ಭಾರತದ ಕೊವಾಕ್ಸಿನ್ ತುರ್ತುಬಳಕೆಗೆ ಫಿಲಿಪೈನ್ಸ್ ಅನುಮೋದನೆ

ಮನಿಲಾ: ಭಾರತದ ಸ್ವದೇಶಿ ಲಸಿಕೆ ಕೊವಾಕ್ಸಿನ್ ತುರ್ತು ಬಳಕೆಗೆ ಫಿಲಿಪೈನ್ಸ್ ದೇಶದ ಆಹಾರ ಮತ್ತು ಔಷಧ ಸಂಸ್ಥೆ (ಎಫ್‍ಡಿಎ)ಶುಕ್ರವಾರ ಅನುಮೋದನೆ ನೀಡಿದೆ.

ತಾನು ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಕೊರೊನಾ ಲಸಿಕೆ ಶೇ.77.8 ರಷ್ಟು ಪರಿಣಾಮಕಾರಿ ಎಂದು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಭಾರತ ಸರ್ಕಾರಕ್ಕೆ ವರದಿ ನೀಡಿದ ಬೆನ್ನಲ್ಲೇ ಫಿಲಿಪೈನ್ಸ್ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ಭಾರತ್ ಬಯೋಟೆಕ್ ಕಂಪನಿ ನೀಡಿದ ದಾಖಲೆಗಳನ್ನು ಪೂರ್ಣವಾಗಿ ಪರಿಶೀಲಿಸಿದ ಬಳಿಕ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಎಫ್‍ಡಿಎ ಮುಖ್ಯಸ್ಥ ಎನ್ರಿಕ್ ಡೊಮಿಂಗೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತ್ ಬಯೋಟೆಕ್ ತನ್ನ ಮೂರನೇ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ವಿಷಯ ತಜ್ಞರ ಸಮಿತಿಗೆ(ಎಸ್‍ಇಸಿ)ಗೆ ಮಂಗಳವಾರ ಸಲ್ಲಿಸಿತ್ತು. ಭಾರತದಾದ್ಯಂತ ನಡೆಸಿದ 3ನೇ ಹಂತದ ಪ್ರಯೋಗಗಳಲ್ಲಿ ಕೋವಾಕ್ಸಿನ್ ಶೇ. 77.8 ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ವರದಿಯಾಗಿದೆ.

ಲಸಿಕೆ ಪಡೆಯದವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ನೀವೇ ದೇಶಬಿಟ್ಟು ಭಾರತ ಅಥವಾ ಅಮೆರಿಕಕ್ಕೆ ತೊಲಗಿ ಎಂದು  ಕೋವಿಡ್ ಲಸಿಕೆ ವಿರೋಧಿಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಈ ವಾರ ಖಡಕ್ ಎಚ್ಚರಿಕೆ ನೀಡಿದ್ದರು.

ಕೋವಿಡ್ ಲಸಿಕೆ ವಿಚಾರವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಅವರು, ಕೊರೋನಾ ನಿಯಂತ್ರಿಸಲು ಲಸಿಕೆ ಅನಿವಾರ್ಯ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಲೇಬೇಕು. ಕೋವಿಡ್‌ ಲಸಿಕೆ ಪಡೆಯಲು ನಿರಾಕರಿಸುವವರನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.

The post ಭಾರತದ ಕೊವಾಕ್ಸಿನ್ ತುರ್ತುಬಳಕೆಗೆ ಫಿಲಿಪೈನ್ಸ್ ಅನುಮೋದನೆ appeared first on Public TV.

Source: publictv.in

Source link