ಭಾರತದಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಹೆಚ್ಚು: ರಾಷ್ಟ್ರೀಯ ಮಾದರಿ ಸಮೀಕ್ಷೆ ವರದಿ ಮಾಹಿತಿ | National Sample Survey says More Women in India than Men


ಭಾರತದಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಹೆಚ್ಚು: ರಾಷ್ಟ್ರೀಯ ಮಾದರಿ ಸಮೀಕ್ಷೆ ವರದಿ ಮಾಹಿತಿ

ಪುರುಷ-ಮಹಿಳೆಯ ಜನಸಂಖ್ಯೆ ಅನುಪಾತ ಆರೋಗ್ಯಕರವಾಗಿ ಕಂಡುಬಂದಿದೆ.

ಭಾರತದಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಕಡಿಮೆಯೇ ಇತ್ತು. ಆದರೆ, ಇದೇ ಮೊದಲ ಬಾರಿಗೆ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. 1000 ಪುರುಷರಿಗೆ 1020 ಮಹಿಳೆಯರು ಭಾರತದಲ್ಲಿದ್ದಾರೆ ಎಂಬ ಅಂಶ ಸಮೀಕ್ಷೆಯಿಂದ ಬಹಿರಂಗವಾಗಿದೆ. ಆದರೆ, ಈ ಸಮೀಕ್ಷೆಯ ಅಂಕಿಅಂಶಗಳು ಜನಗಣತಿಯಿಂದ ಖಚಿತವಾಗುವುದು ಇನ್ನೂ ಬಾಕಿಯಿದೆ. ಭಾರತದಲ್ಲಿ ಈಗ ಪ್ರತಿ 1000 ಪುರುಷರಿಗೆ 1020 ಮಹಿಳೆಯರು ಇದ್ದಾರೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಅಂಕಿಅಂಶಗಳಲ್ಲಿ ದೃಢಪಟ್ಟಿದೆ. ಲಿಂಗಾನುಪಾತದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಯಾವಾಗಲೂ ಕಡಿಮೆಯೇ ಇರುತ್ತಿತ್ತು. ಆದರೇ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಯುವಜನರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಭಾರತಕ್ಕೆ ಜನಸಂಖ್ಯಾ ಸ್ಫೋಟದ ಅಪಾಯವೂ ಇಲ್ಲ.

ಈ ಎಲ್ಲಾ ಮೂರು ಆಮೂಲಾಗ್ರ ಅಂಶಗಳು ಐದನೇ ಸುತ್ತಿನ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ (National Family Health Survey – NFHS) ಸಂಶೋಧನೆಗಳ ಸಾರಾಂಶದ ಭಾಗವಾಗಿದೆ. ಮುಂದಿನ ರಾಷ್ಟ್ರೀಯ ಜನಗಣತಿಯನ್ನು ನಡೆಸಿದಾಗ ಮಾತ್ರ ಹೆಚ್ಚಿನ ಜನಸಂಖ್ಯೆಯ ಒಟ್ಟಾರೆ ಅಂಕಿಅಂಶಗಳನ್ನು ಅನ್ವಯಿಸಿ ಇದರ ಬಗ್ಗೆ ಖಚಿತವಾಗಿ ಹೇಳಬಹುದು. ಆದಾಗ್ಯೂ ಇದು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂದರ್ಭದಲ್ಲಿ ನಿಜವಾಗುವ ಸಾಧ್ಯತೆಯಿದೆ.

ಭಾರತವನ್ನು ಇನ್ನು ಮುಂದೆ ‘ಕಾಣೆಯಾದ ಮಹಿಳೆಯರ ದೇಶ’ ಎಂದು ಕರೆಯಲಾಗುವುದಿಲ್ಲ ಎಂದು ಅಂಕಿಅಂಶಗಳು ಸೂಚಿಸುತ್ತವೆ. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್‌ನಲ್ಲಿ 1990ರ ಪ್ರಬಂಧದಲ್ಲಿ ಇದನ್ನು ಮೊದಲು ಬಳಸಿದ್ದರು. ಆಗ ಭಾರತದಲ್ಲಿ 1,000 ಪುರುಷರಿಗೆ 927 ಮಹಿಳೆಯರಿದ್ದರು. 2005-06 ರಲ್ಲಿ ನಡೆಸಿದ NFHS-3ರ ಸಮೀಕ್ಷೆ ಪ್ರಕಾರ, ಅನುಪಾತವು ಸಮಾನವಾಗಿತ್ತು. 1000 ಪುರುಷರಿಗೆ ಸಮಾನವಾಗಿ 1000 ಮಹಿಳೆಯರಿದ್ದರು. NFHS-4ರಲ್ಲಿ ಅಂದರೆ 2015-16ರಲ್ಲಿ ಈ ಅನುಪಾತವು 991:1000ಕ್ಕೆ ಇಳಿಯಿತು. ಇದೇ ಮೊದಲ ಬಾರಿಗೆ ಲಿಂಗಾನುಪಾತವು ಮಹಿಳೆಯರ ಪರವಾಗಿರುವುದು ಗೋಚರಿಸಿದೆ.

ಸುಧಾರಿತ ಲಿಂಗಾನುಪಾತ ಮತ್ತು ಜನನದ ಸಮಯದಲ್ಲಿ ಲಿಂಗಾನುಪಾತದಲ್ಲಿ ಗಮನಾರ್ಹ ಸಾಧನೆಯಾಗಿದೆ. ಜನಗಣತಿಯಿಂದ ನೈಜ ಚಿತ್ರಣ ಹೊರಬೀಳಲಿದೆಯಾದರೂ, ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಕ್ರಮಗಳು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿವೆ ಎಂದು ಫಲಿತಾಂಶಗಳನ್ನು ನೋಡಿದಾಗ ನಾವು ಹೇಳಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಹೇಳಿದರು.

ಖಚಿತವಾಗಿ ಹೇಳುವುದಾದರೆ, ಕಳೆದ ಐದು ವರ್ಷಗಳಲ್ಲಿ ಜನಿಸಿದ ಮಕ್ಕಳ ಜನನದ ಲಿಂಗಾನುಪಾತವು ಇನ್ನೂ 929 ಆಗಿದೆ. ಇದು ಭಾರತದ ಕುಟುಂಬಗಳಲ್ಲಿ ಮಗನಿಗೆ ಆದ್ಯತೆ ನೀಡುತ್ತಿರುವುದನ್ನು ಸೂಚಿಸುತ್ತದೆ. ಅದರ ವಿವಿಧ ಭೀಕರ ರೂಪಗಳಲ್ಲಿ ಇನ್ನೂ ಮುಂದುವರಿದಿದೆ ಎಂದು ಸೂಚಿಸುತ್ತದೆ. ಆದರೆ ಲಿಂಗಾನುಪಾತವು ಹಿಂದೆ ಸಾಧಿಸಿದ ಗಮನಾರ್ಹ ಮೈಲಿಗಲ್ಲು. ಒಂದು ಕಾಲದಲ್ಲಿ ಅತಿರೇಕದ ಮತ್ತು ಹೆಣ್ಣು ಶಿಶುಹತ್ಯೆಯ ಅಭ್ಯಾಸಗಳನ್ನು ನಿಗ್ರಹಿಸುವ ಗುರಿಯನ್ನು ನೀತಿಗಳು ಹೊಂದಿದ್ದವು. ಭಾರತದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಭಾರತದ ಜನಗಣತಿ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, 2010-14ರಲ್ಲಿ ಪುರುಷರು ಮತ್ತು ಮಹಿಳೆಯರ ಸರಾಸರಿ ಜೀವಿತಾವಧಿಯು ಕ್ರಮವಾಗಿ 66.4 ವರ್ಷಗಳು ಮತ್ತು 69.6 ವರ್ಷಗಳು ಆಗಿವೆ.

ಸಮೀಕ್ಷೆಯ ಆಸಕ್ತಿದಾಯಕ ಅಂಶಗಳು
ಸಮೀಕ್ಷೆಯಿಂದ ಇತರ ಆಸಕ್ತಿದಾಯಕ ಅಂಶಗಳು ಬೆಳಕಿಗೆ ಬಂದಿವೆ. 2005-06ರಲ್ಲಿ ಶೇ 34.9ರಷ್ಟಿದ್ದ 15 ವರ್ಷದೊಳಗಿನ ಜನಸಂಖ್ಯೆಯ ಪಾಲು 2019-21ರಲ್ಲಿ ಶೇ 26.5ಕ್ಕೆ ಇಳಿದಿದೆ. ಭಾರತವು ಇನ್ನೂ ಯುವದೇಶವಾಗಿದೆ. 2011ರಲ್ಲಿ ಜನಗಣತಿಯ ಅಂಕಿಅಂಶಗಳ ಪ್ರಕಾರ ಸರಾಸರಿ ವಯಸ್ಸು 24 ವರ್ಷಗಳು. ಆದರೆ ಭಾರತದ ಜನಸಂಖ್ಯೆಗೆ ಈಗ ವಯಸ್ಸಾಗುತ್ತಿದೆ. ಇದು ನೀತಿಗಳ ವಿಚಾರದಲ್ಲಿ ಹಲವು ಸವಾಲುಗಳನ್ನೂ ತಂದೊಡ್ಡಿದೆ.

‘ನಾವು ಈಗ ವಯಸ್ಸಾದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದೇವೆ ಎಂಬ ಅಂಶವು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂತಾನೋತ್ಪತ್ತಿ ವಿಚಾರದಲ್ಲಿ ಮಾತ್ರವೇ ಆದ್ಯತೆ ನೀಡುವ ಬದಲು ಸಮಗ್ರ ಜೀವನ ಚಕ್ರದ ವಿಶ್ಲೇಷಣೆಯ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ನೀತಿ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಯಾಮಿನಿ ಅಯ್ಯರ್ ಪ್ರತಿಕ್ರಿಯಿಸಿದ್ದಾರೆ. 2019-20ರಲ್ಲಿ ಹೆಚ್ಚು ಮಹಿಳೆಯರು ಹತ್ತು ವರ್ಷಗಳ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಎಂಬ ಅಂಶವು ಹಿಂದಿನ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ಕುಸಿತದೊಂದಿಗೆ ಹೊಂದಿಕೆಯಾಗುತ್ತದೆ ಎಂಬುದು ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿ ಗಮನಾರ್ಹ ರಚನಾತ್ಮಕ ಸವಾಲುಗಳನ್ನು ಸೂಚಿಸುತ್ತದೆ. ಭಾರತವು ಪ್ರಗತಿ ಸಾಧಿಸಬೇಕಾದರೆ ಇವುಗಳನ್ನು ತುರ್ತಾಗಿ ಪರಿಹರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಒಟ್ಟು ಫಲವತ್ತತೆ ದರ (Total Fertility Rate – TFR) ಅಥವಾ ಭಾರತದಲ್ಲಿ ಪ್ರತಿ ಮಹಿಳೆಗೆ ಮಕ್ಕಳ ಸರಾಸರಿ ಸಂಖ್ಯೆ ಈಗ ಕೇವಲ 2 ಆಗಿದೆ. ಇದು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಫಲವತ್ತತೆ ದರಕ್ಕಿಂತ ಕಡಿಮೆಯಾಗಿದೆ. ಜನಸಂಖ್ಯೆಯು ಒಂದು ಪೀಳಿಗೆಯಿಂದ ತನ್ನನ್ನು ನಿಖರವಾಗಿ ಬದಲಾಯಿಸುವ ಹಂತವಾಗಿದೆ. ಜನಗಣತಿಯ ಮೂಲಕ ಮಾತ್ರ ಸ್ಥಾಪಿಸಬಹುದಾದ ಮತ್ತೊಂದು ಪ್ರಮುಖ ಅಂಶ ಇದು. ಬಹುತೇಕ ದಕ್ಷಿಣದ ರಾಜ್ಯಗಳು ಮತ್ತು ಕೆಲವು ಶ್ರೀಮಂತ ರಾಜ್ಯಗಳಲ್ಲಿ ಈ ಬೆಳವಣಿಗೆಯು ಖಚಿತವಾಗಿದೆ.

ಸಾಮಾನ್ಯವಾಗಿ ಒಟ್ಟು ಫಲವತ್ತತೆಯ ಪ್ರಮಾಣವು ಜೀವನ ಮಟ್ಟಕ್ಕಿಂತ ಕಡಿಮೆಯಿರುತ್ತದೆ. ಒಟ್ಟಾರೆ ಜನಸಂಖ್ಯೆಯಲ್ಲಿನ ಕುಸಿತದ ನಡುವೆ ಸಾಮಾನ್ಯವಾಗಿ 30-40 ವರ್ಷಗಳ ಅಂತರವಿರುತ್ತದೆ, ಏಕೆಂದರೆ ಮುಂದಿನ 10ರಿಂದ 15 ವರ್ಷಗಳಲ್ಲಿ ಜನ್ಮ ನೀಡುವ ಜನಸಂಖ್ಯೆಯು ಈಗಾಗಲೇ ಫಲವತ್ತತೆಯ ಮಟ್ಟಗಳಲ್ಲಿ ಹುಟ್ಟಿದೆ ಎಂದು ಇಂಟರ್ ನ್ಯಾಷನಲ್ ಇನ್ಸ್ ಟಿಟ್ಯೂಟ್‌ ಫಾರ್ ಪಾಪ್ಯುಲೇಶನ್ ಸೈನ್ಸಸ್‌ನ ನಿರ್ದೇಶಕ ಮತ್ತು ಹಿರಿಯ ಪ್ರಾಧ್ಯಾಪಕ ಡಾ.ಕೆ.ಎಸ್.ಜೇಮ್ಸ್ ಹೇಳಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯು ದೇಶದ ಉಳಿದ ಭಾಗಗಳಿಗಿಂತ ವೇಗವಾಗಿ ಕುಸಿಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

NFHS-5 ಮಾದರಿ ಸಮೀಕ್ಷೆಯನ್ನು 2019 ಮತ್ತು 2021ರ ನಡುವೆ ಎರಡು ಹಂತಗಳಲ್ಲಿ ನಡೆಸಲಾಯಿತು. ದೇಶದ 707 ಜಿಲ್ಲೆಗಳ 6,50,000 ಕುಟುಂಬಗಳಿಂದ ಸಮೀಕ್ಷೆಗಾಗಿ ಮಾಹಿತಿ ಸಂಗ್ರಹಿಸಲಾಯಿತು. 2ನೇ ಹಂತದಲ್ಲಿ ಅರುಣಾಚಲ ಪ್ರದೇಶ, ಚಂಡೀಗಢ, ಛತ್ತೀಸ್‌ಗಢ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ದೆಹಲಿ, ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

ಇದನ್ನೂ ಓದಿ: ಭಾರತದ ಅರ್ಧಕ್ಕೂ ಹೆಚ್ಚು ಮಹಿಳೆಯರಲ್ಲಿ ರಕ್ತಹೀನತೆ, 5 ವರ್ಷದೊಳಗಿನ ಮಕ್ಕಳಲ್ಲಿ ಸಮಸ್ಯೆ ಹೆಚ್ಚು: ಕುಟುಂಬ ಆರೋಗ್ಯ ಸರ್ವೆ
ಇದನ್ನೂ ಓದಿ: ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್​ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ?

TV9 Kannada


Leave a Reply

Your email address will not be published. Required fields are marked *