ಮೈಸೂರು: ರೋಹಿಣಿ ಸಿಂಧೂರಿ V/S ಸಾ.ರಾ ಮಹೇಶ್ ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಭೂ ಅಕ್ರಮ ಆರೋಪಗಳ ಕುರಿತಂತೆ ದಾಖಲೆ ಬಿಡುಗಡೆ ಮಾಡುವಂತೆ ಸಾರಾ ಮಹೇಶ್ ಸವಾಲು ಹಾಕಿದ್ದ ​ಹಿನ್ನೆಲೆ ರೋಹಿಣಿ ಸಿಂಧೂರಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಪತ್ರಕರ್ತರೊಬ್ಬರ ಜೊತೆ ರೋಹಿಣಿ ಸಿಂಧೂರಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆಡಿಯೋದಲ್ಲಿ ಸಾ.ರಾ ಮಹೇಶ್​ ಹಾಗೂ ರಾಜೀವ್​ ವಿರುದ್ಧ ಭೂ ಕಬಳಿಕೆಯ ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೇ ತಮ್ಮ ವರ್ಗಾವಣೆಗೂ ಕೂಡ ಸಾ.ರಾ ಮಹೇಶ್​ ಅವರೇ ಕಾರಣ ಎಂದು ಹೇಳಿದ್ದಾರೆ.

ಈ ಆರೋಪಗಳ ಕುರಿತಂತೆ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ ಸಾ.ರಾ ಮಹೇಶ್​, ಅವರಿಗೆ ಮೈಸೂರು ಬಿಟ್ಟು ಹೋಗಲು ಮನಸ್ಸಿಲ್ಲ. ನಾನು ಅವರು ಮೈಸೂರಿಗೆ ಬಂದ ಕ್ಷಣದಿಂದ ಹೋರಾಟ ಮಾಡುತ್ತಿದ್ದೇನೆ. ಅವರ ವಿರುದ್ಧ 11 ಆರೋಪಗಳನ್ನು ಮಾಡಿದ್ದೇನೆ. ನನ್ನ ಮೇಲಿನ ಆರೋಪಗಳ ಕುರತು ತನಿಖೆ ನಡೆಸುವಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಏಕಾಂಗಿಯಾಗಿ ಧರಣಿ ಮಾಡುತ್ತಿದ್ದೇನೆ ಎಂದರು.

ರೋಹಿಣಿ ಸಿಂಧೂರಿಗೆ ಸಾ.ರಾ ಸಾವಲು..
ನನ್ನ ಕನ್ವೆಷನ್​ ಸೆಂಟರ್​ ರಾಜಕಾಲುವೆ ಮೇಲೆ ನಿರ್ಮಾಣ ಮಾಡಿದ್ದೀನಿ ಎಂದು ಆರೋಪ ಮಾಡಿದ್ದಾರೆ. ಆದರೆ ನಾನು ಅದನ್ನು ಸರ್ಕಾರಿ ಜಮೀನಿನಲ್ಲಿ ಕಟ್ಟಿದ್ದರೇ ತನಿಖೆ ಮಾಡಲಿ. ಅದು ಸಾಬೀತಾದರೆ ನನ್ನ ಕನ್ವೆಷನ್ ಸೆಂಟರ್​​ ಅನ್ನು ಸಾರ್ವಜನಿಕರಿಗೆ ಬರೆದುಕೊಡುತ್ತೇನೆ. ಅಲ್ಲದೇ ಆರೋಪ ಸಾಬೀತಾದರೆ ಸಾರ್ವಜನಿಕ ಸೇವೆಯಿಂದ ನಿವೃತ್ತಿಯಾಗುತ್ತೇನೆ. ಅಕ್ರಮ ಆಗಿಲ್ಲ ಎಂದಾದರೇ ಅವರು ಐಎಎಸ್​ಗೆ ರಾಜೀನಾಮೆ ನೀಡಿ ಆಡುಗೆ ಮಾಡಲು ಹೋಗಬೇಕು ಎಂದು ಸವಾಲೆಸೆದರು.

ವರ್ಗಾವಣೆ ಮಾಡಿಸೋಕೆ ನಮ್ಮ ಸರ್ಕಾರ ಇದ್ಯಾ..?
ರೋಹಿಣಿ ಅವರನ್ನು ವರ್ಗಾವಣೆ ಮಾಡಲು ನಮ್ಮ ಸರ್ಕಾರ ಆಡಳಿತ ನಡೆಸುತ್ತಿಲ್ಲ. ನಾನು ಅವರನ್ನು ವರ್ಗಾವಣೆ ಮಾಡಿ ಎಂದು ಸಿಎಂಗೆ ಹೇಳಿಲ್ಲ. ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದೇನೆ. ಮೈಸೂರಿನಲ್ಲಿ 2 ಲಕ್ಷ ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, ಒಟ್ಟಾರೆ 5 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾಧಿಕಾರಿಗಳಾಗಿ ಇವರು ಮಾಡಿದ ಅತಿರೇಕದ ವರ್ತನೆ ಕುರಿತು ವರದಿ ಪಡೆದ ಸಿಎಂ, ವರ್ಗಾವಣೆ ಮಾಡಿದ್ದಾರೆ ಅಷ್ಟೇ ಎಂದು ಮಹೇಶ್​ ಹೇಳಿದ್ರು.

ನನ್ನ ವಿರುದ್ಧ ಏನೆಲ್ಲಾ ಭೂ ಕಬಳಿಕೆ ಆರೋಪ ಮಾಡಿದ್ದಾರೆ ಅದನ್ನು ಅವರ ವರದಿಯಲ್ಲೇ ಬಹಿರಂಗಪಡಿಸಲಿ. ಅದನ್ನು ಬಿಟ್ಟು ಸುಖಾ ಸುಮ್ಮನೆ ಪರಿಶೀಲನೆ ಆಗಬೇಕು ಎಂದು ಬರೆಯವುದು ತಪ್ಪು. ಅವರ ವೈಫಲ್ಯವನ್ನು ಮುಚ್ಚಿಟ್ಟಿಕೊಳ್ಳಲು ಇಲ್ಲದ ಆರೋಪಗಳನ್ನು ಮಾಡಿ ಜನರ ಗಮನ ಸೆಳೆಯಲು ಮುಂದಾಗಿದ್ದಾರೆ. ಕೊರೊನಾ ಬರುವುದಕ್ಕೂ ಮುನ್ನ ಐದು ತಿಂಗಳು ಇವರು ಏನೂ ಮಾಡಲಿಲ್ಲ. ಆದರೆ ಚಾಮರಾಜನಗರ ಆಕ್ಸಿಜನ್ ದುರಂತ ಆದ ಬಳಿಕ ಈಗ ನನ್ನ ಮೇಲೆ ಆರೋಪ ಮಾಡಿದ್ದಾರೆ. ಈಗ ಅವರ ಆಡಿಯೋ ಬಿಡುಗಡೆಯಾಗಿದೆ. ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದರು.

The post ‘ ಭೂ ಕಬಳಿಕೆ ಸಾಬೀತಾದ್ರೆ ಸಾರ್ವಜನಿಕರಿಗೆ ಬರೆದುಕೊಡ್ತೀನಿ, ಇಲ್ಲವಾದ್ರೆ..’ -ಸಿಂಧೂರಿಗೆ ಮಹೇಶ್​ ಚಾಲೆಂಜ್​ appeared first on News First Kannada.

Source: newsfirstlive.com

Source link