ಕೊರೊನಾ ಕೊರೊನಾ ಕೊರೊನಾ.. ಎಲ್ಲಿ ನೋಡಿದ್ರೂ ಈ ಹೆಸರು ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗುವಂಥ ಪರಿಸ್ಥಿತಿ ನಿರ್ಮಾನವಾಗಿ ಬಿಟ್ಟಿದೆ. ದೇಶದಲ್ಲಿ ಪ್ರತಿದಿನ 4 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲ್ತಾ ಇದೆ. ಈ ನಡುವೆ ಹಲವರಿಗೆ ಆಕ್ಸಿಜೆನ್ ಸಿಗ್ತಿಲ್ಲ, ಆಸ್ಪತ್ರೆಗಳಲ್ಲಿ ಬೆಡ್ ಸಿಗ್ತಿಲ್ಲ, ಬೆಡ್​ ಸಿಕ್ಕರೂ ಚಿಕಿತ್ಸೆ ಸಿಗ್ತಿಲ್ಲ.. ಚಿಕಿತ್ಸೆ ಪಡೆಯುತ್ತಿರೋರು ಬೇಗ ಬೇಗ ಗುಣಮುಖರಾಗ್ತಿಲ್ಲ.. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅನ್ನೋದು ಜನರಿಗೆ ಅರ್ಥವಾಗ್ತಿಲ್ಲ? ಸರ್ಕಾರಗಳಿಗೆ ದಿಕ್ಕೇ ತೋಚದ ಸ್ಥಿತಿ.. ಇನ್ನೊಂದೆಡೆ ವೈದ್ಯರಿಗೂ ಹೇಗೆ ಚಿಕಿತ್ಸೆ ನೀಡಬೇಕು? ಅನ್ನೋ ಪ್ರಶ್ನೆ..

ಇಂಥ ವಿಷಮ ವೇಳೆಯಲ್ಲಿ ಭಾರತದ ಡಿಫೆನ್ಸ್ ರೀಸರ್ಚ್ ಮತ್ತು ಡೆವಲಪ್​ಮೆಂಟ್ ಆರ್ಗನೈಸೇಷನ್ ಕಪ್ಪು ಮೋಡದಲ್ಲಿ ಬೆಳ್ಳಿ ಕಿರಣದಂತೆ ಗೋಚರಿಸಿದೆ. ಹಲವೆಡೆ ತಾನೇ ಆಸ್ಪತ್ರೆಯನ್ನು ಡಿಆರ್​ಡಿಓ ಸ್ಥಾಪಿಸಿದೆ.. ಇತ್ತೀಚೆಗೆ ತಾನೆ ತೇಜಸ್ ಫೈಟರ್ ಜೆಟ್​​ ತಂತ್ರಜ್ಞಾನ ನೀಡಿ ಆಕ್ಸಿಜೆನ್ ಉತ್ಪಾದನೆ ಮಾಡುವುದರ ಮೂಲಕ ಲಕ್ಷಾಂತರ ಜನರ ಪ್ರಾಣವನ್ನೂ ಉಳಿಸಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಡಿಆರ್​ಡಿಓನ ನ್ಯೂಕ್ಲಿಯರ್ ಮತ್ತು ಅಲ್ಲೈಡ್ ಸೈನ್ಸಸ್, ಡಾ. ರೆಡ್ಡೀಸ್ ಲ್ಯಾಬ್ ಜೊತೆ ಸೇರಿ ಹೊಸ ಔಷಧಿಯನ್ನು ಅಭಿವೃದ್ಧಿ ಪಡಿಸಿದೆ. ಈ ಔಷಧಿ ಸೋಂಕಿತರನ್ನು ವೇಗವಾಗಿ ಗುಣಮುಖಗೊಳಿಸುವುದರ ಜೊತೆಗೆ, ಕೃತಕ ಆಕ್ಸಿಜೆನ್ ಪಡೆಯುವ ಹಂತಕ್ಕೆ ಹೋಗದಂತೆ ಕೂಡ ತಡೆಯುವುದು ಪ್ರಯೋಗದಲ್ಲಿ ಕಂಡು ಬಂದಿದೆ.

ಹೌದು, 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಹೆಸರಿನ ಔಷಧವನ್ನು ಡಿಆರ್​ಡಿಓ ಅಭಿವೃದ್ಧಿ ಪಡಿಸಿದೆ. ಈ ಔಷಧಕ್ಕೆ ಇದೀಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಕೂಡ ಅನುಮತಿ ನೀಡಿದ್ದು, ಶೀಘ್ರದಲ್ಲೇ ಜನರಿಗೆ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಔಷಧ ಸುಲಭವಾಗಿ ತಯಾರಿಸಬಹುದಾಗಿದೆ ಎಂದು ಡಿಆರ್​ಡಿಓ ಹೇಳಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಅತ್ಯಂತ ಸುಲಭವಾಗಿ ಇದನ್ನು ತಯಾರಿಸಬಹುದು. ಇದು ಪೌಡರ್ ರೂಪದಲ್ಲಿದ್ದು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬೇಕು. ಮಧ್ಯಮ ಮತ್ತು ಗಂಭೀರ ಸೋಂಕಿತರಿಗೆ ಇದನ್ನು ನೀಡಬೇಕಾಗಿದ್ದು, ಅಂಥವರನ್ನು ವೇಗವಾಗಿ ಗುಣಮುಖರನ್ನಾಗಿಸುತ್ತೆ ಅನ್ನೋದು ಕೂಡ ತಿಳಿದು ಬಂದಿದೆ. ಅಲ್ಲದೇ, 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ರೋಗಿಗಳಲ್ಲಿ ಆರ್ಟಿ-ಪಿಸಿಆರ್ ನೆಗೆಟಿವ್ ತೋರಿಸುತ್ತಿದೆ. ಹೀಗಾಗಿಈ 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ಸ್ಟ್ಯಾಂಡರ್ಡ್ ಆಫ್ ಕೇರ್​ಗಿಂತ ವೇಗವಾಗಿ ಗುಣಮುಖರಾಗಿದ್ದು ತಿಳಿದು ಬಂದಿದೆ.

ಇದು, ಒಳಗೆ ಹೋಗುತ್ತಿದ್ದಂತೆ, ದೇಹದೊಳಗೆ ವೈರಸ್​ನ ಬೆಳವಣಿಗೆಯನ್ನು ತಡೆಯುತ್ತದೆ. ಅಲ್ಲದೇ, ಕೊರೊನಾದಿಂದ ಸೋಂಕಿತವಾಗಿರುವ ಜೀವಕೋಶಗಳನ್ನು ಪ್ರವೇಶಿಸಿ, ಸೋಂಕು ನಿವಾರಿಸುತ್ತೆ ಎಂದು ತಿಳಿದು ಬಂದಿದೆ.

The post ಭೀಭತ್ಸ ಕೊರೊನಾ ಅಲೆ; ಸೋಂಕಿತರ ಚಿಕಿತ್ಸೆಗೆ DRDO ನಿಂದ ಪರಿಣಾಮಕಾರಿ ಔಷಧ ಬಿಡುಗಡೆ appeared first on News First Kannada.

Source: newsfirstlive.com

Source link