ಇದೊಂದು ಭಯಾನಕವಾದ ಹತ್ಯೆ. ದುಡ್ಡಿಗಾಗಿ ನಡೆದ ಸೆನ್ಸೇಷನಲ್ ಮರ್ಡರ್. ತಾಳಿ ಕಟ್ಟಿದ ಗಂಡನಿಗೆ ಪತ್ನಿಯೇ ಸ್ಕೆಚ್ ಹಾಕಿ ಮುಗಿಸಿದ ಕಥೆ. ಹತ್ಯೆ ಮಾಡಿದವರು ಜೈಲು ಪಾಲಾಗಿದ್ದಾರೆ. ಹಾಗಾದ್ರೆ ಅಗರ್ಭ ಶ್ರೀಮಂತ ಭಾಸ್ಕರ್ ಶೆಟ್ಟಿ ಕಟ್ಟಿದ ಸಾಮ್ರಾಜ್ಯಕ್ಕೆ ಅಧಿಪತಿ ಯಾರು..? ಯಾರ ಪಾಲಾಗಲಿದೆ ಭಾಸ್ಕರ್ ಶೆಟ್ಟಿಯವರ 600 ಕೋಟಿಯ ಆಸ್ತಿ ಅನ್ನೋ ಪ್ರಶ್ನೆ ಎದ್ದಿದೆ.

ಈ ಭಯಾನಕ ಹತ್ಯೆ ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಂತೂ ತೀವ್ರ ಸದ್ದು ಮಾಡಿತ್ತು. ಇದೇ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಕೇಸ್. ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಹೈವೋಲ್ಟೇಜ್ ಕೇಸ್ ಅದು. ಅಂದು ಹಂತಕರ ಕೈಯಲ್ಲಿ ಸಿಲುಕಿ ಉಸಿರು ನಿಲ್ಲಿಸಿದವರು ಸಾಮಾನ್ಯ ವ್ಯಕ್ತಿಯಾಗಿರ್ಲಿಲ್ಲ. ಈತ ಬರೋಬ್ಬರಿ 600 ಕೋಟಿಯ ಒಡೆಯನಾಗಿದ್ದ. ಉಡುಪಿಯಿಂದ ಹಿಡಿದು ದೂರದ ದುಬೈವರೆಗೂ ಆತನ ಬಿಸಿನೆಸ್ ನ ವ್ಯಾಪ್ತಿ ವಿಸ್ತಾರಗೊಂಡಿತ್ತು. ಅಂದು ಭೀಕರವಾಗಿ ಮರ್ಡರ್ ಆಗಿದ್ದು ಉದ್ಯಮಿ ಭಾಸ್ಕರ್ ಶೆಟ್ಟಿ. ಭಾಸ್ಕರ್ ಶೆಟ್ಟಿ ಮರ್ಡರ್ ಮಾಡಿ ಇವರನ್ನು ಹೋಮಕುಂಡದಲ್ಲಿಯೇ ಸುಟ್ಟು ಹಾಕಿ ಬಿಟ್ಟಿದ್ರು.

ದುಡ್ಡೊಂದು ಇದ್ರೆ ಸಂಬಂಧ ಎಲ್ಲವು ಮೂಲೆ ಸೇರುತ್ತೆ ಎನ್ನುವುದನ್ನು ಸಾಬೀತು ಪಡಿಸಿದ ಹತ್ಯೆ ಅದು. ಹೀಗೂ ಸ್ಕೆಚ್ ಹಾಕ್ತಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದ ಹಾರೀಬಲ್ ಮರ್ಡರ್ ಅದು. 2016 ರ ಜುಲೈ 28 ರಂದು ಉಡುಪಿಯಲ್ಲಿ ನಡೆದ ಉದ್ಯಮಿ ಭಾಸ್ಕರ್ ಶೆಟ್ಟಿ ಮರ್ಡರ್ ಕೇಸ್ ಇಡೀ ಕರಾವಳಿಯಾದ್ಯಂತ ಸಂಚಲನ ಮೂಡಿಸಿತ್ತು. ಅಂದು ಅಗರ್ಭ ಶ್ರೀಮಂತನೊಬ್ಬ ತನ್ನದೇ ಮನೆಯಲ್ಲಿ ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದ. ದುಡ್ಡಿನ ಆಸೆಗಾಗಿ ಪತ್ನಿಯೇ ತಾಳಿ ಕಟ್ಟಿದ್ದ ಗಂಡನಿಗೆ ಸ್ಕೆಚ್ ಹಾಕಿ ಮುಗಿಸಿ ಬಿಟ್ಟಿದ್ಲು. ಅಪ್ಪನನ್ನು ಹತ್ಯೆ ಮಾಡಲು ಪುತ್ರ ಕೂಡ ಹೆಗಲು ಕೊಟ್ಟಿದ್ದ.

ಐದು ವರ್ಷಗಳ ಬಳಿಕ ಹಂತಕರಿಗೆ ಜೀವಾವಧಿ ಶಿಕ್ಷೆ
ಕೋಟಿಯ ಕನವರಿಕೆಯಲ್ಲಿದ್ದವರು ಕಂಬಿಯ ಹಿಂದೆ
ಉದ್ಯಮಿ ಭಾಸ್ಕರ್ ಶೆಟ್ಟಿ ಹಂತಕರು ಜೈಲಿಗೆ..ಆಸ್ತಿ ಯಾರಿಗೆ?

ಭಾಸ್ಕರ್ ಶೆಟ್ಟಿ ಅಗರ್ಭ ಶ್ರೀಮಂತ. ಉಡುಪಿಯಲ್ಲೊಂದು ಹೋಟೆಲ್, ಸೌದಿಯಲ್ಲಿ ತನ್ನದೇ ಒಡೆತನದ ಆರು ಸೂಪರ್ ಮಾರ್ಕೆಟ್. ಊರಿನಲ್ಲಿದ್ದ ಹೋಟೆಲನ್ನು ಪತ್ನಿ ಹಾಗೂ ಪುತ್ರನಿಗೆ ನೋಡಿಕೊಳ್ಳುವಂತೆ ಹೇಳಿ ಇವರು ಮಾತ್ರ ಫಾರಿನ್ ಸೇರ್ಕೊಂಡಿದ್ರು. ದುಬೈನಲ್ಲಿಯೇ ಕೂತು ಮಾರ್ಕೆಟ್ ನಡೆಸುತ್ತಿದ್ರು. ಆಗೊಮ್ಮೆ ಈಗೊಮ್ಮೆ ಊರಿನ ಕಡೆ ಬರ್ತಾ ಇದ್ರು. ಊರಿಗೆ ಬಂದಾಗ್ಲೆಲ್ಲ ಉಡುಪಿಯಲ್ಲಿದ್ದ ತನ್ನ ಹೋಟೆಲ್ ಕಡೆ ಕಣ್ಣು ಹಾಯಿಸಿ ಮತ್ತೆ ದುಬೈ ಕಡೆ ಹಾರ್ತಾ ಇದ್ರು.

ದುಬೈನಲ್ಲಿ ಒಂದೆರಡು ವರ್ಷ ಕೆಲ್ಸ ಮಾಡಿದ್ರೆ ಸಾಕು, ಕೈ ತುಂಬಾ ದುಡ್ಡು ಓಡಾಡುತ್ತೆ ಅಂದ್ಮೇಲೆ ತನ್ನದೇ ಸ್ವಂತ 6 ಅಂಗಡಿಗಳು ಇದ್ರೆ ದುಡ್ಡು ಹೇಗಿರಬಹುದು ಹೇಳಿ. ಭಾಸ್ಕರ್ ಶೆಟ್ಟಿ ಕೂಡ ಅಗರ್ಭ ಶ್ರೀಮಂತನಾಗಿದ್ದ. ಕೈ ತುಂಬಾ ಕುರುಡು ಕಾಂಚಾಣ ಕುಣಿದಾಡುತ್ತಿತ್ತು. ಆದ್ರೆ ಭಾಸ್ಕರ್ ಶೆಟ್ಟಿಗೆ ಅಂದು ಗೊತ್ತಿರ್ಲಿಲ್ವೇನೋ? ತಾನು ಕಷ್ಟ ಪಟ್ಟು ದುಡಿದ ದುಡ್ಡು ಮುಂದೊಂದು ದಿನ ತನಗೆ ಮರಣ ಶಾಸನ ಬರೆಯುತ್ತೆ ಅಂತ.


ಆದ್ರೆ ಭಾಸ್ಕರ್ ಶೆಟ್ಟಿಗೆ ತಾನು ಕಷ್ಟಪಟ್ಟು ಸಂಪಾದಿಸಿದ ಆಸ್ತಿನೇ ಮರಣ ಶಾಸನ ಬರೆದಿತ್ತು. ಅಗರ್ಭ ಶ್ರೀಮಂತರಾಗಿದ್ದ ಶೆಟ್ಟಿ ತನ್ನದೇ 2016 ರಲ್ಲಿ ತನ್ನದೇ ಮನೆಯಲ್ಲಿ ಭೀಕರವಾಗಿ ಕೊಲೆಯಾಗಿ ಹೋಗಿದ್ರು. ದುಡ್ಡಿನ ಆಸೆಗಾಗಿ ಪುತ್ರ ನವನೀತ ಪತ್ನಿ ರಾಜೇಶ್ವರಿ, ಮಗ ಹಾಗೂ ಪತ್ನಿಯ ಗೆಳೆಯ ನಿರಂಜನ ಭಟ್ , ಭಾಸ್ಕರ್ ಶೆಟ್ಟಿಯವರನ್ನು ಭಯಾನಕವಾಗಿ ಮರ್ಡರ್ ಮಾಡಿದ್ದರು. ಯಾವುದೇ ಸಾಕ್ಷ್ಯ ಸಿಗದಂತೆ ಮಾಡಬೇಕೆಂದು ಹೋಮ ಕುಂಡದಲ್ಲಿ ಮೃತದೇಹವನ್ನು ಸುಟ್ಟು ಹಾಕಿ ಬಿಟ್ಟಿದ್ರು. ಆದ್ರೆ, ಈ ಬಗ್ಗೆ ವಿವರವಾದ ತನಿಖೆ ನಡೆಸಿದ್ದ ಪೊಲೀಸರು ಬಳಿಕ ಅಪರಾಧಿಗಳನ್ನು ಬಂಧಿಸಿದ್ರು. ಕೃತ್ಯ ಎಸಗಿದ 5 ವರ್ಷಗಳ ಬಳಿಕ ಹಂತಕರಿಗೆ ಜೀವಾವಧಿ ಶಿಕ್ಷೆಯಾಗಿದೆ.

ಭಾಸ್ಕರ್ ಶೆಟ್ಟಿ ಸಾಮ್ರಾಜ್ಯಕ್ಕೆ ವಾರಸುದಾರ ಯಾರು?
ಯಾರ ಪಾಲಾಗಲಿದೆ ಬರೋಬ್ಬರಿ 600 ಕೋಟಿಯ ಆಸ್ತಿ?

ಘಟನೆ ನಡೆದ 5 ವರ್ಷಗಳ ಬಳಿಕ ಅಂದ್ರೆ ಜೂನ್ 8 ರಂದು ಉಡುಪಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಇದ್ರಿಂದ ಕೋಟಿ ಕುಬೇರನಾಗಿದ್ದ ಉದ್ಯಮಿಯ ಹಂತಕರು ಜೈಲು ಪಾಲಾಗಿದ್ದಾರೆ. ಕೊಲೆಗಡುಕರು ಜೈಲು ಸೇರುತ್ತಿದ್ದಂತೆಯೇ ಭಾಸ್ಕರ್ ಶೆಟ್ಟಿಯ ಸಾಮ್ರಾಜ್ಯಕ್ಕೆ ಅಧಿಪತಿ ಯಾರು..? 600 ಕೋಟಿಯ ಆಸ್ತಿ ಯಾರಾ ಪಾಲಾಗಲಿದೆ ಎಂಬ ಬಿಸಿ ಬಿಸಿ ಚರ್ಚೆ ಇದೀಗ ಶುರುವಾಗಿದೆ.

ಭಾಸ್ಕರ್ ಶೆಟ್ಟಿ ಬರೆದಿಟ್ಟ ಉಯಿಲಿನಲ್ಲಿ ಏನೇನಿದೆ?
ಹೆಂಡತಿಯ ಸ್ಕೆಚ್ ಬಗ್ಗೆ ಸುಳಿವು ಸಿಕ್ಕಿತ್ತಾ ಇವರಿಗೆ?

ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು. ಭಾಸ್ಕರ್ ಶೆಟ್ಟಿ ಹತ್ಯೆಯಾಗುವ ಎರಡು ವಾರಗಳ ಹಿಂದೆ, ಅಂದ್ರೆ ಜುಲೈ 15 ಭಾಸ್ಕರ ಶೆಟ್ಟಿ ಉಯಿಲು ಬರೆದಿದ್ದರು.

ನನಗೂ ಹಾಗೂ ನನ್ನ ಪತ್ನಿಗೂ ಜಗಳವಾಗಿದೆ. ಅಲ್ಲದೆ ಪತ್ನಿ ಹಾಗೂ ಮಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಆಗಸ್ಟ್‌ನಲ್ಲಿ ವಿದೇಶಕ್ಕೆ ತೆರಳಿದ್ದು, ನನ್ನ ಪ್ರಾಣಕ್ಕೆ ಅಪಾಯವಿದೆ. ಇದೇ ಕಾರಣಕ್ಕೆ ಈ ಪತ್ರ ಬರೆದಿದ್ದೇನೆ. ನನ್ನ ಜೀವಕ್ಕೆ ಅಪಾಯ ಎದುರಾದರೆ ನನ್ನ ಎಲ್ಲ ಆಸ್ತಿ ನನ್ನ ತಾಯಿಗೆ ಸೇರತಕ್ಕದ್ದು. ನನಗಿಂತ ಮೊದಲು ತಾಯಿ ನಿಧನವಾದ್ರೆ ನನ್ನ ಆಸ್ತಿಯ ತಲಾ ಶೇಕಡಾ 10 ರಂತೆ ಮೂವರು ಸಹೋದರಿಯವರಿಗೆ ಸಿಗಬೇಕು. ಅಲ್ಲದೇ ಉಳಿದ ವಿದೇಶದ ಆಸ್ತಿ ಮೂವರು ಸಹೋದರರಿಗೆ ಸೇರಬೇಕು.
ಭಾಸ್ಕರ್ ಶೆಟ್ಟಿ, ಉದ್ಯಮಿ

ನನಗೆ ಪ್ರಾಣ ಭಯವಿದೆ. ನಾನು ಸತ್ರೆ ಆಸ್ತಿಯೆಲ್ಲ ತಾಯಿಗೆ ಸೇರಬೇಕು. ಒಂದು ವೇಳೆ ನನಗಿಂತ ಮೊದಲು ನನ್ನ ತಾಯಿ ತೀರಿ ಹೋದ್ರೆ ಆಸ್ತಿ ಸಹೋದರರಿಗೆ ಸೇರಬೇಕು. ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತಗೆ ನನ್ನ ಆಸ್ತಿಯಲ್ಲಿ ಯಾವುದೇ ಹಕ್ಕು ಇಲ್ಲ ಎಂದು ಭಾಸ್ಕರ್ ಶೆಟ್ಟಿ ಹತ್ಯೆ ಆಗುವ ಎರಡು ವಾರದ ಹಿಂದೆ ಬರೆದಿರುವ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆಂದು ಆರೋಪಿಗಳ ವಿರುದ್ಧ ವಕಾಲತ್ತು ಮಾಡಿದ ಹಿರಿಯ ವಕೀಲರು ಮಾಹಿತಿ ನೀಡಿದ್ದರು. ಕೊಲೆ ಪ್ರಕರಣದ ಆರೋಪ ಪಟ್ಟಿಯಲ್ಲಿ ಇದು ದಾಖಲಾಗಿವೆ.

ರಾಜೇಶ್ವರಿ

ಇದ್ರಿಂದ ಭಾಸ್ಕರ್ ಶೆಟ್ಟಿ ಕಟ್ಟಿದ ಕೋಟಿಯ ಕೋಟೆಗೆ ವಾರಸುದಾರರು ಯಾರು ಎಂಬ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ. ಭಾಸ್ಕರ ಶೆಟ್ಟಿಗೆ ಉಡುಪಿಯಲ್ಲಿ ಹೋಟೆಲ್, ಬಾಡಿಗೆ ಕಟ್ಟಡ ಸೇರಿ ಇತರೆ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ. ಅಲ್ಲದೇ ವಿದೇಶದಲ್ಲಿ ಒಟ್ಟು ಆರು ಮಾಲ್‌ಗಳು ಇದ್ದು ಇದನ್ನು ಮೂವರು ಸಹೋದರರು ನೋಡಿದ್ದಾರೆ.‌ ಇನ್ನೂ ಹಿಂದೂ ಅನುಕ್ರಮ ಕಾಯಿದೆ ಪ್ರಕಾರ, ಒಬ್ಬ ವ್ಯಕ್ತಿ ಕೊಲೆ ಮಾಡಿದವನು ಅಥವ ಪ್ರಚೋದನೆ ನೀಡಿದವನು ಆತನ ಆಸ್ತಿಗೆ ವಾರಸುದಾರ ಆಗಿದ್ರೆ ಆತ ಆಸ್ತಿಯ ಹಕ್ಕಿನಿಂದ ಅನರ್ಹನಾಗಿರುತ್ತಾನೆ ಎಂದಿದೆ.

ಒಟ್ಟಿನಲ್ಲಿ ದುಡ್ಡಿನ ಆಸೆಗಾಗಿ, ವೈಭೋಗದ ಜೀವನಕ್ಕಾಗಿ ತಾಳಿ ಕಟ್ಟಿದ ಗಂಡನನ್ನೇ ಕೊಲ್ಲಿಸಿದ ಹೆಂಡ್ತಿಗೆ ಸಿಕ್ಕಿದೇನೊ..? ಅತ್ತ ಗಂಡನೂ ಇಲ್ಲ, ಇತ್ತ ಆಸ್ತಿನೂ ಇಲ್ಲ. ಪುತ್ರನಿಗೂ ಅಮ್ಮನೊಂದಿಗೆ ಜೈಲುವಾಸ ಬಿಟ್ರೆ ಬೇರೆನೂ ದಕ್ಕಿಲ್ಲ. ಎಲ್ಲರೂ ಇದೀಗ ಕಂಬಿ ಹಿಂದೆ ಇದ್ದು, ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಕೊಲೆಯಾದಾಗಿನಿಂದ ಹಿಡಿದು ಹಂತಕರಿಗೆ ಶಿಕ್ಷೆಯಾಗುವ ತನಕ ಮಗನ ಸಾವಿಗೆ ನ್ಯಾಯ ಕೊಡಿಸಲು ಹೋರಾಡಿದ ಆ ಹಿರಿಜೀವ ಭಾಸ್ಕರ್ ಶೆಟ್ಟಿ ತಾಯಿಗೆ ಮಗನನ್ನು ಕೊಂದವರಿಗೆ ಶಿಕ್ಷೆ ಆಯ್ತಲ್ಲ ಎನ್ನುವುದೇ ಸಮಾಧಾನದ ಸಂಗತಿ.

ನಿರಂಜನ್ ಭಟ್​

ಭಾಸ್ಕರ್ ಶೆಟ್ಟಿಗೆ ಸರಿಸುಮಾರು 600 ಕೋಟಿ ಆಸ್ತಿ ಇದೆ. ಇದು ಸಂಪೂರ್ಣವಾಗಿ ತಾಯಿ ಪಾಲಾಗುತ್ತಾ..? ಇಲ್ಲಾ ಸಹೋದರರಿಗೆ ಸಿಗುತ್ತಾ..? ಹೀಗೆ ಭಾಸ್ಕರ್ ಶೆಟ್ಟಿಯ ಆಸ್ತಿಯ ಕುರಿತು ನೂರಾರು ವ್ಯಾಖ್ಯಾನಗಳು ಶುರುವಾಗಿದೆ. ದೇಶ ವಿದೇಶದಲ್ಲಿ ಭಾಸ್ಕರ್ ಶೆಟ್ಟಿ ಕಟ್ಟಿದ 600 ಕೋಟಿಯ ಸಾಮ್ಯಾಜ್ಯಕ್ಕೆ ವಾರಸುದಾರನ್ನಾಗ್ತಾರೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಸದ್ಯ ಭಾಸ್ಕರ ಶೆಟ್ಟಿ ಹಂತಕರ ಪರಿಸ್ಥಿತಿ ಅತಿ ಆಸೆ ಗತಿಗೇಡು ಎಂಬತ್ತಾಗಿದೆ. ಮಾಡಿದ ತಪ್ಪಿಗೆ ಜೈಲಿನ ಕತ್ತಲೆ ಕೋಣೆಯಲ್ಲಿ, ನಾಲ್ಕು ಗೋಡೆಗಳ ಮಧ್ಯೆ ದಿನದೂಡಬೇಕಾಗ ಪರಿಸ್ಥಿತಿ ಎದುರಾಗಿದೆ. ಕೋಟಿ ಕೋಟಿ ಆಸ್ತಿ ಕಣ್ಮುಂದೆ ಇದ್ರೂ ವಾರಸುದಾರರು ಇಲ್ಲದೆ ಕೊಳೆಯುತ್ತಿದೆ.

ವಿಶೇಷ ವರದಿ: ದಿನೇಶ್, ಉಡುಪಿ ರಿಪೋರ್ಟರ್

The post ಭಾಸ್ಕರ್​ ಶೆಟ್ಟಿ ಕೊಲೆಗಡುಕರು ಜೈಲಿಗೆ; ₹600 ಕೋಟಿ ಆಸ್ತಿಗೆ ವಾರಸುದಾರ ಯಾರು? appeared first on News First Kannada.

Source: newsfirstlive.com

Source link