ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿರುವ ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪರಿಣಾಮ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸೇತುವೆ ಮೇಲೆ ವಾಹನ ಸಂಚಾರ ನಿಷೇಧ ಮಾಡಿದ್ದಾರೆ.

ಮರವೂರು ಸೇತುವೆಯನ್ನು 1968ರಲ್ಲಿ ನಿರ್ಮಾಣ ಮಾಡಲಾಗಿತ್ತು. ಈಗ ಸೇತುವೆಯ ಒಂದು ಪಾರ್ಶ್ವದಲ್ಲಿ ಬಿರುಕು ಕಂಡುಬಂದಿದ್ದು, ಅಪಾಯದ ಅಂಚಿನಲ್ಲಿದೆ. ಈ ಸೇತುವೆಯನ್ನು ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಸದ್ಯ ಮಂಗಳೂರು-ಬಜ್ಪೆ ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಪೊಲೀಸರು ಡೈವರ್ಟ್ ಮಾಡಿದ್ದಾರೆ.

ಹೊಸ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಒಂದೇ ಭಾಗದಲ್ಲಿ ನದಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಸೇತುವೆಯ ಒಂದು ಭಾಗದ ಪಿಲ್ಲರ್​ಗೆ ಹಾನಿಯಾಗಿ ಸೇತುವೆ ಬಿರುಕು ಬಿಟ್ಟಿದೆ ಎನ್ನಲಾಗಿದೆ.

ಸಂಚಾರ ಮಾರ್ಗ ಬದಲಿಸಿ ಪೊಲೀಸರ ಸೂಚನೆ
ಮಂಗಳೂರಿನಿಂದ ವಿಮಾನ ನಿಲ್ದಾಣ ಭಾಗಕ್ಕೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿಯಿಂದ ಬರುವವರು ಮೂಲ್ಕಿಯಲ್ಲಿ ತಿರುವು ಪಡೆದು ಕಿನ್ನಿಗೋಳಿ-ಕಟೀಲು ಮಾರ್ಗವಾಗಿ ಏರ್​​​ಪೋರ್ಟ್​ಗೆ ತೆರಳಲು ಸೂಚನೆ ನೀಡಲಾಗಿದೆ. ಇನ್ನು ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ ಗುರುಪುರ ರಸ್ತೆ ಮಾರ್ಗವಾಗಿ ತೆರಳಲು ಸೂಚನೆ ನೀಡಿದ್ದಾರೆ.

ಸ್ಥಳಕ್ಕೆ ಸಂಸದ ನಳಿನ್​ ಕುಮಾರ್ ಕಟೀಲ್​​ ಭೇಟಿ
ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರಾದ ಉಮಾನಾಥ್ ಕೋಟ್ಯಾನ್, ಡಾ.ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಬಿರುಕು ಬಿಟ್ಟ ಸೇತುವೆಯ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಕಟೀಲ್, ಸೇತುವೆ ಹಳೆಯದಾಗಿತ್ತು.. 1968ರಲ್ಲಿ ನಿರ್ಮಾಣ ಮಾಡಲಾಗಿದೆ. ಡ್ಯಾಮೇಜ್ ಆಗಿರುವ ಸೇತುವೆಯನ್ನು ತಜ್ಞರ ಸಲಹೆ ಪಡೆದು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸೇತುವೆಗೆ ಪರ್ಯಾಯವಾಗಿ ನಿರ್ಮಾಣವಾಗುತ್ತಿರುವ ನೂತನ ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರ ಮುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

The post ಮಂಗಳೂರು ಏರ್​​ಪೋರ್ಟ್ ಮಾರ್ಗದ ಮರವೂರು ಸೇತುವೆಯಲ್ಲಿ ಬಿರುಕು appeared first on News First Kannada.

Source: newsfirstlive.com

Source link