ಭಾರತ ಪದೇ ಪದೆ ಹಿಮಾಲಯನ್ ಬ್ಲಂಡರ್ ಮಾಡುತ್ತೆ.. ತಾನು ಹೇಳಿದ ಹಾಗೆ ಭಾರತವೂ ನತಮಸ್ತಕವಾಗಿ ಕೇಳುತ್ತೆ.. ಅನ್ನೋ ಹುಚ್ಚು ನಂಬಿಕೆಯಲ್ಲಿ ಕಾರು ಕೆರೆದುಕೊಂಡು ಜಗಳಕ್ಕೆ ಬಂದಿದ್ದ ಚೀನಾದ ಸ್ಥಿತಿ ಏನಾಗಿದೆ ಈಗ? ಬರೋಬ್ಬರಿ ಒಂದು ವರ್ಷದ ಹಿಂದೆ ಗಡಿಯಲ್ಲಿ ಭಾರತೀಯ ಸೈನಿಕರು ಕೊಟ್ಟಿದ್ದ ಪೆಟ್ಟು ಒಂದು ಕಡೆಯಾದ್ರೆ.. ಭಾರತೀಯ ಜನ ಸಮಾನ್ಯರು ಎಂಥ ಮರ್ಮಾಘಾತ ಮಾಡಿದ್ದಾರೆ ಗೊತ್ತಾ? ನವರಂಗಿ ಚೀನಾಕ್ಕೆ ಏನಾಯ್ತು? ನೀವಿದನ್ನ ಓದಲೇ ಬೇಕು..!

ನಕಲಿ ವಸ್ತುಗಳ ಕಿಂಗ್​ ಚೀನಾಕ್ಕೆ ಸಪ್ತ ಪಂಚ್
ಭಾರತೀಯರಿಂದ ಮೇಡ್​​ ಇನ್ ಚೀನಾ ವಸ್ತುಗಳ ಬಾಯ್ಕಾಟ್​​
ಕಳೆದ 12 ತಿಂಗಳಲ್ಲಿ ಚೀನಾ ವಸ್ತುಗಳ ಖರೀದಿಯಲ್ಲಿ ಕುಂಠಿತ

ಚೀನಾ.. ಈ ಹೆಸರು ಇಂದು ಭೂ-ಬಾಕ, ವೈರಸ್ ಜನಕ, ಉಯಿಘರ್ ಮುಸ್ಲಿಮರ ಬದುಕೋ ಹಕ್ಕನ್ನೇ ಕಸಿದ ಮಾನವತಾವಾದದ ವಿರೋಧಿ.. ಟಿಬೇಟ್​​ನ ಕತ್ತು ಹಿಚುಕಿದ ಕೊಲೆಗಾರ, ತೈವಾನ್​​ನ ಮೇಲೆ ಕಣ್ಣು ಹಾಕಿರೋ ಸರ್ವಾಧಿಕಾರಿ ದೇಶ.. ಹಾಂಕಾಂಗ್​ ಅನ್ನ ಲಪಟಾಯಿಸಿದ ಲಂಪಟ.. ಹೀಗೆ ವಿವಿಧ ಹೆಸರುಗಳಿಗೆ ಅನ್ವರ್ಥಕವಾಗಿ ಬಳಕೆಯಾಗುವಂಥ ಪರಿಸ್ಥಿತಿ ನಿರ್ಮಿಸಿಕೊಂಡಿದೆ.. ಇದಿಷ್ಟೇ ಅಲ್ಲ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್​ ಆಧುನಿಕ ಹಿಟ್ಲರ್ ಅಂತಾ ಹೆಸರು ಪಡೆಯೋದರತ್ತಾನೂ ದಾಪುಗಾಲಿಟ್ಟಿದ್ದಾರೆ..

ಕೇವಲ ಒಂದು ವರ್ಷದ ಹಿಂದೆ ಚೀನಾ ಸಾಕಷ್ಟು ಅಪವಾದಗಳ ಹೊರತಾಗಿಯೂ ಗಟ್ಟಿಯಾಗಿಯೇ ಇತ್ತು.. ಲೋನ್ ವೂಲ್ಫ್ ಅನ್ನೋ ಡಿಪ್ಲೋಮಸಿ ತಂತ್ರದ ಮೂಲಕ ಕಂಡ ಕಂಡ ದೇಶಗಳ ವಿರುದ್ಧ, ವ್ಯಕ್ತಿಗಳ ವಿರುದ್ಧ, ನಾಯಕರ ವಿರುದ್ಧ ಹರಿಹಾಯುತ್ತಲೇ ಇತ್ತು.. ಸಾಲದ ಸುಳಿಯಲ್ಲಿ ಚಿಕ್ಕ ಪುಟ್ಟ ದೇಶಗಳನ್ನು ಸಿಲುಕಿಸುತ್ತಲೇ ಅವುಗಳ ನೆಲವನ್ನು ಲಪಟಾಯಿಸುತ್ತಲೇ ಇತ್ತು.. ಈ ಗುಣ ಈಗ ನಿಂತಿದೆ ಅಂತಲ್ಲ.. ಆದ್ರೆ ಅದರ ಕಾರ್ಯವೈಖರಿ ಬದಲಾಗುತ್ತಿದೆ.. ಇದೇ ಕಾರಣಕ್ಕೆ ಶಿ ಜಿನ್​ಪಿಂಗ್ ಕೂಡ ನಮ್ಮ ದೇಶವನ್ನ ಲವ್ವೇಬಲ್ ಚೀನಾ ಆಗಿ ಹೊರಗೆ ಬಿಂಬಿಸಿ ಅಂತ ನನ್ನ ರಾಯಭಾರಿಗಳಿಗೆ ಕರೆ ಕೊಟ್ಟಿದ್ದಾರೆ..

ಕರ್ನಲ್ ಸಂತೋಷ್ ಬಾಬು, ಕಳೆದ ವರ್ಷ ಗಲ್ವಾನಲ್ಲಿ ವೀರ ಮರಣವನ್ನಪ್ಪಿದ್ದವರು

ಕಳೆದ ವರ್ಷದ ಸ್ಥಿತಿ ನೆನಪಿಸಿಕೊಳ್ಳಿ.. ಆಗ ಚೀನಾ ಕೊಟ್ಟ ಗಿಫ್ಟ್​ ಕೊರೊನಾ ವೈರಸ್​​ನ ಹೊಡೆತಕ್ಕೆ ಭಾರತವೂ ಸಿಲುಕಿತ್ತು.. ದೇಶಾದ್ಯಂತ ಲಾಕ್​ಡೌನ್ ಹಾಕಿತ್ತು.. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ದೇಶದ ಜನರ ಜೀವ ಮತ್ತು ಜೀವನವನ್ನು ಉಳಿಸಬೇಕಾದ ಅತ್ಯಂತ ಪ್ರಮುಖ ಕರ್ತವ್ಯವಿತ್ತು.. ಇಂಥ ಒಂದು ಸಂದಿಗ್ಧ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸಿದ ಡ್ರಾಗನ್​​ ತನ್ನ ಅಧೋಗತಿಯ ಮುನ್ನುಡಿಯನ್ನ ತಾನೇ ಬರೆದುಕೊಂಡಿದು.. ಅದರ ಇಂಪ್ಯಾಕ್ಟ್ ಇಂದು ಏನೆಲ್ಲಾ ಆಗಿದೆ ಗೊತ್ತಾ..?

 ನವರಂಗಿ ಚೀನಿಯರಿಗೆ.. ಸಪ್ತ ಪೆಟ್ಟು..!

ಪೆಟ್ಟು-1: ಗಲ್ವಾನ್​​ನಲ್ಲಿ ಚೀನಾಕ್ಕೆ ಸಿಡಿಲು ಬಡಿದ ಅನುಭವ

ಕಳೆದ ವರ್ಷ ಜೂನ್ 14ರ ರಾತ್ರಿ.. ಗಲ್ವಾನ್ ವ್ಯಾಲಿಯ ನದಿ ತಿರುವಿನಲ್ಲಿ ಚೀನಾದ ಟೆಂಟ್ ಮತ್ತೆ ತಲೆ ಎತ್ತಿತ್ತು. ಹಿಂದಿನ ದಿನದ ಮಾತುಕತೆ ವೇಳೆ ತಾನೆ ಒಪ್ಪಿಕೊಂಡು ಭಾರತದ ಭಾಗದಲ್ಲಿದ್ದ ಟೆಂಟ್​ ಅನ್ನು ಚೀನಿ ಸೇನೆ ತೆಗೆದು ಹಾಕಿತ್ತು. ಆದ್ರೆ ಮರುದಿನವೇ ಅಲ್ಲಿ ಮತ್ತೆ ಅದು ತಲೆ ಎತ್ತಿದ್ದನ್ನು ಬಿಹಾರ ರೆಜಿಮೆಂಟ್​​ನ ಕರ್ನಲ್ ಸಂತೋಷ್ ಬಾಬು ಮತ್ತು ತಂಡ ಗಮನಿಸಿತ್ತು. ಸಹಜವಾಗಿ ಮಾತನಾಡಿ ಅವರಿಗೆ ತಿಳಿ ಹೇಳಬೇಕು ಅಂತಾ ಸೌಮ್ಯ ಸ್ವಭಾವದ ಸಂತೋಷ್ ಬಾಬು ಆ ಟೆಂಟ್ ಬಳಿ ತೆರಳಿದಾಗ ಸಮ್​ಥಿಂಗ್ ಈಸ್ ರಾಂಗ್ ಅನ್ನೋದು ಅವರ ಗಮನಕ್ಕೆ ಬಂದಿತ್ತು. ಬಳಿಕ ಅಂದು ರಾತ್ರಿ ಮಲ್ಲಯುದ್ಧವೇ ನಡೆದು ಹೋಯ್ತು. ಅನಾಗರಿಕರಂತೆ ಚೀನಿ ಸೈನಿಕರು ಮೊದಲೇ ತಯಾರಾಗಿ ಬಂದಿದ್ದು, ಮೊಳೆ ಇರುವ ರಾಡ್​ನೊಂದಿಗೆ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ರು. ಈ ದಾಳಿಯಲ್ಲಿ ಭಾರತ, ಕರ್ನಲ್ ಸಂತೋಷ್ ಬಾಬು ಅವರೂ ಸೇರಿದಂತೆ 20 ಯೋಧರನ್ನು ಕಳೆದುಕೊಂಡಿತ್ತು. ಆದ್ರೆ.. ಭಾರತೀಯ ಯೋಧರು ಬರೋಬ್ಬರಿ 45ಕ್ಕೂ ಹೆಚ್ಚು ಚೀನಿ ಸೈನಿಕರನ್ನು ಹತ್ಯೆ ಮಾಡಿದ್ದಲ್ಲದೇ 100ಕ್ಕೂ ಹೆಚ್ಚು ಚೀನಿಯರನ್ನು ತೀವ್ರವಾಗಿ ಗಾಯಗೊಳಿಸಿದ್ದರು. ಈ ಸೋಲು ಹಾಗೂ ಅಂದು ಉಂಟಾದ ಭಯ ಇಂದಿಗೂ ಚೀನಿ ಸೈನಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿರೋದು ಸುಳ್ಳಲ್ಲ.

ಪೆಟ್ಟು-2: ಚೀನಾ ಸ್ಟ್ರಾಂಗ್ ಅಲ್ಲಾ ಅನ್ನೋದು ಜಗಜ್ಜಾಹೀರು

ನಮ್ಮ ಅನುಭವಕ್ಕೆ ಬಂದಾಗ ಯಾವನೋ ಒಬ್ಬ ದೊಡ್ಡ ರೌಡಿನೋ ಅಥವಾ ಲೋಕಲ್ ಪೊರ್ಕಿಯೋ ಇದ್ದರೆ.. ಅವರ ವೈಯಕ್ತಿಕ ಬಲಕ್ಕಿಂತ.. ಅವರ ಬಗ್ಗೆ ಇರೋ ಭಯ, ಇಮೇಜ್​ ಅದು ಸಾಕಷ್ಟು ಜನರ ಹೆದರುವಂತೆ ಮಾಡುತ್ತೆ. ಆದ್ರೆ ಹೀರೋ ಆಗಿ ಬರೋ ಒಬ್ಬ ಖಡಕ್ ಪೊಲೀಸ್ ಆಫೀಸರ್ ಅವರ ಇಮೇಜ್​​ ಅನ್ನ ತೆಗೆದು ಹಾಕಿದ್ರೆ ಸಾಕು.. ಅವರ ಮನೆಯ ಮಕ್ಕಳೂ ಅಂಥವರಿಗೆ ಹೆದರಲ್ಲ.. ಚೀನಾದ ಇಂದಿನ ಸ್ಥಿತಿಯೂ ಹೀಗೆ ಆಗಿದೆ.. ಯಾಕಂದ್ರೆ ಒಂದು ಕಡೆ ಚೀನಿ ಸೈನಿಕರಿಗೆ ಲಡಾಖ್​​ನ ಹವಾಮಾನವನ್ನು ತಡೆಯೋಕೆ ಆಗದೇ ನಿರಂತರವಾಗಿ ಶೇ.90ರಷ್ಟು ಸೈನಿಕರನ್ನು ಅದು ರೊಟೇಟ್ ಮಾಡುತ್ತಲೇ ಇದೆ.. ಇನ್ನೊಂದು ಕಡೆ ಭಾರತೀಯ ಯೋಧರ ಬಲದ ಮುಂದೆ ಅದರ ಆಟ ನಡೆಯಲಿಲ್ಲ. ಅಷ್ಟೇ ಅಲ್ಲ ಚೀನಾಕ್ಕೆ ಎದಿರು ನಿಂತರೆ, ಅವರಿಗೆ ಮರಳಿ ಏಟು ಕೊಡೋಕೆ ಆಗಲ್ಲ ಅನ್ನೋ ಸಿಂಪಲ್ ಫಾರ್ಮುಲಾ ಇಂದು ಜಗತ್ತಿನ ಮುಂದೆ ಜಾಹಿರಾಗಿದೆ. ಇದೇ ಕಾರಣದಿಂದಾಗಿ ತೈವಾನ್, ವಿಯೇಟ್ನಾಂ, ಮಂಗೋಲಿಯಾ, ಮಲೇಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ಇಂಡೋನೇಷ್ಯಾ, ಜಪಾನ್, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳು ಇಂದು ಚೀನಾಕ್ಕೆ ಗುರ್ ಅಂತಿವೆ.. ತಮ್ಮದೇ ಆದ ರೀತಿಯಲ್ಲಿ ವಿಭಿನ್ನ ಪೆಟ್ಟುಗಳನ್ನು ನೀಡುತ್ತಿವೆ..

ಪೆಟ್ಟು-3: ಪ್ರತಿಯೊಬ್ಬ ಭಾರತೀಯನೂ ಒಬ್ಬ ಯೋಧ
ಗದ್ದಲದ ಪ್ರಜಾಪ್ರಭುತ್ವವನ್ನು ಹೊಂದಿರೋ ಭಾರತ ಚೀನಾದಂಥ ಸರ್ವಾಧಿಕಾರಿಗಳ ರಾಷ್ಟ್ರಕ್ಕೆ ಒಡೆದ ಮನೆಯಂತೆ ಕಾಣೋದು ಸಹಜ. ಆದ್ರೆ ರಾಷ್ಟ್ರದ ವಿಚಾರ ಬಂದಾಗ ಪ್ರತಿಯೊಬ್ಬ ಭಾರತೀಯನೂ ಒಬ್ಬೊಬ್ಬ ಸೈನಿಕನಾಗಿ ತಮ್ಮದೇ ಆದ ರೀತಿಯಲ್ಲಿ ವೈರಿಗೆ ಪೆಟ್ಟು ನೀಡೋದ್ರಲ್ಲಿ ನಿಸ್ಸೀಮರು ಅನ್ನೋದನ್ನ ಈಗ ಚೀನಾ ಅರಿಯುತ್ತಿದೆ.

ಒಂದೇ ಒಂದು ವಸ್ತು ಖರೀದಿಸಿದ ಶೇ.43ರಷ್ಟು ಭಾರತೀಯರು
ದೇಶದ 281 ಜಿಲ್ಲೆಗಳಲ್ಲಿ ನಡೆದ ಸರ್ವೇಯಲ್ಲಿ ಮಾಹಿತಿ ಬಹಿರಂಗ

ಹೌದು.. ಲೋಕಲ್ ಸರ್ಕಲ್ಸ್​ ಅನ್ನೋ ಹೆಸರಿನ ಕಮ್ಯುನಿಟಿ ಸೋಶಿಯಲ್ ಮೀಡಿಯಾ ಕೈಗೊಂಡ ಒಂದು ಸರ್ವೆಯಲ್ಲಿ ಈ ಮಹತ್ವದ ವಿಚಾರ ಬಯಲಾಗಿದೆ. ದೇಶದ 281 ಜಿಲ್ಲೆಗಳಲ್ಲಿ ಈ ಸರ್ವೇ ನಡೆಸಲಾಗಿದ್ದು, ಬರೋಬ್ಬರಿ ಶೇ.43ರಷ್ಟು ಭಾರತೀಯರು ಕಳೆದ 12 ತಿಂಗಳಲ್ಲಿ ಒಂದೇ ಒಂದು ಚೀನಾ ವಸ್ತು ಖರೀದಿಸಿಲ್ಲ ಅನ್ನೋದು ತಿಳಿದು ಬಂದಿದೆ. ಅಷ್ಟೇ ಅಲ್ಲ, ಉಳಿದ ಶೇ.60ರಷ್ಟು ಜನರಲ್ಲಿ ಶೇ.34ರಷ್ಟು ಜನರು ಕೇವಲ ಒಂದು ಅಥವಾ ಎರಡು ಚೀನಾ ವಸ್ತುಗಳನ್ನು ಖರೀದಿಸಿದ್ದಾರೆ. ಕೇವಲ ಶೇ.3 ರಷ್ಟು ಜನರು 10 ರಿಂದ 15 ಮೇಡ್​ ಇನ್ ಇಂಡಿಯಾ ವಸ್ತುಗಳನ್ನು ಖರೀದಿಸಿದ್ದರೆ, ಶೇ.1 ರಷ್ಟು ಜನರು 15 ರಿಂದ 20 ವಸ್ತುಗಳನ್ನು ಖರೀದಿ ಮಾಡಿದ್ದಾರೆ ಅನ್ನೋದು ಬಯಲಾಗಿದೆ..

ಅಂದ್ರೆ ಯಾವ ದೇಶ ಚೀನಾಕ್ಕೆ ಅತಿ ದೊಡ್ಡ ಮಟ್ಟದ ಬ್ಯುಸಿನೆಸ್​ ಕೊಡ್ತಿತ್ತೋ ಅಂಥ ಭಾರತದ ದೇಶದ ಜನರು ಚೀನಾವನ್ನು ತಮ್ಮ ವೈರಿ ಅಂತಾ ಬಲವಾಗಿ ಭಾವಿಸಿಬಿಟ್ಟಿದ್ದಾರೆ ಅನ್ನೋದು ಇದ್ರಿಂದ ತಿಳಿದು ಬರ್ತಿದೆ. ಗಲ್ವಾನ್​​ನಲ್ಲಿ ಕಿರಿಕ್ ಮಾಡಿದ ಚೀನಾ ವಸ್ತುಗಳನ್ನು ಜನರೇ ಸ್ವಯಂಪ್ರೇರಿತರಾಗಿ ಬಾಯ್​ಕಾಟ್ ಮಾಡ್ತಿರೋದು ಚೀನಾಕ್ಕೆ ದೊಡ್ಡ ಮಟ್ಟದ ತಲೆ ನೋವು ಉಂಟು ಮಾಡ್ತಿರೋದು ಸುಳ್ಳಲ್ಲ..

ಪೆಟ್ಟು -4: ಕೊರೊನಾ ವೈರಸ್​​ ಮೂಲ ಚೀನಾವೇ ಅನ್ನೋ ವಾದಕ್ಕೆ ಬಲ
ಈ ಮುಂಚೆ ಚೀನಾದ ವಿರುದ್ಧ ಅಥವಾ ಚೀನಾಕ್ಕೆ ಬೇಸರ ಉಂಟುಮಾಡುವಂಥ ವಿಚಾರಗಳು ಬಂದಾಗ.. ಭಾರತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸ್ತಿರಲಿಲ್ಲ. ಆದ್ರೆ ಯಾವಾಗ ಭಾರತ ತೊಂದರೆಯಲ್ಲಿದ್ದ ಸಂದರ್ಭದಲ್ಲಿ ಲಡಾಖ್​​ನಲ್ಲಿ ಕಿರಕ್ ಮಾಡಿತೋ.. ಅದು ಭಾರತ ತನ್ನ ನಿರ್ಧಾರ ಬದಲಿಸುವಂತೆ ಮಾಡಿದ್ದು ಸುಳ್ಳಲ್ಲ.. ಇದೇ ಕಾರಣದಿಂದಾಗಿ ಇಂದು ಕೊರೊನಾ ವೈರಸ್​ ಮೂಲವನ್ನು ಬಹಿರಂಗ ಪಡಿಸಲೇಬೇಕು ಅನ್ನೋ ಬೇಡಿಕೆಗೆ ಭಾರತವೂ ಇಂದು ಧ್ವನಿಗೂಡಿಸಿದೆ.. ಜೊತೆಗೆ, ಎಲ್ಲ ಅಂತಾರಾಷ್ಟ್ರೀಯ ಫೋರಂಗಳಲ್ಲೂ ಚೀನಾದ ವಿರುದ್ಧ ತನಿಖೆಗೆ ತನ್ನ ಬೆಂಬಲ ನೀಡುತ್ತಿದೆ.. ಇದು ನಿಜಕ್ಕೂ ಚೀನಾಕ್ಕೆ ದೊಡ್ಡ ಹಿನ್ನಡೆ ಎಂದೇ ಗುರ್ತಿಸಲಾಗುತ್ತಿದೆ..

ಒಂದು ಕಡೆ ತನಿಖೆಗೆ ಭಾರತದ ಬೆಂಬಲದ ನಡುವೆಯೇ ಕೊರೊನಾ ವೈರಸ್ ಚೀನಾದಲ್ಲೇ ಹುಟ್ಟಿದ್ದು ಅನ್ನೋ ವಾದವೂ ಬಲವಾಗ್ತಿದೆ.. ಇದು ಚೀನಾದ ನಿಜವಾದ ಆತಂಕಕ್ಕೂ ಕಾರಣವಾಗ್ತಿದೆ..

ಪೆಟ್ಟು-5: ಭಾರತಕ್ಕೆ ಅಮೆರಿಕಾ ಬಲ-ಚೀನಾಕ್ಕೆ ಕಾಡುತ್ತಿದೆ ದೊಡ್ಡ ಭಯ
ಅಮೆರಿಕಾದಲ್ಲಿ ಡೋನಾಲ್ಡ್​ ಟ್ರಂಪ್ ಕೆಳಗೆ ಇಳಿದು, ಜೋ ಬೈಡನ್ ಅಧ್ಯಕ್ಷರಾಗ್ತಿದ್ದ ಹಾಗೆ ಚೀನಾದ ಮನಸ್ಸಿನಲ್ಲಿ ಗೆಲುವು ಮೂಡಿದ್ದು ಸುಳ್ಳಲ್ಲ. ಜೋ ಬೈಡನ್ ನಮಗೆ ಸಪೋರ್ಟ್​ ಮಾಡೇ ಮಾಡ್ತಾರೆ ಅನ್ನೋದು ಚೀನಾದ ನಂಬಿಕೆಯೂ ಆಗಿತ್ತು. ಆದ್ರೆ ಜೋ ಬೈಡನ್​ ಚೀನಾದ ವಿರುದ್ಧ ಭಾರತಕ್ಕೆ ಬೆಂಬಲ ನೀಡಿದ್ದಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಚೀನಾವನ್ನ ಕಟ್ಟಿಹಾಕಲು ಯೋಜನೆ ಜಾರಿಗೆ ತರ್ತಾ ಇದ್ದಾರೆ. ಇದೇ ಕಾರಣದಿಂದ ವಿಶ್ವದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೆರಿಕಾ, ಇಂಗ್ಲೆಂಡ್, ಜಪಾನ್, ಫ್ರಾನ್ಸ್​, ಇಟಲಿ, ಕೆನಡಾ ಮುಂತಾದ ರಾಷ್ಟ್ರಗಳ ಒಕ್ಕೂಟ G-7, ಈ ಬಾರಿ ಚೀನಾದ ವಿರುದ್ಧ ನೇರವಾಗಿ ಗುಟುರುಹಾಕಿವೆ. ಅಲ್ಲದೇ ಎಲ್ಲ ಇಂಟರ್​ನೆಟ್ ಆಫ್ ಮಾಡಿ ಗೌಪ್ಯ ಸಭೆಯನ್ನ ಕೂಡ ನಡೆಸಿತ್ತು. ವಿಶೇಷ ಅಂದ್ರೆ ಈ ಸಭೆಗೆ ಈ ಬಾರಿ ಭಾರತ ಕೂಡ ವಿಶೇಷ ಅತಿಥಿಯಾಗಿ ಪಾಲ್ಗೊಂಡಿತ್ತು. ಇದಿಷ್ಟೇ ಅಲ್ಲ ಅಮೆರಿಕಾದ ಅತ್ಯಾತ್ಪ ದೇಶಗಳ ಒಕ್ಕೂಟ ನ್ಯಾಟೋ ಕೂಡ ಈ ಬಾರಿ ಚೀನಾವನ್ನು ನಮ್ಮ ಭದ್ರತೆಗೆ ಸಂಭವನೀಯ ಧಕ್ಕೆ ತರಲಿರುವ ದೇಶ ಅಂತಾ ಚೀನಾವನ್ನ ಘೋಷಿಸಿದೆ.

ಪೆಟ್ಟು-6: ದಕ್ಷಿಣಾ ಚೀನಾ ಕಡಲಿನ ವಿಚಾರದಲ್ಲೂ ವಿರೋಧ ನಿಲುವು
ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದ ಭಾರತ ಈ ಹಿಂದೆ ಬಹಿರಂಗವಾಗಿ ಇತರೆ ದೇಶಗಳ ವಿಚಾರದಲ್ಲಿ ಮಾತನಾಡ್ತಿರಲಿಲ್ಲ.. ಹೀಗಾಗಿ ಸಾಕಷ್ಟು ಬಾರಿ ಟೀಕೆಗೂ ಒಳಗಾಗಿತ್ತು. ಆದ್ರೆ ಚೀನಾ ಭಾರತವನ್ನ ಇದಿರು ಹಾಕಿಕೊಂಡಿದ್ದು ಇಲ್ಲೂ ಸಾಕಷ್ಟು ಆ ದೇಶಕ್ಕೆ ಹಿನ್ನಡೆಯಾಗುವಂತಾಗಿದೆ. ಹಿಂದೂ ಮಹಾಸಾಗರದಲ್ಲಿ ಇಂದಿಗೂ ಅತ್ಯಂತ ಪವರ್​ಫುಲ್ ನೇವಿ ಹೊಂದಿರೋ ಭಾರತ ಮನಸ್ಸು ಮಾಡಿದ್ರೆ, ಚೀನಾದ ವ್ಯಾಪಾರ ವಹಿವಾಟನ್ನ ಧೂಳೀಪಟ ಮಾಡುವ ಸಾಮರ್ಥ್ಯ ಹೊಂದಿದೆ. ಸ್ಟಾರ್ಟಜಿಕ್ ಮಲಕ್ಕಾ ಸ್ಟ್ರೀಟ್ ಅನ್ನೋ ಕಡಲು ಮಾರ್ಗವನ್ನ ಬದ್​ ಮಾಡಿದ್ರೆ, ಚೀನಾ ಪೆಟ್ರೋಲ್ ಕೂಡ ಸಿಗದಂಥ ಸ್ಥಿತಿಗೆ ತಲುಪಬಲ್ಲದು. ಇಷ್ಟಾದ್ರೂ ದಕ್ಷಿಣ ಚೀನಾ ಕಡಲಿನ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ, ಇದೇ ಮೊದಲ ಬಾರಿಗೆ ನೇರವಾಗಿ ಚೀನಾದ ರಕ್ಷಣಾ ಸಚಿವ ಪಾಲ್ಗೊಂಡಿದ್ದ ಸಭೆಯಲ್ಲಿ ಮಾತನಾಡ್ತಿದ್ದ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದಕ್ಷಿಣ ಚೀನಾ ಕಡಲು ಇಡೀ ವಿಶ್ವಕ್ಕೆ ಸೇರಿದ್ದು..ಇಲ್ಲಿ ಸರಗಾವಾಗಿ ಹಡಗುಗಳು ಚೆಲಿಸಬೇಕು ಅಂತಾ ಹೇಳಿಕೆ ನೀಡಿದ್ದಾರೆ..

ಪೆಟ್ಟು-7: ಕ್ವಾಡ್​ಗೆ ಮತ್ತಷ್ಟು ಬಲ.. ಶ್ರೀಲಂಕಾ, ಬಾಂಗ್ಲಾ ಆಸಕ್ತಿ
ಭಾರತ ಅಮೆರಿಕಾದೊಂದಿಗೆ ಅತ್ಯಾಪ್ತ ಸಂಬಂಧ ಹೊಂದರಬಾರದು ಅನ್ನೋ ನಿಲುವನ್ನ ಚೀನಾ ಮೊದಲಿನಿಂದಲೂ ಹೊಂದಿತ್ತು. ಇದೇ ಕಾರಣದಿಂದಾಗಿಯೇ ಲಡಾಖ್​ನಲ್ಲಿ ಚೀನಾ ಕಿರಿಕ್ ಮಾಡಿತ್ತು ಅಂತಾ ರಕ್ಷಣಾ ತಜ್ಞರು ಹೇಳ್ತಿದ್ದರು. ಆದ್ರೆ, ಯಾವಾಗ ಚೀನಾ ಲಡಾಖ್​ನಲ್ಲಿ ಚೀನಾ ಕಿರಿಕ್ ಮಾಡ್ತೋ.. ಭಾರತ ಅತ್ಯಂತ ವೇಗವಾಗಿಯೇ ಅಮೆರಿಕದತ್ತ ವಾಲಿದ್ದು ಸುಳ್ಳಲ್ಲ. ಇದೇ ಕಾರಣದಿಂದಾಗಿ, ಇಂದು ಅಮೆರಿಕಾದ ಸ್ಟ್ರಾಟೆಜಿಕ್ ಪಾರ್ಟ್ನರ್ ಆಗಿ ಭಾರತ ರೂಪಗೊಂಡಿದೆ. ಇನ್ನೊಂದೆಡೆ ಭಾರತ-ಅಮೆರಿಕಾ-ಆಸ್ಟ್ರೇಲಿಯಾ ಮತ್ತು ಜಪಾನ್ ರಾಷ್ಟ್ರಗಳು ಸೇರಿ ರಚಿಸಿದ ಕ್ವಾಡ್​​ ಸಂಘಟನೆಯನ್ನು ಮತ್ತಷ್ಟು ಬಲಗೊಂಡಿದೆ. ಜೊತೆಗೆ ಚೀನಾದ ಮೋಸದಾಟದಿಂದ ಸುಸ್ತಾಗಿರೋ ಬಾಂಗ್ಲಾದೇಶ, ಶ್ರೀಲಂಕ, ಸಿಂಗಾಪೋರ್ ಮುಂತಾದ ರಾಷ್ಟ್ರಗಳೂ ಕ್ವಾಡ್ ಸೇರಲು ಆಸಕ್ತಿ ವ್ಯಕ್ತಪಡಿಸಿವೆ.

ಚೀನಾದ ಅಧೋಗತಿಗೆ ಮುನ್ನುಡಿ
ಒಂದು ಕಡೆ ಮಾನವೀಯ ಸಂಬಂಧ ಮೌಲ್ಯವೇ ತಿಳಿಯದ ಚೀನಾ ಭಾರತದಲ್ಲಿ ಕೊರೊನಾ ಕಾರಣದಿಂದಾಗಿ ಉಂಟಾದ ಸಾವು ನೋವು ಮತ್ತು ಜಿ-7 ರಾಷ್ಟ್ರಗಳನ್ನಿಟ್ಟುಕೊಂಡು ಕಾರ್ಟೂನ್ ರಚಿಸಿ.. ಭಾರತವನ್ನು ಅಣುಕಿಸುತ್ತಿದೆ.. ಇನ್ನೊಂದೆಡೆ ಭಾರತ ಯಾವುದೇ ಸಂಶಯವನ್ನೂ ಇಟ್ಟುಕೊಳ್ಳದೇ ಚೀನಾದೊಂದಿಗೆ ಕೈ ಜೋಡಿಸಲಿ.. ಈ ಮೂಲಕವ ನಾವು ಅಭಿವೃದ್ಧಿಯಾಗೋಣ ಅನ್ನೋ ಆಹ್ವಾನವನ್ನೂ ಕೊಡುತ್ತೆ.. ಲಡಾಖ್​ನಲ್ಲಿ ಒಂದುಕಡೆ ಒಪ್ಪಂದಂತೆ ಹಿಂದೆ ಸರಿದ್ರೂ.. ಇನ್ನೊಂದು ಭಾಗದಲ್ಲಿ ಒಪ್ಪಂದಗಳಿಗೆ ಕ್ಯಾರೇ ಎನ್ನದೇ ಯುದ್ಧ ವಿಮಾನಗಳ ಅಭ್ಯಾಸ, ಹೊಸ ಬಾಂಬರ್ ವಿಮಾನದ ಅಭ್ಯಾಸ ನಡೆಸುತ್ತಿದೆ.. ತನ್ನನ್ನು ತಾನು ಶಾಂತಿಪ್ರಿಯ ರಾಷ್ಟ್ರ ಎಂದು ಕರೆಸಿಕೊಳ್ಳುತ್ತಲೇ ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಹರಡಿಸಿದೆ.. ಹೀಗೆ ಸದಾ ವಿರೋಧಾಭಾಸದ ಹೇಳಿಕೆ, ನಡುವಳಿಕೆಯನ್ನು ತೋರಿಸೋ ಚೀನಾ, ಈ ಬಾರಿಯಂತೂ ಸಾಕಷ್ಟು ಆತಂಕ್ಕೂ ಎದುರಾಗಿರೋದು ಅದರ ಹೇಳಿಕೆಗಳಿಂದಲೇ ತಿಳಿದು ಬರ್ತಿದೆ. ಇದು ನಿಜಕ್ಕೂ ಚೀನಾದ ಅಧೋಗತಿಗೆ ಮುನ್ನುಡಿಯಾಗ್ತಿರೋದಂತೂ ಸುಳ್ಳಲ್ಲ..

ಚೀನಾದ ಯಡವಟ್ಟಿನಿಂದಾಗಿ ಇಂದು ಲಡಾಖ್​ನಲ್ಲಿ 50 ಸಾವಿರಕ್ಕೂ ಹೆಚ್ಚು ಭಾರತೀಯ ಸೈನಿಕರು ಬೀಡು ಬಿಡುವಂತಾಗಿದ್ದರೆ, ಭಾರತೀಯರೂ ಬಾಯ್​ಕಾಟ್ ಚೀನಾ ಅಂತಿರೋದು ಆ ದೇಶಕ್ಕೆ ಡಬಲ್ ಪೆಟ್ಟು ನೀಡಿದ ಹಾಗೆ ಆಗಿರೋದು ಸತ್ಯ. ಆದ್ರೆ, ಚೀನಾಕ್ಕೆ ಬುದ್ಧಿ ಕಲಿಸಲು ಇಷ್ಟು ಸಾಕಾ? ಇನ್ನೂ ಕ್ರಮಗಳು ಬೇಕಾ? ಅನ್ನೋ ಪ್ರಶ್ನೆಗೆ ಭವಿಷ್ಯವೇ ಉತ್ತರ ಹೇಳಲಿದೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಭಾರತ ಎದುರು ಹಾಕಿಕೊಂಡ ಚೀನಾಕ್ಕೆ ಏಳು ಪೆಟ್ಟು; ಡ್ರಾಗನ್ ಈಗ ಬಾಲ ಸುಟ್ಟ ಬೆಕ್ಕು..! appeared first on News First Kannada.

Source: newsfirstlive.com

Source link