ನವದೆಹಲಿ: ಇಂದು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ರು.

ಕೊರೊನಾ ಶುರುವಾದಾಗ ಯಾವ ದೇಶವೂ ಅದನ್ನ ಎದುರಿಸಲು ಸಿದ್ಧವಾಗಿರಲಿಲ್ಲ. ಆಗ ಯೋಗ ಆಂತರಿಕ ಶಕ್ತಿಯ ಮೂಲವಾಯ್ತು. ಇಂದು ಇಡೀ ಜಗತ್ತು ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಾಗ, ಯೋಗ ಒಂದು ಭರವಸೆಯ ಕಿರಣವಾಗಿ ಮಾರ್ಪಟ್ಟಿದೆ ಎಂದರು. ಕಳೆದ ಎರಡು ವರ್ಷಗಳಿಂದ, ಯೋಗ ದಿನಾಚರಣೆಯಂದು ಭಾರತದಲ್ಲಿ ಅಥವಾ ವಿಶ್ವದಲ್ಲಿ ಎಲ್ಲೂ ಕೂಡ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿಲ್ಲ. ಆದರೂ ಯೋಗದ ಉತ್ಸಾಹ ಕಡಿಮೆಯಾಗಿಲ್ಲ. ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ‘ಯೋಗ ಫಾರ್ ವೆಲ್​ನೆಸ್’ ಥೀಮ್ ಜನರನ್ನು ಯೋಗ ಮಾಡಲು ಇನ್ನಷ್ಟು ಪ್ರೋತ್ಸಾಹಿಸಿದೆ. ಪ್ರತಿ ದೇಶ, ಪ್ರದೇಶ ಮತ್ತು ಜನರು ಆರೋಗ್ಯವಾಗಿರಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಹೇಳಿದ್ರು.

ಇಂದು ವೈದ್ಯಕೀಯ ವಿಜ್ಞಾನ ಕೂಡ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆ(ಹೀಲಿಂಗ್ ಪ್ರೋಸೆಸ್​​)ಗೆ ಒತ್ತು ನೀಡುತ್ತದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ರೋಗಿಗಳಿಗೆ ಅನುಲೋಮ ವಿಲೋಮ ಪ್ರಾಣಾಯಾಮದಂಥ ಉಸಿರಾಟದ ವ್ಯಾಯಾಮ ಕಲಿಸುತ್ತಾ ಯೋಗ ಮಾಡಿರುವ ಫೋಟೋಗಳನ್ನ ನಾವು ಸಾಕಷ್ಟು ಕಾಣಬಹುದು. ಈ ವ್ಯಾಯಾಮಗಳು ಉಸಿರಾಟದ  ವ್ಯವಸ್ಥೆಯನ್ನ ಬಲಪಡಿಸುತ್ತವೆ ಎಂದು ಅಂತರರಾಷ್ಟ್ರೀಯ ತಜ್ಞರು ಹೇಳಿದ್ದಾರೆ ಅಂತ ಮೋದಿ ತಿಳಿಸಿದ್ರು.

mYoga ಆ್ಯಪ್​ ವಿಶ್ವದಾದ್ಯಂತ ಲೋಕಾರ್ಒಣೆ
ವಿಶ್ವದಾದ್ಯಂತ ಎಂ-ಯೋಗ ಆ್ಯಪ್ ಲೋಕಾರ್ಪಣೆ ಮಾಡುವುದಾಗಿ ಇದೇ ವೇಳೆ ತಿಳಿಸಿದ ಮೋದಿ, ವಿಶ್ವ ಆರೋಗ್ಯ ಸಂಸ್ಥೆಯ(WHO) ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಇನ್ಮುಂದೆ ಎಂ-ಯೋಗ  ಅಪ್ಲಿಕೇಶನ್​​ನಲ್ಲಿ ವಿಶ್ವದಾದ್ಯಂತ ಜನರಿಗೆ ಉಪಯೋಗವಾಗುವಂತೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೋಗಳು ಇರಲಿವೆ. ಇದು ನಮ್ಮ ‘ಒಂದು ವಿಶ್ವ, ಒಂದು ಆರೋಗ್ಯ’ ಧ್ಯೇಯಕ್ಕೆ ಸಹಾಯ ಮಾಡುತ್ತದೆ ಎಂದರು.

ಭಾರತ ಯುಗ ಯುಗಗಳಿಂದ ಅನುಸರಿಸುತ್ತಿರುವ ‘ವಸುದೈವ ಕುಟುಂಬಕಂ’ ಮಂತ್ರ ಈಗ ಜಾಗತಿಕ ಮಾನ್ಯತೆಯನ್ನ ಪಡೆದುಕೊಳ್ಳುತ್ತಿದೆ. ನಾವೆಲ್ಲರೂ ಪರಸ್ಪರರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ. ಯೋಗವು ರೋಗಗಳ ತಡೆಗಟ್ಟುವಿಕೆ ಮತ್ತು ಜನಸಾಮಾನ್ಯರ ಆರೋಗ್ಯ ರಕ್ಷಣೆಯಲ್ಲಿ ಸಕಾರಾತ್ಮಕ ಪಾತ್ರವನ್ನು ಮುಂದುವರಿಸಲಿದೆ ಎಂದು ನನಗೆ ನಂಬಿಕೆಯಿದೆ ಅಂತ ಮೋದಿ ಹೇಳಿದ್ರು.

The post ಭಾರತದ ಮತ್ತೊಂದು ಹೆಜ್ಜೆ, ವಿಶ್ವದಾದ್ಯಂತ ಲೋಕಾರ್ಪಣೆಯಾಗಲಿದೆ ‘mYoga ಆ್ಯಪ್’ -ಮೋದಿ appeared first on News First Kannada.

Source: newsfirstlive.com

Source link