ಬೆಂಗಳೂರು: ಭಾರೀ ಮಳೆಗೆ ನಗರದ ಹಲಸೂರು ಸ್ಟ್ರೀಟ್ ಬಳಿಯ ಲಿಡೋ ಮಾಲ್ ಬಳಿಯಿದ್ದ ಹಳೇ ಕಟ್ಟಡದ ಗೋಡೆಯೊಂದು ನಿನ್ನೆಯಿಂದ ಹಂತ ಹಂತವಾಗಿ ಕುಸಿತಗೊಂಡಿದೆ. ಸದ್ಯ ಸ್ಥಳದಲ್ಲಿ ಯಾರೂ ಓಡಾಡದಂತೆ ಬಿಬಿಎಂಪಿ ಅಧಿಕಾರಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ
ಮನೆಯಲ್ಲಿ ಮೂರು ಜನ ವಾಸವಾಗಿದ್ದು, ಮನೆ ಕುಸಿತವಾಗೋ ಮನ್ಸೂಚನೆ ಕಂಡ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡಿದ್ದರಿಂದ ಅಪಾಯದಿಂದ ಬಚಾವ್ ಆಗಿದ್ದಾರೆ. ಶಂಕರ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು 50 ವರ್ಷಗಳ ಹಳೆಯ ಕಟ್ಟಡ ಎನ್ನಲಾಗಿದೆ.
ಬೆಳಗ್ಗೆ ಕಟ್ಟಡ ನೆಲಸಮವಾಗಿದ್ದು ಘಟನೆಯಲ್ಲಿ ಮೂರು ಬೈಕ್ ಜಖಂಗೊಂಡಿವೆ. ನಿನ್ನೆ ರಾತ್ರಿಯವರೆಗೂ ಮನೆಯಲ್ಲೇ ಶಂಕರ್, ಪತ್ನಿ, ಮಗ ಮನೆಯಲ್ಲಿ ವಾಸವಾಗಿದ್ರು. ಮಣ್ಣು ಕುಸಿಯುತ್ತಿದ್ದನ್ನು ಕಂಡ ಅವರು ಮನೆ ಖಾಲಿ ಮಾಡಿದ್ದಾರೆ.
ಇದನ್ನೂ ಓದಿ:ಮಳೆಗೆ ಗೋಡೆ ಕುಸಿದು ಮಲಗಿದ್ದಲ್ಲೇ ಮಹಿಳೆ ಜೀವಂತ ಸಮಾಧಿ
ಇದನ್ನೂ ಓದಿ:ಬೆಂಗಳೂರಲ್ಲಿ ಇಂದೂ ಕೂಡ ಭಾರೀ ಮಳೆಯ ಎಚ್ಚರಿಕೆ; ಶಾಲೆಗಳಿಗೆ ರಜೆ ಘೋಷಣೆ
ಈ ಕುರಿತು ಬಿಬಿಎಂಪಿಯ ಶಿವಾಜಿನಗರ ಉಪವಿಭಾಗದ ಎಇಇ ಸೈಫುದ್ದೀನ್ ವಿವರಣೆ ನೀಡಿದ್ದು 50ವರ್ಷ ಹಳೆಯ ಕಟ್ಟಡವಾಗಿದ್ದು, ಕುಸಿಯುವ ಭೀತಿ ಇತ್ತು. ಈ ಬಗ್ಗೆ ನಾವೇ ಇಪ್ಪತ್ತು ದಿನದ ಹಿಂದೆ ಮಾಲೀಕರಿಗೆ ತಿಳಿಸಿದ್ವಿ. ಜೊತೆಗೆ ನೋಟಿಸ್ ಕೊಡುವ ಬಗ್ಗೆಯೂ ಚರ್ಚೆ ಆಗಿತ್ತು. ಮುಖ್ಯ ಅಭಿಯಂತರ ಕಚೇರಿಗೆ ಕಟ್ಟಡ ಪರಿಸ್ಥಿತಿಯ ರಿಪೋರ್ಟ್ ಕೂಡ ಕಳುಹಿಸಲಾಗಿತ್ತು ಎಂದಿದ್ದಾರೆ.