ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ದಿನ ಕೆಡ್ಡಸ! ಇಂದು ತುಳುನಾಡಿಗೆ ಮಧ್ಯಾಹ್ನ ಕೆಡ್ಡಸ | Dakshina Kannada special festival today


ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ದಿನ ಕೆಡ್ಡಸ! ಇಂದು ತುಳುನಾಡಿಗೆ ಮಧ್ಯಾಹ್ನ ಕೆಡ್ಡಸ

ಸಾಂಧರ್ಬಿಕ ಚಿತ್ರ

ಭಾರತ ಬಹು ಸಾಂಸ್ಕೃತಿಕ ಮತ್ತು ಬಹು ಧಾರ್ಮಿಕ ಬೀಡಾಗಿರುವ ದೇಶ.  ವಿವಿಧ ಧರ್ಮಗಳ ಹಬ್ಬಗಳನ್ನು ಆಚರಿಸುತ್ತದೆ. ಒಂದೊಂದು ಪ್ರಾಂತ್ಯದಲ್ಲಿ ವಿಭಿನ್ನವಾಗಿ ಹಬ್ಬಗಳನ್ನು ಜನರು ಆಚರಿಸುತ್ತಾರೆ. ಅದೇ ರೀತಿ ತುಳುನಾಡಿನಲ್ಲಿಯೂ ಹಬ್ಬದ ವೈಶಿಷ್ಟ್ಯವೇ ವಿಭಿನ್ನ. ವರ್ಷದ ಪ್ರಾರಂಭದಲ್ಲಿ ತುಳುನಾಡಿನಲ್ಲಿ ಆರಂಭವಾಗುವ  ಕೆಡ್ಡಸವೂ ಕೂಡ ಒಂದಾಗಿದೆ. ಬಹುಶಃ ಇದು ತುಳುನಾಡಿನ ಹೊರತಾದ ಜನರಿಗೆ ಹಬ್ಬದ ಬಗ್ಗೆ ಗೊತ್ತಿರುವುದು ಬೆರಳಣಿಕೆಯಷ್ಟು.  ತುಳುನಾಡಿನಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದ್ದು, ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ  ಭೂತಾಯಿಯ ಋತುಸ್ರಾವವನ್ನು ಸಂಭ್ರಮಿಸುವುದು ಇಲ್ಲಿನ ವಿಶೇಷ ಆಚರಣೆಗಳಲ್ಲಿ ಒಂದಾಗಿದೆ. ಮೂರು ದಿನಗಳ ಕಾಲ ಆಚರಿಸುವ ಈ ಆಚರಣೆಯ ಸಂದರ್ಭದಲ್ಲಿ ಪ್ರಕೃತಿಗೆ ಯಾವ ರೀತಿಯಲ್ಲೂ ಹಾನಿ ಮಾಡಬಾರದೆಂಬ ನಿಷೇಧವೂ ಇದೆ. ಮನೆ ಹುಡುಗಿ ದೊಡ್ಡವಳಾದಳೆಂದು ಮನೆಯವರೆಲ್ಲಾ ಸಂಭ್ರಮಿಸುವುದು, ಮದುಮಗಳಾಗಿ ಮದುವೆ ಮಾಡಿಸಿ  ಊರವರನ್ನೆಲ್ಲಾ ಕರೆದು ಪುಟ್ಟ ಮಕ್ಕಳಿಗೆ ಸೀರೆ ಉಡಿಸಿ ಹರ್ಷ ಪಡೋದು ತುಳುನಾಡಿನ ವಾಡಿಕೆ. ಕೆಡ್ಡಸ ಅಂದರೆ ಕನ್ನಡದಲ್ಲಿ ನೆಲ ಅಗೆಯುವುದು ನಿಷೇಧ ಎನ್ನುವ ಅರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ದಿವಸ ಇದರ ಆಚರಣೆ ಇರುತ್ತದೆ.

ಯಾವಾಗ ಕೆಡ್ಡಸ?

ತುಳು ಮಾಸದ ಪೊನ್ನಿ ತಿಂಗಳು ಅಂದರೆ ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಆಚರಿಸಲಾಗುತ್ತದೆ. ಇಂದು ಮಧ್ಯಾಹ್ನ ಕೆಡ್ಡಸ ಆರಂಭವಾಗುತ್ತದೆ. ಮೂರು ದಿನ ನಡೆಯುವ ಈ ಹಬ್ಬದ ಆಚರಣೆಯಲ್ಲಿ ನೆಲ ಅಗೆಯುವುದು, ಮರಗಳನ್ನು ಕಡಿಯುವುದು ನಿಷಿದ್ಧ. ಯಾಕೆಂದರೆ ಭೂಮಿ ರಜಸ್ವಲೆಯಾಗಿರುವಾಗ ಕೃಷಿಕಾರ್ಯದಲ್ಲಿ ತೊಡಗಿ ಭೂಮಿಗೆ ನೋವುಂಟು ಮಾಡಿದರೆ ಆಕೆ ಬಂಜೆಯಾಗುತ್ತಾಳೆ ಎಂಬ ನಂಬಿಕೆ.

ಕೆಡ್ಡಸದ ವೇಳೆ ಪೂಜಿಸುವವರು ಸ್ತ್ರೀಯರು. ಅಂಗಳದ ಒಂದು ಮೂಲೆಯಲ್ಲಿ ಗೋಮಯದಿಂದ ಶುದ್ಧೀಕರಿಸಿದ ಜಾಗದಲ್ಲಿ ವಿಭೂತಿಯಿಂದ ವೃತ್ತ ರಚಿಸಿ ಅದರಲ್ಲಿ ಬಿಳಿಯ ಮಡಿಬಟ್ಟೆ, ಗೆಜ್ಜೆಕತ್ತಿ (ಕಿರುಗತ್ತಿ), ತೆಂಗಿನ ಗರಿಯ ಹಸಿ ಕಡ್ಡಿಯನ್ನಿಟ್ಟು ಮಾಡಿದ ಸಾಂಕೇತಿಕವಾದ ‘ಭೂಮಿ’ತಾಯಿಯೇ ಇಲ್ಲಿ ಪೂಜನೀಯಳು.
ಕೆಡ್ಡಸದ ಮೊದಲನೆಯ ದಿನ ಬೆಳಗ್ಗೆ ಹೆಂಗಸರು ನವಧಾನ್ಯಗಳನ್ನು ಹುರಿಯುತ್ತಾರೆ. ಈ ನವಧಾನ್ಯಗಳಲ್ಲಿ ಹುರುಳಿ ಮುಖ್ಯವಾದುದು. ಹುರಿದ ನವಧಾನ್ಯಗಳಿಗೆ ಬೆಲ್ಲ ಹಾಗೂ ತೆಂಗಿನಕಾಯಿ ಚೂರುಗಳನ್ನು ಬೆರೆಸಿ ಅಗ್ರದ ಬಾಳೆಲೆಯಲ್ಲಿಟ್ಟು ಭೂ ದೇವಿಗೆ ನಮಿಸುತ್ತಾರೆ. ಈ ಹುರಿದ ಧಾನ್ಯಗಳಿಗೆ ತುಳುವಿನಲ್ಲಿ ಕೆಡ್ಡಸದ ‘ಕುಡುಅರಿ’ ಅಥವಾ ‘ನನ್ನೆರಿ’ ಎನ್ನುತ್ತಾರೆ. ಆ ದಿನ ಮಧ್ಯಾಹ್ನದ ಊಟಕ್ಕೆ ನುಗ್ಗೆ ಪಲ್ಯ ಮತ್ತು ನುಗ್ಗೆ ಮತ್ತು ಬದನೆ ಸೇರಿಸಿ ಮಾಡಿದ ಪದಾರ್ಥ ವಿಶೇಷ.

ನಲಿಕೆ ಜನಾಂಗದವರು ಊರಿನವರಿಗೆ ಕೆಡ್ಡಸದ ಕರೆ ಕಳಿಸುವುದು  ಹೀಗೆ :

ಸೋಮವಾರ ಕೆಡ್ಡಸ,
ಮುಟ್ಟುನೆ ಅಂಗಾರ ನಡು ಕೆಡ್ಡಸ
ಬುಧವಾರ ಬಿರಿಪುನೆ
ಪಜಿ ಕಡ್ಪರೆ ಬಲ್ಲಿ
ಉನುಂಗೆಲ್ ಪೊಲಿಪ್ಯರೆ ಬಲ್ಲಿ,
ಅರಸುಲೆ ಬೋಟೆಂಗ್
ಸರ್ವೆರ್ ಉಲ್ಲಾಯನಕುಲು ಪೋವೋಡುಗೆ.
ವಲಸಾರಿ ಮಜಲ್ಡ್ ಕೂಡ್ದು
ವಲಸರಿ ದೇರ್ದ್ದ್ ಪಾಲೆಜ್ಜಾರ್ ಜಪ್ಪುನಗ
ಉಳ್ಳಾಲ್ದಿನಕುಲು ಕಡಿಪಿ ಕಂಜಿನ್ ನೀರ್ಡ್ ಪಾಡೋದು.
ಓಡುಡ್ ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು.
ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ.
ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ,
ಕೈಲ ಕಡೆಲ ಪತ್ತ್ದ್
ಉಜ್ಜೆರ್ಗೊಂಜಿ ಎರ್ಪು ಏರ್ಪಾದ್
ಇಲ್ಲ ಬೇತ್ತಡಿತ್ ಉಂತೊಂದು
ಮುರ್ಗೊಲೆಗ್ ತಾಂಟಾವೊಡು.
ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.
ಎಂಕ್ ಅಯಿತ ಕೆಬಿ, ಕಾರ್, ಕೈ,
ಉಪ್ಪು,ಮುಂಚಿ, ಪುಲಳಿ ಕೊರೊಡು.
(ಇದು ತುಳುಭಾಷೆಯ ಪದ್ಯವಾಗಿದೆ)

ಹಬ್ಬ ಎಂದ ಕೂಡಲೇ ವಿಶಿಷ್ಟ ಆಹಾರ ಸಾಮಾನ್ಯ. ಕೆಡ್ಡಸ ಹಬ್ಬದಲ್ಲೂ ಕುಡು ಅರಿ (ನನ್ಯೆರಿ) ಕೆಡ್ಡಸ ಸಮಯದಲ್ಲಿ ಕುಡು ಅರಿ ( ಹುರುಳಿ ಮತ್ತು ಹೆಸರು ಕಾಳು) ಒಣಗಿದ ತೆಂಗಿನಕಾಯಿ,ಕುಚ್ಚುಲಕ್ಕಿ, ಅಕ್ಕಿ ಬೆಲ್ಲ ಮತ್ತು ಕಡಲೆಕಾಯಿಗಳ ಮಿಶ್ರಣ)ಯನ್ನು ಎಲ್ಲರಿಗೂ ಹಂಚಲಾಗುವುದು. ಏಕೆಂದರೆ ಚಳಿಗಾಲದಲ್ಲಿದೇಹಕ್ಕೆ ಬೇಕಾದ ಬಹಳಷ್ಟು ಪೌ‌‍‍ಷ್ಟಿಕಾಂಶಗಳನ್ನು ಮತ್ತು ಎಣ್ಣೆ ಅಂಶಗಳನ್ನು ಇದು ಒದಗಿಸುತ್ತದೆ. ಈ ಮಿಶ್ರಣವು ದೇಹವು ಚಟುವಟಿಕೆಯಿಂದಿರಲು ಸಹಾಯವಾಗುತ್ತದೆ. ಕಳೆದು ಹೋಗುತ್ತಿರುವ ಪರಿಸರ ಸಂರಕ್ಷಣೆಯನ್ನು, ಕೆಡ್ಡಸ ಹಬ್ಬದಿಂದ ಭೂಮಿತಾಯಿಯನ್ನು ರಕ್ಷಿಸಲಾಗುತ್ತದೆ.

ಹರ್ಷಿತ ಹೆಬ್ಬಾರ್

ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಕಾಲೇಜು,ಉಜಿರೆ.

TV9 Kannada


Leave a Reply

Your email address will not be published.