ಭಾರತದ ವಿರುದ್ಧ ಮಂಡಿಯೂರಿದ್ದ ಪಾಕ್​ ಸೇನೆ; ಫೋಟೋ ಶೇರ್​ ಮಾಡಿ ಕುಟುಕಿದ ಅಫ್ಘಾನಿಸ್ತಾನ

ಭಾರತದ ವಿರುದ್ಧ ಮಂಡಿಯೂರಿದ್ದ ಪಾಕ್​ ಸೇನೆ; ಫೋಟೋ ಶೇರ್​ ಮಾಡಿ ಕುಟುಕಿದ ಅಫ್ಘಾನಿಸ್ತಾನ

ಕಾಬೂಲ್​​: ಇತ್ತೀಚೆಗೆ ಈದ್‌ ಹಬ್ಬದ ಪ್ರಯುಕ್ತ ವಿಶೇಷ ಭಾಷಣಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿಯವರ ಬಂಗಲೆ ಸಮೀಪಕ್ಕೆ ಮೂರು ರಾಕೆಟ್​​ಗಳು ಅಪ್ಪಳಿಸಿದ್ದವು. ಅಫ್ಘಾನಿಸ್ತಾನ ಅಧ್ಯಕ್ಷರನ್ನೇ ಟಾರ್ಗೆಟ್​​ ಮಾಡಿ ತಾಲಿಬಾನ್​​ ಉಗ್ರರೇ ಈ ಕೃತ್ಯ ಎಸಗಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಈ ಬೆನ್ನಲ್ಲೀಗ ಕೃತ್ಯಕ್ಕೆ ಕಾರಣರಾದ ತಾಲಿಬಾನ್​​ ಉಗ್ರರಿಗೆ ಆಶ್ರಯ ನೀಡಿರುವ ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನದ ಮೊದಲ ಉಪಾಧ್ಯಕ್ಷ ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮೃಲ್ಲಾ ಸಾಲೇ ಅವರು, 1971ರ ಡಿಸೆಂಬರ್ 16ರಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ತನ್ನ 93 ಸಾವಿರ ಸೈನಿಕರೊಂದಿಗೆ ಭಾರತೀಯ ಸೇನೆ ಮುಂದೆ ಬೇಷರತ್ತಾಗಿ ಶರಣಾಗಿದ್ದ ಫೋಟೋ ಪೋಸ್ಟ್​ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಮಾರ್ಮಿಕವಾಗಿ ತಿವಿದಿದ್ದಾರೆ.

ನಮ್ಮಲ್ಲಿ ಇಂಥ ಫೋಟೋ ಮತ್ತು ಇತಿಹಾಸ ಎರಡೂ ಇಲ್ಲ. ನೀವು ಎರಡು ರಾಕೆಟ್​ಗಳಿಂದ ನಮ್ಮ ದೇಶದ ಮೇಲೆ ದಾಳಿ ಮಾಡಿದ ಕೂಡಲೇ ನಾವೇನು ಹೆದರಲ್ಲ. ತಾಲಿಬಾನ್​​ ಉಗ್ರರು ಮತ್ತು ಪಾಕಿಸ್ತಾನ ಎರಡು ಒಟ್ಟಿಗೆ ಬಂದರೂ ನಾವು ಎದುರಿಸುವಷ್ಟು ಶಕ್ತರಾಗಿದ್ದೇವೆ. ನಿಮ್ಮ ಆಟ ನಮ್ಮ ಮುಂದೆ ನಡೆಯೋದಿಲ್ಲ ಎಂದು ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮೃಲ್ಲಾ ಸಾಲೇ ಪಾಕ್​​ಗೆ ಕಪಾಳಮೋಕ್ಷ ಮಾಡಿದ್ದಾರೆ.

1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಪಾಕ್​​ ಸೇನಾಪಡೆ ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ನಡೆಸುತ್ತಿದ್ದ ಕೃತ್ಯವನ್ನು ಭಾರತ ವಿರೋಧಿಸಿತ್ತು. ಬಳಿಕ ಬಾಂಗ್ಲಾದೇಶವನ್ನು ವಿಮೋಚನೆ ಮಾಡಿತ್ತು.

ಕೇವಲ 13 ದಿನಗಳ ಕಾಲ ಭಾರತ ಮತ್ತು ಪಾಕ್ ಯೋಧರ ನಡುವೆ ಸಮರ ನಡೆದಿತ್ತು. ಕೊನೆಗೂ ಧೀರ ಭಾರತೀಯ ಯೋಧರ ಶಕ್ತಿಯ ಮುಂದೆ ಪಾಕ್ ಸೇನೆ ಮಂಡಿಯೂರಿತ್ತು. ಅಂದು 1971ರ ಡಿಸೆಂಬರ್ 16ರಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಪಾಕ್ ಸೈನಿಕರು ಭಾರತೀಯ ಸೇನೆ ಮುಂದೆ ಬೇಷರತ್ತಾಗಿ ಶರಣಾಗಿದ್ದರು.

The post ಭಾರತದ ವಿರುದ್ಧ ಮಂಡಿಯೂರಿದ್ದ ಪಾಕ್​ ಸೇನೆ; ಫೋಟೋ ಶೇರ್​ ಮಾಡಿ ಕುಟುಕಿದ ಅಫ್ಘಾನಿಸ್ತಾನ appeared first on News First Kannada.

Source: newsfirstlive.com

Source link