ಭಾರತ್ ಜೋಡೋ ಯಾತ್ರೆ: ಸಿದ್ದರಾಮಯ್ಯರನ್ನು ಮೈಸೂರಿಗೆ ಸೀಮಿತವಾಗಿರಿಸಿ ಉಳಿದ ಜಿಲ್ಲೆಗಳಿಗೆ ಡಿಕೆಶಿ ಏಕಾಂಗಿ ಓಡಾಟ | Bharat Jodo Yatra Cold War between D.K.Shivakumar and Siddaramaiah


ಸಿದ್ದರಾಮೋತ್ಸವದಲ್ಲಿ ತಾವು ಒಂದಾಗಿದ್ದೇವೆ ಎಂದು ಬಿಗಿದಪ್ಪಿಕೊಂಡಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಮತ್ತೆ ಶೀತಲ ಸಮರ ಆರಂಭವಾದಂತೆ ಕಾಣುತ್ತಿದೆ. ಸಿದ್ದರಾಮಯ್ಯರನ್ನು ಮೈಸೂರಿಗೆ ಸೀಮಿತಗೊಳಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ಡಿಕೆಶಿ ಭಾರತ್ ಜೋಡೋ ಯಾತ್ರೆ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆ: ಸಿದ್ದರಾಮಯ್ಯರನ್ನು ಮೈಸೂರಿಗೆ ಸೀಮಿತವಾಗಿರಿಸಿ ಉಳಿದ ಜಿಲ್ಲೆಗಳಿಗೆ ಡಿಕೆಶಿ ಏಕಾಂಗಿ ಓಡಾಟ

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮೋತ್ಸವದಲ್ಲಿ ತಾವು ಒಂದಾಗಿದ್ದೇವೆ ಎಂದು ಬಿಗಿದಪ್ಪಿಕೊಂಡಿದ್ದ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮತ್ತೆ ಶೀತಲ ಸಮರ ಆರಂಭವಾದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಅವರು ಭಾರತ್ ಜೋಡೋ ಯಾತ್ರೆ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಮಂಗಳವಾರ ಅಸಮಾಧಾನ ಹೊರಹಾಕಿದ ನಂತರ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಮತ್ತೆ ಆರಂಭವಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸಿದೆ. ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ (Rahul Gandhi) ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಅಧಿವೇಶನಕ್ಕೂ ಹೋಗದೆ ರಾಜ್ಯದಲ್ಲಿ ನಡೆಯುವ ಯಾತ್ರೆಯ ತಯಾರಿಯಲ್ಲಿ ಡಿ.ಕೆ.ಶಿವಕುಮಾರ್ (D.K.Shivakumar) ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಭಾರತ್ ಜೋಡೋ ಯಾತ್ರೆಯ ಸಂಪೂರ್ಣ ಹೊಣೆ ತಾವೊಬ್ಬರೇ ಹೊತ್ತುಕೊಂಡು ಸಿದ್ದರಾಮಯ್ಯರನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೇ ಬಳಸಿಕೊಂಡು ದೂರವೇ ಇಟ್ಟಿದ್ದಾರಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ಹೆಚ್ಚು ಭಾರತ್ ಜೋಡೋ ಯಾತ್ರೆಯ ಸಂಘಟನೆಗೆ ಬಳಸಿಕೊಳ್ಳದಿದ್ದಕ್ಕೆ ನಿನ್ನೆ (ಸೆ.13) ಸಿದ್ದರಾಮಯ್ಯ ಅವರೇ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದರು. ಖಾಸಗಿ ಹೊಟೇಲ್​ನಲ್ಲಿ ನಡೆದಿದ್ದ ಭಾರತ್ ಜೋಡೋ ಸಭೆಗೆ ಆಹ್ವಾನವಿಲ್ಲದೇ ಯಾಕೆ ಹೋಗಬೇಕು ಎಂದು ಹೇಳಿದ್ದರು.

ಸಿದ್ದರಾಮಯ್ಯರನ್ನು ಮೈಸೂರಿಗೆ ಸೀಮಿತಗೊಳಿಸಿ ರಾಜ್ಯದಲ್ಲಿ ಡಿಕೆಶಿ ಏಕಾಂಗಿ ಓಡಾಟ

ಭಾರತ್ ಜೋಡೋ ಸಭೆಗಳನ್ನು ನಡೆಸುವ ವಿಚಾರವಾಗಿ ಸಿದ್ದರಾಮಯ್ಯ ಅವರನ್ನು ಕೇವಲ ಮೈಸೂರು ಜಿಲ್ಲೆಗೆ ಸೀಮಿತಗೊಳಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಏಕಾಂಗಿಯಾಗಿ ಓಡಾಡುತ್ತಾ ಸಭೆಗಳನ್ನು ನಡೆಸುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರು ಮೈಸೂರು ಭಾಗದ ಜಿಲ್ಲೆಯಲ್ಲಿ ಮಾತ್ರ ಭಾರತ್ ಜೋಡೋ ಪೂರ್ವ ಸಿದ್ದತಾ ಸಭೆ ನಡೆಸಿದ್ದಾರೆ. ಉಳಿದೆಲ್ಲ ಜಿಲ್ಲೆಗಳಲ್ಲಿ ಶಿವಕುಮಾರ್ ಅವರೇ ಏಕಾಂಗಿಯಾಗಿ ಭಾರತ್ ಜೋಡೋ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸುತ್ತಿದ್ದಾರೆ.

ಡಿಕೆಶಿ ಏಕಾಂಗಿ ಓಡಾಟದ ಹಿಂದಿನ ಪ್ಲಾನ್ ಏನು?

ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚಿನ ಜನರನ್ನು ಭಾರತ್ ಜೋಡೋ ಬಳ್ಳಾರಿ ಸಮಾವೇಶಕ್ಕೆ ಕರೆತರುತ್ತೇವೆ ಎಂದು ಡಿಕೆಶಿ ಹೇಳಿದ್ದರು. ಅಷ್ಟೇ ಅಲ್ಲದೆ ಸಭೆಯಲ್ಲಿ ಸಿದ್ದರಾಮಯ್ಯ ಫೋಟೋ ಅಗತ್ಯವಿಲ್ಲ ಎಂದು ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷರ ಏಕಾಂಗಿ ಓಡಾಟದ ಹಿಂದೆ ನಾಯಕತ್ವ ಅಡಗಿದೆ. ಮುಂದಿನ ನಾಯಕತ್ವದ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಓಡಾಡುತ್ತಿರುವ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ತಾನೇ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ.

ಎಐಸಿಸಿ ಹಾಗೂ ರಾಹುಲ್ ಗಾಂಧಿ ಕಣ್ಣಲ್ಲಿ ತಾನೇ ಯಶಸ್ವಿ ಸಂಘಟಕ ಎಂಬ ಭಾವನೆ ಮೂಡಿಸಲು ಕೆಪಿಸಿಸಿ ಅಧ್ಯಕ್ಷರು ಕಸರತ್ತು ನಡೆಸುತ್ತಿದ್ದು, ರಾಜ್ಯದ ಎಲ್ಲ ಪಾದಯಾತ್ರೆಯ ಯಶಸ್ಸಿನ ಕ್ರೆಡಿಟ್ ಮುಂದಿನ ದಿನಗಳಲ್ಲಿ ನಾಯಕತ್ವದ ವಿಚಾರದ ವೇಳೆ ಉಪಯೋಗಕ್ಕೆ ಬರಬಹುದು ಎಂಬ ಲೆಕ್ಕಾಚಾರವೂ ಇದೆ. ಸಿದ್ದರಾಮಯ್ಯ ಮಾತ್ರ ಜನನಾಯಕನಲ್ಲ, ತಾನೂ ಕೂಡ ಜನ ನಾಯಕ ಎಂಬ ಸಂದೇಶ ರವಾನಿಸಲು ಭಾರತ್ ಜೋಡೋ ಯಾತ್ರೆಯನ್ನು ಸಮರ್ಥವಾಗಿ ಬಳಕೆ ಮಾಡಲು ಮುಂದಾಗಿದ್ದಾರೆ. ಕೇವಲ ಹಳೆ ಮೈಸೂರು ಭಾಗ ಮಾತ್ರವಲ್ಲ, ಉತ್ತರ ಕರ್ನಾಟಕ ಭಾಗದಲ್ಲೂ ಸಂಘಟನೆಯ ಹಿಡಿತ ತಮ್ಮ ಕೈಗೆ ತೆಗೆದುಕೊಳ್ಳಲು ಯೋಚಿಸುತ್ತಿದ್ದಾರೆ.

ಈ ಎಲ್ಲಾ ಉದ್ದೇಶಗಳಿಗಾಗಿ ಸಿದ್ದರಾಮಯ್ಯ ಮತ್ತು ಅವರ ಆಪ್ತರನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಬಳಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್, ವಿಧಾನಸಭಾ ಅಧಿವೇಶವನ್ನೂ ಬಿಟ್ಟು ಭಾರತ್ ಜೊಡೋ ಸಂಘಟನೆಗೆ ಅವಿರತ ಶ್ರಮ ಹಾಕುತ್ತಿದ್ದಾರೆ. ಅದರಂತೆ ಕಳೆದ ಮೂರು ದಿನಗಳಿಂದ ಅಧಿವೇಶನಕ್ಕೆ ಡಿ.ಕೆ.ಶಿವಕುಮಾರ್ ಗೈರಾಗುವ ಮೂಲಕ ಕೇವಲ ಸಭೆ ನಡೆಸುವುದರಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.