ಬೆಂಗಳೂರು: ರಾಜ್ಯಾದ್ಯಂತ ವಾರದಿಂದ ಅಬ್ಬರಿಸಿದ್ದ ಮುಂಗಾರು ಮಳೆ ಬಹುತೇಕ ಕಡೆ ಇವತ್ತು ವಿರಾಮ ನೀಡಿದೆ. ಜುಲೈ 21 ರವರೆಗೆ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ರೆಡ್ ಅಲರ್ಟ್ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಲಬಾಳದಲ್ಲಿ ನದಿ ಉಕ್ಕಿ ಗುಂಡಿಬೈಲ್ ಗ್ರಾಮದ ಹಲವು ಮನೆಗಳು ಜಲಾವೃತವಾಗಿವೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿತ್ತು. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಗದಗ, ಕೊಪ್ಪಳ, ಬೀದರ್ ಉಡುಪಿ ಹಾಗೂ ಹಾಸನದ ಸಕಲೇಶಪುರ, ಆಲೂರು ಭಾಗದಲ್ಲಿ ಕಾರ್ಮೋಡ ಕವಿದಿದ್ದು, ಭಾರೀ ಮಳೆ ಆಗಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಜೋರಾಗಿದ್ದು, ಕೃಷ್ಣಾ ನದಿಗೆ 56 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಬೆಳಗಾವಿಯ ಚಿಕ್ಕೋಡಿ ಭಾಗದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು-ಕಲ್ಲೋಳ ಜಲಾವೃತವಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಬಿಸಿಲಿತ್ತು. ಆದರೆ ಸಂಜೆ ಹೊತ್ತಿಗೆ ಸ್ವಲ್ಪ ಮಳೆ ಬಂತು. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ.

ಗದಗ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು, ನರಗುಂದ ತಾಲೂಕಿನ ಕೊಣ್ಣೂರ ಭಾಗದಲ್ಲಿ ಮಳೆ ನೀರು ಅನೇಕ ಮನೆಗಳಿಗೆ ನುಗ್ಗಿದೆ. ಕೊಣ್ಣೂರ ಭಾಗದಲ್ಲಿ ರಸ್ತೆ ಹಾಗೂ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ. 2 ಗಂಟೆಗೂ ಹೆಚ್ಚು ಕಾಲ ಸುರಿದ ಮಹಾ ಮಳೆಗೆ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು. ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಜನ ಹೈರಾಣಾಗಿದ್ದಾರೆ.

ಸಂಜೆ ಸುರಿದ ಮಳೆಗೆ ಕೊಪ್ಪಳ ತಾಲೂಕಿನ ಮೆಳ್ಳಿಕೇರಿಯಲ್ಲಿ ಮನೆ ಕುಸಿತವಾಗಿದೆ. ಜಿಟಿಜಿಟಿ ಮಳೆಗೆ ಮಂಜುನಾಥ್ ಅವರ ಮನೆ ಕುಸಿದಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಮನೆ ಕಳೆದುಕೊಂಡು ಮಂಜುನಾಥ್ ಕುಟುಂಬ ಬೀದಿಗೆ ಬಂದಿದೆ. ಪರಿಹಾರ ಕೊಡುವಂತೆ ಮಂಜುನಾಥ್ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.

ಗಡಿ ಜಿಲ್ಲೆ ಬೀದರ್ ನಲ್ಲಿ ವರುಣನ ಆರ್ಭಟ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಬೀದರ್ ನಲ್ಲಿ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಜನ ಜೀವನ ಅಸ್ತವ್ಯಸ್ತವಾಗಿದೆ. ಬೀದರ್, ಔರಾದ್, ಹುಮ್ನಾಬಾದ್, ಚಿಟ್ಟಗುಪ್ಪ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಹಾ ಮಳೆಗೆ ಅವಾಂತರಗಳು ಸೃಷ್ಟಿಯಾಗಿದ್ದು, ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರ ಸಂಪೂರ್ಣ ಜಲಾವೃತವಾಗಿದೆ. 3 ರಿಂದ 4 ಅಡಿ ನೀರು ಸಂಗ್ರಹವಾಗಿದೆ. ಒಳ ಚಂರಡಿ ಸಮಸ್ಯೆಯಿಂದಾಗಿ ರಂಗ ಮಂದಿರಕ್ಕೆ ನೀರು ನುಗ್ಗಿದೆ. ಧಾರಾಕಾರ ಮಳೆಯಿಂದ ರೈತರು ಬೆಳೆ ನಾಶವಾಗುವ ಭೀತಿಯಲ್ಲಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ಕಳೆದ 9 ದಿನಗಳಿಂದ ಮುಂಗಾರು ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಮುಂದಿನ ಐದು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಭಾರೀ ಮೋಡ ಮುಸುಕಿದ ವಾತಾವರಣ ಇದ್ದು, ಮಳೆ ಇನ್ನೂ ಒಂದು ವಾರ ಮುಂದುವರಿಯುವ ಸಾಧ್ಯತೆ ಇದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ.

ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿದೆ. ಆರಂಭದಲ್ಲಿ ಎರಡು ದಿನ ನಾಡ ದೋಣಿ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಸಮುದ್ರ, ನದಿಗೆ ಇಳಿಯಬೇಡಿ ಎಂದು ಸೂಚನೆ ಕೊಡಲಾಗಿತ್ತು. ಇದೀಗ ಮತ್ತೆ ಎರಡು ದಿನ ಅಲರ್ಟ್ ವಿಸ್ತರಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸರಾಸರಿ 39 ಮಿಲಿಮೀಟರ್ ಮಳೆ ಸುರಿದಿದೆ. ಗಾಳಿ-ಮಳೆಗೆ ಜಿಲ್ಲೆಯಲ್ಲಿ ಆರು ಮನೆ ಮತ್ತು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಅರಬ್ಬಿ ಸಮುದ್ರದಲ್ಲಿ ವಿಪರೀತ ಗಾಳಿ ಬೀಸುತ್ತಿದ್ದು, ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ.

 

The post ಭಾರೀ ಮಳೆ- ಕರಾವಳಿ, ಮಲೆನಾಡು ಭಾಗದಲ್ಲಿ ರೆಡ್ ಅಲರ್ಟ್ ಮುಂದುವರಿಕೆ appeared first on Public TV.

Source: publictv.in

Source link