ಧಾರವಾಡ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಬಿಟ್ಟು ಬಿಡದೆ ಸುರಿಯುತ್ತಿರುವ ಕಾರಣ ಕಲಘಟಗಿ ತಾಲೂಕಿನ ಹಟಕಿನಾಳದ ಜಿಗಳಿ ಕೆರೆಯ ಒಡ್ಡು ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ.

ಕಳೆದ 4-5 ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿರೋ ಪರಿಣಾಮ ಜಿಲ್ಲೆಯ ಹಲವು ಕೆರೆಗಳು ತುಂಬಿ ತುಳುಕುತ್ತಿವೆ. ಈ ನಡುವೆ ಜಿಗಳಿ ಕೆರೆ ಒಡ್ಡು ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ಭತ್ತ, ಸೋಯಾಬಿನ್, ಕಬ್ಬು, ಹತ್ತಿ, ಗೋವಿನಜೋಳ ಬೆಳೆಗಳು ಜಲಾವೃತವಾಗಿವೆ. ನಿರಂತರ ಮಳೆಯಿಂದ ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ.

ಇನ್ನು ಬೆಳಗಾವಿ ತಾಲೂಕಿನ ಬೋಜಗಾ ಗ್ರಾಮದ ಬಳಿ ಪ್ರವಾಹದ ನೀರಿಗೆ ಬೋಜಗಾ- ಉಚ್ಚಗಾಂವ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋಗಿದೆ. ಹೀಗಾಗಿ ಬೈಕ್ ಸವಾರರು ವಾಹನಗಳನ್ನು ತಳ್ಳಿಕೊಂಡು ಓಡಾಡುತ್ತಿದ್ದಾರೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಅಥಣಿ ತಾಲೂಕಿನಲ್ಲಿರುವ ಹಿಪ್ಪರಗಿ ಜಲಾಶಯಕ್ಕೆ ಒಟ್ಟು 1,32,000 ಕ್ಯೂಸೆಕ್ ಒಳ ಹರಿವು ಇದ್ದು, 1,31,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಇನ್ನು ಸಿಎಂ ಬಿಎಸ್​​ ಯಡಿಯೂರಪ್ಪ ಅವರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕೃಷ್ಣಾ ಕಣಿವೆ ಪಾತ್ರದಡಿ ಸಮರ್ಪಕ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಮಹಾರಾಷ್ಟ್ರ ಸರ್ಕಾರದ ಮಾನ್ಯ ಜಲ ಸಂಪನ್ಮೂಲ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ.

The post ಭಾರೀ ಮಳೆಗೆ ಕೆರೆ ಒಡ್ಡು ಒಡೆದು ಅವಾಂತರ -ನೂರಾರು ಎಕರೆ ಬೆಳೆ ಜಲಾವೃತ appeared first on News First Kannada.

Source: newsfirstlive.com

Source link