ನವದೆಹಲಿ: ಕೊರೊನಾ ಎರಡನೇ ಅಲೆಯಿಂದ ಭಾರತ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಅಮೆರಿಕಾ, ಇಂಗ್ಲೆಂಡ್​, ಯೂರೋಪಿಯನ್ ಯೂನಿಯನ್​​​​ ಮುಂತಾದ ರಾಷ್ಟ್ರಗಳಿಂದ ನೆರವಿನ ಮಹಾಪೂರ ಹರಿದುಬರ್ತಿದೆ. ಇದೀಗ ಗೂಗಲ್ ಹಾಗೂ ಮೈಕ್ರೋಸಾಫ್ಟ್​ ಸಂಸ್ಥೆಗಳು ಕೂಡ ಭಾರತದ ನೆರವಿಗೆ ಧಾವಿಸಿವೆ.

ಭಾರತದ ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಗೂಗಲ್ 18 ಮಿಲಿಯನ್ ಡಾಲರ್​(135 ಕೋಟಿ ರೂಪಾಯಿ) ಧನಸಹಾಯ ಮಾಡ್ತಿದೆ. ಗೂಗಲ್ ಸಿಇಒ ಸುಂದರ್ ಪಿಚ್ಚೈ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಗೂಗಲ್​​ನ ಲೋಕೋಪಕಾರಿ ಅಂಗವಾದ Google.org ಎರಡು ಭಾಗವಾಗಿ ಹಣ ಮಂಜೂರಾತಿ ಮಾಡಲಿದೆ. ಕೊರೊನಾದಿಂದ ಅತೀ ಹೆಚ್ಚು ಬಾಧಿತರಾಗಿರೋ ಕುಟುಂಬಗಳಿಗೆ ದೈನಿಂದಿನ ಖರ್ಚು ವೆಚ್ಚ ನಿಭಾಯಿಸಲು ಸಹಾಯ ಮಾಡುವ ನಿಟ್ಟಿನಲ್ಲಿ 135 ಕೋಟಿಯಲ್ಲಿ 20 ಕೋಟಿ ರೂಪಾಯಿಯನ್ನ ಭಾರತದ ಅತೀ ದೊಡ್ಡ ದೇಣಿಗೆ ಪ್ಲಾಟ್​ಫಾರ್ಮ್​ ಗಿವ್​ ಇಂಡಿಯಾ(GiveIndia)ಗೆ ನೀಡಲಾಗುತ್ತದೆ. ಎರಡನೆಯದಾಗಿ ಆಕ್ಸಿಜನ್, ಟೆಸ್ಟಿಂಗ್ ಉಪಕರಣ ಸೇರಿದಂತೆ ಅಗತ್ಯವಿರುವ ಸ್ಥಳಗಳಲ್ಲಿ ತ್ವರಿತ ವೈದ್ಯಕೀಯ ಸಾಮಗ್ರಿಗಳನ್ನ ಪೂರೈಸಲು ಯೂನಿಸೆಫ್​​(UNICEF)ಗೆ ಹಣವನ್ನ ಕೊಡುವುದಾಗಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ ಹೆಚ್ಚಿನ ಅಪಾಯದಲ್ಲಿರುವ ಸಮುದಾಯಗಳಿಗೆ ನೆರವಾಗುತ್ತಿರುವ ಸಂಸ್ಥೆಗಳಿಗೆ ಈವರಗೆ 900ಕ್ಕೂ ಹೆಚ್ಚು ಗೂಗಲ್ ಉದ್ಯೋಗಿಗಳು ಸೇರಿ ₹3.7 ಕೋಟಿ ಹಣವನ್ನ ಕೊಡುಗೆಯಾಗಿ ನೀಡಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ

ಈ ಧನಸಹಾಯ, ಸಾರ್ವಜನಿಕ ಆರೋಗ್ಯ ಮಾಹಿತಿ ಅಭಿಯಾನಗಳಿಗೆ ಹೆಚ್ಚಿನ ಆ್ಯಡ್​ ಗ್ರಾಂಟ್​ ಬೆಂಬಲವನ್ನ ಕೂಡ ಒಳಗೊಂಡಿದೆ. ಕಳೆದ ವರ್ಷದಿಂದ, MyGov(ಭಾರತ ಸರ್ಕಾರದ ಪ್ಲಾಟ್​ಫಾರ್ಮ್​) ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ಜನರಿಗೆ ಕೊರೊನಾದಿಂದ ಸುರಕ್ಷಿತವಾಗಿರೋದು ಹೇಗೆ ಮತ್ತು ಲಸಿಕೆಗಳ ಬಗ್ಗೆ ಸತ್ಯಾಸತ್ಯತೆಗಳ ಮಾಹಿತಿ ತಲುಪಿಸಲು ನಾವು ಸಹಾಯ ಮಾಡಿದ್ದೇವೆ. ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಜಾಹೀರಾತು ಅನುದಾನದಲ್ಲಿ ಹೆಚ್ಚುವರಿ 112 ಕೋಟಿ ನೀಡುತ್ತಿದ್ದೇವೆ. ಮತ್ತು ಹೆಚ್ಚಿನ ಭಾಷಾ ವ್ಯಾಪ್ತಿ ಆಯ್ಕೆಗಳಿಗಾಗಿ ಲಾಭೋದ್ದೇಶವಿಲ್ಲದೆ ನಾವು ಇಂದು ನಮ್ಮ ಬೆಂಬಲವನ್ನು ಹೆಚ್ಚಿಸುತ್ತಿದ್ದೇವೆ ಎಂದು ಗೂಗಲ್ ತಿಳಿಸಿದೆ.

ಹಾಗೇ ಮೈಕ್ರೋಸಾಫ್ಟ್​ ಸಿಇಒ ಸತ್ಯಾ ನಡೇಲಾ ಕೂಡ ಭಾರತದ ನೆರವಿಗೆ ಧಾವಿಸಿದ್ದಾರೆ. ಭಾರತದ ಪ್ರಸ್ತುತ ಕೊರೊನಾ ಪರಿಸ್ಥಿತಿ ನೋಡಿ ನನ್ನ ಹೃದಯ ಹಿಂಡಿದಂತಾಗಿದೆ ಎಂದು ನಡೇಲಾ ಹೇಳಿದ್ದಾರೆ. ಕೊರೊನಾ ಪರಿಹಾರ ಕಾರ್ಯಗಳಿಗಾಗಿ ಮತ್ತು ಆಮ್ಲಜನಕ ಉಪಕರಣಗಳ ಖರೀದಿಗೆ ನಮ್ಮ ಕಂಪನಿಯ ಸಂಪನ್ಮೂಲ ಮತ್ತು ತಂತ್ರಜ್ಞಾನ ಬಳಕೆ ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.

 

The post ಭಾರತದ ನೆರವಿಗೆ ನಿಂತ ಸುಂದರ್ ಪಿಚ್ಚೈ-ಸತ್ಯ ನಡೇಲಾ: ಗೂಗಲ್​ನಿಂದ ₹135 ಕೋಟಿ ಧನಸಹಾಯ appeared first on News First Kannada.

Source: News First Kannada
Read More