ಮಂಗಳೂರು: ನಾಗನ ಕಲ್ಲಿಗೆ ದುಷ್ಕರ್ಮಿಗಳಿಂದ ಹಾನಿ; ಬಸವರಾಜ ಬೊಮ್ಮಾಯಿಗೆ ವಿಹೆಚ್​ಪಿ ಮುಖಂಡ ಎಚ್ಚರಿಕೆ | Mangaluru Protest VHP Leader on Basavaraj Bommai details here


ಮಂಗಳೂರು: ನಾಗನ ಕಲ್ಲಿಗೆ ದುಷ್ಕರ್ಮಿಗಳಿಂದ ಹಾನಿ; ಬಸವರಾಜ ಬೊಮ್ಮಾಯಿಗೆ ವಿಹೆಚ್​ಪಿ ಮುಖಂಡ ಎಚ್ಚರಿಕೆ

ಹಿಂದೂ ಪರ ಸಂಘಟನೆಗಳಿಂದ ಕೋಡಿಕಲ್ ಬಂದ್

ಮಂಗಳೂರು: ಮಂಗಳೂರಿನಲ್ಲಿ ನಾಗನ ಕಲ್ಲಿಗೆ ದುಷ್ಕರ್ಮಿಗಳಿಂದ ಹಾನಿ ಸಂಬಂಧ ಬಜರಂಗದಳ ಪ್ರತಿಭಟನೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್​ವೆಲ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಒಮ್ಮೆ ಕರಾವಳಿ ಭಾಗಕ್ಕೆ ಗಮನ ಕೊಡಿ. ಕರಾವಳಿ ಎನ್ನುವುದು ಹಿಂದುತ್ವದ ಭದ್ರಕೋಟೆ. ಇಲ್ಲಿನವರು ದುಡ್ಡು ಅಥವಾ ಇನ್ಯಾವುದಕ್ಕೋ ಕೈ ಚಾಚಿ ಓಟು ಹಾಕಲ್ಲ. ಕರಾವಳಿ ಜನತೆ ಹಿಂದುತ್ವಕ್ಕೊಸ್ಕರ ಇವತ್ತಿನ ತನಕ ಓಟ್ ಹಾಕಿದ್ದಾರೆ ಅನ್ನೋದನ್ನ ನೆನಪಿಟ್ಟುಕೊಳ್ಳಿ. ಹಿಂದುತ್ವದ ಭದ್ರಕೋಟೆ ಮತ್ತು ಹಿಂದುತ್ವದ ಓಟ್ ನಿಮಗೆ ಉಳಿಸಬೇಕಾ? ಹಾಗಿದ್ರೆ ದಯವಿಟ್ಟು ಇಲ್ಲಿ ಒಮ್ಮೆ ಗಮನ ಕೊಡಿ, ಇಲ್ಲಿನ ಹಿಂದುತ್ವದ ಮೇಲಿನ ದಾಳಿ ಗಂಭೀರವಾಗಿ ಪರಿಗಣಿಸಿ ಎಂದು ಹೇಳಿದ್ದಾರೆ.

ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಿ. ಒಮ್ಮೆ ಮಂಗಳೂರಿಗೆ ಬಂದು ಇಲ್ಲಿನ ನಾಗಸ್ಥಾನ, ದೈವಸ್ಥಾನ ಭೇಟಿ ಕೊಡಿ. ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಿ. ಮಂಗಳೂರು ಕಮಿಷನರ್ ಅವರಲ್ಲಿ ನನ್ನ ಒಂದು ಆಗ್ರಹವಿದೆ. ಹಿಂದೂ ಶ್ರದ್ದಾ ಕೇಂದ್ರಗಳ ಮೇಲಿ ದಾಳಿ ನಡೆಸೋರನ್ನ ಎನ್ ಕೌಂಟರ್ ‌ಮಾಡಿ ಮುಗಿಸಿ. ಕಳೆದ ಹತ್ತಾರು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಹಿಂದುತ್ವದ ಮೇಲೆ ದಾಳಿ ‌ಮಾಡ್ತಿದೆ. ಇಲ್ಲಿ ಯಾರನ್ನೂ ನಂಬಿ ಕೂರುವ ಕಾಲ ಈಗ ಇಲ್ಲ. 2008ರಲ್ಲಿ ಮತಾಂತರ ಕೇಂದ್ರದ ಮೇಲೆ ದಾಳಿ ನಡೆದಾಗ ಏಸುವಿನ ಮೂರ್ತಿ ಅಪ್ಪಿತಪ್ಪಿ ತುಂಡಾಗಿ ಬೀಳ್ತದೆ. ಆಗ ಕ್ರಿಶ್ಚಿಯನ್ ಸಮಾಜ ಕೊಟ್ಟ ಉತ್ತರ, ಪ್ರತಿಭಟನೆ, ಪೊಲೀಸ್ ವಾಹನಕ್ಕೆ ಕಲ್ಲು ಮತ್ತು ಬಂದ್ ಆಗುತ್ತದೆ. ಮಹಮ್ಮದ್ ಪೈಗಂಬರ್ ಬಗ್ಗೆ ಯಾರೋ ಬರೆದ ಅನ್ನೋ ಕಾರಣಕ್ಕೆ ಠಾಣೆಗೆ ಬೆಂಕಿ ಕೊಡ್ತಾರೆ. ಆದ್ರೆ ನಮ್ಮ ಮೇಲೆ ಈ ರೀತಿ ಆದಾಗ ನಾವು ಸುಮ್ಮನೆ ಕೂರಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.

ಬಸ್ ಮೇಲೆ ಕಲ್ಲು ತೂರಾಟ
ಘಟನೆ ವಿರೋಧಿಸಿ ಕೋಡಿಕಲ್ ಬಂದ್ ಬೆನ್ನಲ್ಲೇ ಬಸ್‌ ಮೇಲೆ ಕಲ್ಲು ತೂರಾಟ ನಡೆದಿದೆ. ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಬಸ್‌ ಮೇಲೆ ಕಲ್ಲೆಸೆತ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದು ಕಲ್ಲು ತೂರಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಕಲ್ಲು ತೂರಾಟದಿಂದ ಖಾಸಗಿ ಬಸ್‌ನ ಗಾಜು ಪುಡಿಪುಡಿ ಆಗಿದೆ. ನಾಗದೇವರ ಕಲ್ಲಿಗೆ ಹಾನಿಗೈದ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ ವ್ಯಕ್ತವಾಗಿದೆ. ಈ ಸಂಬಂಧ ಹಿಂದೂ ಪರ ಸಂಘಟನೆಗಳಿಂದ ಕೋಡಿಕಲ್ ಬಂದ್ ನಡೆಸಲಾಗಿದೆ.

ಬಂದ್ ಹಿನ್ನೆಲೆ ಸಂಚರಿಸುತ್ತಿರುವ ವಾಹನಗಳನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ವಾಹನಗಳನ್ನ ತಡೆದ ಹಿನ್ನೆಲೆ ಯುವಕನೊಬ್ಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾಹನ ಸಂಚಾರ ತಡೆದ ಕಾರಣಕ್ಕೆ ಕಾರ್ಯಕರ್ತರ ವಿರುದ್ದ ಯುವಕನೊಬ್ಬನ ಆಕ್ರೋಶ ಕೇಳಿಬಂದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರ ಜೊತೆ ಹಿಂದೂ ಕಾರ್ಯಕರ್ತರ ವಾಗ್ವಾದ ಉಂಟಾಗಿದೆ. ಯುವಕನ ಜೊತೆಗೂ ಕೆಲ ‌ಕಾಲ ಕಾರ್ಯಕರ್ತರ ಮಾತಿನ ಚಕಮಕಿ ನಡೆದಿದೆ. ಪ್ರತಿಭಟನಾ ‌ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಬಳಿಕ ಪೊಲೀಸರು ಯುವಕನ ವಾಹನ ತಿರುಗಿಸಿ ಬೇರೆ ರಸ್ತೆಯಲ್ಲಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಅಕ್ಷರ ಸಂತನ ಭೇಟಿಯಾದ ವೃಕ್ಷಮಾತೆ! ಹರೇಕಳ ಹಾಜಬ್ಬ, ತುಳಸಿಗೌಡ ಸಮಾಗಮ

ಇದನ್ನೂ ಓದಿ: ಮಂಗಳೂರು ವಿದ್ಯಾರ್ಥಿನಿಗೆ ವಕೀಲ ಕಿರುಕುಳ ಕೇಸ್: ಇನ್ನೂ ವಕೀಲ ರಾಜೇಶ್ ಭಟ್ ನಾಪತ್ತೆ, ಸಹಾಯ ಮಾಡಿದ ಸ್ನೇಹಿತ ಅರೆಸ್ಟ್

TV9 Kannada


Leave a Reply

Your email address will not be published. Required fields are marked *