ಭೂಮಿ ಹೃದಯ ಬಡಿದರೆ ಆಪತ್ತು.. ವೇದಗಳಲ್ಲಿ ಹೇಳಿದ್ದಕ್ಕೂ ಅಮೆರಿಕಾ ವಿಜ್ಞಾನಿಗಳ ಸಂಶೋಧನೆಗೂ ಹೋಲಿಕೆ ಇದ್ಯಾ?

ಭೂಮಿ ಹೃದಯ ಬಡಿದರೆ ಆಪತ್ತು.. ವೇದಗಳಲ್ಲಿ ಹೇಳಿದ್ದಕ್ಕೂ ಅಮೆರಿಕಾ ವಿಜ್ಞಾನಿಗಳ ಸಂಶೋಧನೆಗೂ ಹೋಲಿಕೆ ಇದ್ಯಾ?

ಸೌರ ಮಂಡಲದಲ್ಲಿ ಸೂರ್ಯನ ಸುತ್ತ ನಿರ್ದಿಷ್ಟ ಕಕ್ಷೆಯಲ್ಲಿ ಗ್ರಹಗಳು ಸುತ್ತುತ್ತಾ ಇರುತ್ತವೆ. ಅದರಲ್ಲಿ ಭೂಮಿಯೂ ಒಂದು. ಸೌರ ಮಂಡಲ ಹೇಗೆ ರಚನೆ ಆಯ್ತು? ಸೂರ್ಯನ ಸುತ್ತ ಯಾಕೆ ಗ್ರಹಗಳು ಸುತ್ತತ್ತವೆ? ಭೂಮಿ ಮಾತ್ರ ಯಾಕೆ ಜೀವಿಗಳಿಗೆ ವಾಸಯೋಗ್ಯ? ಅನ್ನುವುದೆಲ್ಲ ಮಾನವನಲ್ಲಿ ಭಾರೀ ಕುತೂಹಲ ಹುಟ್ಟಿಸುತ್ತವೆ. ಈ ನಡುವೆ ಅಮೆರಿಕದ ಭೂವಿಜ್ಞಾನಿಗಳ ಸಂಶೋಧನೆಯೊಂದು ಎಲ್ಲಿಲ್ಲದ ವಿಸ್ಮಯ ಮೂಡಿಸಿದೆ. ಹೃದಯ ಬಡಿತ ಹೆಚ್ಚಿಸಿದೆ. ಅದೇನದು ಅನ್ನೋದನ್ನು ಹೇಳ್ತೀವಿ. ಅದಕ್ಕೂ ಮುನ್ನ ಭಾರತೀಯ ಪಂಚಾಂಗದಲ್ಲಿ ಹೇಳಲಾಗಿರುವ ಯುಗಗಳ ಬಗ್ಗೆ ತಿಳಿಯೋಣ.

ಯುಗಗಳ ಬಗ್ಗೆ ವೇದಗಳಲ್ಲಿ ಏನು ಹೇಳಲಾಗಿದೆ?
ಕಲಿಯುಗ ಅಂತ್ಯ ಯಾವಾಗ ಆಗುತ್ತೆ?

ವೇದಗಳ ಪ್ರಕಾರ ನಾಲ್ಕು ಯುಗಗಳು ಇವೆ. ಅದರಲ್ಲಿ ಸತ್ಯ ಯುಗ 17 ಲಕ್ಷದ 28 ಸಾವಿರ ವರ್ಷಕ್ಕೆ ಅಂತ್ಯ ಆಯ್ತು. ತ್ರೇತಾಯುಗ 12 ಲಕ್ಷದ 96 ಸಾವಿರ ವರ್ಷಕ್ಕೆ ಅಂತ್ಯ ಆಯ್ತು. ದ್ವಾಪರ ಯುಗ 8 ಲಕ್ಷದ 64 ಸಾವಿರ ವರ್ಷಕ್ಕೆ ಅಂತ್ಯ ಆಯ್ತು. ಈಗ ಇರೋ ಕಲಿಯುಗದ ಆಯಸ್ಸು 4 ಲಕ್ಷ 32 ಸಾವಿರ ವರ್ಷ. ಪ್ರತಿಯೊಂದು ಯುಗ ಅಂತ್ಯವಾದಾಗಲೂ ಆ ಕಾಲದ ಜೀವಿಗಳು ಅಂತ್ಯವಾಗುತ್ತವೆ. ಮತ್ತೊಂದು ಯುಗ ಆರಂಭವಾಗುವಾಗ ಪುನಃ ಜೀವಿಗಳು ಜನ್ಮ ತಳೆಯುತ್ತವೆ. ವೇದಗಳ ಪ್ರಕಾರ ಕಲಿಯುಗವೇ ಅಂತ್ಯ. ಈ ಯುಗ ಅಂತ್ಯವಾಗುತ್ತಿದ್ದಂತೆ ಜೀವರಾಶಿಯೇ ಅಂತ್ಯ ಆಗುತ್ತೆ ಅನ್ನೋದನ್ನು ಅದು ಹೇಳುತ್ತೆ. ಅಷ್ಟಕ್ಕೂ ಇದನ್ನೆಲ್ಲಾ ಹೇಳ್ತಿರೋದಕ್ಕೆ ಕಾರಣ ಅಮೆರಿಕ ವಿಜ್ಞಾನಿಗಳ ಸಂಶೋಧನೆ.

ಭೂವಿಜ್ಞಾನಿಗಳ ಸಂಶೋಧನೆ ಏನು?
ಭೂಮಿಗೂ ಹೃದಯ ಇದೆಯಾ ?

ಮನುಷ್ಯನಿಗೆ ಹೃದಯವೇ ಒಂದು ಬಹುಮುಖ್ಯ ಅಂಗ, ಅದರ ಬಡಿತ ಸರಿ ಇದ್ದರೆ ಮನುಷ್ಯನು ಸರಿ ಇರುತ್ತಾನೆ. ಒಮ್ಮೆ ಏರಿಳಿತ ಆದ್ರೆ, ಮನುಷ್ಯನ ಆರೋಗ್ಯವೂ ಏರಿಳಿತವಾಗುತ್ತೆ. ಅದು ಯಾವಾಗ ತನ್ನ ಬಡಿತ ನಿಲ್ಲಿಸುತ್ತೋ ಆ ಕ್ಷಣವೇ ಮನುಷ್ಯ ಅಂತ್ಯ ಆಗ್ತಾನೆ. ಆದ್ರೆ ಈಗ ಕುತೂಹಲ ಹುಟ್ಟಿಸಿರುವುದು ಅಮೆರಿಕ ಭೂ ವಿಜ್ಞಾನಿಗಳ ಸಂಶೋಧನೆ. ಅದೇನಂದ್ರೆ ಭೂಮಿಗೂ ಹೃದಯ ಇದೆ ಅನ್ನೋದು. ಹೌದು, ಅಮೆರಿಕ ವಿಜ್ಞಾನಿಗಳ ಸಂಶೋಧನೆ ಪ್ರಕಾರ ಭೂಮಿಗೆ ಹೃದಯ ಇದೆ. ಹಾಗಾದ್ರೆ ಅದರ ನಾಡಿ ಬಡಿದುಕೊಳ್ಳಲೇ ಬೇಕಲ್ವ? ಖಂಡಿತ ಬಡಿದುಕೊಳ್ಳುತ್ತೆ.

27.5 ದಶಲಕ್ಷ ವರ್ಷಕ್ಕೊಮ್ಮೆ ನಾಡಿಬಡಿತ
ಮನುಷ್ಯನಿಗೆ ಪ್ರತಿ ನಿಮಿಷಕ್ಕೆ ಹೃದಯ ಸಾಮಾನ್ಯವಾಗಿ 60 ರಿಂದ 100 ಬಾರಿ ಬಡಿದುಕೊಳ್ಳುತ್ತೆ. ಅದೇ ರೀತಿ ಆನೆಗೆ ಸರಾಸರಿ 30 ಬಾರಿ ಬಡಿದುಕೊಳ್ಳುತ್ತೆ. ದೊಡ್ಡ ಗಾತ್ರದ ಜೀವಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಹೃದಯ ಬಡಿತ ಕಾಣಿಸಿಕೊಂಡರೆ, ಚಿಕ್ಕಗಾತ್ರ ಪ್ರಾಣಿಗಳಲ್ಲಿ ಹೃದಯ ಬಡಿತ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಭೂಮಿಗೂ ಹೃದಯ ಇದೆ ಅಂದ್ರೆ ಅದು ಬಡಿದುಕೊಳ್ಳಲೇ ಬೇಕಲ್ವ? ವಿಜ್ಞಾನಿಗಳ ಸಂಶೋಧನೆ ಪ್ರಕಾರ ಬಡಿದುಕೊಳ್ಳುತ್ತೆ. ಆದ್ರೆ, ಅದು 27.5 ದಶ ಲಕ್ಷ ವರ್ಷಕ್ಕೊಮ್ಮೆ ಬಡಿದುಕೊಳ್ಳುತ್ತಂತೆ. ಹಾಗೆ ಬಡಿದುಕೊಂಡಾಗ ಆಪತ್ತು ಗ್ಯಾರಂಟಿ ಎನ್ನಲಾಗ್ತಿದೆ.

ಭೂಮಿ ಹೃದಯದ ನಾಡಿ ಬಡಿದರೆ ಏನಾಗುತ್ತೆ?
ಅದರ ನಾಡಿ ಬಡಿತವೆ ಮನುಷ್ಯನಿಗೆ ಆಪತ್ತು

ಯಾವುದೇ ಜೀವಿಯ ನಾಡಿ ಮಿಡಿತ ಆಗುತ್ತಿದ್ದರೆ ಆ ಜೀವಿ ಬದುಕಿದೆ ಅಂತ ಖುಷಿ ಪಡ್ತೀವಿ. ಆದ್ರೆ, ಭೂಮಿಗಿರುವ ಹೃದಯದ ನಾಡಿ ಬಡಿತದ ಸುದ್ದಿ ಕೇಳಿದ್ರೆ ಆಘಾತವಾಗುತ್ತೆ. ಅಂತಹ ಒಂದು ವಿಸ್ಮಯ, ಭಯ ಹುಟ್ಟಿಸುವ ಅಂಶ ಅದರ ನಾಡಿ ಬಡಿತದಲ್ಲಿ ಅಡಗಿದೆ. 27.5 ದಶಲಕ್ಷ ವರ್ಷಕ್ಕೊಮ್ಮೆ ಅದು ಬಡಿದುಕೊಳ್ಳುತ್ತೆ. ಆ ಸಂದರ್ಭದಲ್ಲಿ ಜ್ವಾಲಾಮುಖಿ ಸ್ಫೋಟವಾಗುತ್ತೆ, ಸಮುದ್ರದಲ್ಲಿ ಏರಿಳಿತವಾಗುತ್ತೆ, ಕಡಲ ತೀರದಲ್ಲಿ ಬದಲಾವಣೆಗಳು ಆಗುತ್ತವೆ. ಹೀಗೆ ಏನು ಬೇಕಾದ್ರೂ ಆಗಬಹುದು. ಹಾಗಂತ ಜೀವ ಸಂಕುಲ ಅಂದೇ ಅಂತ್ಯವಾಗುತ್ತೆ ಅನ್ನೋದನ್ನು ಮಾತ್ರ ವಿಜ್ಞಾನಿಗಳು ಖಚಿತಪಡಿಸಿಲ್ಲ. ದುರಂತಗಳು ನಡೆಯುವ ಸಾಧ್ಯತೆ ಹೆಚ್ಚು ಅನ್ನೋದನ್ನ ಮಾತ್ರ ಖಚಿತವಾಗಿ ಹೇಳ್ತಾರೆ. ಬಹುಶಃ ಇಷ್ಟು ವರ್ಷಗಳ ಕಾಲ ಜ್ಯೋತಿಷಿಗಳಿಂದ ಪ್ರಳಯ ಆಗುತ್ತೆ ಅನ್ನೋದನ್ನು ಕೇಳ್ತಾ ಇದ್ವಿ. ಈಗ ವಿಜ್ಞಾನಿಗಳು ಹೇಳುತ್ತಿರುವ ಪ್ರಳಯ ಇದೆನಾ ಅನಿಸಿಬಿಡುತ್ತೆ.

ಮುಂದಿನ ನಾಡಿ ಬಡಿತ ಯಾವಾಗ?
ಅಂದಿನಿಂದಲೇ ನಡೆಯುತ್ತಾ ದುರಂತಗಳು

ಜ್ಯೋತಿಷಿಗಳ ಪ್ರಳಯದ ಮಾತು ಕೇಳಿದಂತೆ ಇದನ್ನು ಕೇಳಿ ಆತಂಕಗೊಳ್ಳಬೇಡಿ. ಮನೆ ಮಠ ಮಾರಿಕೊಂಡು ಎಂಜಾಯ್‌ ಮಾಡಲು ಹೋಗಬೇಡಿ, ಹೇಗಿದ್ರೂ ಪ್ರಳಯ ಆಗುತ್ತೆ ಅಂತ ಸಾಲ ಕಟ್ಟದೇ ಹಾಗೇ ಇರಬೇಡಿ. ಕೆಲಸ ಮಾಡದೇ ಕೈಕಟ್ಟಿ ಕೂರಬೇಡಿ, ಉಟ ತಿಂಡಿ ಬಿಟ್ಟು ಚಿಂತೆಗೆ ಬೀಳಬೇಡಿ. ಯಾಕೆಂದ್ರೆ ವಿಜ್ಞಾನಿಗಳ ಸಂಶೋಧನೆ ಪ್ರಕಾರ ಭೂಮಿಯ ಹೃದಯದ ಮುಂದಿನ ಬಂಡಿತ 20 ದಶಲಕ್ಷ ವರ್ಷಗಳ ನಂತರ. ಅಂದರೆ, 20 ದಶಲಕ್ಷ ವರ್ಷಗಳ ಅವಕಾಶ ಇದೆ. ಒಬ್ಬ ಮನುಷ್ಯನ ಸಾವಿರಾರು ತಲೆ ಮಾರು ಕಳೆಯುವಷ್ಟು ಅವಕಾಶ ಇದೆ.

ಸಂಶೋಧನೆ ಮಾಡಿದವರು ಯಾರು?
ಸಂಶೋಧನೆ ಮಾಡಿದ್ದು ಹೇಗೆ?

ಇಂತಹ ಒಂದು ವಿಸ್ಮಯದ ಸಂಶೋಧನೆ ಮಾಡಿದ್ದು ಅಮೆರಿಕಾದ ವಿಜ್ಞಾನಿಗಳು. ಆ ತಂಡದ ಮುಂದಾಳತ್ವ ವಹಿಸಿದ್ದು ನ್ಯೂಯಾರ್ಕ್‌ ವಿಶ್ವ ವಿದ್ಯಾಲಯದ ಭೂವಿಜ್ಞಾನಿ ಮೈಕೆಲ್‌ ರಾಂಪಿನೊ. ಅವರು ಹೇಳುವಂತೆ ಅವರ ತಂಡ 260 ದಶಲಕ್ಷ ವರ್ಷದಲ್ಲಿ ಆದಂತಹ 89 ದೊಡ್ಡ ದೊಡ್ಡ ದುರಂತವನ್ನು ಇಟ್ಟುಕೊಂಡು ಅಧ್ಯಯನ ಮಾಡಿದೆ. ಪ್ರತಿಯೊಂದು ಘಟನೆಗೂ ಕಾರಣ ಏನು ಅನ್ನೋದನ್ನು ಅಧ್ಯಯನ ಮಾಡಿ ಹೊರತೆಗೆಯಲಾಗಿದೆ. ಆದ್ರೆ, ಭೂಮಿಗೆ ಯಾಕೆ ಹೃದಯ ಇದೆ, ಅದು ಯಾಕೆ ಬಡಿದುಕೊಳ್ಳುತ್ತೆ ಅನ್ನೋ ಕಾರಣ ತಿಳಿದಿಲ್ಲಾ ಅಂತ ಹೇಳಿದ್ದಾರೆ.

ಮಾನವನಿಗೆ ಅರಿವಿಲ್ಲದೇ ಸಾವಿರಾರು ಘಟನೆಗಳು ಸೌರಮಂಡಲದಲ್ಲಿ, ಭೂಮಂಡಲದಲ್ಲಿ ನಡೆಯುತ್ತಲೇ ಇರುತ್ತವೆ. ಸಂಶೋಧನೆಗೆ ಇಳಿದಾಗಲೇ ಒಂದೊಂದೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತವೆ. ಮೊದಲು ಭೂಮಿಯ ಸುತ್ತ ಸೂರ್ಯ ಸುತ್ತುತ್ತಾನೆ ಅಂತ ಜಗತ್ತೆ ನಂಬಿತ್ತು. ಆದ್ರೆ ನಿಕೋಲಸ್‌ ಕೋಪರ್ನಿಕಸ್‌ ಅನ್ನೋ ವಿಜ್ಞಾನಿ ಭೂಮಿಯ ಸುತ್ತ ಸೂರ್ಯ ಸುತ್ತಲ್ಲ. ಸೂರ್ಯನ ಸುತ್ತ ಭೂಮಿ ಸೇರಿದಂತೆ ಇತರೆ ಗ್ರಹಗಳು ಸುತ್ತುತ್ತವೆ ಅಂತ ತಿಳಿಸುತ್ತಾನೆ. ಅಂದು, ವಿಜ್ಞಾನಿಯ ಸಂಶೋಧನೆಯನ್ನು ಜಗತ್ತು ಹೀನಾಯವಾಗಿ ಕಂಡಿತ್ತು. ತೀರಾ ಕೇಳಮಟ್ಟದಲ್ಲಿ ನೋಡಿತ್ತು. ಧರ್ಮಕ್ಕೆ ವಿರುದ್ಧವಾದದ್ದು ಅಂತ ನೋಡಿತ್ತು. ಆದನ್ನು ಒಪ್ಪಿಕೊಂಡಿರಲಿಲ್ಲ. ಆದ್ರೆ, ಆನಂತರ ಕೋರ್ಪನಿಕಸ್‌ ಸಂಶೋಧನೆಯೇ ಸರಿ ಎಂದು ಒಪ್ಪಿಕೊಳ್ಳಬೇಕಾಯ್ತು. ಅದೇ ರೀತಿ ಈಗ ಭೂಮಿಗೆ ಹೃದಯ ಇದೆ, ಅದರ ನಾಡಿ ಬಡಿಯುತ್ತೆ, ಅದು ಬಡಿದಾಗ ಭೂಮಿಯಲ್ಲಿ ಆಪತ್ತು ಸಂಭವಿಸುತ್ತೆ ಅನ್ನೋದನ್ನು ಈ ಕ್ಷಣಕ್ಕೆ ಒಪ್ಪಿಕೊಳ್ಳದೇ ಇರಬಹುದು. ಆದ್ರೆ, ಅದು ಮುಂದೊಂದು ದಿನ ಕೋಪರ್ನಿಕಸ್‌ ಸಂಶೋಧನೆಯಂತೆ ಸತ್ಯ ಆದ್ರೂ ಆಗಬಹುದು.

ವೇದಗಳಲ್ಲಿ ಹೇಳಿದ್ದಕ್ಕೂ ಸಂಶೋಧನೆಗೂ ಹೋಲಿಕೆ ಇದೆಯಾ?
ಹೌದು, ವಿಜ್ಞಾನಿಗಳ ಸಂಶೋಧನೆಗೂ ವೇದಗಳಲ್ಲಿ ಹೇಳುವುದಕ್ಕೂ ಹೋಲಿಕೆ ಇದೆಯಾ ಅನ್ನೋ ಅನುಮಾನ ಕೂಡ ಬರುತ್ತೆ. ಎಷ್ಟೋ ಶತಮಾನಗಳ ಹಿಂದೆ ರಚನೆಯಾಗಿರುವುದು ಹಿಂದೂ ಪಂಚಾಂಗ. ಅದರ ಪ್ರಕಾರ ಪ್ರತಿಯೊಂದು ಯುಗಕ್ಕೂ ನಿರ್ದಿಷ್ಟ ಸಮಯ ಅನ್ನೋದು ಇದೆ. ಆ ಸಮಯದ ನಂತರ ಭೂಮಿ ಅಂತ್ಯ ಆಗುತ್ತೆ. ಆದ್ರೆ, ವಿಜ್ಞಾನಿಗಳ ಸಂಶೋಧನೆಯ ಪ್ರಕಾರ 27.5 ದಶ ಲಕ್ಷ ವರ್ಷಗಳ ನಂತರ ಭೂಮಿಯ ಹೃದಯ ಬಡಿಯುತ್ತೆ. ಆವಾಗ ಅನಾಹುತಗಳು ನಡೆಯುತ್ತೆ. ಭೂ ಮಂಡಲ ಅಂತ್ಯ ಆದ್ರೂ ಆಗಬಹುದು ಅನ್ನೋದನ್ನು ತಿಳಿಸುತ್ತೆ. ಹಿಂದು ಪಂಚಾಂಗದ ಪ್ರಕಾರ ಕಲಿಯುಗದ ಆಯಸ್ಸು 4 ಲಕ್ಷ 32 ಸಾವಿರ ವರ್ಷ. ಎರಡೂ ಹೋಲಿಕೆ ಮಾಡಿದಾಗ ವ್ಯತ್ಯಸ ಕಾಣಬಹುದು. ಆದ್ರೆ, ಎಲ್ಲರೂ ಹೇಳೋದು ಮುಂದೊಂದಿನ ಭೂಮಿ ಅಂತ್ಯವಾಗುತ್ತೆ ಅಂತ.

ವಿಜ್ಞಾನಿ ಡಾ.ಎಚ್‌.ಎಸ್‌.ಎಂ.ಪ್ರಕಾಶ್‌ ಈ ಕುರಿತು ಮಾತನಾಡಿದ್ದು, ಅಮೆರಿಕಾದ ವಿಜ್ಞಾನಿಗಳು ಕಂಡುಕೊಂಡ ಸತ್ಯಾಂಶ ಹೊರಗಿಟ್ಟಿದ್ದಾರೆ. ಭೂಮಿಗೂ ಜೀವ ಇದೆ. ವಿಜ್ಞಾನಿಗಳ ಸಂಶೋಧನೆಯನ್ನು ಸ್ವಾಗತಿಸುತ್ತೇನೆ. ಭೂಮಿಯ ಒಳಗೆ ಫಲ್ಸ್‌ ಇದೆ. ಭೂಮಿ ಹೃದಯ ಬಡಿತದಿಂದ ಭೂಮಿಯ ಮೇಲೆ ಸಮುದ್ರುಗಳು ಹುಟ್ಟುವುದು, ಸಮುದ್ರಗಳು ನಾಶವಾಗುವುದು, ಜ್ವಾಲಾಮುಖಿಯಾಗುವುದು ಸತ್ಯ ಎಂದಿದ್ದಾರೆ. ಇದೇ ಸಮಯದಲ್ಲಿ ಭೂಮಿಯ ಆಯಸ್ಸಿನ ಬಗ್ಗೆ ವೇದಗಳು ಹೇಳಿದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಡಾ.ಶೆಲ್ವಪಿಳ್ಳೈ ಅಯ್ಯಂಗಾರ್‌ ಹೇಳುವಂತೆ, ಅಮೆರಿಕ ವಿಜ್ಞಾನಿಗಳ ಸಂಶೋಧನೆಗೂ ವೇದದಲ್ಲಿ ಹೇಳಿರುವುದಕ್ಕೂ ಹೋಲಿಕೆ ಇದೆ. ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರಬಹುದು. ವಿದ್ಯುತ್‌ ಆವರ್ಥದಿಂದ ಭೂಮಿಯಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಭೂಮಿಗೆ ರಕ್ತದ ಹೃದಯ ಇಲ್ಲ. ಆದ್ರೆ ಭೂಮಿಯ ಹೃದಯ ಹೊಡೆದುಕೊಳ್ಳುತ್ತೆ ಎಂದು ತಿಳಿಸಿದ್ದಾರೆ.

ನೋಡಿದ್ರಲ್ಲ, ಏನ್‌ ವಿಚಿತ್ರ ಅನ್ನೋದನ್ನು. ಮನುಷ್ಯ ಹೃದಯ ಬಡಿದುಕೊಳ್ಳುವಷ್ಟು ಸಮಯ ಮಾತ್ರ ಜೀವಂತ ಇರುತ್ತಾನೆ. ಆದ್ರೆ, ಭೂಮಿ ಹೃದಯ ಬಡಿದುಕೊಂಡ್ರೆ ಮನುಷ್ಯನೇ ಇರಲ್ಲ.

The post ಭೂಮಿ ಹೃದಯ ಬಡಿದರೆ ಆಪತ್ತು.. ವೇದಗಳಲ್ಲಿ ಹೇಳಿದ್ದಕ್ಕೂ ಅಮೆರಿಕಾ ವಿಜ್ಞಾನಿಗಳ ಸಂಶೋಧನೆಗೂ ಹೋಲಿಕೆ ಇದ್ಯಾ? appeared first on News First Kannada.

Source: newsfirstlive.com

Source link