ಮಂಗಳೂರು ದೋಣಿ ದುರಂತ: ಈಜಿ ದಡ ಸೇರಿದ ಮತ್ತೊಬ್ಬ ಯುವಕ

ಮಂಗಳೂರು ದೋಣಿ ದುರಂತ: ಈಜಿ ದಡ ಸೇರಿದ ಮತ್ತೊಬ್ಬ ಯುವಕ

ಉಡುಪಿ: ಮಂಗಳೂರಿನಲ್ಲಿ ಟಗ್​ ಬೋಟ್​​ ಮಗುಚಿಬಿದ್ದು, ನಾಪತ್ತೆಯಾಗಿದ್ದ ಐವರ ಪೈಕಿ ಇಂದು ಓರ್ವ ಯುವಕ  ಪತ್ತೆಯಾಗಿದ್ದಾರೆ. ನಸೀಮ್ ಎಂಬವರು ಈಜಿಕೊಂಡು ಬಂದು ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಹರಿಯಾಣ ಮೂಲದ ನಸೀಮ್ ಮಂಗಳೂರು ಎಂಆರ್​​ಪಿಎಲ್ ಕಂಪನಿಯ ನೌಕರರಾಗಿದ್ದು, ದೋಣಿ ಮಗುಚಿ ಬಿದ್ದ ಸಂದರ್ಭದಲ್ಲಿ ನೀರುಪಾಲಾಗಿದ್ದರು. ಟ್ಯೂಬ್ ಸಹಾಯದಿಂದ ಸತತವಾಗಿ ಈಜಿ ದಡಕ್ಕೆ ತಲುಪಿದ್ದಾರೆ. ಸದ್ಯ ಮಲ್ಪೆ ಪೊಲೀಸರು ನಸೀಮ್​ರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಂಆರ್​ಪಿಎಲ್ ಕಚ್ಚಾ ತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಟಗ್ ಬೋಟ್, ನಿನ್ನೆ ಮಂಗಳೂರು ಹೊರವಲಯದ ಸುರತ್ಕಲ್ನಿಂದ 17 ನಾಟೆಕಲ್ ಮೈಲಿ ದೂರದಲ್ಲಿ ಮಗುಚಿಬಿದ್ದಿತ್ತು. ಮಂಗಳೂರಿನ ತೈಲ ಶುದ್ದೀಕರಣ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟಗ್ ಬೋಟ್ ಇದಾಗಿದ್ದು, ಎಂಆರ್​​ಪಿಎಲ್ ಗೆ ತೈಲ ಹೊತ್ತು ತರುವ ಹಡಗಿಗೆ ಆಳಸಮುದ್ರದಲ್ಲಿ ಪೈಪ್ ಜೋಡಿಸುವ ಕಾರ್ಯ ಮಾಡುತ್ತಿತ್ತು. ಚಂಡಮಾರುತದ ಎಚ್ಚರಿಕೆ ನೀಡಿದ್ದ ಹೊರತಾಗಿಯೂ ಈ ಬೋಟ್ ಆಳಸಮುದ್ರಕ್ಕೆ ತೆರಳಿತ್ತು.

ಬೋಟ್​ನಲ್ಲಿದ್ದ 8 ಜನರ ಪೈಕಿ ಇಬ್ಬರು ನಿನ್ನೆ ಟಗ್ ಮಗುಚಿದ ಬೆನ್ನಲ್ಲೇ  ಟ್ಯೂಬ್​ನಲ್ಲಿ ಈಜಿ ಜೀವ ಉಳಿಸಿಕೊಂಡು ಉಡುಪಿ ಜಿಲ್ಲೆಯ ಮಟ್ಟು ಕೊಪ್ಲ ಪರಿಸರದಲ್ಲಿ ದಡ ಸೇರಿದ್ದರು. ನಾಪತ್ತೆಯಾಗಿದ್ದ 6 ಮಂದಿಯ ಪೈಕಿ ಒರ್ವನ ಮೃತದೇಹ ಪತ್ತೆಯಾಗಿದೆ. ಇಂದು ನಸೀಮ್ ದಡ ಸೇರಿದ್ದು, ಉಳಿದ 4 ಜನರಿಗಾಗಿ ಆಳಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

The post ಮಂಗಳೂರು ದೋಣಿ ದುರಂತ: ಈಜಿ ದಡ ಸೇರಿದ ಮತ್ತೊಬ್ಬ ಯುವಕ appeared first on News First Kannada.

Source: newsfirstlive.com

Source link