ಹೈದರಾಬಾದ್: ಮೃಗಾಲಯದಲ್ಲಿನ 8 ಸಿಂಹಗಳಲ್ಲಿ ಕೊರೊನಾ ಸೋಂಕು ತಗುಲಿರೋದು ವರದಿಯಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಸಿಂಹಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿಸಿದೆ.

ಹೈದರಾಬಾದ್​ನ ನೆಹರು ಜೂಲಾಜಿಕಲ್ ಪಾರ್ಕ್​​ನ 8 ಏಷ್ಯಾಟಿಕ್ ಸಿಂಹಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಇದ್ದಕ್ಕಿದ್ದಂತೆ ಸಿಂಹಗಳಲ್ಲಿ ಕೆಲ ಸಿಂಪ್ಟಮ್ಸ್​ ಕಂಡುಬಂದಿತ್ತು. ಅವುಗಳ ಮೂಗಿನಿಂದ ದ್ರವ ಸುರಿಯುತ್ತಿತ್ತು. ಹೀಗಾಗಿ ಏಪ್ರಿಲ್ 19ರಂದು ಮೃಗಾಲಯದ 4 ಹೆಣ್ಣು ಮತ್ತು 4 ಗಂಡು ಸಿಂಹಗಳ ಮಾದರಿಯನ್ನು ಸಿಸಿಎಂಬಿ (Centre for Cellular and Molecular Biology)ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.

ಆರ್​​ಟಿಸಿಪಿಆರ್ ಪರೀಕ್ಷೆಯಲ್ಲಿ ಸಿಂಹಗಳಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಮನುಷ್ಯರಿಂದ ಸಿಂಹಗಳಿಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಮೃಗಾಲಯದ ಇತರೆ ಪ್ರಾಣಿಗಳಿಗೆ ರೋಗ ಹರಡುವುದನ್ನು ತಡೆಗಟ್ಟಲು ಸದ್ಯ ಸೋಂಕಿತ ಸಿಂಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

ಇನ್ನು ಪರಿಸರ ಮತ್ತು ಅರಣ್ಯ ಸಚಿವಾಲಯ ನಿನ್ನೆ ಈ ಕುರಿತು ಪ್ರತಿಕ್ರಿಯಿಸಿದ್ದು, ಮಾನವರು ಪ್ರಾಣಿಗಳಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಪ್ರಾಣಿಗಳು  ಮನುಷ್ಯರಿಗೆ ಕೊರೊನಾಸೋಂಕು ಹರಡಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದೆ.

The post ಭಾರತದಲ್ಲಿ ಇದೇ ಮೊದಲು: ಮೃಗಾಲಯದ 8 ಸಿಂಹಗಳಿಗೆ ಕೊರೊನಾ appeared first on News First Kannada.

Source: newsfirstlive.com

Source link