ಕಾರವಾರ: ಕೊರೊನಾ ಲಾಕ್‍ಡೌನ್‍ನಿಂದಾಗಿ ಹಲವರ ಬದುಕು ಮೂರಾಬಟ್ಟೆಯಾಗಿದೆ. ಬಡವರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯೂ ಬಂದ್ ಆಗಿದ್ದರಿಂದ ಒಂದು ಹೊತ್ತಿನ ಊಟಕ್ಕಾಗಿ ಮಕ್ಕಳನ್ನು ಭಿಕ್ಷಾಟನೆಗೆ ಬಿಟ್ಟ ಘಟನೆಗಳೂ ನಡೆದಿವೆ. ಇಂತಹ ಸನ್ನಿವೇಶದಲ್ಲಿ ಇದೀಗ ಇಂತಹ ಮಕ್ಕಳನ್ನು ರಕ್ಷಿಸಿ ಜುಲೈ 1ರ ಶೈಕ್ಷಣಿಕ ವರ್ಷದ ಪ್ರಾರಂಭದ ದಿನವಾದ ಇಂದು ಕಾರವಾರದಲ್ಲಿ ಭಿಕ್ಷೆ ಬೇಡುತಿದ್ದ ಕೈಗಳಿಗೆ ಶಿಕ್ಷಣ ಇಲಾಖೆ ಪುಸ್ತಕ ನೀಡಿದೆ.

ಆರು ತಿಂಗಳ ಹಿಂದೆ ಭಿಕ್ಷೆ ಬೇಡುತ್ತಿದ್ದ 6 ಮಕ್ಕಳನ್ನು ಕಾರವಾರದ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದರು. ಇವರನ್ನು ಶಾಲೆಗೆ ದಾಖಲಿಸುವ ಮೂಲಕ ಶೈಕ್ಷಣಿಕ ವರ್ಷಾರಂಭ ವನ್ನು ವೈಶಿಷ್ಟವಾಗಿ ಪ್ರಾರಂಭಿಸಿದರು. ಇಂದು ಬಾಲಕಿಯರ ಬಾಲಮಂದಿರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಕ್ಕಳಿಗೆ ಶಾಲೆಗೆ ಪ್ರವೇಶ ನೀಡಲಾಯಿತು. ನಗರದ ಶಾಸಕರ ಮಾದರಿ ಶಾಲೆಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರವೇಶ ಪ್ರಕ್ರೀಯೆ ನಡೆಸಿ ಮಕ್ಕಳಿಗೆ ಪಠ್ಯಪುಸ್ತಕ ನೀಡಿದರು.

ಆರು ತಿಂಗಳ ಹಿಂದೆ ಮೂರು ಕುಟುಂಬದ ಆರು ಜನ ಮಕ್ಕಳು ಶಿರಸಿಯ ಗಣೇಶ ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಆಗ ಕಾರವಾರದ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಅವರನ್ನು ರಕ್ಷಿಸಿ ಕಾರವಾರ ಬಾಲಕಿಯರ ಬಾಲಮಂದಿರಕ್ಕೆ ಸೇರ್ಪಡೆಗೊಳಿಸಿದ್ದರು. ಈ ಹಿಂದೆ ಕೂಡ ಅವರು ಇದೇ ವೃತ್ತಿ ಮಾಡುತ್ತಿದ್ದಾಗ ಪಾಲಕರಿಗೆ ತಿಳುವಳಿಕೆ ಹೇಳಿ ಎಚ್ಚರಿಸಲಾಗಿತ್ತು. ಮತ್ತೆ ಮಕ್ಕಳು ಮನೆ ಬಿಟ್ಟು ಅದೇ ಕೆಲಸ ಮುಂದುವರಿಸಿದ್ದರಿಂದ ಅವರಿಗೆ ರಕ್ಷಣೆ ನೀಡಲಾಗಿತ್ತು.

ಬಾಲಮಂದಿರದಲ್ಲಿ ನಡೆದ ದಾಖಲಾತಿ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ಬಿಆರ್ ಸಿ ಸುರೇಶ್ ಗಾಂವಕರ್, ದೈಹಿಕ ಪರಿವೀಕ್ಷಕ ಗಂಗಾಧರ.ಟಿ.ತೋರ್ಕೆ, ಬಾಲಮಂದಿರ ಸುಪರ್ ವೈಸರ್ ಮಾಲತಿ ನಾಯ್ಕ, ಶಾಸಕರ ಮಾದರಿ ಶಾಲಾ ಮುಖ್ಯ ಶಿಕ್ಷಕಿ ಮಾಲಿನಿ ನಾಯ್ಕ ಉಪಸ್ಥಿತರಿದ್ದರು.

The post ಭಿಕ್ಷೆ ಬೇಡುತ್ತಿದ್ದ ಕೈಗಳಿಗೆ ಪುಸ್ತಕ ನೀಡಿದ ಶಿಕ್ಷಣ ಇಲಾಖೆ appeared first on Public TV.

Source: publictv.in

Source link