ಮಂಡ್ಯ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಬಾಡಿಗಾರ್ಡ್ ಕುಮಾರ್​ ಹೆಗ್ಡೆನನ್ನು ಮುಂಬೈ ಪೊಲೀಸರು ಮಂಡ್ಯದಲ್ಲಿ ಬಂಧನ ಮಾಡಿದ್ದಾರೆ.

ಕುಮಾರ್ ಹೆಗ್ಡೆ ಮೂಲತಃ ಜಿಲ್ಲೆಯ ಕೆ.ಆರ್​ ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಿವಾಸಿ. ಹಲವು ವರ್ಷಗಳಿಂದ ಕಂಗನಾ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಕುಮಾರ್​ ವಿರುದ್ಧ ಯುವತಿಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಕಳೆದ ಒಂದು ತಿಂಗಳಿನಿಂದ ಕುಮಾರ್ ತನ್ನ ಸ್ವಗ್ರಾಮ ಹೆಗ್ಗಡಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಈಗ ಮುಂಬೈ ಪೊಲೀಸರು ಕಿಕ್ಕೇರಿ ಠಾಣೆ ಪೊಲೀಸರ ಸಹಕಾರದೊಂದಿಗೆ ಆರೋಪಿ ಕುಮಾರ್ ಹೆಗ್ಡೆನನ್ನು ಬಂಧಿಸಿ, ಕೆ.ಆರ್.ಪೇಟೆ ಜೆಎಂಎಫ್​ಸಿ ಕೋರ್ಟ್​​ಗೆ ಹಾಜರುಪಡಿಸಲಾಗಿದೆ.

ಕುಮಾರ್​ ಹೆಗ್ಡೆಗೆ ಯುವತಿ ಆರು ವರ್ಷಗಳ ಹಿಂದೆ ಪರಿಚಯವಾಗಿದ್ದಾಳು. ಈತ ಕಳೆದ ಜೂನ್​ನಲ್ಲಿ ಆಕೆಗೆ ಪ್ರೇಮ ನಿವೇದನೆ ಮಾಡಿದ್ದ, ಆ ಬಳಿಕ ಇಬ್ಬರು ಕೈ ಕೈ ಹಿಡಿದು ಸುತ್ತಾಡಿದ್ದರು ಎನ್ನಲಾಗಿದೆ. ಆದರೆ ನಂತರ ಕುಮಾರ್​ ಯುವತಿಗೆ ವಂಚನೆ ಮಾಡಿ ದೂರ ಮಾಡಿದ್ದಾನೆಂದು ಆರೋಪ ಮಾಡಲಾಗಿದೆ. ಏಪ್ರಿಲ್ 27 ರಂದು ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿಸಿ ನನ್ನಿಂದ ಹಣ ಪಡೆದು ಸ್ವಗ್ರಾಮಕ್ಕೆ ಆಗಮಿಸಿ ಮೊಬೈಲ್ ಸ್ವಿಚ್​​ ಆಫ್​ ಮಾಡಿಕೊಂಡಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ ಎಂಬ ಮಾಹಿತಿ ಲಭಿಸಿದೆ. ಯುವತಿ ವೃತ್ತಿಯಲ್ಲಿ ಮೇಕಪ್​ ಆರ್ಟಿಸ್ಟ್​​ ಆಗಿದ್ದಾಳೆ. ಸದ್ಯ ಕುಮಾರ್ ಹೆಗ್ಡೆಯನ್ನು ಪೊಲೀಸರು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ.

The post ಮಂಡ್ಯದಲ್ಲಿ ಕಂಗನಾ ರಣಾವತ್ ಬಾಡಿಗಾರ್ಡ್ ಅರೆಸ್ಟ್ appeared first on News First Kannada.

Source: newsfirstlive.com

Source link