ಬೆಂಗಳೂರು: ಹೊಸ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಶಿಕ್ಷಕ ತರಬೇತಿ ಸಂಸ್ಥೆಗಳು ಬಲಿಷ್ಠಗೊಳ್ಳಬೇಕಾಗಿದ್ದು, ಆ ನಿಟ್ಟಿನಲ್ಲಿ ಡಿ.ಎಸ್‍.ಇ.ಆರ್.ಟಿ ಸೇರಿದಂತೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಗಳು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ  ಗಮನಹರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಸೋಮವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ ಪ್ರಗತಿ ಪರಾಮರ್ಶನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಎಸ್‍ಇಆರ್‍ಟಿ ಸಂಸ್ಥೆಯು ಶಿಕ್ಷಣ ಸಂಶೋಧನೆಯಲ್ಲಿ ಪ್ರಧಾನವಾದ  ಜವಾಬ್ದಾರಿ ಹೊಂದಿದ್ದು, ಈ ಸ್ವಾಯತ್ತ ಸಂಸ್ಥೆ  ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಂಶೋಧನಾ ವಿದ್ವಾಂಸರ ಸೇವೆಯನ್ನು ಪಡೆಯಲು ಆಲೋಚಿಸಲಾಗಿದೆ ಎಂದರು.

ಗುಣಾತ್ಮಕ ಶಿಕ್ಷಣದ ಪರಿಕಲ್ಪನೆ ಸಾಕಾರವಾಗಬೇಕಾದಲ್ಲಿ ತರಬೇತಿ ಪ್ರಕ್ರಿಯೆ ವಸ್ತುನಿಷ್ಠವಾಗಬೇಕಿದೆ. ತರಬೇತಿ ಮೌಲ್ಯಮಾಪನ ವ್ಯವಸ್ಥೆ ಬಲಗೊಳ್ಳಬೇಕಿದೆ. ಶಿಕ್ಷಣ ಗುಣಮಟ್ಟ ಸುಧಾರಣೆಯ ಹಿನ್ನೆಲೆಯಲ್ಲಿ ಈ ತರಬೇತಿಯ ಫಲಿತಾಂಶ ಶಾಲಾ ತರಗತಿಯಲ್ಲಿ  ಪ್ರತಿಫಲನಗೊಂಡು ನಮ್ಮ ಮಕ್ಕಳು ಅದರ ಪ್ರಯೋಜನವನ್ನು ಪಡೆಯುವಂತಾಗಬೇಕು.ಈ ತರಬೇತಿಯ ಅನುಪಾಲನಾ ವ್ಯವಸ್ಥೆ ಮೇಲಿಂದ ಮೇಲೆ ನಡೆಯುವಂತಹ ವ್ಯವಸ್ಥೆ ರೂಪುಗೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಪ್ರಸ್ತುತ ವ್ಯವಸ್ಥೆಯಲ್ಲಿ ತರಬೇತಿಗಳಷ್ಟೇ ನಡೆಯುತ್ತಿವೆ. ಸಂಶೋಧನೆಗಳು ಅಷ್ಟಾಗಿ ಕಂಡುಬರುತ್ತಿಲ್ಲ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ತರಬೇತಿಗಳಷ್ಟೇ ಸಾಕಾಗದು. ಬದಲಾದ ಕಾಲಮಾನಕ್ಕನುಗುಣವಾಗಿ ನಮ್ಮ ಸಂಶೋಧನಾ ಸಂಸ್ಥೆಗಳೂ ಬದಲಾಗಬೇಕಿದೆ. ಹೊಸ ಶಿಕ್ಷಣ  ನೀತಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯನ್ನು ಪುನರ್‍ರೂಪಿಸಬೇಕಾದ ಅಗತ್ಯವಿದ್ದು, ಈ ಕುರಿತು ಅಗತ್ಯ ಕ್ರಿಯಾ ಯೋಜನೆ ರೂಪಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜುಲೈ 1ರಿಂದ ಸಂವೇದಾ ದೂರದರ್ಶನ ಪಾಠ ಪ್ರಸಾರ

ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಇದೇ ಜು. 1ರಿಂದ ದೂರದರ್ಶನದ ಚಂದನ ವಾಹಿನಿ ಮೂಲಕ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುವುದು. ಈ ಸಂದರ್ಭದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದ ಪಾಠಗಳು ಪ್ರಸಾರವಾಗಲಿವೆ. ಈ ತರಗತಿಗಳು ಬೆಳಗಿನ 8 ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದ್ದು, ತರಗತಿವಾರು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮರಾಠಿ ಮಾಧ್ಯಮದ ಪಾಠಗಳನ್ನು ಯೂ-ಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

2021-22ನೇ ಸಾಲಿನಲ್ಲಿ ಭೌತಿಕ ತರಬೇತಿಗಳು ಪ್ರಾರಂಭವಾದಲ್ಲಿ ಶಿಕ್ಷಕರು ನಿರ್ವಹಿಸಬೇಕಾದ ಬೋಧನೆ ಹಾಗೂ ಮೌಲ್ಯಮಾಪನ ಕ್ರಮದ ಖಚಿತವಾದ ರೂಪುರೇಷೆಗಳನ್ನು ನಾವು ಹೊಂದಿರಬೇಕೆಂದು ಸಲಹೆ ನೀಡಿದ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಡಯಟ್‍ಗಳು ಉತ್ತಮ ಉಪಕ್ರಮಗಳನ್ನು ಕ್ರೋಡಿಕರಿಸಿ ಅವುಗಳನ್ನ ಇತರರೂ ಅನುಸರಿಸುವ ನಿಟ್ಟಿನಲ್ಲಿ ಕೈಪಿಡಿಯೊಂದನ್ನು ಹೊರತರಬೇಕೆಂದು ಸೂಚಿಸಿದರು.

ಭಾಷಾ ಪ್ರಯೋಗಾಲಯಗಳು ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳಾಗಲಿ
ಇಲಾಖೆ ಆಶ್ರಯದ ರಾಜ್ಯದ ನಾಲ್ಕು ವಿಭಾಗಗಳಲ್ಲಿರುವ ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರಗಳಲ್ಲಿ ತೆಲುಗು, ತಮಿಳು, ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕೌಶಲ್ಯ ಸ್ಥಾಪನೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು. ಪ್ರತಿ ಕೇಂದ್ರದಲ್ಲಿ ಸುಸಜ್ಜಿತ ಗ್ರಂಥಾಲಯ ಸೌಲಭ್ಯಗಳು, ತಂತ್ರಜ್ಞಾನ ವ್ಯವಸ್ಥೆಗಳನ್ನು ನಿರ್ಮಿಸಿಕೊಡಲಾಗಿದೆ. ಸುಸಜ್ಜಿತ ಭಾಷಾ ಪ್ರಯೋಗಾಲಯಗಳ ಸ್ಥಾಪನೆ ಅಂತಿಮ ರೂಪವನ್ನು ಪಡೆದುಕೊಳ್ಳುತ್ತಿದೆ. ಈ ಪ್ರಯೋಗಾಲಯಗಳು ಭಾಷಾ ಸಾಹಿತ್ಯದಲ್ಲಿ ಚಟುವಟಿಕೆಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸಲಿವೆ.  ಸುಸಜ್ಜಿತ ತಾಂತ್ರಿಕ ಸೌಲಭ್ಯಗಳನ್ನು ಒಳಗೊಳ್ಳಲಿದ್ದು, ಸದ್ಯದಲ್ಲೇ ಈ ನಾಲ್ಕು ಪ್ರಯೋಗಾಲಯಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಈ ಭಾಷಾ ಪ್ರಯೋಗಾಲಯಗಳು ಸಂಪನ್ಮೂಲ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾದಾಗ ಮಾತ್ರ ನಮ್ಮ ಗುಣಾತ್ಮಕ ಶಿಕ್ಷಣದ ಪರಿಕಲ್ಪನೆಗೊಂದು ಅರ್ಥ ಬರುತ್ತದೆ. ಹಾಗಾಗಿ ಈ ಭಾಷಾ ಕೌಶಲ ಕೇಂದ್ರಗಳು ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳಾಗಿ ರೂಪುಗೊಳ್ಳಬೇಕೆಂದರು.

ಈ ಭಾಷಾ ಕೌಶಲ ಕೇಂದ್ರಗಳ ಪರಿಕಲ್ಪನೆಯನ್ನು ಶಾಲಾ ತರಗತಿಗಳ ಮಟ್ಟಕ್ಕೆ ಕೊಂಡೊಯ್ದು ಅದರ ಪ್ರಯೋಜನ ನಮ್ಮ ಮಕ್ಕಳಿಗೆ ದೊರೆಯುವಂತಾಗಬೇಕು. ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಡಯಟ್ ಕೇಂದ್ರಗಳಲ್ಲಿ ಈ ಮಾದರಿಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಬೇಕೆಂದು ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಡಿಎಸ್‍ಇಆರ್‍ಟಿ ಹಂತದಲ್ಲಿ ಭಾಷಾವಾರು ತಜ್ಞರ ಸಮಿತಿಯನ್ನು ರಚಿಸಿ ಒಂದು ಸಮನ್ವಯದ ವಾತಾವರಣವನ್ನು ರೂಪಿಸಿ ಈ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಪ್ರಯೋಜನ ಹೆಚ್ಚಿನ ರೀತಿಯಲ್ಲಿ ದೊರೆಯುವಂತಾಗಬೇಕು. ಈ ಸಂಸ್ಥೆಗಳು ಕೇವಲ ಗ್ರಂಥಾಲಯ ರೂಪದಲ್ಲಿ ಉಳಿಯಬಾರದು ಎಂದು ಸಲಹೆ ನೀಡಿದರು.

ಕೋವಿಡ್-19ರ ಅವಧಿಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಕೌಶಲಗಳ ಅಧ್ಯಯನ
ಕೊರೋನಾ ಸಾಂಕ್ರಾಮಿಕವು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ  ಮೇಲೆ ನಕಾರಾತ್ಮಕ ಪ್ರಭಾವ ಬೀರಿದ ಕಾರಣ ಈ ಸಂದರ್ಭದಲ್ಲಿ ಮಕ್ಕಳು ತೊಡಗಿಸಿಕೊಂಡ ಚಟುವಟಿಕೆಗಳು ಹಾಗೂ ಅವರು ಪಡೆದ ಕೌಶಲ್ಯಗಳನ್ನು ಅರಿಯಲು ಡಿಎಸ್‍ಇಆರ್‍ಟಿ ಕೈಗೊಂಡ ಸಮೀಕ್ಷೆಯ ಅಧ್ಯಯನ ವರದಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಸಚಿವರು, ಶೇ. 30 ರಷ್ಟು ಮಕ್ಕಳು ಶೈಕ್ಷಣಿಕ ಚಟುವಟಿಕೆಯಿಂದ ವಂಚಿತರಾಗಿರುವುದು ಕಂಡುಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಈ ಅಧ್ಯಯನ ವರದಿಯ ಬೆಳಕಿನಲ್ಲಿ ನಾವು ಈ ವರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಹೆಚ್ಚಿನ ರೀತಿಯ ಗಮನಹರಿಸುವ ಸವಾಲು ನಮ್ಮ ಮುಂದಿದೆ. ಅದಕ್ಕಾಗಿ ಶಿಕ್ಷಕರು ತಮ್ಮ ಶಾಲೆಯ ಮಕ್ಕಳು ಕಲಿಕಾ ನಿರಂತರತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಶ್ರಮಿಸಬೇಕಿದೆ. ನಮ್ಮ ಯಾವುದೇ ನೀತಿಗಳು ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ಪ್ರತಿಯೊಬ್ಬರೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಶ್ರಮಿಸಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

30 ದಿನಗಳ ಸೇತುಬಂಧ ಶಿಕ್ಷಣ
ಜುಲೈ 1ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಲಿಕಾಂಶಗಳನ್ನು ಗುರುತಿಸಲಾಗಿದ್ದು 30 ದಿನಗಳ ಸೇತುಬಂಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಪಟ್ಟಿ ಮಾಡಿದಂತಹ ಕಲಿಕಾಂಶಗಳಿಗೆ ಪೂರಕವಾಗಿ ಚಟುವಟಿಕಯಾಧಾರಿತ ಬೋಧನಾ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020 ಫೋಕಸ್ ಗ್ರೂಪ್ ರಚನೆ
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಬದಲಾಗುತ್ತಿರುವ ನೀತಿಗೆ ಅನುಗುಣವಾಗಿ ತರಗತಿವಾರು ಬೋಧನೆಗೆ ಸಂಬಂಧದಲ್ಲಿ ರೂಪುರೇಷೆ ಸಿದ್ಧಪಡಿಸಲು ಫೋಕಸ್ ಗ್ರೂಪ್‍ಗಳನ್ನು ರಚಿಸಲು ಸೂಚಿಸಲಾಗಿದೆ. ಇದಕ್ಕಾಗಿ ಸೂಕ್ತ ತಾಂತ್ರಿಕ ವೇದಿಕೆಯನ್ನು ರೂಪಿಸಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಡಿಎಸ್‍ಇಆರ್‍ಟಿ ಅತ್ಯಂತ ಜವಾಬ್ದಾರಿಯಿಂದ  ಕೆಲಸ ಮಾಡಬೇಕಿದೆ. ಈ ಕುರಿತ ಪ್ರಸ್ತಾವನೆಯನ್ನು ತಮ್ಮ ಅನುಮೋದನೆಗೆ ಮಂಡಿಸಬೇಕೆಂದು ಎಂದು ಸುರೇಶ್ ಕುಮಾರ್ ಸೂಚಿಸಿದರು.

ಪ್ರಾಥಮಿಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯಕ್ತ ವಿ. ಅನ್ಬುಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

The post ಮಕ್ಕಳು ಶಿಕ್ಷಣ ವಂಚಿರಾಗದಂತೆ ನೋಡಿಕೊಳ್ಳುವ ಸವಾಲು ನಮ್ಮ ಮುಂದಿದೆ- ಸುರೇಶ್ ಕುಮಾರ್ appeared first on News First Kannada.

Source: newsfirstlive.com

Source link