ಮಗನನ್ನು ಇಸ್ಲಾಂಗೆ ಮತಾಂತರ ಮಾಡಿಸಿದ ಪತ್ನಿಯನ್ನು ಜೈಲಿಗೆ ಕಳಿಸಿದ ಪತಿ; ಮಹಿಳೆಯ ತಾಯಿಯೂ ಅರೆಸ್ಟ್​​ | A Woman converting minor son to Islam her husband give complaint against her in Chhattisgarh


ಮಗನನ್ನು ಇಸ್ಲಾಂಗೆ ಮತಾಂತರ ಮಾಡಿಸಿದ ಪತ್ನಿಯನ್ನು ಜೈಲಿಗೆ ಕಳಿಸಿದ ಪತಿ; ಮಹಿಳೆಯ ತಾಯಿಯೂ ಅರೆಸ್ಟ್​​

ಸಾಂಕೇತಿಕ ಚಿತ್ರ

ಎಂಟುವರ್ಷದ ಮಗನನ್ನು ನನ್ನ ಅನುಮತಿ ಇಲ್ಲದೆ ಇಸ್ಲಾಂಗೆ ಮತಾಂತರ ಮಾಡಿಸಿದ್ದಾಳೆ ಎಂದು ಛತ್ತೀಸ್​ಗಢ್​​ನ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಆಕೆಯ ತವರು ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಮಹಿಳೆ ಮತ್ತು ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಒಬ್ಬ ಆರೋಪಿಯಿದ್ದು ಆತ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ನನ್ನ ಮಗನಿಗೆ ಸುನ್ನತಿ ಮಾಡಲಾಗಿದೆ. ನನಗೆ ಆತನನ್ನು ಇಸ್ಲಾಂಗೆ ಮತಾಂತರ ಮಾಡುವುದು ಇಷ್ಟವಿರಲಿಲ್ಲ ಎಂದೂ ದೂರು ನೀಡಿದ ವ್ಯಕ್ತಿ ಆರೋಪಿಸಿದ್ದಾರೆ. 

ಅಂದಹಾಗೆ ದೂರು ಕೊಟ್ಟ ವ್ಯಕ್ತಿ ಹಿಂದು. ಕಳೆದ 10 ವರ್ಷಗಳ ಹಿಂದೆ ಮುಸ್ಲಿಂ ಮಹಿಳೆಯನ್ನು ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬ 8ವರ್ಷದ ಮಗ ಮತ್ತು ಇನ್ನೊಬ್ಬಳು 6ವರ್ಷದ ಮಗಳು. ಸದ್ಯ ಸನ್ನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಶ್​ಪುರ್​ ಎಸ್​ಪಿ ವಿಜಯ್​ ಅಗರ್​ವಾಲ್​ ಮಾಹಿತಿ ನೀಡಿದ್ದಾರೆ.  ಸದ್ಯ ಆ ಮಹಿಳೆ ಮತ್ತು ಆಕೆಯ ತಾಯಿಯನ್ನು ಅರೆಸ್ಟ್ ಮಾಡಿದ್ದೇವೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದೂ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಸೆಕ್ಷನ್​ 295-ಎ ( ಉದ್ದೇಶಪೂರ್ವಕವಾಗಿಯೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ್ದು, ಒಂದು ವರ್ಗದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದು)  ಎಂಬಿತ್ಯಾದಿ ಪ್ರಕರಣಗಳು ದಾಖಲಾಗಿವೆ.  ನಾನು ಹಿಂದು ಸಂಪ್ರದಾಯದಂತೆ ಮದುವೆಯಾದ ಮೇಲೆ ನನ್ನ ಮಗನನ್ನು ನನಗೇ ಗೊತ್ತಿಲ್ಲದೆ ಇಸ್ಲಾಂಗೆ ಪರಿವರ್ತಿಸಿದ್ದು ಸರಿಯಲ್ಲ ಎಂಬುದು ದೂರು ಕೊಟ್ಟ ವ್ಯಕ್ತಿಯ ಸ್ಪಷ್ಟ ವಾದವಾಗಿದೆ. 2021ರ ನವೆಂಬರ್​​ನಲ್ಲಿ ಮಹಿಳೆ ತನ್ನ 8ವರ್ಷದ ಮಗನನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದಳು. ಆ ತವರು ಮನೆ ಇರುವುದು ಛತ್ತೀಸ್​ಗಢ್​​​ನ ಆಸ್ತಾ ಸರ್ದಿಹ್​ ಎಂಬ ಹಳ್ಳಿಯಲ್ಲಿ. ಹೀಗೆ ಆಕೆ ಮಗುವನ್ನು ಕರೆದುಕೊಂಡು ಹೋಗಿದ್ದೇ ವ್ಯಕ್ತಿಗೆ ಗೊತ್ತಿರಲಿಲ್ಲಿ. ನಂತರ ಮಹಿಳೆ ಮತ್ತು ಆಕೆಯ ತವರು ಮನೆಯವರು ಸೇರಿ ಬಾಲಕನನ್ನು ಅಂಬಿಕಾಪುರಕ್ಕೆ ಕರೆದುಕೊಂಡುಹೋಗಿ ಸುನ್ನತಿ ಮಾಡಿಸಿದ್ದಾರೆ. ಅಷ್ಟೇ ಅಲ್ಲ, ನನ್ನನ್ನೂ ಇಸ್ಲಾಂಗೆ ಮತಾಂತರ ಮಾಡಲು ತುಂಬ ಪ್ರಯತ್ನಿಸಿದ್ದಾರೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *