ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ವಿಶ್ವ ದಾಖಲೆ ಬರೆದಿದೆ. ನಿನ್ನೆಯಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ಲಸಿಕೆ ವಿತರಣೆ ಆರಂಭಿಸಲಾಗಿದೆ. ಕಳೆದ ರಾತ್ರಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿರುವ ಮಾಹಿತಿ ಪ್ರಕಾರ ನಿನ್ನೆ ಮೊದಲ ದಿನ ಬರೋಬ್ಬರಿ 80 ಲಕ್ಷದ 95 ಸಾವಿರದ 314 ಮಂದಿಗೆ ವ್ಯಾಕ್ಸಿನೇಷನ್‌ ಆಗಿದೆ.

ಇದು ಇಡೀ ವಿಶ್ವದಲ್ಲೇ ಒಂದೇ ದಿನ ನಡೆದಿರೋ ಅತೀ ಹೆಚ್ಚು ಪ್ರಮಾಣದ ವ್ಯಾಕ್ಸಿನೇಷನ್​ ಆಗಿದೆ. ಈ ಮೂಲಕ ಭಾರತ ನಿನ್ನೆ ಒಂದೇ ದಿನ ಸರಿಸುಮಾರು ಇಸ್ರೇಲ್​ನ ಜನಸಂಖ್ಯೆ ಅಥವಾ ನ್ಯೂಜಿಲ್ಯಾಂಡ್​​ನ ಜನಸಂಖ್ಯೆಯ ದುಪ್ಪಟ್ಟು ಜನರಿಗೆ ಲಸಿಕೆ ನೀಡಿದಂತಾಗಿದೆ.

ಈ ಪೈಕಿ ಮಧ್ಯಪ್ರದೇಶ ಮೊದಲನೇ ಸ್ಥಾನದಲ್ಲಿದ್ದು, 15 ಲಕ್ಷದ 42 ಸಾವಿರದ 632 ಜನರಿಗೆ ವ್ಯಾಕ್ಸಿನ್‌ ನೀಡಲಾಗಿದೆ. ಇನ್ನು ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು ನಮ್ಮ ರಾಜ್ಯದಲ್ಲಿ ನಿನ್ನೆ ಒಟ್ಟು 10 ಲಕ್ಷದ 67 ಸಾವಿರದ 734 ಮಂದಿಗೆ ಲಸಿಕೆ ಹಾಕಲಾಗಿದೆ.

ಇನ್ನು, ಅತೀ ಹೆಚ್ಚು ಲಸಿಕೆ ನೀಡಲಾದ ಜಿಲ್ಲೆಗಳಲ್ಲಿ ಪೈಕಿ ಬೆಂಗಳೂರು ನಗರ ಜಿಲ್ಲೆ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನಿನ್ನೆ ರಾತ್ರಿ 7 ಗಂಟೆವರೆಗೆ ಬೆಂಗಳೂರು ನಗರದಲ್ಲಿ 2,09,256 ಜನರಿಗೆ ಲಸಿಕೆ ಹಾಕಲಾಗಿದೆ. ಇಂದೋರ್​ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ ನಿನ್ನೆ 2,01,339 ಡೋಸ್​ ಲಸಿಕೆ ವಿತರಣೆಯಾಗಿದೆ. ಇನ್ನು ಆರಂಭದಿಂದ ಈವರೆಗೆ ಒಟ್ಟಾರೆ ಬೆಂಗಳೂರು ನಗರದಲ್ಲಿ 52,88,684 ಮಂದಿಗೆ ಲಸಿಕೆ ನೀಡಲಾಗಿದೆ ಅಂತ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

 

‘ವೆಲ್ ಡನ್ ಇಂಡಿಯಾ’ ಎಂದ ಮೋದಿ
ಈ ದಾಖಲೆ ಬಗ್ಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಇಂದಿನ ಲಸಿಕೆ ಅಭಿಯಾನದ ಸಂಖ್ಯೆ ದಾಖಲೆಯನ್ನ ಮುರಿದಿರುವುದು ಸಂತಸ ತಂದಿದೆ. ಕೋವಿಡ್ 19 ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ. ಲಸಿಕೆ ಪಡೆದ ಎಲ್ಲಾ ಜನರಿಗೂ ಹಾಗೂ ಹಲವು ನಾಗರಿಕರಿಗೆ ಲಸಿಕೆ ನೀಡುತ್ತಿರುವ ಫ್ರಂಟ್ ಲೈನ್‌ ವಾರಿಯರ್ಸ್‌ಗಳಿಗೆ ಅಭಿನಂದನೆಗಳು. ವೆಲ್ ಡನ್ ಇಂಡಿಯಾ ಅಂತ ಟ್ವೀಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ನಿನ್ನೆ ಎಲ್ಲೆಲ್ಲಿ ಎಷ್ಟೆಷ್ಟು ವ್ಯಾಕ್ಸಿನೇಷನ್?

  • ಕರ್ನಾಟಕ -10,67,734
  • ಮಧ್ಯಪ್ರದೇಶ -1542632
  • ದೆಹಲಿ -76216
  • ಅಂಡಮಾನ್ ನಿಕೋಬಾರ್ 783
  • ಆಂಧ್ರಪ್ರದೇಶ -47328
  • ಅಸ್ಸಾಂ -330707
  • ಬಿಹಾರ -470352
  • ತಮಿಳುನಾಡು -328321
  • ಉತ್ತರಪ್ರದೇಶ -674546
  • ಪಶ್ಚಿಮ ಬಂಗಾಳ -317991

The post ಭಾರತದಲ್ಲಿ ನಿನ್ನೆಯ ವ್ಯಾಕ್ಸಿನೇಷನ್ ವಿಶ್ವ ದಾಖಲೆ, ಬೆಂಗಳೂರು ನಂಬರ್-1 appeared first on News First Kannada.

Source: newsfirstlive.com

Source link