಧ ಭಾಗಗಳಲ್ಲಿ ಡಿಸೇಲ್ ಬೆಲೆ 90ರ ಗಡಿ ದಾಟಿ ಬಿಟ್ಟಿದೆ. ಅನೇಕ ಕಡೆ ಡಿಸೇಲ್ ಬೆಲೆ ಕೂಡ 100 ರೂಪಾಯಿಗಳ ಆಸು ಪಾಸಿನಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ಎರಡರ ದರವೂ ಹೆಚ್ಚಾಗಿದ್ದು ಸರಕು ಸಾಗಣೆ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಸಹಜವಾಗಿ ಏರಿಕೆಯಾಗಲಿದೆ.

ತೈಲಕ್ಕಾಗಿ ವಿದೇಶಿ ಅವಲಂಬನೆ ಹೆಚ್ಚಿರೋದೇ ಪೆಟ್ರೋಲ್ ಮತ್ತು ಡಿಸೇಲ್ ದರದ ಮೇಲಿನ ಹಿಡಿತ ಸಿಗ್ತಾ ಇಲ್ಲ. ತೈಲ ಪೂರೈಕೆ ರಾಷ್ಟ್ರಗಳು ತೆಗೆದುಕೊಳ್ಳುವ ನಿರ್ಣಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಮತ್ತು ಪೂರೈಕೆಯಲ್ಲಾಗುವ ವ್ಯತ್ಯಾಸಗಳು ಕೂಡ ಬೆಲೆಯ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ತೈಲ ಉತ್ಪಾದನೆ ವಲಯದಲ್ಲಿ ಹೆಚ್ಚೆಚ್ಚು ಸ್ವಾವಲಂಬಿಗಳಾಗಲೇಬೇಕಾಗಿದೆ. ಇಲ್ಲವಾದರೆ ಪರ್ಯಾಯ ಇಂಧನ ಮೂಲದ ಬಳಕೆಯನ್ನು ಹೆಚ್ಚಿಸುವ ತಂತ್ರಜ್ಞಾನಕ್ಕೆ ಪ್ರೋತ್ಸಾಹ ಕೊಡಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಬಳಕೆ ಕೂಡ ಹೆಚ್ಚಾಗ್ತಾ ಇರೋದ್ರಿಂದ ಸಹಜವಾಗಿ ಹೆಚ್ಚಿನ ಪ್ರಮಾಣದ ತೆೈಲವನ್ನು ಆಮದು ಮಾಡಿಕೊಳ್ಳಬೇಕಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಹೆಚ್ಚಳವಾದಂತೆ ದೇಶಿಯ ಮಾರುಕಟ್ಟೆಯಲ್ಲೂ ಪೆಟ್ರೋಲ್ ಮತ್ತು ಡಿಸೆಲ್ ಬೆಲೆಗಳು ಹೆಚ್ಚಳವಾಗುವುದು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕಡಿಮೆ ಆದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗುವುದು ಸಾಮಾನ್ಯ ವಿಚಾರ. ಆದರೆ, ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಏರಿಕೆ ಆಗದೇ ಇದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ದಿನ ಏರಿಕೆಯತ್ತ ಸಾಗುತ್ತಿದೆ.ಇದಕ್ಕೆ ಕಾರಣ ಸರ್ಕಾರ ವಿಧಿಸಿರುವ ತೆರಿಗೆ ಮತ್ತು ಸಾಗಣೆ ವೆಚ್ಚ. ಇದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ರೀತಿ ನಿಲುವು ತಾಳುತ್ತವೆ ಅನ್ನೋದು ಕೂಡ ಮುಖ್ಯವಾಗುತ್ತದೆ.

ಪೆಟ್ರೋಲ್, ಡಿಸೇಲ್ ದರ ನಿರಂತರ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿಮೆ ಮಾಡಿದರೆ ಸ್ವಲ್ಪ ಮಟ್ಟಿಗೆ ದರ ನಿಯಂತ್ರಣ ಆಗಬಹುದು. ಇಲ್ಲವಾದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗದ ಹೊರತು ಇಲ್ಲಿ ದರ ಇಳಿಯಲ್ಲ.

The post ಭಾರತದಲ್ಲಿ ಇಂಧನ ಬೆಲೆ ಏರುತ್ತಿರೋದು ಯಾಕೆ? ನೆರೆ ರಾಷ್ಟ್ರಗಳಲ್ಲಿ ರೇಟ್​ ಎಷ್ಟಿದೆ? appeared first on News First Kannada.

Source: newsfirstlive.com

Source link