ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನ ಸೋಲು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆದ್ರೆ ಇದೇ ಸೋಲು ಟೀಮ್ ಇಂಡಿಯಾಗೆ ಪಾಠವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲ, ಇದೇ ಸೋಲು ಟೆಸ್ಟ್​ ತಂಡದ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದೆ. ಇಂಥದ್ದೊಂದು ಚರ್ಚೆಗೆ ಕಾರಣ, ಕ್ಯಾಪ್ಟನ್​​ ಕೊಹ್ಲಿಯ ಒಂದು ಹೇಳಿಕೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಟೀಮ್ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಿದ್ದಾಗಿದೆ. ಮೂರು ವರ್ಷಗಳ ಹೋರಾಟಕ್ಕೆ ಒಂದೇ ಒಂದು ಪಂದ್ಯದ ವೈಫಲ್ಯ ಮಣ್ಣುಪಾಲಾಗಿಸಿದೆ. ಸೋಲಿನ ಪರಾಮರ್ಶೆಯ ಲೆಕ್ಕಾಚಾರಗಳು, ಕ್ರಿಕೆಟ್​​ ಅಂಗಳದಲ್ಲಿ ಜೊರಾಗಿಯೇ ನಡೀತಿದೆ. ಟೀಮ್ ಇಂಡಿಯಾ ಕಾಂಬಿನೇಷನ್, ಬ್ಯಾಟ್ಸ್​ಮನ್​​ಗಳ ವೈಫಲ್ಯ, ಆ ಆಟಗಾರನ ಬದಲಿಗೆ ಈತನಿಗೆ ಸ್ಥಾನ ನೀಡಬೇಕಿತ್ತು, ಮುಕ್ಕಾಲೂ ದಿನ ಬ್ಯಾಟಿಂಗ್ ನಡೆಸಿದ್ದರೆ ಕನಿಷ್ಠ ಡ್ರಾ ಸಾಧಿಸಬಹುದಿತ್ತು ಅನ್ನೋ ಇನ್ನಿತ್ಯಾದಿ ಚರ್ಚೆಗಳು ನಡೀತಿದೆ.
ಆದರೆ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕನ ಒಂದೇ ಒಂದು ಹೇಳಿಕೆ ಕುತೂಹಲ ಹುಟ್ಟಿಹಾಕಿದೆ. ಆ ಒಂದು ಹೇಳಿಕೆ ಟೆಸ್ಟ್ ತಂಡದ ಭವಿಷ್ಯದ ಜೊತೆಗೆ ತಂಡದಿಂದ ಯಾರೆಲ್ಲಾ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಚರ್ಚೆಯ ಕೇಂದ್ರವನ್ನಾಗಿಬಿಟ್ಟಿದೆ.

ಟೆಸ್ಟ್​ ತಂಡದಲ್ಲಿ ಬದಲಾವಣೆಯ ಮುನ್ಸೂಚನೆ…!
ಹೌದು, ಸದ್ಯದ ಟೀಮ್ ಇಂಡಿಯಾ ಟೆಸ್ಟ್ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಟಾಪ್ ಆರ್ಡರ್, ಮಿಡಲ್ ಆರ್ಡರ್​, ಬೌಲಿಂಗ್ ಡಿಪಾರ್ಟ್​ಮೆಂಟ್ ಹೀಗೆ ಪ್ರತಿ ವಿಭಾಗದಲ್ಲೂ ಸ್ಪೆಷಲಿಸ್ಟ್​ ಆಟಗಾರರ ದಂಡೇ ಇದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ಗೆ ಎಂಟ್ರಿ ಕೊಟ್ಟಿರುವುದೇ ಇದಕ್ಕೆ ಸಾಕ್ಷಿ. ಟೆಸ್ಟ್​ ಕ್ರಿಕೆಟ್​ನ ಅಧಿಪತಿಯಾಗೇ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​​ನಲ್ಲಿ ಹೀನಾಯ ಸೋಲು ಕಂಡಿದೆ. ಆದ್ರೆ ಇದೇ ಸೋಲು ಟೀಮ್ ಇಂಡಿಯಾ ಟೆಸ್ಟ್​ ತಂಡದ ಹೊಸ ಮನ್ವಂತರಕ್ಕೆ ಕಾರಣವಾಗ್ತಿದೆ. ಫೈನಲ್​​ ಸೋಲಿನ ಬಳಿಕ ಕೊಹ್ಲಿ ನೀಡಿರುವ ಈ ಒಂದು ಹೇಳಿಕೆ ಟೆಸ್ಟ್​ ತಂಡದಲ್ಲಿ ಭಾರೀ ಬದಲಾವಣೆಯ ಮುನ್ಸೂಚನೆಯ ಸೂಚನೆಯೇ ಆಗಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಸೋಲಿನ ಬಳಿಕ ಅಸಮಾಧಾನಗೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಅನುಭವಿ ಆಟಗಾರರಿಗೆ ಶಾಕ್ ನೀಡಿದ್ದಾರೆ. ಅದರಲ್ಲೂ ರನ್​ ಗಳಿಸಲು ಪರದಾಡಿದ ಆಟಗಾರರಿಗೆ ಪರೋಕ್ಷವಾಗಿಯೇ ಎಚ್ಚರಿಕೆಯ ಸಂದೇಶ ಸಹ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಟಗಾರರ ಹೆಸರನ್ನ ಪ್ರಸ್ತಾಪಿಸದಯೇ ಕೆಂಡಕಾಡಿದ್ದಾರೆ.

ನಾವು ಬೌಲರ್​ಗಳನ್ನ ಕಟ್ಟಿಹಾಕುವತ್ತ ಎಚ್ಚರ ವಹಿಸಬೇಕು. ಒಂದೇ ಕಡೆ ಹೆಚ್ಚು ಬಾಲ್​ ಎಸೆಯಲು ಅವಕಾಶ ನೀಡಬಾರದು. ಎದುರಾಳಿಗಳ ಮೇಲೆ ಒತ್ತಡ ತರುವಂತೆ ಪದೇ ಪದೇ ರನ್​ ಗಳಿಸಬೇಕು. ಆ ಮೂಲಕ ಎದುರಾಳಿ ಬೌಲರ್​ಗಳನ್ನ ನಿಯಂತ್ರಿಸಬಹುದು. ಪರಿಸ್ಥಿತಿ ನಮಗೆ ಪೂರಕವಾಗಬೇಕೆಂದರೆ ಅಪಾಯಕಾರಿ ಸನ್ನಿವೇಶಗಳನ್ನ ಎದುರಿಸಲು ಸಿದ್ಧರಿರಬೇಕು. ಕೆಲವೊಂದು ಸಂದರ್ಭದಲ್ಲಿ ಔಟ್​ ಆಗದೇ ನಿಲ್ಲುವುದು ಎಷ್ಟು ಮುಖ್ಯವೋ, ನ್ಯೂಜಿಲೆಂಡ್​ನಂತ ತಂಡದ ವಿರುದ್ಧ ಔಟ್​ ಆಗುವುದರ ಬಗ್ಗೆ ಚಿಂತಿಸದೇ ಆಡುವುದೂ ಅಷ್ಟೇ ಮುಖ್ಯ.

ವಿರಾಟ್​​ ಕೊಹ್ಲಿ, ಟೀಂ ಇಂಡಿಯಾ ನಾಯಕ

ಪೂಜಾರಾಗೆ ಎಚ್ಚರಿಕೆ ನೀಡಿದ್ರಾ ವಿರಾಟ್​..?
ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ, ಯಾರ ಹೆಸರು ಪ್ರಸ್ತಾಪಿಸದಿದ್ದರೂ ನೀಡಿರುವ ಹೇಳಿಕೆ ನೇರವಾಗಿ ಪೂಜಾರರನ್ನೇ ಗುರಿಯಾಗಿಸಿ ನೀಡಿದಂತಿದೆ. ಯಾಕಂದ್ರೆ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲೂ ಆಮೆಗತಿ ಆಟವಾಡಿದ ಪೂಜಾರ, ವಿಕೆಟ್ ರಕ್ಷಣೆಯತ್ತ ಮಾತ್ರವೇ ದೃಷ್ಟಿ ನೆಟ್ಟಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ 54 ಎಸೆತ ಎದುರಿಸಿದ ಪೂಜಾರ, ಕೇವಲ 8 ರನ್ ಗಳಿಸಿದ್ರು. ಇನ್ನು 2ನೇ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 80 ಎಸೆತ ಎದುರಿಸಿದ ಪೂಜಾರ, 15 ರನ್ ಮಾತ್ರ ಕಲೆಹಾಕಿದರು. ಪೂಜಾರರಾ ಈ ಪ್ರದರ್ಶನ, ವಿರಾಟ್ ಹೇಳಿಕೆಗೆ ಸೂಟ್ ಆಗುವಂತೆಯೇ ಇದೆ.

ಇದೇ ವೇಳೆ ವಿರಾಟ್​ ಕೊಹ್ಲಿಯ ಹೇಳಿಕೆ, ಫ್ಯೂಚರ್ ಟೆಸ್ಟ್​ ತಂಡದ ಚಿತ್ರಣ ಕಾಣಿಸುತ್ತಿದೆ. ಅದ್ರಲ್ಲೂ ಟೀಮ್ ಇಂಡಿಯಾದ ಯುವ ಆಟಗಾರರನ್ನ ಉದಾಹರಣೆ ನೀಡಿರುವ ಕೊಹ್ಲಿ, ಟೆಸ್ಟ್​ ತಂಡಕ್ಕೂ ಹೋರಾಟದ ಮನೋಭಾವ ಹೊಂದಿರುವ ಆಟಗಾರರೇ ಬೇಕಿದೆ ಎಂದಿದ್ದಾರೆ.

ನಮ್ಮ ತಂಡದ ಸಾಮರ್ಥ್ಯ ಹೆಚ್ಚಿಸಲು ಬೇಕಾದ ವಿಷಯಗಳ ಕುರಿತು ಚರ್ಚಿಸುತ್ತೇವೆ. ಸರಿಯಾದ ಮಾರ್ಗದಲ್ಲಿ ನಾವು ಸಾಗುತ್ತೇವೆ. ಇದಕ್ಕಾಗಿ ವರ್ಷಗಟ್ಟಲೆ ಕಾಯುವುದಿಲ್ಲ. ಯಾಕಂದ್ರೆ ಈಗಾಗಲೇ ನಮ್ಮ ಬಳಿ ಯೋಜನೆ ಸಿದ್ದವಾಗಿದೆ. ನಮ್ಮ ವೈಟ್ ಬಾಲ್ ತಂಡದ ಹುಡುಗರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಎದುರಾಳಿಗಳನ್ನ ಹಿಮ್ಮೆಟ್ಟಸಲು ಸೂಕ್ತ ಮನಸ್ಥಿತಿಯೊಂದಿಗೆ ಆಡುವುದು ಮುಖ್ಯ. ನಮ್ಮ ವೈಟ್​ಬಾಲ್​ ತಂಡವನ್ನೇ ಗಮನಿಸಿದರೆ, ಅರ್ಥವಾಗುತ್ತದೆ. ಪ್ರತಿಯೊಬ್ಬರೂ ಧೈರ್ಯವಾಗಿ ಹಾಗೂ ಆತ್ಮವಿಶ್ವಾಸದೊಂದಿಗೆ ಸೆಣಸಾಡುತ್ತಾರೆ. ಟೆಸ್ಟ್​ ತಂಡದಲ್ಲೂ ಅದೇ ಮನೋಭಾವ ಬೇಕಾಗಿದೆ.

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ

ಯುವ ಆಟಗಾರರಿಗೆ ಮಣೆ ಹಾಕಲು ನಡೀತಿದೆ ಚಿಂತನೆ?
ಒಂದೆಡೆ ಹಿರಿಯರ ಆಟಗಾರರು ರನ್​ ಗಳಿಸಲು ಪರದಾಡುತ್ತಿದ್ದಾರೆ. ವೈಸ್​ ಕ್ಯಾಪ್ಟನ್ ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ತಂಡದ ಹಿರಿಯ ಸದಸ್ಯರಾಗಿದ್ದಾರೆ. ಈ ಆಟಗಾರರಿಗೆ ಪರ್ಯಾಯ ಆಟಗಾರರ ಅವಶ್ಯಕತೆ ಟೀಮ್ ಇಂಡಿಯಾಕ್ಕೆ ಇದೆ. ಭವಿಷ್ಯದ ಟೆಸ್ಟ್​ ತಂಡ ಕಟ್ಟಲೂ ಇದು ಸಕಾಲವೂ ಆಗಿದೆ.

ಇದರಿಂದಾಗಿಯೇ ಟೆಸ್ಟ್​ ತಂಡದ ಯೋಜನೆ ರೂಪಿಸಿರುವ ಬಿಸಿಸಿಐ, ಇಂಗ್ಲೆಂಡ್ ಸರಣಿ ಬಳಿಕ ಕಾರ್ಯ ಪ್ರವೃತ್ತಿಗೆ ಮುಂದಾಗುವ ಸಾಧ್ಯತೆ ಕೂಡ ಇದೆ. ಅದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದಂತೆ, ಏಕದಿನ, ಟಿ20 ತಂಡದಂತೆ ಟೆಸ್ಟ್​ನಲ್ಲೂ ಹೋರಾಟದ ಮನೋಭಾವ ಹೊಂದಿರುವ ಡೈನಾಮಿಕ್ ತಂಡ ಕಟ್ಟೋದು, ಕೊಹ್ಲಿಯ ಮುಂದಿನ ಪ್ಲಾನ್ ಇದ್ದಂತೆ ಕಾಣ್ತಿದೆ.

ಈಗಾಗಲೇ ಟೀಮ್ ಇಂಡಿಯಾ ಬೆಂಚ್​ ಸ್ಟ್ರೆಂಥ್​ ಕೂಡ ಹೆಚ್ಚಾಗಿದೆ. ಹೀಗಾಗಿ ಒಂದೆಡೆ ಬೆಂಚ್ ಕಾಯ್ತಿರುವ ಕೆ.ಎಲ್.ರಾಹುಲ್​, ಮಯಾಂಕ್ ಅಗರ್ವಾಲ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಪೃಥ್ವಿ ಶಾ… ಹಾಗೇ ದೇಶಿ ಟೂರ್ನಿಯಲ್ಲಿ ಕಮಾಲ್ ಮಾಡ್ತಿರುವ ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್ ಹೀಗೆ ಸಾಲು ಆಟಗಾರರೇ ಕ್ಯೂನಲ್ಲಿದ್ದಾರೆ.

ಒಟ್ಟಿನಲ್ಲಿ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆ ಟೀಮ್ ಇಂಡಿಯಾದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ಹೀಗಾಗಿ ಆಟಗಾರರು ಮುಂಬರುವ ಟೆಸ್ಟ್ ಸರಣಿಗಳಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಬೇಕು.. ಇಲ್ದಿದ್ರೆ ತಂಡದಿಂದ ಕಿಕ್​ಔಟ್ ಆಗೋದಂತೂ ಸುಳ್ಳಲ್ಲ.

The post ಭಾರತ ಟೆಸ್ಟ್​ ತಂಡದಲ್ಲಿ ಬದಲಾವಣೆ ಪರ್ವ- ಭವಿಷ್ಯದ ಟೆಸ್ಟ್​ ತಂಡ ಕಟ್ಟಲು ಯುವಕರಿಗೆ ಮಣೆ? appeared first on News First Kannada.

Source: newsfirstlive.com

Source link