ಭಾರತದಲ್ಲಿ ಕೊರೊನಾ ಸೋಂಕು ಮಿತಿ ಮೀರುತ್ತಿದೆ. ಸತತ ಒಂದು ವಾರದಿಂದ ಪ್ರತಿದಿನ 3 ಲಕ್ಷ  ಕೇಸ್​ಗಳು ನಿರಂತರವಾಗಿ ದಾಖಲಾಗ್ತಿವೆ. ಸಾವಿನ ಸಂಖ್ಯೆಯಲ್ಲೂ ಹೆಚ್ಚಳ.. ಬೆಡ್ ಇಲ್ಲ, ಚಿಕಿತ್ಸೆ ಸಿಗ್ತಿಲ್ಲ.. ಆಕ್ಸಿಜನ್ ಇಲ್ಲ ಅನ್ನೋ ಸಮಸ್ಯೆ ಮಾರ್ದನಿಸುತ್ತಲೇ ಇವೆ. ಇದಕ್ಕೆಲ್ಲ ಪರಿಹಾರ ವ್ಯಾಕ್ಸಿನೇಷನ್ ಅಂತಾರೆ ತಜ್ಞರು. ಆದ್ರೆ, ವ್ಯಾಕ್ಸಿನ್ ಕತೆ ಏನಾಗ್ತಿದೆ? ವ್ಯಾಕ್ಸಿನ್ ಸಿಗ್ತಿದೆಯಾ? ಕಳೆದ ಕೆಲ ದಿನಗಳಲ್ಲಿ ನಡೆದು ಹೋಗಿರೋದೇನು?

ದೇಶದಲ್ಲಿ ಇಂದು ವ್ಯಾಕ್ಸಿನ್ ಬೇಡಿಕೆ ಇನ್ನಿಲ್ಲದಂತೆ ಹೆಚ್ಚಾಗ್ತಿದೆ. ಅದ್ರಲ್ಲೂ ಕೇಂದ್ರ ಸರ್ಕಾರ ಮೇ 1ರಿಂದ ಯೂನಿವರ್ಸಲ್ ವ್ಯಾಕ್ಸಿನೇಷನ್ ಆರಂಭಿಸಿದ್ದು, 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡ್ತೇವೆ ಅಂತಾನೂ ಘೋಷಿಸಿಯಾಗಿದೆ. ಕೇಂದ್ರ ಸರ್ಕಾರದ ಘೋಷಣೆ, ವ್ಯಾಕ್ಸಿನ್ ಬಗೆಗಿನ ಮಾಹಿತಿ, ಹೆಚ್ಚುತ್ತಿರುವ ಸೋಂಕಿನ ಆತಂಕದಿಂದಾಗಿ ಇಂದು ವ್ಯಾಕ್ಸಿನ್​ಗಾಗಿ ಜನ ಜಾತಕಪಕ್ಷಿಯಾಗಿದ್ದಾರೆ. ಕೇಂದ್ರ ಸರ್ಕಾರ ವ್ಯಾಕ್ಸಿನ್ ಲಭ್ಯವಿದೆ ಅಂತಾ ಹೇಳ್ತಾ ಇದೆಯಾದ್ರೂ ವಾಸ್ತವವೇ ಬೇರೆ ಎನ್ನಲಾಗ್ತಿದೆ. ಅದ್ರಲ್ಲೂ ಕಳೆದ ನಾಲ್ಕು ದಿನದಲ್ಲಿ ದೇಶದಲ್ಲಿ ವ್ಯಾಕ್ಸಿನ್ ನೀಡುವ ಪ್ರಮಾಣ ಕೂಡ ಇಳಿದಿದೆ.

ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಕುಂಠಿತ
ವಿಪರ್ಯಾಸವೆಂದ್ರೆ ಇಂದು ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಕುಸಿದು ಹೋಗಿದೆ. ಅದ್ರಲ್ಲೂ 18-45 ವರ್ಷದವರಿಗೂ ವ್ಯಾಕ್ಸಿನ್ ನೀಡಿದ ಬೆನ್ನಲ್ಲೇ ಒಟ್ಟಾರೆ ವ್ಯಾಕ್ಸಿನೇಷನ್ ಪ್ರಮಾಣ ಕುಸಿದಿರೋದು ತೀವ್ರ ಕುತೂಹಲವನ್ನೂ ಹುಟ್ಟಿಸಿದೆ. ವ್ಯಾಕ್ಸಿನ್ ಅಲಭ್ಯತೆ ಎಷ್ಟರ ಮಟ್ಟಿಗೆಯಾಗಿದೆಯಂದ್ರೆ ಎರಡನೇ ಡೋಸ್ ವ್ಯಾಕ್ಸಿನ್​ ಪಡೆಯಬೇಕೆಂದ್ರು ಸಿಗ್ತಾನೇ ಇಲ್ಲ.

ಹೌದು. ದೇಶದಲ್ಲಿ ಏಪ್ರಿಲ್ 30 ಸಂಜೆ 8 ಗಂಟೆ ವೇಳೆಗೆ ಒಂದು ಡೋಸ್​ ವ್ಯಾಕ್ಸಿನ್ ಅನ್ನು 12 ಕೋಟಿ 69 ಲಕ್ಷ 64 ಸಾವಿರದ 207 ಜನರು ಪಡೆದಿದ್ರೆ, ಎರಡನೇ ಡೋಸ್ ವ್ಯಾಕ್ಸಿನ್ ಅನ್ನು 2 ಕೋಟಿ 78 ಲಕ್ಷ ಜನರು ಪಡೆದಿಕೊಂಡಿದ್ರು. ಈ ಮೂಲಕ ಒಟ್ಟು 15 ಕೋಟಿ 48 ಲಕ್ಷ 54 ಸಾವಿರದ 096 ಜನರು ದೇಶದಲ್ಲಿ ವ್ಯಾಕ್ಸಿನ್ ಪಡೆದುಕೊಂಡಿದ್ರು.

106 ದಿನಗಳಲ್ಲಿ 15.21 ಕೋಟಿ ಜನರಿಗೆ ಲಸಿಕೆ 
ಪ್ರತಿದಿನ ಸುಮಾರು 14.3 ಲಕ್ಷ ಜನರಿಗೆ, ತಿಂಗಳಿಗೆ ಸುಮಾರು 4.2 ಕೋಟಿ ಜನರಿಗೆ ಲಸಿಕೆ 

ಆಘಾತಕಾರಿ ಸಂಗತಿಯೆಂದರೆ ಮೇ 1ರ ನಂತರ 18-45 ವಯೋಮಾನದವರಿಗೂ ವ್ಯಾಕ್ಸಿನ್ ನೀಡೋದ್ರಿಂದ ವ್ಯಾಕ್ಸಿನೇಷನ್ ಪ್ರಮಾಣ ಗಣನೀಯ ಏರಿಕೆಯಾಗುತ್ತೆ ಎಂದು ಭಾವಿಸಲಾಗಿತ್ತು. ಆದ್ರೆ, ವಿಪರ್ಯಾಸವೆಂದ್ರೆ ಕಳೆದ ನಾಲ್ಕು ದಿನಗಳಲ್ಲಿ ಅಂದ್ರೆ ಮೇ 1 ರಿಂದ ಮೇ 5 ಬೆಳಗ್ಗೆ 7 ಗಂಟೆ ತನಕ ಕೇವಲ 56 ಲಕ್ಷ 40 ಸಾವಿರದ 92 ಜನರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ. ಅಂದ್ರೆ ಸರಾಸರಿ ದಿನಕ್ಕೆ 13 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಹೀಗಾಗಿ ಇಂದು ಬೆಳಗ್ಗೆ 7 ಗಂಟೆ ತನಕ ಒಟ್ಟು 16 ಕೋಟಿ 04 ಲಕ್ಷ 94 ಸಾವಿರದ 188 ಜನರಿಗೆ ವ್ಯಾಕ್ಸಿನ್ ನೀಡಿದಂತಾಗಿದೆ. ಒಂದು ವೇಳೆ ಈ ವೇಗದಲ್ಲಿ ವ್ಯಾಕ್ಸಿನ್ ನೀಡಿದ್ರೆ ಎಲ್ಲ ಭಾರತೀಯರಿಗೂ ವ್ಯಾಕ್ಸಿನ್ ನೀಡಬೇಕು ಅಂದ್ರೆ ಕನಿಷ್ಠ 2-3 ವರ್ಷಗಳ ಅವಧಿ ಬೇಕಾಗುತ್ತದೆ. ಈ 2 ರಿಂದ 3 ವರ್ಷಗಳ ಅವಧಿಯಲ್ಲಿ ಏನಾಗುತ್ತೆ? ಅನ್ನೋದನ್ನು ಊಹಿಸಲೂ ಸಾಧ್ಯವಾಗೋದಿಲ್ಲ. ಯಾಕಂದ್ರೆ ಎರಡು ಡೋಸ್​ ಅಲ್ಲದೇ 3ನೇ ಡೋಸ್​ ಅನ್ನು ಬೂಸ್ಟರ್ ರೂಪದಲ್ಲಿ ತೆಗೆದುಕೊಳ್ಳಬಹುದಾದ ಸ್ಥಿತಿ ನಿರ್ಮಾಣವಾದ್ರೆ ಏನು ಮಾಡೋದು? ಅಂತ ಹಲವಾರು ತಜ್ಞರು ಆತಂಕಪಡ್ತಿದ್ದಾರೆ.

ಹಾಗಿದ್ರೆ ಭಾರತದಲ್ಲಿ ಎಷ್ಟು ವ್ಯಾಕ್ಸಿನ್ ತಯಾರಾಗುತ್ತೆ?
ಈ ಸಮಸ್ಯೆಗೆ ಪರಿಹಾರವಾರವಾದ್ರೂ ಏನು?

ಹಾಗೆ ನೋಡಿದ್ರೆ ಭಾರತವನ್ನು ವಿಶ್ವದ ಫಾರ್ಮಸಿ ಅಂತಾ ಕರೆಯಲಾಗುತ್ತೆ. ಇಡೀ ವಿಶ್ವದಲ್ಲಿ ತಯಾರಾಗೋ ಒಟ್ಟು ವ್ಯಾಕ್ಸಿನ್ಗಳಲ್ಲಿ ಶೇ.60ರಷ್ಟು ವ್ಯಾಕ್ಸಿನ್​ಗಳು ಭಾರತದಲ್ಲೇ ತಯಾರಾಗುತ್ತೆ. ಅಷ್ಟೇ ಅಲ್ಲ ವ್ಯಾಕ್ಸಿನ್ ತಯಾರಿಸೋ ಅತ್ಯಂತ ದೊಡ್ಡ ಕಂಪನಿ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲೇ ಇದೆ. ಹೀಗಿದ್ದು ಭಾರತದಲ್ಲಿ ಕೊರೊನಾ ವ್ಯಾಕ್ಸಿನ್​ಗೆ ಯಾಕೆ ಅಭಾವ ಆಗ್ತಿದೆ? ಬೇರೆ ವ್ಯಾಕ್ಸಿನ್ ತಯಾರಿಸೋ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ಉತ್ಪಾದನೆ ಯಾಕೆ ಅಂದುಕೊಂಡ ಮಟ್ಟದಲ್ಲಿ ಆಗ್ತಿಲ್ಲ..? ಅನ್ನೋ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ.

ಇಂದು ಭಾರತದಲ್ಲಿ ಮೂರು ವ್ಯಾಕ್ಸಿನ್​ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಅದ್ರಲ್ಲಿ ಪುಣೆಯ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಕೋವಿಶೀಲ್ಡ್ ಮತ್ತು ಹೈದರಾಬಾದ್​ನ ಭಾರತ್ ಬಯೋಟೆಕ್ ಉತ್ಪಾದಿಸುವ ಕೊವ್ಯಾಕ್ಸಿನ್ ಅನ್ನು ಜನರಿಗೆ ನೀಡಲಾಗ್ತಿದೆ. ಮೇ 1ರಂದು ರಷ್ಯಾದಿಂದ 1.5 ಲಕ್ಷ ಡೋಸ್ ಸ್ಫುಟ್ನಿಕ್​ ವ್ಯಾಕ್ಸಿನ್ ಬಂದಿದೆಯಾದ್ರೂ ಇನ್ನೂ ಬಳಕೆಗೆ ಜನರಿಗೆ ಸಿಕ್ಕಿಲ್ಲ. ಅಲ್ಲದೇ ಯಾವ್ಯಾವ ಕಂಪನಿಗಳ ಜೊತೆ ಏನೆಲ್ಲ ಒಪ್ಪಂದವನ್ನು ಸ್ಫುಟ್ನಿಕ್ ವಿ ಮಾಡಿಕೊಂಡಿದೆ ಅನ್ನೋದೂ ಬಹಿರಂಗವಾಗಿಲ್ಲ.

ಭಾರತದಲ್ಲಿ ಎಷ್ಟು ಪ್ರಮಾಣದಲ್ಲಿ ಕೊರೊನಾ ವ್ಯಾಕ್ಸಿನ್ ಉತ್ಪಾದನೆಯಾಗುತ್ತೆ?
ಮಾಹಿತಿ ಪ್ರಕಾರ ಹೈದಾಬಾದನ್​ ಭಾರತ್ ಬಯೋಟೆಕ್ ಸಂಸ್ಥೆ ಪ್ರತಿ ತಿಂಗಳು 1.25 ಕೋಟಿ ಡೋಸ್​ನಷ್ಟು ಕೊವ್ಯಾಕ್ಸಿನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕೆಲವು ಕಡೆ ಉತ್ಪಾದನೆಯ ಪ್ರಕ್ರಿಯೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಇದಾದ ನಂತರ ಭಾರತ್ ಬಯೋಟೆಕ್ ಉತ್ಪಾದನಾ ಸಾಮರ್ಥ್ಯ 6 ಕೋಟಿ ಡೋಸ್ಗಳಿಗೆ ಏರಿಕೆ ಆಗಲಿದೆ ಎನ್ನಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 1500 ಕೋಟಿ ರೂಪಾಯಿಗಳ ಅನುದಾನ ಕೂಡ ಕೊಟ್ಟಿದೆ. ಇಷ್ಟೆಲ್ಲ ಆಗ್ತಿದ್ರೂ ಯಾವಾಗ ಇದರ ಸಾಮರ್ಥ್ಯ ಹೆಚ್ಚುತ್ತೆ? ಯಾವಾಗಿನಿಂದ ಹೆಚ್ಚಿನ ವ್ಯಾಕ್ಸಿನ್ ಲಭ್ಯವಾಗಬಲ್ಲದು? ಅನ್ನೋದ್ರ ಮಾಹಿತಿ ಸದ್ಯಕ್ಕೆ ಕನ್ನಡಿಯೊಳಗಿನ ಗಂಟಿನಂತಾಗಿದೆ.

ಇನ್ನು ಪುಣೆಯ ಸೀರಂ ಇನ್​ಸ್ಟಿಟ್ಯೂಟ್ ಸದ್ಯದ ಮಟ್ಟಿಗೆ ನೋಡೋದಾದ್ರೆ ಮಾಸಿಕ 6 ಕೋಟಿ ಡೋಸ್ ವ್ಯಾಕ್ಸಿನ್ ಉತ್ಪಾದನೆ ಮಾಡುತ್ತೆ ಅಂತಾ ಹೇಳಲಾಗ್ತಿದೆ. ಅಲ್ಲದೇ ಜುಲೈ ವೇಳೆಗೆ ಮಾಸಿಕ 10 ಕೋಟಿ ಡೋಸ್ ವ್ಯಾಕ್ಸಿನ್ ಉತ್ಪಾದಿಸುತ್ತೇವೆ ಅಂತಾ ಕೂಡ ಸೀರಂ ಸಂಸ್ಥೆ ಹೇಳಿದೆ. ಅಲ್ಲದೇ, ಸಂಸ್ಥೆ ಕೇಳಿದಂತೆಯೇ ಕೇಂದ್ರ ಸರ್ಕಾರ ಕೂಡ 3 ಸಾವಿರದ 500 ಕೋಟಿ ರೂಪಾಯಿಗಳನ್ನು ನೀಡಿದೆ. ಸೀರಂ ಸಿಇಓ ಆದಾರ್ ಪೂನಾವಾಲಾ ಏಪ್ರಿಲ್ 16ರಂದು ಟ್ವೀಟ್ ಮಾಡಿ ವ್ಯಾಕ್ಸಿನ್ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತು ಪೂರೈಕೆ ಮಾಡಲು ಅನುಮತಿ ನೀಡಿ ಅಂತಾ ಅಮೆರಿಕಾ ಅಧ್ಯಕ್ಷರನ್ನು ಕೇಳಿಕೊಂಡಿದ್ದರು. ಈಗ ಅಮೆರಿಕಾದಿಂದಲೂ ಸಾಕಷ್ಟು ಕಚ್ಚಾ ವಸ್ತು ಬಂದಿದೆ. ಹೀಗಿದ್ದೂ ವಾಸ್ವವಾಗಿ ಆಗ್ತಿರೋದಾದ್ರೂ ಏನು? ಅನ್ನೋ ಪ್ರಶ್ನೆಗೆ ಉತ್ತರವಂತೂ ಸಿಕ್ಕಿಲ್ಲ.

ಅತ್ಯಂತ ತ್ವರಿತವಾಗಿ ಕೇಂದ್ರ ಏನು ಮಾಡಬೇಕು?
ಈಗ ಇರೋ ಪರಿಸ್ಥಿತಿಯಲ್ಲಿ ಇಡೀ ದೇಶಕ್ಕೆ ಅತ್ಯಂತ ವೇಗವಾಗಿ ವ್ಯಾಕ್ಸಿನ್ ಕೊಡೋದು ಕಷ್ಟಸಾಧ್ಯದ ಮಾತು. ಎಷ್ಟೋ ಜನ ವ್ಯಾಕ್ಸಿನ್​ಗಾಗಿ ಗಂಟೆಗಟ್ಟಲೆ ಕಾಯ್ದರೂ ವ್ಯಾಕ್ಸಿನ್ ಸಿಕ್ತಿಲ್ಲ. ಆದ್ರೆ ಕೊರೊನಾ ನಿಯಂತ್ರಣಕ್ಕೆ ವ್ಯಾಕ್ಸಿನ್ ಪ್ರಮಾಣದಲ್ಲಿ ಏರಿಕೆ ಮಾಡದೇ ಬೇರೆ ದಾರಿಯಿಲ್ಲ.

ಕೊವಾವ್ಯಾಕ್ಸ್​ ಉತ್ಪಾದನೆಗೆ ಶೀಘ್ರ ಅನುಮೋದನೆ
ಮೊದಲನೆಯದಾಗಿ, ಕೇವಲ ಎರಡು ವ್ಯಾಕ್ಸಿನ್ ನಂಬಿಕೊಂಡು ಇಡೀ ದೇಶಕ್ಕೆ ವ್ಯಾಕ್ಸಿನೇಷನ್ ಮಾಡೋದು ಕಷ್ಟಸಾಧ್ಯದ ಮಾತು. ಹೀಗಾಗಿ ಕೇಂದ್ರ ಸರ್ಕಾರ ಸೀರಂ ಇನ್​ಸ್ಟಿಟ್ಯೂಟ್ ಜೊತೆ ಒಂದೆಡೆ ಕೋವಿಶೀಲ್ಡ್​ ಉತ್ಪಾದನೆಗಾಗಿ ಮತ್ತಷ್ಟು ಹತ್ತಿರದಿಂದ ಕೆಲಸ ಮಾಡಬೇಕು. ಜೊತೆಗೆ ಅಮೆರಿಕಾದ ನೊವ್ಯಾಕ್ಸ್ ವ್ಯಾಕ್ಸಿನ್ ಉತ್ಪಾದನೆಗಾಗಿ ಕೂಡ ಸೀರಂ ಇನ್​ಸ್ಟಿಟ್ಯೂಟ್ ಒಪ್ಪಂದ ಮಾಡಿಕೊಂಡಿದ್ದು, ಕಳೆದ ಮಾರ್ಚ್​ನಲ್ಲಿಯೇ ಬ್ರಿಡ್ಜ್ ಸ್ಟಡಿ ನಡೆಸೋದಾಗಿ ಹೇಳಿತ್ತು. ನೋವಾವ್ಯಾಕ್ಸ್​ ಅನ್ನು ಕೊವಾವ್ಯಾಕ್ಸ್ ಹೆಸರಲ್ಲಿ ಸೀರಂ ಇನ್​ಸ್ಟಿಟ್ಯೂಟೇ ಉತ್ಪಾದನೆ ಮಾಡಲಿದೆ. ಶೇ.89ರಷ್ಟು ಪರಿಣಾಮಕಾರಿಯಾಗಿರೋ ಕೊವಾವ್ಯಾಕ್ಸ್​ ಉತ್ಪಾದನೆ ಮತ್ತು ಅನುಮೋದನೆ ಆದಷ್ಟು ಬೇಗ ಆಗಬೇಕು.

ಫೈಜರ್ ವ್ಯಾಕ್ಸಿನ್ ಬಳಕೆಗೂ ಅನುಮತಿ
ಎರಡನೇಯದಾಗಿ, ಅಮೆರಿಕಾದ ಫೈಜರ್ ಸಂಸ್ಥೆಯ ಎಂಆರ್​ಎನ್​ಎ ವ್ಯಾಕ್ಸಿನ್​ಗೂ ಭಾರತದಲ್ಲಿ ಆದಷ್ಟು ಬೇಗ ಅನುಮತಿ ಸಿಗಬೇಕು. ಈಗಾಗಲೇ ಜಪಾನ್, ಸೌಥ್ ಕೋರಿಯಾ, ಇಸ್ರೇಲ್, ಇಂಗ್ಲೆಂಡ್ ಮುಂತಾದ ಹಲವು ರಾಷ್ಟ್ರಗಳು ಈ ವ್ಯಾಕ್ಸಿನ್ ಬಳಸುತ್ತಿದ್ದು ಸಾಕಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ, ತಡ ಮಾಡದೇ ಈ ಬಗ್ಗೆಯೂ ಕೇಂದ್ರ ಗಮನ ಹರಿಸಬೇಕು.

ಮಾಡರ್ನಾ ವ್ಯಾಕ್ಸಿನ್​ಗಾಗಿ ಮಾತುಕತೆ
ಮೂರನೇಯದಾಗಿ, ಅಮೆರಿಕಾದ್ದೇ ಆದ ಮತ್ತೊಂದು ಎಂಆರ್​ಎನ್​ಎ ವ್ಯಾಕ್ಸಿನ್ ತಯಾರಿಸುವ ಮಾಡರ್ನಾ ಸಂಸ್ಥೆ ಜೊತೆಗೆ ಗಂಭೀರವಾಗಿ ಕೇಂದ್ರ ಮಾತುಕತೆ ನಡೆಸಬೇಕು. ಯಾಕಂದ್ರೆ ಫೈಜರ್ ಬಂದರೂ ಅದನ್ನು ಮೈನಸ್ 70 ಡಿಗ್ರಿ ಉಷ್ಣಾಂಶದಲ್ಲಿ ಶೇಖರಿಸಬೇಕು, ಇದು ಕೊಂಚ ಕಷ್ಟದ ಕೆಲಸ. ಅದೇ ಇನ್ನೊಂದೆಡೆ ಮಡರ್ನಾ ವ್ಯಾಕ್ಸಿನ್​ ಶೇಖರಣೆಗೆ ಮೈನಸ್ 20 ಡಿಗ್ರಿಯಾದರೂ ನಡೆಯುತ್ತೆ.

Image Credit: @sputnikvaccine

ಸ್ಫುಟ್ನಿಕ್ ವ್ಯಾಕ್ಸಿನ್ ಒಪ್ಪಂದದ ಪರಿಶೀಲನೆ
ಇನ್ನೊಂದು ಪ್ರಮುಖ ಸಂಗತಿಯೆಂದರೆ ಸ್ಪುಟ್ನಿಕ್ ವ್ಯಾಕ್ಸಿನ್​​ ಉತ್ಪಾದನೆಗಾಗಿ ರಷ್ಯಾದ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬ್ ಸೇರಿದಂತೆ 6 ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ ಮೇ 1ರಂದು ಸಿದ್ಧವಾದ 1.5 ಲಕ್ಷ ಡೋಸ್​ನಷ್ಟು ವ್ಯಾಕ್ಸಿನ್ ಕೂಡ ಬಂದಿವೆ. ಆದ್ರೆ, ದೇಶದ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಅದರ ಉತ್ಪಾನೆ, ಬೆಲೆ ಮುಂತಾದ ವಿಷಯಗಳ ಬಗ್ಗೆ ಕೇಂದ್ರ ಮಾಹಿತಿ ಪಡೆದು ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು. ಜೊತೆಗೆ ಎಲ್ಲ ವ್ಯಾಕ್ಸಿನ್​ಗಳಿಗೂ ಒಂದೇ ತೆರನಾದ ಬೆಲೆ ನಿಗದಿ ಮಾಡಬೇಕು. ಆಗ ಕೇಂದ್ರ, ರಾಜ್ಯ ಅಥವಾ ಖಾಸಗೀ ಅನ್ನೋ ಭೇದವಿಲ್ಲದೇ ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ಖರೀದಿಸಲು ಮತ್ತು ಜನರಿಗೆ ನೀಡಲು ಸಹಕಾರಿಯಾಗುತ್ತೆ.

ಒಟ್ಟಿನಲ್ಲಿ ದೇಶವನ್ನು ಕೊರೊನಾ ಮುಕ್ತಗೊಳಿಸುವ ನಿಟ್ಟಿನಲ್ಲಿ ವ್ಯಾಕ್ಸಿನ್ ಉತ್ಪಾನೆ ಹೆಚ್ಚಳದಂಥ ಮಹತ್ವದ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಮತ್ತಷ್ಟು ಗಮನ ಹರಿಸಬೇಕು. ಜೊತೆಗೆ ವ್ಯಾಕ್ಸಿನ್ ಪಡೆಯಲು ಹೋದವರು ಸರಾಗವಾಗಿ ವ್ಯಾಕ್ಸಿನ್ ಪಡೆಯಲು ಸಾಧ್ಯವಾಗಬೇಕು ಎನ್ನುತ್ತಾರೆ ತಜ್ಞರು.

The post ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಇಳಿಕೆ.. ಲಸಿಕೆಯ ಬೇಡಿಕೆ ಪೂರೈಸಲು ಕ್ರಮ ಏನು? appeared first on News First Kannada.

Source: newsfirstlive.com

Source link